ಫ್ಯಾಕ್ಟ್‌ಚೆಕ್: ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕರು ಮದ್ಯ ಸೇವಿಸಿದ್ದಾರೆ ಎಂದು ಸುಳ್ಳು ಹಂಚಿಕೆ

ಈಗ ಭಾರತ್ ಜೋಡೋ ಯಾತ್ರೆ ಸದ್ದು ಮಾಡುತ್ತಿದೆ. ರಾಹುಲ್ ಗಾಂಧಿ ಮತ್ತು ತಂಡ ಹುರುಪಿನಿಂದ ಹೆಜ್ಜೆ ಹಾಕುತ್ತಿದೆ. ಇದರ ನಡುವೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗಿದ್ದು, ಕಾಂಗ್ರೆಸಿಗರು ಮದ್ಯಪಾನ ಮಾಡಿ ತೂರಾಡುತ್ತಿದ್ದಾರೆ ಎಂದು ಪ್ರತಿಪಾದಿಸಲಾಗಿದೆ.

“ಯಾತ್ರೆಯ ಸಂದರ್ಭದಲ್ಲಿ ಕೇರಳದ ಸ್ಥಳೀಯ ಬಾರ್‌ನಿಂದ ಸಂಪೂರ್ಣವಾಗಿ ಕುಡಿದು ಹೊರಬರುತ್ತಿರುವ ರಾಹುಲ್ ಗಾಂಧಿ ಮತ್ತು ಹಿರಿಯ ಕಾಂಗ್ರೆಸ್ ನಾಯಕರು”  ಎಂಬ ಹೇಳಿಕೆಯೊಂದಿಗೆ ಫೇಸ್‌ಬುಕ್, ವಾಟ್ಸಾಪ್ ಮತ್ತು ಟ್ವಿಟರ್‌ಗಳಲ್ಲಿ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದು, ರಾಹುಲ್ ಗಾಂಧಿ ಸೇರಿದಂತೆ ಎಲ್ಲರೂ ಮದ್ಯಪಾನ ಮಾಡಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಹಾಗಿದ್ದರೆ BJP ಮತ್ತು ಬಲಪಂಥೀಯ ಪ್ರತಿಪಾದಕರು ಹಂಚಿಕೊಂಡಿರುವ ವಿಡಿಯೋ ಪೋಸ್ಟ್‌ನಲ್ಲಿ ಮಾಡಲಾಗಿರುವ ಪ್ರತಿಪಾದನೆ ನಿಜವೇ ? ರಾಹುಲ್ ಮತ್ತು ಕಾಂಗ್ರೆಸ್‌ನ ಹಿರಿಯ ನಾಯಕರು ಮದ್ಯಪಾನ ಮಾಡಿದ್ದರೆ ? ಇದರ ಸತ್ಯಾಸತ್ಯತೆ ಏನು ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಕೇರಳದ ಕೊಲ್ಲಂ ಜಿಲ್ಲೆಯ ಓಚಿರಾದಲ್ಲಿರುವ ರೆಸ್ಟೋರೆಂಟ್‌ನಲ್ಲಿ ಬೆಳಗಿನ ಉಪಾಹಾರ (ತಿಂಡಿ) ಮುಗಿಸಿ, ರೆಸ್ಟೋರೆಂಟ್‌ನಿಂದ ಹೊರ ಬರುವಾಗ ಕೇರಳದ ಹಿರಿಯ ಕಾಂಗ್ರೆಸ್ ನಾಯಕರು ತಡವರಿಸಿದಂತೆ ವಿಡಿಯೋವನ್ನು ಎಡಿಟ್ ಮಾಡಲಾಗಿದೆ. ಆ ಮೂಲಕ ಭಾರತ್ ಜೋಡೋ ಯಾತ್ರೆಯಲ್ಲಿ ಕುಡಿದು ಕಾಂಗ್ರೆಸ್ ನಾಯಕರು ಬಾರ್ ಜೋಡೋ ಯಾತ್ರೆಯನ್ನು ಚೆನ್ನಾಗಿ ಮಾಡುತ್ತಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ.

ಮೆಟ್ಟಿಲಂತೆ ಇರುವ ಜಾಗವನ್ನು ಗಮನಿಸದೆ ತಡವರಿಸುವ ಕಾಂಗ್ರೆಸ್ ನಾಯಕರು
ಮೆಟ್ಟಿಲಂತೆ ಇರುವ ಜಾಗವನ್ನು ಗಮನಿಸದೆ ತಡವರಿಸುವ ಕಾಂಗ್ರೆಸ್ ನಾಯಕರು

ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ದೃಶ್ಯಗಳಿಗಾಗಿ ಕೀವರ್ಡ್‌ಗಳೊಂದಿಗೆ ಸರ್ಚ್ ಮಾಡಿದಾಗ ಕಾಂಗ್ರೆಸ್ ನಾಯಕ ಡಾ. ಶಾಮಾ ಮೊಹಮ್ಮದ್ ಅವರು ಸೆಪ್ಟೆಂಬರ್ 17, 2022 ರಲ್ಲಿ ಹಂಚಿಕೊಂಡಿರುವ ಫೇಸ್‌ಬುಕ್ ಪೋಸ್ಟ್ ಅನ್ನು ಕಂಡುಕೊಂಡಿದ್ದೇವೆ.

2022 ರ ಸೆಪ್ಟೆಂಬರ್ 17 ರಂದು ಬೆಳಿಗ್ಗೆ 8.08 ಕ್ಕೆ ಫೇಸ್‌ಬುಕ್ ಲೈವ್ ವೀಡಿಯೊವನ್ನು ಮೊಹಮ್ಮದ್ ಪೋಸ್ಟ್ ಮಾಡಿದ್ದಾರೆ, ಅವರು ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರು ಯಾತ್ರೆಯಿಂದ ವಿರಾಮ ತೆಗೆದುಕೊಂಡು ಚಹಾ ಕುಡಿಯಲು ನಿಂತಿದ್ದಾರೆ ಎಂದು ಹೇಳಿದ್ದಾರೆ. ಲೈವ್ ವೀಡಿಯೊದ ಸಮಯದಲ್ಲಿ 17 ಸೆಕೆಂಡ್ ಟೈಮ್‌ಸ್ಟ್ಯಾಂಪ್‌ನಲ್ಲಿ,  (ರೆಸ್ಟೋರೆಂಟ್‌ನ ಹೆಸರನ್ನು ನೋಡಬಹುದು) ಕೇರಳದ ಕೊಲ್ಲಂ ಜಿಲ್ಲೆಯ ಓಚಿರಾದಲ್ಲಿರುವ ಹೋಟೆಲ್ ಮಲಬಾರ್ ಎಂಬುದನ್ನು ಗಮಸಿಸಬಹುದು.

ಲೈವ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ಲೈವ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ನಂತರ ವೈರಲ್ ವೀಡಿಯೊದಲ್ಲಿ ಕಂಡುಬರುವ ಸ್ಥಳವನ್ನು ಗೂಗಲ್ ಮ್ಯಾಪ್‌ನಲ್ಲಿ ಸರ್ಚ್ ಮಾಡಿದಾಗ ವೈರಲ್ ವಿಡಿಯೋದಲ್ಲಿರುವ ರೆಸ್ಟೋರೆಂಟ್‌ನ ಒಳಭಾಗದ ಫೋಟೋಗಳು ಲಭ್ಯವಾಗಿದ್ದು ಅದನ್ನು ಪರಿಶೀಲಿಸಿದಾಗ ಒಂದಕ್ಕೊಂದು ಹೋಲಿಕೆಯಾಗುತ್ತವೆ.

ಸೆಪ್ಟೆಂಬರ್ 17, 2022 ರಂದು ಬೆಳಿಗ್ಗೆ 6.43 ಕ್ಕೆ ಕಾಂಗ್ರೆಸ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಪ್ರಸಾರವಾದ ಭಾರತ್ ಜೋಡೋ ಯಾತ್ರೆಯ ಲೈವ್ ದೃಶ್ಯಗಳನ್ನು ಪರಿಶೀಲಿಸಿದಾಗ, 1:17:00 ನಿಮಿಷಗಳ ಟೈಮ್‌ಟ್ಯಾಂಪ್‌ನಲ್ಲಿ ಅದೇ ಹೋಟೆಲ್ ಕಂಡುಬಂದಿದ್ದು, ಅದರಲ್ಲಿ ಹೋಟೆಲ್ ಮಲಬಾರ್ ಎಂದಿದ್ದು, ಅಲ್ಲಿ ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರು ಉಪಹಾರ ಸೇವಿಸಲು ಪ್ರವೇಶಿಸುತ್ತಿರುವ ದೃಶ್ಯಾವಳಿಗಳು ಕಂಡುಬಂದಿವೆ.

ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರು ಉಪಹಾರ ಸೇವಿಸಲು ಪ್ರವೇಶಿಸುತ್ತಿರುವ ದೃಶ್ಯಾವಳಿಗಳು
ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರು ಉಪಹಾರ ಸೇವಿಸಲು ಪ್ರವೇಶಿಸುತ್ತಿರುವ ದೃಶ್ಯಾವಳಿಗಳು

ಕೆಲ ಸಮಯದ ನಂತರ, ಅಂದರೆ 1:41:00 ನಿಮಿಷದ ಟೈಮ್‌ಸ್ಟ್ಯಾಂಪ್‌ನಲ್ಲಿ ರಾಹುಲ್ ಗಾಂಧಿ ರೆಸ್ಟೋರೆಂಟ್‌ನಿಂದ ನಿರ್ಗಮಿಸಿ ಯಾತ್ರೆಯನ್ನು ಪುನರಾರಂಭಿಸುವುದನ್ನು ನಾವು ನೋಡಬಹುದು. ವೈರಲ್ ವಿಡಿಯೋದಲ್ಲಿ ಕಂಡುಬರುವ ಕೋಡಿಕುನ್ನಿಲ್ ಸುರೇಶ್ ಸೇರಿದಂತೆ ಅದೇ ಹಿರಿಯ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯೊಂದಿಗೆ ಸ್ಥಿರವಾಗಿ ನಡೆಯುವುದನ್ನು ಇಲ್ಲಿ ಕಾಣಬಹುದು.

ಮಲಬಾರ್  ಹೋಟೇಲ್ ಮಾಲೀಕರ ಸ್ಪಷ್ಟನೆ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋ ಕುರಿತು ಸ್ಪಷ್ಟನೆ ಪಡೆದುಕೊಳ್ಳಲು ಬೂಮ್ ಫ್ಯಾಕ್ಟ್‌ಚೆಕ್ ತಂಡ ಹೋಟೆಲ್ ಮಾಲೀಕರನ್ನು ಸಂಪರ್ಕಿಸಿದಾಗ ಪ್ರತಿಕ್ರಿಯಿಸಿರುವ ಅನ್ಸಾರ್ ಎ ಮಲಬಾರ್, ಸೆಪ್ಟೆಂಬರ್ 17, 2022 ರಂದು ಭಾರತ್ ಜೋಡೋ ಯಾತ್ರೆ ಪ್ರಾರಂಭವಾದ ನಂತರ, ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರು ಬೆಳಿಗ್ಗೆ 8:00 ಗಂಟೆಗೆ ಉಪಹಾರ ಸೇವಿಸಲು ಇಲ್ಲಿಗೆ ಬಂದಿದ್ದರು 8:30 ರ ವರೆಗೆ ಇಲ್ಲಿಯೇ ಉಪಹಾರ ಸೇವಿಸಿದರೂ ಎಂದು ತಿಳಿಸಿದ್ದಾರೆ.

ರಾಹುಲ್ ಮತ್ತು ಕಾಂಗ್ರೆಸ್‌ನ ನಾಯಕರು ಮದ್ಯಪಾನ ಮಾಡಿದ್ದರು ಎಂದು ವಿಡಿಯೋ ವೈರಲ್ ಆಗುತ್ತಿದೆ ಇದರ ಬಗ್ಗೆ ಹೇಳಿ ಎಂದಾಗ, “ಇದೆಲ್ಲ ಸುಳ್ಳು ಹೋಟೆಲ್ ನಲ್ಲಿ ಯಾವುದೇ ಮದ್ಯವನ್ನು ಮಾರುವುದಿಲ್ಲ ಮತ್ತು ನೀಡುವುದಿಲ್ಲ ಮತ್ತು ಅವರು ಮದ್ಯ ಸೇವಿಸಿದ್ದಾರೆ ಎಂಬ ಹೇಳಿಕೆಯು ನಕಲಿಯಾಗಿದೆ”  ಮತ್ತು ನಮ್ಮಲಿ ಸಿಸಿಟಿವಿ ದೃಶ್ಯಾವಳಿ ಕೂಡ ಇದೆ ಎಂದು, ವೈರಲ್ ವಿಡಿಯೋದಲ್ಲಿ ಮಾಡಿರುವ ಆಪಾದನೆಯನ್ನು ತಳ್ಳಿಹಾಕಿದ್ದಾರೆ.

ಮಲಬಾರ್ ಕೇರಳದ ಹಿರಿಯ ಕಾಂಗ್ರೆಸ್ ನಾಯಕರು ಮತ್ತು ರಾಹುಲ್ ಗಾಂಧಿಯವರು ತಮ್ಮ ರೆಸ್ಟೊರೆಂಟ್‌ನಲ್ಲಿ ಏನೆಲ್ಲ ತಿಂದಿದ್ದಾರೆ ಎಂದು ತಿಳಿಸಿದ್ದು, “ರಾಹುಲ್ ಗಾಂಧಿಯವರು ಒಂದು ಆಮ್ಲೆಟ್, ಎರಡು ಕಾಫಿ, ಒಂದು ಕೇಕ್, ಮತ್ತು ಇತರ ಕಾಂಗ್ರೆಸ್ ನಾಯಕರು ಅಪ್ಪಂ, ಕಡಲೆ ಕರಿ ಮತ್ತು ಚಹಾವನ್ನು ಸೇವಿಸಿದರು” ಎಂದು ಮಲಬಾರ್ ಹೋಟೆಲ್‌ನ ಮಾಲೀಕ ಅನ್ಸಾರ್ ಎ ಮಲಬಾರ್  BOOM ಗೆ ತಿಳಿಸಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ಸುಳ್ಳು ಎಂದು ಸ್ಪಷ್ಟವಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಬಾಬಾ ರಾಮ್‌ದೇವರ ಪತಂಜಲಿಯಲ್ಲೂ ಬಂತೆ ಬೀಫ್ ಬಿರಿಯಾನಿ ರೆಸಿಪಿ ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights