ಫ್ಯಾಕ್ಟ್‌ಚೆಕ್: ಮದರಸದಲ್ಲಿ ಅಕ್ರಮ ಶಸ್ತ್ರಾಸ್ತ್ರ ವಶಪಡಿಸಿಕೊಂಡು ಧರ್ಮಗುರುಗಳನ್ನು ಬಂಧಿಸಿದ್ದು ನಿಜವಲ್ಲ

ಉತ್ತರ ಪ್ರದೇಶದ ಬಿಜ್ನೋರ್‌ನ ಮದರಸಾ ಮೇಲೆ ನಡೆದ ದಾಳಿಯಲ್ಲಿ ಅಕ್ರಮವಾಗಿ ಬಚ್ಚಿಟ್ಟಿದ್ದ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದು, 6 ಧರ್ಮಗುರುಗಳನ್ನು ಬಂಧಿಸಲಾಗಿದೆ. ಇಲ್ಲಿ ಸಿಕ್ಕಿರುವ ಮೆಷಿನ್‌ಗನ್‌ಗಳಲ್ಲಿ ಒಂದು ನಿಮಿಷಕ್ಕೆ 8 ಸಾವಿರ ಸುತ್ತು ಗುಂಡು ಹಾರಿಸುವ ಸಾಮರ್ಥ್ಯವನ್ನು ಹೊಂದಿವೆ, ಈ ಜನರ ತಯಾರಿಯನ್ನು ಅರ್ಥಮಾಡಿಕೊಳ್ಳಿ ಎನ್ನುವ ಹೇಳಿಕೆಯೊಂದಿಗೆ ಕತ್ತಿ, ಖಡ್ಗ, ಚಾಕು, ತಲವಾರು ಮತ್ತು ಗನ್ನುಗಳಿರುವ ಫೋಟೋಗಳನ್ನು ಸಾಮಾಜಿಕ ಮಾಧ್ಯಮವಾದ ವಾಟ್ಸಾಪ್‌ ಗುಂಪುಗಳಲ್ಲಿ, ಅದರಲ್ಲೂ ಹಿಂದೂ ಸಮುದಾಯಗಳ ಗ್ರೂಪ್‌ನಲ್ಲಿ ಈ ಫೋಟೋಗಳನ್ನು ಹೆಚ್ಚಾಗಿ ಹಂಚಿಕೊಳ್ಳಲಾಗುತ್ತದೆ.

ಯಾವುದೇ ಫೋಟೋ ವಿವರಣೆ ಲಭ್ಯವಿಲ್ಲ.

Image

ಇದೇ ಹೇಳಿಕೆ ಇರುವ ಒಕ್ಕಣೆಯೊಂದಿಗೆ  ಫೋಟೋ ಸಹಿತ ಏನ್‌ ಸುದ್ದಿ.ಕಾಂ ವಾಟ್ಸಾಪ್‌ ಗೂ ಸಂದೇಶಗಳು ಬಂದಿದ್ದು ಈ ಸುದ್ದಿಯ ಹಿಂದಿರುವ ಸತ್ಯಾಸತ್ಯತೆಗಳನ್ನು ಪರಿಶೀಲಿಸುವಂತೆ ವಿನಂತಿಸಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫೋಟೋ-1:

ಪೋಸ್ಟ್‌ನಲ್ಲಿ ಹಂಚಿಕೊಂಡ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ , 25 ಜುಲೈ 2018 ರಂದು ‘ಇಂಡಿಯಾ ಟುಡೆ‘ ಪ್ರಕಟಿಸಿದ ಲೇಖನದಲ್ಲಿ ಇದೇ ರೀತಿಯ ಫೋಟೋ ಕಂಡುಬಂದಿದೆ. ‘ಇಂಡಿಯಾ ಟುಡೆ’ ಇದನ್ನು ‘ಖಾಲ್ಸಾ ಕಿರ್ಪಾನ್’ ಕತ್ತಿ ಕಾರ್ಖಾನೆಯಲ್ಲಿ ತೆಗೆದ ಚಿತ್ರ ಎಂದು ವರದಿ ಮಾಡಿದೆ. ಪಟಿಯಾಲ ನಗರ, ಪಂಜಾಬ್ ‘ಖಾಲ್ಸಾ ಕಿರ್ಪಾನ್’ ನ ಫೇಸ್‌ಬುಕ್ ಪುಟದಲ್ಲಿ ನಾವು ಇದೇ ರೀತಿಯ ಶಸ್ತ್ರಾಸ್ತ್ರಗಳ ಫೋಟೋಗಳು ಲಭ್ಯವಾಗಿವೆ.

 

 

 

 

ಈಗ ವಾಟ್ಸಾಪ್‌ಗಳಲ್ಲಿ ವೈರಲ್ ಆಗುತ್ತಿರುವ ಇದೇ ಪೋಟೋಗಳನ್ನು 2018ರಲ್ಲಿ ಕೇರಳಾದ PFI ಸಂಘಟನೆಯನ್ನು ಗುರಿಯಾಗಿಸಿಕೊಂಡು ಹಂಚಿಕೊಳ್ಳಲಾಗಿತ್ತು.

“ಹಿಂದೂಗಳೇ ನಿದ್ರಿಸುತ್ತಿರಿ, ಮುಸ್ಲಿಮರು ನಿಮ್ಮ ವಿರುದ್ಧ ರಕ್ತಪಾತವನ್ನು ಯೋಜಿಸುತ್ತಿದ್ದಾರೆ. ಕೇರಳದಲ್ಲಿ PFI ಫ್ಯಾಕ್ಟರಿ ಮೇಲೆ ದಾಳಿಯ ಸಂದರ್ಭದಲ್ಲಿ, ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಭಾರತದಾದ್ಯಂತ ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿನ ಮಸೀದಿಗಳು ಮತ್ತು ಮದರಸಾಗಳಿಗೆ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಸರಬರಾಜು ಮಾಡಲಾಗುತ್ತಿದೆ.” ಎಂದು ಹಂಚಿಕೊಳ್ಳಲಾಗಿತ್ತು.

ಈ ವೈರಲ್ ಪೋಸ್ಟ್‌ಅನ್ನು ಇಂಡಿಯಾ ಟುಡೇ ಫ್ಯಾಕ್ಟ್‌ಚೆಕ್ ಮಾಡುವ ಮೂಲಕ ಇದು ಸುಳ್ಳು ಸುದ್ದಿ ಎಂದು ನಿರೂಪಿಸಿ ವರದಿಯೊಂದುನ್ನು ಪ್ರಕಟಿಸಿತ್ತು ಅದನ್ನು ನೀವು ಇಲ್ಲಿ ನೋಡಬಹುದು.

ಫೋಟೋ-2:

ರಿವರ್ಸ್ ಇಮೇಜ್ ಸರ್ಚ್‌ನಲ್ಲಿ, 05 ಮಾರ್ಚ್ 2016 ರಂದು ‘ಗುಜರಾತ್ ಹೆಡ್‌ಲೈನ್’ ಸುದ್ದಿ ವೆಬ್‌ಸೈಟ್‌ನ ಟ್ವೀಟ್‌ನಲ್ಲಿ ಇದೇ ರೀತಿಯ ಫೋಟೋ ಕಂಡುಬಂದಿದೆ. ಇದೇ ರೀತಿಯ ಫೋಟೋವನ್ನು ಹಂಚಿಕೊಂಡಿರುವ ‘ಗುಜರಾತ್ ಹೆಡ್‌ಲೈನ್’ ಈ ಘಟನೆಯ ಕುರಿತು ಲೇಖನವನ್ನು ಪ್ರಕಟಿಸಿದೆ. ರಾಜ್‌ಕೋಟ್ ಪೊಲೀಸರು ಕುಚಿಯಾದ್‌ನಲ್ಲಿರುವ ಇಂಡಿಯಾ ಪ್ಯಾಲೇಸ್ ಹೋಟೆಲ್ ಮೇಲೆ ದಾಳಿ ನಡೆಸಿದಾಗ ಮಾರಕಾಸ್ತ್ರಗಳ ದಾಸ್ತಾನು ವಶಪಡಿಸಿಕೊಂಡಿದ್ದಾರೆ ಎಂದು ಈ ಲೇಖನ ವರದಿ ಮಾಡಿದೆ. ‘ದಿ ಟೈಮ್ಸ್ ಆಫ್ ಇಂಡಿಯಾ’ ಲೇಖನದ ಪ್ರಕಾರ, ರಾಜ್‌ಕೋಟ್ ಪೊಲೀಸರು ಈ ದಾಳಿಯಲ್ಲಿ ಕತ್ತಿಗಳು ಮತ್ತು ಚಾಕುಗಳು ಸೇರಿದಂತೆ 257 ಮಾರಕ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ.


ಫೋಟೋ-3 :

ಮತ್ತೊಂದು ವೈರಲ್ ಪೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ನಲ್ಲಿ ಸರ್ಚ್ ಮಾಡಿದಾಗ, ‘Tumblr’ ವೆಬ್‌ಸೈಟ್‌ನಲ್ಲಿ ಇದೇ ರೀತಿಯ ಫೋಟೋ ಕಂಡುಬಂದಿದೆ. ಈ ಫೋಟೋವನ್ನು 03 ಮಾರ್ಚ್ 2019 ರಂದು ಪ್ರಕಟಿಸಲಾಗಿದೆ. ಇದೇ ಫೋಟೋ ಕೆನಡಾ ಮೂಲದ ಇ-ಕಾಮರ್ಸ್ ವೆಬ್‌ಸೈಟ್ ‘CanSellAll’ ನಲ್ಲಿ ಬಳಸಲಾಗಿರುವ ಪ್ರಾತಿನಿಧಿಕ ಚಿತ್ರ ಲಭ್ಯವಾಗಿದೆ.

ಫೋಟೋ 4 :

ಪ್ರತ್ಯೇಕ ಮದರಸಾಗಳಿಂದ ವಿದೇಶಿಯರನ್ನು ಬಂಧಿಸಿದಾಗ ಉತ್ತರ ಪ್ರದೇಶದ ಶಾಮಿಲಿ ಪೊಲೀಸರ ಟ್ವೀಟ್‌ನಿಂದ ಈ ಫೋಟೋವನ್ನು ತೆಗೆದುಕೊಳ್ಳಲಾಗಿದೆ. ಪೊಲೀಸರ ಟ್ವೀಟ್ ಪ್ರಕಾರ 2019 ರಲ್ಲಿ ” ಶಾಮ್ಲಿ ಪೊಲೀಸರು ಮೂರು ವಿವಿಧ ಮದರಸಾಗಳಿಗೆ ಸಂಬಂಧಿಸಿದ 04 ವಿದೇಶಿಗರು ಮತ್ತು 03 ನಫರ್ ಮೊಹತಮಿಮ್ / ಮದ್ರಸಾ ನಿರ್ವಾಹಕರು ಸೇರಿದಂತೆ 07 ಶಂಕಿತರನ್ನು ಬಂಧಿಸಿದ್ದಾರೆ, ಅಕ್ರಮ ದಾಖಲೆಗಳು, ವಿದೇಶಿ ಕರೆನ್ಸಿ ಸೇರಿದಂತೆ ಅನೇಕ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಹಿಂದೆ, ಜಮ್ಮು ಮತ್ತು ಕಾಶ್ಮೀರದ ಮಸೀದಿಗಳಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಂತೆ ಇದೇ ರೀತಿಯ ಚಿತ್ರಗಳನ್ನು ಹಂಚಿಕೊಂಡಾಗ, ಫ್ಯಾಕ್ಟ್‌ಲಿ ಇದನ್ನು ಫ್ಯಾಕ್ಟ್‌ಚೆಕ್ ಲೇಖನವನ್ನು ಪ್ರಕಟಿಸಿತು. ಅದನ್ನು ಇಲ್ಲಿ ನೋಡಬಹುದು.

ಇದೇ ಫೋಟೋಗಳನ್ನು ಬಳಸಿಕೊಂಡು 2021 ರಲ್ಲಿ ದೆಹಲಿಯ ಆರ್‌ಎಸ್‌ಎಸ್ ಅಡಗುತಾಣಗಳ ಮೇಲೆ ಪೊಲೀಸರು ನಡೆಸಿದ ವ್ಯಾಪಕ ದಾಳಿಯ ವೇಳೆ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳ ಚಿತ್ರಗಳು ಎಂದು ಹೇಳಿಕೊಳ್ಳುವ ಹಲವಾರು ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಗಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, ವಿವಿಧ ಸಂಧರ್ಭಗಳಲ್ಲಿ ನಡೆದ ಅಪರಾಧಿ ಕೃತ್ಯಗಳ ಫೋಟೋಗಳನ್ನು ಮತ್ತು ಇ-ಕಾಮರ್ಸ್‌ನಲ್ಲಿ ಲಭ್ಯವಿರುವ ಪೋಟೋಗಳನ್ನು ಬಳಸಿಕೊಂಡು ಹಿಂದೂ ಮತ್ತು ಮುಸ್ಲಿಂ ನಡುವೆ ದ್ವೇಷ ಭಿತ್ತುವ ಉದ್ದೇಶದಿಂದ ಕೋಮು ಸಾಮರಸ್ಯ ಕದಡುವ ಕಾರಣಕ್ಕಾಗಿ ಮದರಸಾಗಳಿಂದ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳ ಚಿತ್ರಗಳಂತೆ ಸಂಬಂಧವಿಲ್ಲದ ಹಳೆಯ ಫೋಟೋಗಳು ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಯಾವುದೇ ಕೋಮು ಪ್ರಚೋದನೆಯಂತಹ ಸುದ್ದಿಗಳು ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ವಾಟ್ಸಾಪ್ ಮತ್ತು ಟ್ವಿಟರ್‌ಗಳಲ್ಲಿ ನಿಮ್ಮ ಗಮನಕ್ಕೆ ಬಂದರೆ ಅದು ನಿಜವೇ ಎಂದು ಪರಿಶೀಲಿಸಿ, ಈ ರೀತಿ ದ್ವೇಷ ಹರಡುವ ಯಾವುದೇ ಸಂದೇಶಗಳನ್ನು ಹಂಚಿಕೊಳ್ಳಬೇಡಿ.

ಕೃಪೆ : ಫ್ಯಾಕ್ಟ್‌ಲಿ ಮತ್ತು ಇಂಡಿಯಾ ಟುಡೆ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಬೂರ್ಖಾ ಧರಿಸಿದ್ದ ಮುಸ್ಲಿಂ ಮಹಿಳೆ ‘ಗಣೇಶನ ಮೂರ್ತಿ’ಗಳನ್ನು ಒಡೆದು ಹಾಕಿದ್ದು ನಿಜ ! ಆದರೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights