ಫ್ಯಾಕ್ಟ್‌ಚೆಕ್: ಅಭಿಮಾನಿ TV ಒಡೆದು ಹಾಕಿದ್ದು ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿರುದ್ದ ಪಾಕಿಸ್ತಾನ ಸೋತಿದ್ದಕ್ಕಲ್ಲ

ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದ ವೇಳೆ ಭಾರತ ತಂಡದ ಗೆಲುವಿನ ಕ್ಷಣಗಳನ್ನು ವೀಕ್ಷಿಸಿದ ವ್ಯಕ್ತಿಯೊಬ್ಬ ತನ್ನ ಟಿವಿಯನ್ನು ಒಡೆದು ಹಾಕಿದ್ದಾನೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. T20 ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತ ತಂಡವು ಪಾಕಿಸ್ತಾನದ ವಿರುದ್ಧ ಜಯಗಳಿಸಿದ ನಂತರ ಪಾಕಿಸ್ತಾನಿ ಕ್ರಿಕೆಟ್ ಅಭಿಮಾನಿ ತನ್ನ ಟಿವಿಯನ್ನು ಒಡೆದುಹಾಕಿದ ವೀಡಿಯೊ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದ ಸ್ಕ್ರೀನ್‌ಶಾಟ್‌ ಅನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ, ವ್ಯಕ್ತಿಯೊಬ್ಬ ಫುಟ್‌ಬಾಲ್ ಪಂದ್ಯವನ್ನು ವೀಕ್ಷಿಸುತ್ತಿರುವಾಗ ಕೋಪಗೊಂಡು ತನ್ನ ಟಿವಿಯನ್ನು ಒಡೆದುಹಾಕಿದ ವ್ಯಕ್ತಿಯ ಕುರಿತು ಕೆಲವು ಸುದ್ದಿ ವರದಿಗಳು ಲಭ್ಯವಾಯಿತು.

ವರದಿಯ ಪ್ರಕಾರ, ಇದು ತನ್ನ ದೇಶವಾದ ಟರ್ಕಿ ಮತ್ತು ಕ್ರೊಯೇಷಿಯಾ ನಡುವಿನ ಯೂರೋ 2016 ಪಂದ್ಯವನ್ನು ವೀಕ್ಷಿಸುತ್ತಿದ್ದಾಗ ಇಝೆಟ್ ಸಾಲ್ಟಿ ಎಂಬ ವ್ಯಕ್ತಿಯನ್ನ ಆತನ ಗೆಳತಿ ತಮಾಷೆಗೆ (prank) ಮಾಡಲು ಈ ರೀತಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಪಂದ್ಯದ ನಿರ್ಣಾಯಕ ಕ್ಷಣಗಳಲ್ಲಿ ಟಿವಿಯನ್ನು ಆಫ್ ಮಾಡಿದಾಗ ಇಝೆಟ್‌ನ ಗೆಳತಿಯು ಆತನ ವರ್ತನೆಯನ್ನು ಚಿತ್ರೀಕರಿಸಿದ್ದಾಳೆ. ಇದರ ಪರಿಣಾಮವಾಗಿ, ಅವನು ತನ್ನ ಟಿವಿಯನ್ನು ಒಡೆದು ಹಾಕಿದ್ದಾನೆ. ಘಟನೆಯ ಕುರಿತು ಇನ್ನಷ್ಟು ತಿಳಿದುಕೊಳ್ಳಲು 2016 ರ ಡೈಲಿ ಮೇಲ್ ಲೇಖನದ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಓದಬಹುದು.

YouTube ನಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊವನ್ನು 2:16 ಸೆಕೆಂಡುಗಳ ಅವಧಿಯಲ್ಲಿ ಈ ಘಟನೆ ದಾಖಲಾಗಿದೆ. ಅದನ್ನು ಇಲ್ಲಿ ವೀಕ್ಷಿಸಬಹುದು.

ಪಾಕಿಸ್ತಾನಿ ಕ್ರಿಕೆಟ್ ಅಭಿಮಾನಿಗಳು ತಮ್ಮ ಟಿವಿ ಸೆಟ್‌ಗಳನ್ನು ಮುರಿದ ಘಟನೆಗಳು ಈ ಹಿಂದೆ ವರದಿಯಾಗಿದ್ದು, ಅದನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು. ಆದರೆ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಜಯಗಳಿಸಿದ ಸಂದರ್ಭದಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಎಡಿಟ್ ಮಾಡಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋ 2016 ರಲ್ಲಿ ಚಿತ್ರೀಕರಿಸಿದ ಹಳೆಯ ವೀಡಿಯೊವಾಗಿದೆ. ವರದಿಯ ಪ್ರಕಾರ, ಟರ್ಕಿ ಮತ್ತು ಕ್ರೊಯೇಷಿಯಾ ನಡುವಿನ ಯುರೋ 2016 ಫುಟ್‌ಬಾಲ್ ಪಂದ್ಯದ ಸಂದರ್ಭದಲ್ಲಿ ಮಹಿಳೆಯೊಬ್ಬರು ಪಂದ್ಯದ ನಿರ್ಣಾಯಕ ಕ್ಷಣಗಳಲ್ಲಿ ಟಿವಿಯನ್ನು ಪದೇ ಪದೇ ಆಫ್ ಮಾಡುವ ಮೂಲಕ ತನ್ನ ಗೆಳೆಯನನ್ನು ತಮಾಷೆ ಮಾಡಿದ್ದಾರೆ. ವೈರಲ್ ಪೋಸ್ಟ್ ಈ ವೀಡಿಯೊದ ಕ್ಲಿಪ್ ಅನ್ನು ಒಳಗೊಂಡಿದೆ, ಇದರಲ್ಲಿ ಕ್ರಿಕೆಟ್ ಪಂದ್ಯದ ಕ್ಲಿಪ್ ಅನ್ನು ಟಿವಿ ಪರದೆಗೆ ಡಿಜಿಟಲ್ ಆಗಿ ಎಡಿಟ್  ಮಾಡಿ ಸೇರಿಸಲಾಗಿದೆ.  ಫುಟ್‌ಬಾಲ್ ಅಭಿಮಾನಿಯೊಬ್ಬ ತನ್ನ ಟಿವಿ ಸೆಟ್ ಅನ್ನು ಒಡೆದುಹಾಕುವ ಹಳೆಯ ವೀಡಿಯೊವನ್ನು ಅವರು ಭಾರತ-ಪಾಕಿಸ್ತಾನ T20 ವಿಶ್ವಕಪ್ ಪಂದ್ಯವನ್ನು ವೀಕ್ಷಿಸುತ್ತಿರುವಂತೆ ಕಾಣುವಂತೆ ಎಡಿಟ್ ಮಾಡಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ:  ಫ್ಯಾಕ್ಟ್‌ಚೆಕ್: ಮಳೆಯಲ್ಲೂ ಉರಿಯುತ್ತಿತ್ತೆ ಹಾಸನಾಂಬೆ ಅಮ್ಮನವರಿಗೆ ಇಟ್ಟ ದೀಪ – ವಾಸ್ತವವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights