2022ರ ಟಾಪ್ ಟೆನ್ ಫೇಕ್ ನ್ಯೂಸ್‌ಗಳು ಮತ್ತು ವಾಸ್ತವಗಳು

ಉಡುಪಿಯ ಒಂದು ಕಾಲೇಜಿಗೆ ಸೀಮಿತವಾಗಿದ್ದ ಹಿಜಾಬ್ ವಿವಾದವನ್ನು ಕರ್ನಾಟಕ ರಾಜ್ಯದ ವಿವಾದವನ್ನಾಗಿ ಮಾಡಿದ ಕೀರ್ತಿ ಇಂದಿನ ಮುಖ್ಯವಾಹಿನಿ ಮಾಧ್ಯಮಗಳಿಗೆ ಸಲ್ಲಲೇಬೇಕು. ಅದರಲ್ಲೂ ಶಾಲಾ ಮಗುವನ್ನು ಸೆರೆಹಿಡಿಯಲು ನ್ಯೂಸ್‌ 18 ಕನ್ನಡ ಮಾಧ್ಯಮದ ಕ್ಯಾಮರಾಮನ್‌ ಒಬ್ಬರು ಓಡಿಸಿಕೊಂಡು ಹೋದ ಪರಿ ಇಂದಿನ ಪತ್ರಿಕೊದ್ಯಮದ ಹಪಾಹಪಿಯನ್ನು ಬಯಲುಗೊಳಿಸಿತ್ತು.

ಸುದ್ದಿಯ ದಾವಂತ ಮತ್ತು ಸುದ್ದಿಯ ಬಗೆಗಿನ ಹಪಾಹಪಿ ಮಾತ್ರವಲ್ಲದೆ ಫೇಕ್‌ ನ್ಯೂಸ್‌ಗಳ ವಿಜೃಂಭಣೆ ಇಂದಿನ ಪತ್ರಿಕೋದ್ಯಮವನ್ನು ಆವರಿಸಿಕೊಂಡಿವೆ. ಇಂದು ನೈಜ ಸುದ್ದಿಗಿಂತ, ನಕಲಿ ಸುದ್ದಿ (ಫೇಕ್ ನ್ಯೂಸ್) ಜನರಿಗೆ ಬೇಗ ರೀಚ್ ಆಗುತ್ತಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಸುಳ್ಳು ಸುದ್ದಿಗಳು ಮುಖ್ಯವಾಹಿನಿಗಳಲ್ಲಿ ಪ್ರಮುಖ ನ್ಯೂಸ್‌ ಆಗಿ ದಾಖಲಾಗುತ್ತಿವೆ.

ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಸಾಕಷ್ಟು ಬೆಳವಣಿಗೆಗಳು 2022ರಲ್ಲಿ ಘಟಿಸಿವೆ. ಇದೇ ಸಂದರ್ಭದಲ್ಲಿ ನೂರಾರು ಫೇಕ್‌ ನ್ಯೂಸ್‌ಗಳು ಸಾಕಷ್ಟು ವೈರಲ್ ಕೂಡ ಆಗಿವೆ. ಇಂತಹ ನಕಲಿ ಸುದ್ದಿಗಳಲ್ಲಿ ಈ ವರ್ಷ ಅತೀ ಹೆಚ್ಚು ವೈರಲ್ ಆದ 10 ಟಾಪ್ ಸುಳ್ಳು ಸುದ್ದಿಗಳು ಯಾವುದು ಎಂದು ನೋಡೋಣ.

ಫೇಕ್ ನ್ಯೂಸ್ 1

ಮಂಡ್ಯ ಕಾಲೇಜಿನಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿ ಪುಂಡಾಟಿಕೆ ಮೆರೆದ ಹುಡುಗರ ವಿರುದ್ದ ಅಲ್ಲಾಹು ಅಕ್ಬರ್ ಎಂದು ಪ್ರತಿಕ್ರಿಯೆ ನೀಡಿದ ವಿದ್ಯಾರ್ಥಿನಿ ನಜ್ಮಾ ನಜೀರ್ ಎಂದು ಸುಳ್ಳು ಸುದ್ದಿ ವೈರಲ್ ಆಗಿತ್ತು
ಮಂಡ್ಯ ಕಾಲೇಜಿನಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿ ಪುಂಡಾಟಿಕೆ ಮೆರೆದ ಹುಡುಗರ ವಿರುದ್ದ ಅಲ್ಲಾಹು ಅಕ್ಬರ್ ಎಂದು ಪ್ರತಿಕ್ರಿಯೆ ನೀಡಿದ ವಿದ್ಯಾರ್ಥಿನಿ ನಜ್ಮಾ ನಜೀರ್ ಎಂದು ಸುಳ್ಳು ಸುದ್ದಿ ವೈರಲ್ ಆಗಿತ್ತು

ಹಿಜಾಬ್ ಮತ್ತು ಕೇಸರಿ ಶಾಲು ವಿವಾದದ ಹಿನ್ನಲೆಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ನಜ್ಮಾ ನಜೀರ್ ಎಂಬ ಸಾಮಾಜಿಕ ಕಾರ್ಯಕರ್ತೆಯ ಫೋಟೋಗಳನ್ನು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿತ್ತು. ಈ ಫೋಟೋಗಳಲ್ಲಿ ನಜ್ಮಾ ಅವರು ಹಿಜಾಬ್ ಧರಿಸದೆ ಇರುವ ಫೋಟೋ ಶೇರ್ ಮಾಡುತ್ತ ನೋಡಿ ನಜ್ಮಾ ಹೊರಗಿದ್ದಾಗ ಹಿಜಾಬ್ ಧರಿಸುವುದಿಲ್ಲ ಆದರೆ ಕಾಲೇಜುಗಳಲ್ಲಿ ವಿವಾದವನ್ನು ಸೃಷ್ಟಿಸಲು ಹಾಗೂ  ತಮ್ಮ ಅಜೆಂಡಾಗಳನ್ನು ಜಾರಿ  ಮಾಡುವ ಸಲುವಾಗಿ ಹಿಜಾಬ್ ಧರಿಸಿ ಕಾಲೇಜಿಗೆ ಹೋಗುತ್ತಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾದ್ಯಮಗಳಲ್ಲಿ ಸುಳ್ಳನ್ನು ಹಂಚಿಕೊಳ್ಳಲಾಗಿತ್ತು.

ನಜ್ಮಾ ಪೋಟೋವನ್ನು ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ಫೋಟೋ ಎಂದು ತಪ್ಪಾಗಿ ಹಂಚಿಕೆ

ಫೆಬ್ರವರಿಯಲ್ಲಿ ಮಂಡ್ಯದ ಕಾಲೇಜೊಂದರಲ್ಲಿ  ನಡೆದ ಘಟನೆಯಲ್ಲಿ ಮುಸ್ಕಾನ್ ಎಂಬ ವಿದ್ಯಾರ್ಥಿನಿಯು ಕಾಲೇಜು ಪ್ರವೇಶಿಸುವ ವೇಳೆ   ಹಿಂದುತ್ವದ ಪ್ರತಿಪಾದನೆ ಸದಸ್ಯರು ಕೇಸರಿ ಶಾಲು ಧರಿಸಿ ವಿದ್ಯಾರ್ಥಿನಿಯ ಮುಂದೆ ಬಂದು ‘ಜೈ ಶ್ರೀರಾಮ್’  ಎಂದು ಘೋಷಣೆ ಹಾಕುತ್ತಾರೆ, ಅದನ್ನು ಏಕಾಂಗಿಯಾಗಿ ಎದುರಿಸುವ ಮುಸ್ಕಾನ್ ಎಂಬ ಹೆಣ್ಣು ಮಗಳು ‘ಅಲ್ಲಾವು ಅಕ್ಬರ್’ ಎಂದು ಸವಾಲು ಎಸೆಯುತ್ತಾಳೆ. ಈ ಘಟನೆ ವೇಳೆ ಅಲ್ಲಿ ಬಲಪಂಥಿಯರ ಗುಂಪಿಗೆ ಪ್ರತಿಯಾಗಿ ನಿಲ್ಲುವ ವಿದ್ಯಾರ್ಥಿನಿಯೂ ನಜ್ಮಾ ನಜೀರ್ ಎಂಬ ಸುಳ್ಳನ್ನು ಬಲಪಂಥಿಯ ಪ್ರತಿಪಾದನೆಯ ಫೇಸ್ ಬುಕ್ ಪೇಜ್ ಮತ್ತು ಫೇಸ್‌ಬುಕ್ ಅಕೌಂಟ್‌ಗಳಿಂದ ಪೋಸ್ಟ್‌ ಮಾಡಿದ್ದರು.

ಫೇಕ್ ನ್ಯೂಸ್ -2

ಕಬ್ಬು, ಹತ್ತಿ, ಜೋಳದಲ್ಲಿ ಕಾಣಿಸಿಕೊಳ್ಳುತ್ತಿದೆ, ಪ್ರಾಣವನ್ನೇ ತೆಗೆಯುವಂತಹ ವಿಷದ ಹುಳು ಎಂದು  ಸೋಶಿಯಲ್ ಮೀಡಿಯಾದಲ್ಲಿ ಮೃತ ದೇಹಗಳ ಫೋಟೋದೊಂದಿಗೆ ಕೀಟದ ಚಿತ್ರಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು.

ಆದರೆ ಕರ್ನಾಟಕದಲ್ಲಿ ಎಲ್ಲಿಯೂ ಈ ಕೀಟ ಬಾಧೆಯ ವರದಿಗಳಾಗಲಿ, ಕೀಟ ಕಚ್ಚಿ ಸತ್ತಿದ್ದಾರೆ ಎನ್ನುವ ವರದಿಗಳಾಗಲಿ ಇರಲಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದ ಫೋಟೋಗಳಿಗೂ ಈ ಕೀಟಗಳಿಗೂ ಸಂಬಂಧವಿಲ್ಲ, ಯಾವುದೋ ಬೇರೆ ಕಾರಣಕ್ಕೆ ಮೃತರಾಗಿರುವ ಫೋಟೋಗಳನ್ನು ಇಲ್ಲಿ ಬಳಸಿಕೊಂಡು ಕೀಟ ಕಚ್ಚಿದ್ದರಿಂದ ಸತ್ತಿದ್ದಾರೆಂದು ಸುಳ್ಳು ಸುದ್ದಿ ಹರಡಲಾಗಿತ್ತು. ವಾಟ್ಸಾಪ್‌ನಲ್ಲಿ ಹಂಚಿಕೊಳ್ಳುತ್ತಿರುವ ಈ ಸುದ್ದಿಗೆ ಯಾವುದೇ ಆಧಾರಗಳಾಗಲಿ, ಪುರಾವೆಗಳಾಗಲಿ ಇರಲಿಲ್ಲ. ಇದು ಅತಿ ಹೆಚ್ಚು ಶೇರ್ ಆಗಿದ್ದ ಸುಳ್ಳುಸುದ್ದಿ.

ಫೇಕ್ ನ್ಯೂಸ್ -3

ಆಗಸ್ಟ್‌ ಮತ್ತ ಸೆಪ್ಟೆಂಬರ್ ತಿಂಗಳಿನಲ್ಲಿ ಅತೀ ಹೆಚ್ಚು ವೈರಲ್ ಆದ ಸುಳ್ಳು ಸುದ್ದಿ ಎಂದರೆ ಮಕ್ಕಳ ಅಪಹರಣ ಎನ್ನುವ ವದಂತಿಗಳು. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ವೈರಲ್ ಆಗುತ್ತಿತ್ತು. ಮಕ್ಕಳನ್ನು ಅಪಹರಿಸುವ ದುಷ್ಕರ್ಮಿಗಳು ಬೇರೆ ದೇಶದಿಂದ ನಮ್ಮ ದೇಶಕ್ಕೆ ನುಗ್ಗಿದ್ದಾರೆ, ಯಾಕೆ ರೀತಿ ಮಾಡ್ತಿದ್ದಾರೆ ಎಂದು ಯಾರಿಗೂ ಸುಳಿವು ಸಿಕ್ಕಿಲ್ಲ, ಹಾಗಾಗಿ ರಾತ್ರಿಹೊತ್ತು ಹೊರಗಡೆಯಿಂದ ಬಾಗಿಲು ಬಡಿದರೆ ತೆಗೆಯಬೇಡಿ, ನೀರು, ಊಟ ಕೇಳಿದ್ರೆ ಕೊಡಬೇಡಿ ಎಂದೆಲ್ಲಾ ಹಂಚಿಕೊಳ್ಳಲಾಗಿತ್ತು.

ಪೇಪರ್  ಆಯೋಕೆ ಬರೋರು, ಪ್ಲಾಸ್ಟಿಕ್ ಸಾಮಾನು ಮಾರೋಕೆ, ಕಡಿಮೆ ಬೆಲೆಗೆ ವಿವಿಧ ವಸ್ತಗಳನ್ನು ಮಾರೋದಕ್ಕೆ ಅಂತ ಬರ್ತಿದ್ದಾರೆ, ಹೊಸ ಮುಖ, ಹೊಸ ಭಾಷೆಯವರು ಅನುಮಾನಾಸ್ಪದವಾಗಿ ನಿಮಗೆ ಕಂಡುಬಂದರೆ, ಅಂತಹವರನ್ನು ಕಟ್ಟಿ ಕೂಡಿಹಾಕಿ ಪೊಲೀಸರಿಗೆ ದೂರು ನೀಡಿ ಎಂದು ಕೇಳಿಕೊಳ್ಳುತ್ತೇನೆ ಎಂಬ ಆಡಿಯೋದೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿತ್ತು. ಆದರೆ ಇದೆಲ್ಲವು ಸುಳ್ಳು ಎಂದು ಪೊಲೀಸ್ ಹೇಳೀಕೆ ಆಧರಿಸಿ ನಾವು ಫ್ಯಾಕ್ಟ್‌ಚೆಕ್  ಸ್ಟೋರಿಗಳನ್ನು ಪ್ರಕಟಿಸಿದ್ದೆವು.

ಫೇಕ್ ನ್ಯೂಸ್ -4

ಫ್ರೀಜರ್‌ನಲ್ಲಿ  ಹುಡುಗಿಯೊಬ್ಬಳ ಶವವೊಂದು ಪತ್ತೆಯಾಗಿದೆ ಎಂದು ಕೊಲಾಜ್ ಮಾಡಲಾದ ಫೋಟೋವನ್ನು  ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು, ಅಸ್ಸಾಂನಲ್ಲಿ ‘ಗಫಾರ್’ ಎಂಬ ವ್ಯಕ್ತಿಯಿಂದ ಕೊಂದ ಮಹಿಳೆಯ ಚಿತ್ರಗಳು ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಗಳಲ್ಲಿ ಶ್ರದ್ಧಾ ವಾಕರ್ ಹತ್ಯೆ ಪ್ರಕರಣವನ್ನು ಉಲ್ಲೇಖಿಸಿ ಘಟನೆಗೆ ಕೋಮು ಬಣ್ಣ ನೀಡಿ ಹಂಚಿಕೊಳ್ಳಲಾಗಿತ್ತು.

ವಾಸ್ತವವಾಗಿ ಇದು ಭಾರತದಲ್ಲಿ ನಡೆದ ಪ್ರಕರಣವೇ ಅಲ್ಲ ಎಂದು ಫ್ಯಾಕ್ಟ್‌ಚೆಕ್ ಮೂಲಕ ಪತ್ತೆಹಚ್ಚಲಾಗಿತ್ತು. ಅಸ್ಸಾಂನ ಪೊಲೀಸರು ಬ್ಲಾಗ್‌ ಲಿಂಕ್ ಅನ್ನು ಟ್ವೀಟ್ ಮಾಡುತ್ತ, ಈ ಚಿತ್ರವು 2010 ರ ಪೋರ್ಚುಗೀಸ್ ಬ್ಲಾಗ್‌ನಿಂದ ಬಂದಿದೆ ಎಂದು ಹೇಳಿದರು. ಇದನ್ನು ತಪ್ಪು ಸಂದರ್ಭದೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಇಂತಹ ತಪ್ಪು ಸಂದೇಶಗಳನ್ನು ಶೇರ್ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.

2010ರ ಹಳೆಯ ಪೋಟೋಗಳನ್ನು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ದೆಹಲಿಯ ಶ್ರದ್ಧಾ ಹತ್ಯೆ ಪ್ರಕರಣದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಹುಡುಗಿ ಹಾಗೂ ಮುಸ್ಲಿಂ ಹುಡುಗನ ಹೆಸರು ಹೇಳಿ ‘ಲವ್ ಜಿಹಾದ್’ ಎಂಬ ಕೋಮು ದ್ವೇಷದ ಹೇಳಿಕೆಯೊಂದಿಗೆ ಸಾಲು ಸಾಲು ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳಲಾಗುತ್ತಿದೆ.

ಫೇಕ್‌ ನ್ಯೂಪ್  – 5

 

ಇತಿಹಾಸ ಪ್ರಸಿದ್ದ ಶ್ರೀರಂಗಪಟ್ಟಣದ ಹಳೇ ಸೇತುವೆಯ ಬಳಿ ಮತ್ಸ್ಯಕನ್ಯೆಯರು ಕಲ್ಲುಗಳ ಮೇಲೆ ಕುಳಿತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿತ್ತು. ಅರ್ಧ-ಮನುಷ್ಯ ಮತ್ತು ಅರ್ಧ-ಮೀನಿನ ಆಕಾರ ಇರುವ ಬಲು ಅಪರೂಪದ ದೃಶ್ಯಗಳು ಎಂದು ವಿಡಿಯೊವನ್ನು ವೈರಲ್ ಮಾಡಲಾಗಿತ್ತು.

ವಾಸ್ತವಾಗಿ ಈ ದೃಶ್ಯಗಳು 3D ತಂತ್ರಜ್ಞಾನದಿಂದ ರಚಿಸಿಲಾಗಿದ್ದ ವಿಡಿಯೊ ಆಗಿದ್ದು, ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ಸ್ಯಕನ್ಯೆಯರ  ನೈಜ ದೃಶ್ಯಗಳು ಎಂದು ತಪ್ಪಾಗಿ ಹಂಚಿಕೊಂಡಿದ್ದರು. ಅಲ್ಲದೆ ವಾಸ್ತವವಾಗಿ ಮತ್ಸ್ಯಕನ್ಯೆಯರು ಅಸ್ತಿತ್ವದಲ್ಲಿದೆ ಎಂಬುದಕ್ಕೆ ಯಾವುದೇ ಆಧಾರಗಳು ಇಲ್ಲ. ಹಾಗಾಗಿ ಮನರಂಜನೆಗಾಗಿ ಮಾಡಲಾದ ವಿಡಿಯೊವನ್ನು ಕೆಲವರು ನಿಜವೆಂದು ನಂಬಿ ತಲೆಕೆಡಿಸಿಕೊಂಡಿರುವುದಂತು ನಿಜ ಅಷ್ಟರ ಮಟ್ಟಿಗೆ ವಿಡಿಯೊ ವೈರಲ್ ಆಗಿತ್ತು. ಆದರೆ ಇದು ನಿಜವಾದ ದೃಶ್ಯಗಳಲ್ಲ.

ಫೇಕ್ ನ್ಯೂಸ್ -6

ಬಾಲಕನೊಬ್ಬ ರಾಜಸ್ಥಾನಿ ಹಾಡಿಗೆ ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೃತ್ಯ ಮಾಡುತ್ತಿರುವ ಬಾಲಕನನ್ನು,  ರಾಜಸ್ಥಾನದ ಜಲೋರ್‌ನ ಸರಸ್ವತಿ ವಿದ್ಯಾ ಮಂದಿರದಲ್ಲಿ ಸವರ್ಣಿಯರಿಗೆ ಮೀಸಲಿಟ್ಟ ನೀರನ್ನು ಮುಟ್ಟಿದೆಂಬ ಕಾರಣಕ್ಕೆ ತನ್ನ ಶಾಲಾ ಶಿಕ್ಷಕನಿಂದಲೇ ಹಲ್ಲೆಗೊಳಗಾಗಿ ಮೃತಪಟ್ಟ 9 ವರ್ಷದ ದಲಿತ ವಿದ್ಯಾರ್ಥಿ ಇಂದ್ರ ಕುಮಾರ್ ಮೇಘ್ವಾಲ್ ಎಂದು ಪ್ರತಿಪಾದಿಸಿ ವಿಡಿಯೊವನ್ನು ವೈರಲ್ ಮಾಡಲಾಗಿತ್ತು.

ವಾಸ್ತವವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಬಾಲಕನೊಬ್ಬ ನೃತ್ಯ ಮಾಡಿರುವ ವಿಡಿಯೋವು ರಾಜಸ್ಥಾನದಲ್ಲಿ ಹತ್ಯೆಯಾದ ಇಂದ್ರ ಮೇಘ್ವಾಲ್‌ದಲ್ಲ. ಈ ವಿಡಿಯೊದಲ್ಲಿರುವ ಮಗು ರಾಜಸ್ಥಾನದ ಬಾರ್ಮರ್‌ನಲ್ಲಿರುವ ಗೋಮ್ರಖ್ ಧಾಮ್ ಶಾಲೆಯ ವಿದ್ಯಾರ್ಥಿ ಹರೀಶ್‌ ಎಂದು ಸ್ಪಷ್ಟವಾಗಿದೆ.

ಫೇಕ್ ನ್ಯೂಸ್ -7

ಸಾಮಾಜಿಕ ಮಾಧ್ಯಮದಲ್ಲಿ ಅತೀ ಹೆಚ್ಚು ವೈರಲ್ ಆದ ಸುಳ್ಳು ಸುದ್ದಿಗಳಲ್ಲಿ ರಾಹುಲ್ ಗಾಂಧಿ ತನ್ನ ಅಕ್ಕನ ಮಗಳೊಂದಿಗೆ ಕುಳಿತ್ತಿದ್ದ ಫೋಟೋ. ಸಾಮಾಜಿಕ ಮಾಧ್ಯಮದಲ್ಲಿ  “ಪಪ್ಪು ಮೆಹೆಂದಿ ಹಾಕಿಕೊಂಡು ಮಕ್ಕಳೊಂದಿಗೆ ಆಟವಾಡುತ್ತಿದ್ದಾನೆ. ಯಾತ್ರೆಗೆ ಕರೆದೊಯ್ಯುತ್ತಿರುವ 10 ಸದಸ್ಯರ ಬಗ್ಗೆ ಬೇಸರವಾಗಿದೆ” ಎಂಬ ಹೇಳಿಕೆಯೊಂದಿಗೆ ಬಿಜೆಪಿ ತಮಿಳುನಾಡು ಐಟಿ ಸೆಲ್ ಮುಖ್ಯಸ್ಥ ನಿರ್ಮಲ್ ಕುಮಾರ್ ಸುಳ್ಳು ಸುದ್ದಿಯನ್ನು ಹಂಚಿಕೊಂಡಿದ್ದರು.

Priyanka Vadra with her husband Robert Vadra and daughter Miraya Vadra after paying tribute to former Prime Minister Rajiv Gandhi on his 71st birth anniversary at Vir Bhumi in New Delhi on Thursday.

ಅವು ವಾಸ್ತವವಾಗಿ ಆಗಸ್ಟ್ 20, 2015 ರಂದು ನವದೆಹಲಿಯ ವೀರ್ ಭೂಮಿಯಲ್ಲಿ ಮಾಜಿ ಭಾರತದ ಪ್ರಧಾನಿ ರಾಜೀವ್ ಗಾಂಧಿಯವರ 71 ನೇ ಜನ್ಮದಿನದ ಸಮಾರಂಭದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಸೋದರ ಸೊಸೆ ಮೀರಾಯಾ ವಾದ್ರಾ ಅವರೊಂದಿಗೆ ಮಾತನಾಡುತ್ತಿರುವ ದೃಶ್ಯಗಳಾಗಿದ್ದವು.

ಫೇಕ್ ನ್ಯೂಸ್ -8

2022ರಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಅತೀ ಹೆಚ್ಚು ವೈರಲ್ ಆದ ವಿಡಿಯೋ ಆಗಿದ್ದು , ಈ ವಿಡಿಯೋವನ್ನು ವೀಕ್ಷಿಸಿತ್ತಿರುವ ಪ್ರತಿಯೊಬ್ಬರು ಇದು ಸಾಧ್ಯವೆ ಎಂದು ಬೆರಗಿನಿಂದ ನೋಡಿದ್ದಾರೆ. ವಿಡಿಯೋದಲ್ಲಿರುವ ದೃಶ್ಯಾವಳಿಯೂ ನೋಡಿದ ಪ್ರತಿಯೊಬ್ಬರನ್ನು ಬೆರಗುಗೊಳಿಸುವಂತೆಯೇ ಇದೆ.

ಮಹಾತ್ಮಾ ಗಾಂಧಿ, ಡಾ ಬಿ ಆರ್ ಅಂಬೇಡ್ಕರ್, ಭಗತ್ ಸಿಂಗ್, ಡಾ ರಾಜೇಂದ್ರ ಪ್ರಸಾದ್ ಮತ್ತು ಸುಭಾಷ್ ಚಂದ್ರ ಬೋಸ್ ಸೇರಿದಂತೆ ದೇಶಪ್ರೇಮಿ ನಾಯಕರ 15 ಭಾವಚಿತ್ರಗಳನ್ನು ಏಕಕಾಲದಲ್ಲಿ ರಚಿಸುವ ವಿಡಿಯೋ ಅದಾಗಿತ್ತು. ಸದ್ಯ ಈ ವಿಡಿಯೋ  ವೈರಲ್ ಆಗಿದ್ದು, ಏನ್‌ಸುದ್ದಿ.ಕಾಂನ ಹಲವು ಓದುಗರು ವಿಡಿಯೋವನ್ನು ಪರಿಶೀಲಿಸುವಂತೆ ವಿನಂತಿಸಿದ್ದರು.

ಹಲವರು ಈ ವಿಡಿಯೋ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರಿಂದ, ಏನ್ ಸುದ್ದಿ.ಕಾಂ ಒಮ್ಮೆಲೆ 15 ಬೇರೆ ಬೇರೆ ಚಿತ್ರಗಳನ್ನು ಬಿಡಿಸಲು ಹೇಗೆ ಸಾಧ್ಯ ಎಂದು ಕರೆ ಮಾಡಿ ಕೇಳಿದಾಗ, ನಿರಂತರ ಅಭ್ಯಾಸದಿಂದ ಈ ರೀತಿ ಚಿತ್ರ ಬಿಡಿಸಲು ಸಾಧ್ಯವಾಗಿದೆ. ಈ ವಿಡಿಯೋ ಫೇಕ್ ಅಲ್ಲ ಎಂದು ತಿಳಿಸಿದ್ದಾರೆ. ಮುಂದುವರೆದು ಒಂದು ಲೈವ್ ಮೂಲಕ ಇದೇ ಚಿತ್ರವನ್ನು ರಚಿಸಲು ಸಾಧ್ಯವೆ ಎಂದು ಕೇಳಿದಾಗ ಅದಕ್ಕೆ ಸರಿಯಾಗಿ ಪ್ರತಿಕ್ರಿಯಿಸದ ನೂರ್‌ಜಹಾನ್ , ಲೈವ್ ವಿಡಿಯೋ ಮಾಡಲು ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಹಾಗಾಗಿ ಈ ವಿಡಿಯೋದ ದೃಶ್ಯಾವಳಿಗಳು ನಂಬಲು ವಿಶ್ವಾಸಾರ್ಹವಲ್ಲ.

ಇಂತಹ ಸಾಧನೆಯ ಸಾಧ್ಯತೆಯ ಬಗ್ಗೆ ಅನುಮಾನಗಳಿವೆ ಮತ್ತು ವಾಸ್ತವವಾಗಿ ವೀಡಿಯೊದ ದೃಢೀಕರಣವನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಲಿಲ್ಲ. ಆಕೆಯ ಹೆಸರಿನಲ್ಲಿ ಯಾವುದೇ ಗಿನ್ನೆಸ್ ವಿಶ್ವ ದಾಖಲೆ ಇಲ್ಲದ ಕಾರಣ, ಪೋಸ್ಟ್‌ನಲ್ಲಿ ಮಾಡಿದ ಹೇಳಿಕೆಯು ತಪ್ಪುದಾರಿಗೆಳೆಯುವಂತಿದೆ ಎಂದು ಫ್ಯಾಕ್ಟ್‌ಲಿ ವರದಿ ಮಾಡಿದೆ.

ಇದು ಹಂತ ಹಂತವಾಗಿ ಬಿಡಿಸಿದ ಚಿತ್ರವನ್ನು ಎಡಿಟ್ ಮಾಡಿ ಹರಿಯಬಿಡಲಾಗಿದೆ ಎಂಬು ಮೇಲ್ನೋಟಕ್ಕೆ ಕಂಡುಬಂದಿದೆ. ಅಲ್ಲದೆ ಫೇಸ್‌ಬುಕ್ ಲೈವ್ ಮೂಲಕ ವಿಡಿಯೋ ಮಾಡಲು ನೂರ್ ಜಹಾನ್ ನಿರಾಕರಿಸಿದ್ದಾರೆ. ಹಾಗಾಗಿ ಏಕಕಾಲದಲ್ಲಿ 15 ಚಿತ್ರಗಳನ್ನು ಬಿಡಿಸಿರುವುದಕ್ಕೆ ದಾಖಲೆಗಳಿಲ್ಲ ಎಂದು ಹೇಳಬಹುದಾಗಿದೆ.

ಫೇಕ್ ನ್ಯೂಸ್ -9

 

ಭಾರತ ಮತ್ತು ಚೀನಾ ನಡುವೆ ನಡೆದ ತವಾಂಗ್ ಘರ್ಷಣೆಯ ವಿಡಿಯೊ ಎಂದು 2 ವರ್ಷದ ಹಳೆಯ ವಿಡಿಯೊ ಹಂಚಿಕೆ
ಭಾರತ ಮತ್ತು ಚೀನಾ ನಡುವೆ ನಡೆದ ತವಾಂಗ್ ಘರ್ಷಣೆಯ ವಿಡಿಯೊ ಎಂದು 2 ವರ್ಷದ ಹಳೆಯ ವಿಡಿಯೊ ಹಂಚಿಕೆ

ಡಿಸೆಂಬರ್ 9, 2022 ರಂದು, ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ಘರ್ಷಣೆಯಲ್ಲಿ, ಎರಡೂ ದೇಶಗಳ ಸೈನಿಕರು ಗಾಯಗೊಂಡಿದ್ದಾರೆ. ಈ ಘಟನೆಯ ಸುದ್ದಿ ಬಂದ ನಂತರ, ಸೈನಿಕರ ಘರ್ಷಣೆಯ ವಿಡಿಯೊ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇದು ತವಾಂಗ್ ಸೆಕ್ಟರ್‌ನಲ್ಲಿ ಇತ್ತೀಚೆಗೆ ನಡೆದ ಘರ್ಷಣೆಯ ವಿಡಿಯೋ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿತ್ತು. ಆದರೆ ಈ ಚಿತ್ರಗಳು ಘಟನೆಗೆ ಸಂಬಂಧಿಸಿದ ಚಿತ್ರಗಳಾಗಿರಲಿಲ್ಲ.

ವಾಸ್ತವವಾಗಿ ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾವುದೇ ಅಧಿಕೃತ ದೃಶ್ಯಾವಳಿಗಳನ್ನು ಸರ್ಕಾರ ಪ್ರಕಟಿಸಿಲ್ಲವಾದರೂ, ಹಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಮೇ 2020 ರಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವಿನ ಚಕಮಕಿಯ ಎರಡು ವರ್ಷದ ಹಳೆಯ ವೀಡಿಯೊವನ್ನು,  ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಚಕಮಕಿ ಎಂದು ತಪ್ಪಾಗಿ ಹಂಚಿಕೊಂಡಿದ್ದವು.

ಫೇಕ್ ನ್ಯೂಸ್ -10

ಫ್ಯಾಕ್ಟ್‌ಚೆಕ್: 1400 ವರ್ಷಗಳ ಹಿಂದೆಯೇ ಕಂಪ್ಯೂಟರ್ ಚಿತ್ರ ಕೆತ್ತನೆ ಮಾಡಲಾಗಿತ್ತೆ!
ಫ್ಯಾಕ್ಟ್‌ಚೆಕ್: 1400 ವರ್ಷಗಳ ಹಿಂದೆಯೇ ಕಂಪ್ಯೂಟರ್ ಚಿತ್ರ ಕೆತ್ತನೆ ಮಾಡಲಾಗಿತ್ತೆ!

“1400 ವರ್ಷಗಳ ಹಿಂದೆ ಪಲ್ಲವ ರಾಜ II ನರಸಿಂಹನು ನಿರ್ಮಿಸಿದ ತಾಳಗಿರಿ ದೇವಾಲಯದಲ್ಲಿ, ಶಿಲ್ಪ ಕಲಾ ಕೆತ್ತನೆಯ ಗೋಡೆಯ ಮೇಲೆ ಕಂಪ್ಯೂಟರ್ ಮತ್ತು ಕೀಬೋರ್ಡ್ ಇರುವ ಶಿಲ್ಪವಿದೆ. ವಿದ್ಯುತ್ ಇಲ್ಲದಿದ್ದಾಗ ಇದು ಹೇಗೆ ಸಾಧ್ಯ?  ಇವರು ವಿದ್ಯುತ್ ಬಳಸುತ್ತಿದ್ದರೋ  ಅಥವಾ ಸೌರಶಕ್ತಿಯನ್ನು ಬಳಸುತ್ತಿದ್ದರೋ” ? ಗೊತ್ತಿಲ್ಲ ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಅಂದರೆ 1400 ವರ್ಷಗಳ ಹಿಂದೆಯೇ ತಂತ್ರಜ್ಞಾನದ ಬಗ್ಗೆ ಅಧ್ಯಯನಗಳು ನಡೆದಿವೆ ಎಂಬ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿತ್ತು.

ವಾಸ್ತವವಾಗಿ ಅದು ಲೈಫ್ ಮಾರ್ಕೇಟ್ ಪ್ಲೇಸ್ ಎಂಬ ವೆಬ್‌ಸೈಟ್‌ ನಲ್ಲಿ ರಚಿಸಿದ ಇತ್ತೀಚಿನ ಚಿತ್ರವಾಗಿದೆ.  ಚಾರ್ಲ್ಸ್ ಬ್ಯಾಬೇಜ್ ಮೊದಲ ಕಂಪ್ಯೂಟರ್‌ಅನ್ನು ಅಭಿವೃದ್ದಿಪಡಿಸಿದ್ದು 1822 ರಲ್ಲಿ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ಸುಳ್ಳು.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನುಓದಿರಿ: ಫ್ಯಾಕ್ಟ್‌ಚೆಕ್: ಈ ಚಿತ್ರದಲ್ಲಿರುವವರು ಮಗು ಅಟಲ್ ಬಿಹಾರಿ ವಾಜಪೇಯಿ ಮತ್ತು ಅವರ ತಾಯಿಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights