ಫ್ಯಾಕ್ಟ್‌ಚೆಕ್: ಬೋರ್‌ವೆಲ್‌ನಲ್ಲಿ ನೀರಿನ ಬದಲು ಹಾಲು ಬಂದಿತ್ತೆ?

ರೈತರ ಕೃಷಿ ಚಟುವಟಿಕೆಗೆ ಮುಖ್ಯವಾಗಿ ಬೇಕಾಗಿರುವುದು ನೀರು. ನೀರು ಪೂರೈಕೆಗಾಗಿ ಜಮೀನಿನಲ್ಲಿ ಬೋರ್ ಕೊರೆಸಿದಾಗ ನೀರಿನ ಬದಲು ಹಾಲು ಬಂದರೆ ಹೇಗಿರುತ್ತೆ. ಅಯ್ಯೋ ಬೋರ್‌ನಲ್ಲಿ ನೀರಿನ ಬದಲು ಹಾಲು ಬರಲು ಸಾಧ್ಯವೇ? ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಇಂತಹದೊಂದು ಪೋಸ್ಟ್‌ ಹರಿದಾಡುತ್ತಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನ ಪ್ರಕಾರ ಮಹಾರಾಷ್ಟ್ರದ ಜಮೀನಿನಲ್ಲಿ ಬೋರ್ ಕೊರೆಸಿದಾಗ ನೀರಿನ ಬದಲು ಹಾಲು ಬರುತ್ತಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ವೈರಲ್ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಪೋಸ್ಟ್‌ನಲ್ಲಿ ಹಂಚಿಕೊಂಡ ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್  ರಿವರ್ಸ್ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ, ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು 2019 ರಲ್ಲಿ ಅದೇ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ರಾಜಸ್ಥಾನದ ಬಿಕಾನೇರ್ ಜಿಲ್ಲೆಯ ನೌರಂಗದೇಸರ್ ಗ್ರಾಮದ ಜಮೀನಿನಲ್ಲಿ ಬೋರ್ ಕೊರೆಯುವಾಗ ಹಾಲು ಬಂದಿದೆ ಎಂದು ಹೇಳಿದ್ದಾರೆ. ನೌರಂಗದೇಸರ್ ಗ್ರಾಮದ ವೀರ್ ಬಿಗ್ಗಾಜಿ ಪೆಟ್ರೋಲ್ ಪಂಪ್ ಬಳಿಯ ಹೊಲದಲ್ಲಿ ಈ ಘಟನೆ ನಡೆದಿದೆ ಎಂದು ಈ ಸಾಮಾಜಿಕ ಮಾಧ್ಯಮದ ಬಳಕೆದಾರರು ಹೇಳಿದ್ದಾರೆ.

ಆದರೆ, ‘INC News’ ಎಂಬ ಯೂಟ್ಯೂಬ್ ಚಾನೆಲ್ 19 ನವೆಂಬರ್ 2019 ರಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೊವನ್ನು ಸ್ಪಷ್ಟಪಡಿಸುವ ವಿವರಗಳೊಂದಿಗೆ ವಿಡಿಯೋವನ್ನು ಪ್ರಕಟಿಸಿದೆ. INC New ವರದಿಯ ಪ್ರಕಾರ ಎರಡು ವರ್ಷಗಳಿಂದ ಮುಚ್ಚಿದ್ದ ಬೋರ್‌ವೆಲ್ ಅನ್ನು ರಾಸಾಯನಿಕಗಳ ಸಹಾಯದಿಂದ ಸ್ವಚ್ಛಗೊಳಿಸಿ ಮರುಪ್ರಾರಂಭಿಸಿದಾಗ ಅದರಲ್ಲಿ ಬಿಳಿ ನೊರೆ ಮಿಶ್ರಿತ ನೀರು ಹೊರಬಂದಿದ್ದು, ಎರಡು ಗಂಟೆಗಳ ನಂತರ ತಿಳಿ ನೀರು ಹೊರಬರಲು ಪ್ರಾರಂಭಿಸಿತು ಎಂದು ನೌರಂಗದೇಸರ್ ಗ್ರಾಮದ ಸರಪಂಚ್ ರನ್ನಿವಾಸ್ ಅವರು ತಿಳಿಸಿರುವುದಾಗಿ ಈ ಸುದ್ದಿ ಸಂಸ್ಥೆ ವರದಿ ಮಾಡಿದೆ.

ವಿಶ್ವಾಸ್ ನ್ಯೂಸ್ ಫ್ಯಾಕ್ಟ್‌ಚೆಕ್ ತಂಡ ವೀರ್ ಬಿಗ್ಗಾಜಿ ಅವರು ವಿಡಿಯೋ ಕುರಿತು ಹೆಚ್ಚಿನ ಸ್ಪಷ್ಟೀಕರಣಕ್ಕಾಗಿ ಬೋರ್‌ವೆಲ್ ಪಂಪ್‌ನ ಮಾಲೀಕ ರಾಮಚಂದ್ರ ಅವರನ್ನು ಸಂಪರ್ಕಿಸಿದ್ದಾರೆ. 2019ರ ನವೆಂಬರ್‌ನಲ್ಲಿ ತನ್ನ ಕಿರಿಯ ಸಹೋದರನ ಜಮೀನಿನಲ್ಲಿ ಎರಡು ವರ್ಷಗಳಿಂದ ಮುಚ್ಚಲಾಗಿದ್ದ ಬೋರ್‌ವೆಲ್‌ ಅನ್ನು ರಾಸಾಯನಿಕಗಳ ಸಹಾಯದಿಂದ ಸ್ವಚ್ಛಗೊಳಿಸಿ ಪುನಃ ಆರಂಭಿಸಿದಾಗ ಬಿಳಿಯಂಥ ನೀರು ಹೊರಬಂದ ಘಟನೆ ವಿಡಿಯೋದಲ್ಲಿ ನಡೆದಿದೆ ಎಂದು ರಾಮಚಂದ್ರ, ವಿಶ್ವಾಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ನೀರಿನ ಪ್ರಮಾಣವನ್ನು ಪರಿಶೀಲಿಸಲು ಮೋಟರ್‌ಅನ್ನು ಸ್ಟಾರ್ಟ್ ಮಾಡಿದ ಸ್ವಲ್ಪ  ಸಮಯದವರೆಗೆ ನೊರೆ ಹೊರಬಂದಿತು. ಬಿಳಿ ನೊರೆ ನೀರು ಬರುತ್ತಿರುವಾಗ ಕೆಲವರು ಅದನ್ನು ಚಿತ್ರೀಕರಿಸಿದರು. ಅದೇ ವಿಡಿಯೋಗಳನ್ನು ಕೆಲ ಗ್ರಾಮಸ್ಥರು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪಾಗಿ ಶೇರ್ ಮಾಡಿದ್ದಾರೆ ಎಂದು ರಾಮಚಂದ್ರ ಸ್ಪಷ್ಟಪಡಿಸಿದ್ದಾರೆ. ನೀರೇ ಬರದ ಈ ಕಾಲದಲ್ಲಿ ಭೂಮಿಯಿಂದ  ಹಾಲು ಬರಲು ಸಾಧ್ಯವೇ ಎಂದು ರಾಮಚಂದ್ರ ಹೇಳಿದ್ದಾರೆ.

ರಾಜಸ್ಥಾನ ಪತ್ರಿಕಾ ಸುದ್ದಿ ಸಂಸ್ಥೆ ಕೂಡ ಘಟನೆಗೆ ಸಂಬಂಧಿಸಿದಂತೆ ಸತ್ಯ ಪರಿಶೀಲನೆ ಲೇಖನವನ್ನು ಪ್ರಕಟಿಸಿದೆ. ಈ ವಿವರಗಳ ಆಧಾರದ ಮೇಲೆ ವೀಡಿಯೋದಲ್ಲಿರುವ ಬೋರ್‌ವೆಲ್‌ನಿಂದ ಹೊರಬರುವ ಬಿಳಿ ದ್ರವ್ಯ ಹಾಲಿನದಲ್ಲ ಮತ್ತು ಈ ವಿಡಿಯೋ ಮಹಾರಾಷ್ಟ್ರಕ್ಕೆ ಸಂಬಂಧಿಸಿಲ್ಲ ಎಂಬುದು ಖಚಿತವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಎರಡು ವರ್ಷಗಳಿಂದ ಮುಚ್ಚಿ ಹೋಗಿದ್ದ ಬೋರ್‌ವೆಲ್‌ಅನ್ನು ರಾಸಾಯನಿಕಗಳ ಸಹಾಯದಿಂದ ಸ್ವಚ್ಛಗೊಳಿಸಿ  ಪುನರಾರಂಭಿಸಿದಾಗ ಅದರಲ್ಲಿ ಬಿಳಿ ನೊರೆ ಮಿಶ್ರಿತ ನೀರು ಬರುತ್ತಿರುವ ದೃಶ್ಯಗಳನ್ನು, ಮಹಾರಾಷ್ಟ್ರದ ಜಮೀನಿನಲ್ಲಿ ಬೋರ್‌ವೆಲ್‌ನಿಂದ ಹಾಲು ಬರುತ್ತಿರುವ ದೃಶ್ಯಗಳು ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಭಾರತದ ಸಂಜು ಸ್ಯಾಮ್ಸನ್ ಐರ್ಲೆಂಡ್ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಿರುವುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights