ಫ್ಯಾಕ್ಟ್‌ಚೆಕ್: ಮಳೆಯಲ್ಲೂ ಉರಿಯುತ್ತಿತ್ತೆ ಹಾಸನಾಂಬೆ ಅಮ್ಮನವರಿಗೆ ಇಟ್ಟ ದೀಪ – ವಾಸ್ತವವೇನು?
‘ಜೋರು ಮಳೆಯ ನಡುವೆಯು ದೇವಸ್ಥಾನದ ಆವರಣದಲ್ಲಿ ಹಚ್ಚಿದ್ದ ದೀಪ ಆರದೆ ಹಾಗೆಯೇ ಉರಿಯುತ್ತಿದೆ. ಇದು ಹಾಸನಾಂಬೆಯ ಪವಾಡ’ ಎಂದು ಹೇಳಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ.
ಹಾಸನಾಂಬೆ ದೇವಸ್ಥಾನದಲ್ಲಿ ನಡೆದಿರುವ ಘಟನೆಯೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದ್ದು, “ಹಾಸನ ಜಿಲ್ಲೆಯಲ್ಲಿ ಇಂದು ನಡೆದ ಘಟನೆ. ತಾಯಿ ಹಾಸನಾಂಬೆ ದೇವಸ್ಥಾನದಲ್ಲಿ ಈ ರೀತಿಯಾಗಿ ಜೋರು ಮಳೆ ಬಂದರೂ ಕೂಡ ದೀಪಾ ಕೆಡದೆ ಬೆಳಗುತಿದೆ. ಇದು ನಮ್ಮ ಸಂಪ್ರದಾಯ ದೈವ ಭಕ್ತಿ ಅಪಾರ. ದೇವರನ್ನು ನಂಬಿ ಕೆಟ್ಟವರಿಲ್ಲ ಜೈ ಹಾಸನಾಂಬೆ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.
ಈ ವಿಡಿಯೋದ ನಿಜಾಂಶ ತಿಳಿಸುವಂತೆ ನಮ್ಮ ಏನ್‌ಸುದ್ದಿ.ಕಾಂನ ವಾಟ್ಸಾಪ್ ಗ್ರೂಪ್‌ಗೆ ವಿನಂತಿ ಬಂದಿತ್ತು. ವಿಡಿಯೋದಲ್ಲಿ ಮಾಡಲಾದ ಪ್ರತಿಪಾನೆಯ ವಾಸ್ತವವೇನೆಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್:
ವಾಟ್ಸಾಪ್‌ಗಳಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಪರಿಶೀಲಿಸುವ ಮುನ್ನ ಹಾಸನಾಂಬ ದೇವಾಸ್ಥಾನದ ವಿಶೇಷತೆ ಏನಿದೆ ಎಂದು ತಿಳಿಯೋಣ.
ವರ್ಷಕ್ಕೊಮ್ಮೆ ಮಾತ್ರ ತೆರೆಯುವ ದೇವಸ್ಥಾನದ ಬಾಗಿಲು
ಹಾಸನದ ಐತಿಹಾಸ ಪ್ರಸಿದ್ದ ದೇವಾಲಯವಾದ ಹಾಸನಾಂಬ ದೇವಿ ದೇವಸ್ಥಾನದ ಬಾಗಿಲನ್ನು ಆಶ್ವೀಜ ಮಾಸದ ಹುಣ್ಣಿಮೆಯ ನಂತರ ಬರುವ ಗುರುವಾರದಂದು ತೆರೆದು, ಬಲಿಪಾಡ್ಯಮಿಯ ದಿನ ಮುಚ್ಚಲಾಗುತ್ತದೆ. ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸಿ ದೇವಿಯ ದರ್ಶನ ಪಡೆಯುತ್ತಾರೆ.
ಮಳೆಯಲ್ಲಿ ದೀಪ ಕೆಡದಿರಲು ಸಾಧ್ಯವೇ?
ಈ ಬಾರಿ ಹಾಸನಾಂಬೆ ದೇವಾಲಯದ ಬಾಗಿಲನ್ನು 13 ಅಕ್ಟೋಬರ್ 2022 ರಂದು ತೆರೆದಿದ್ದು 27 ಅಕ್ಟೋಬರ್ ವರೆಗೆ ಆದಿದೇವತೆಯ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ದಿನ ಸಾವಿರಾರು ಭಕ್ತರು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯುತ್ತಿದ್ದಾರೆ.
ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಮಳೆಯಲ್ಲಿ ದೀಪ ಕೆಡದೆ ಉರಿಯುತ್ತಿರುವ ವಿಡಿಯೋ ಬಗ್ಗೆ ಪರಿಶೀಲಿಸಲು ದೇವಾಲಯದ ಆವರಣದಲ್ಲಿ ಕೆಲಸಕ್ಕೆ ನಿಯೋಜಿಸಲಾಗಿದ್ದ ಪೊಲೀಸರನ್ನು ಸಂಪರ್ಕಿಸಿ ವಿಚಾರಿಸಿದಾಗ, ಘಟನೆಯ ಬಗ್ಗೆ ವಿವರಣೆ ನೀಡಿದ್ದು ಹೀಗೆ…
ದಿನಾಂಕ 20 ಅಕ್ಟೋಬರ್ 2022ರ ಗುರುವಾರದಂದು ದೇವಿಯ ದರ್ಶನಕ್ಕೆ ಬಂದಂತಹ ಸಾವಿರಾರು ಭಕ್ತರು ಸಾಲಿನಲ್ಲಿ ನಿಂತಿದ್ದ ವೇಳೆ ಮಳೆ ಸುರಿಯಲಾರಂಭಿಸಿತು. ಪ್ರತಿ ದಿನ ದೇವಸ್ಥಾನದ ಆವರಣದಲ್ಲಿ ಉರಿಸುವಂತೆಯೇ ದೀಪವನ್ನು ಹಚ್ಚಲಾಗಿತ್ತು. ಮಳೆ ಆರಂಭವಾದರೂ ದೀಪ ಆರದೆ ಉರಿಯುತ್ತಿರುವುದನ್ನು ಗಮನಿಸಿದ ಕೆಲ ಭಕ್ತರು ಅದನ್ನು ವಿಡಿಯೋ ಮಾಡಿಕೊಂಡು ದೇವಿಯ ಮಹಿಮೆಯಿಂದ ದೀಪ ಉರಿಯುತ್ತಿದೆ ಎಂದು ಅದನ್ನು ಹಂಚಿಕೊಂಡಿದ್ದಾರೆ. ವಾಸ್ತವವಾಗಿ ದೇವಸ್ಥಾನದ ಆವರಣದಲ್ಲಿ ಉರಿಸುವ ದೀಪದ ಬತ್ತಿ ದೊಡ್ಡ ಗಾತ್ರದಾಗಿದೆ. ಹಾಗಾಗಿ ಮಳೆ ಪ್ರಾರಂಭವಾಗಿ ಕೆಲ ನಿಮಿಷಗಳವರಗೆ ಎಣ್ಣೆ ಹೀರಿಕೊಂಡಿದ್ದ ದೊಡ್ಡ ಬತ್ತಿಯ ದೀಪ ಕೆಡದೆ ಉರಿದಿದೆ. ನಂತರ ಮಳೆ ಜೋರಾಗುತ್ತಿದ್ದಂತೆ ದೀಪ ಆರಿದೆ. ಆದರೆ ದೀಪ ಆರಿ ಹೋಗುವುದನ್ನು ವಿಡಿಯೋದಲ್ಲಿ ತೋರಿಸಿಲ್ಲ” ಎಂದು ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆಯೊಬ್ಬರು ತಿಳಿಸಿದ್ದಾರೆ.
ವಾಟ್ಸಾಪ್‌ನಲ್ಲಿ ಹಂಚಿಕೊಳ್ಳಲಾಗಿರುವ ಎಲ್ಲಾ ವಿಡಿಯೋಗಳು ಕೇವಲ 17 ಸೆಕೆಂಡ್ ಮಾತ್ರವೇ ಇರುವುದನ್ನು ಗಮನಿಸಬೇಕು. ನಂತರ ದೀಪ ಆರಿದೆ. ಆದರೆ ಹಾಸನಾಂಬೆಯ ಎಂದರೆ ಪವಾಡಕ್ಕೆ ಹೆಸರುವಾಸಿಯಾಗಿರುವ ದೇವತೆ ಎಂಬ ನಂಬಿಕೆ ಇರುವುದರಿಂದ, ಇದೂ ಕೂಡ ಪವಾಡವೇ ಇರಬೇಕು ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಈ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಶೌಚಾಲಯಕ್ಕೂ ಫೋಟೊಗ್ರಾಫರ್‌ನನ್ನು ಕರೆದುಕೊಂಡು ಹೋಗುವರೇ ಪ್ರಧಾನಿ ಮೋದಿ?