ಫ್ಯಾಕ್ಟ್‌ಚೆಕ್ : ಶ್ರೀರಂಗಪಟ್ಟಣದಲ್ಲಿ ಕಾಣಿಸಿಕೊಂಡ ಜೀವಂತ ಮತ್ಸ್ಯಕನ್ಯೆಯರು ! ವಾಸ್ತವವೇನು ?
ಇತಿಹಾಸ ಪ್ರಸಿದ್ದ ಶ್ರೀರಂಗಪಟ್ಟಣದ ಹಳೇ ಸೇತುವೆಯ ಬಳಿ ಮತ್ಸ್ಯಕನ್ಯೆಯರು ಕಲ್ಲುಗಳ ಮೇಲೆ ಕುಳಿತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅರ್ಧ-ಮನುಷ್ಯ ಮತ್ತು ಅರ್ಧ-ಮೀನಿನ ಆಕಾರ ಇರುವ ಬಲು ಅಪರೂಪದ ದೃಶ್ಯಗಳು ಎಂದು ವಿಡಿಯೊವನ್ನು ವೈರಲ್ ಮಾಡಲಾಗಿದೆ. ಹಾಗಿದ್ದರೆ ನಿಜವಾಗಿಯೂ ಈ ದೃಶ್ಯಗಳು ಐತಿಹಾಸಿಕ ಶ್ರೀರಂಗಪಟ್ಟಣದಲ್ಲಿ ಸೆರೆಯಾಗಿವೆಯೇ ಎಂದು ವಿಡಿಯೋದ ನೈಜತೆಯನ್ನು ಪರಿಶೀಲಿಸೋಣ.
ಮತ್ಸ್ಯಕನ್ಯೆಯರ ವೈರಲ್ ವಿಡಿಯೊ ಕುರಿತು ವಾಸ್ತವ ಏನೆಂದು ತಿಳಿಸುವಂತೆ ಏನ್‌ಸುದ್ದಿ.ಕಾಂ ವಾಟ್ಸಾಪ್ ಗೆ ಸಂದೇಶಗಳು ಬಂದಿದ್ದು ವಿಡಿಯೊವನ್ನು ಪರಿಶೀಲಿಸುವಂತೆ ಮನವಿಗಳು ಬಂದಿವೆ.
ಫ್ಯಾಕ್ಟ್‌ಚೆಕ್ :
ವೀಡಿಯೊದಲ್ಲಿನ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಇದೇ ರೀತಿಯ ದೃಶ್ಯಗಳೊಂದಿಗೆ ವೀಡಿಯೊವನ್ನು ‘ಜೆಜೆಪಿಡಿ ಪ್ರೊಡಕ್ಷನ್ಸ್’ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟಿಸಿರುವುದು ಕಂಡುಬಂದಿದೆ. ವೀಡಿಯೊದ ವಿವರಣೆಯಲ್ಲಿ “ಇವು ಮನರಂಜಿಸಲು ನಾವು ರಚಿಸಿದ ಸಾಮಾನ್ಯ ವೀಡಿಯೊಗಳಾಗಿವೆ. ತೋರಿಸಿರುವ ಎಲ್ಲಾ ಚಿತ್ರಗಳು ಕಾಲ್ಪನಿಕವಾಗಿವೆ. CGI ವಿಡಿಯೋ (ಕಂಪ್ಯೂಟರ್ ರಚಿತ ಚಿತ್ರ) 3D ನಲ್ಲಿ ಮತ್ಸ್ಯಕನ್ಯೆಯ ವಿನ್ಯಾಸ ಮತ್ತು ರಚನೆ: ಜೋಕ್ವಿನ್ ಪೆರೆಜ್ 3D ಅನಿಮೇಷನ್ ಮತ್ತು VFX ಆವೃತ್ತಿ” ಮೂಲಕ ರಚಿತವಾಗಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಹಂಚಿಕೊಂಡ ವೀಡಿಯೊ ನಿಜವಾದ ಮತ್ಸ್ಯಕನ್ಯೆಯನ್ನು ತೋರಿಸುವುದಿಲ್ಲ. ಇದು 3D ಡಿಜಿಟಲ್‌ನಿಂದ ರಚಿಸಲಾದ ವಿಡಿಯೊ ಎಂದು ಖಚಿತವಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊ ದೃಶ್ಯಗಳು 3D ಡಿಜಿಟಲ್ ಮೂಲಕ ರಚಿಸಲ್ಪಟ್ಟ ಕಾಲ್ಪನಿಕ ದೃಶ್ಯಗಳಾಗಿವೆ. ಹಾಗಾಗಿ ಶ್ರೀರಂಗಪಟ್ಟಣದಲ್ಲಿ ಜೀವಂತ ಮತ್ಸ್ಯಕನ್ಯೆಯರ ವಿಡಿಯೋ ದೃಶ್ಯಗಳು ಎಂದು ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಈ ಹಿಂದೆಯೂ ಇದೇ ರೀತಿಯ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿತ್ತು ಅವುಗಳನ್ನು ಮುಂದೆ ನೋಡಬಹುದು.
ಇತ್ತೀಚೆಗೆ ಕ್ಯಾಮರಾದಲ್ಲಿ ಸಿಕ್ಕಿಬಿದ್ದಿರುವ ವಿಚಿತ್ರ ಪ್ರಾಣಿಯನ್ನು ತೋರಿಸುವ ಮತ್ತೊಂದು ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು. ಈ ವಿಡಿಯೊವನ್ನು ಪರಿಶೀಲಿಸಿದಾಗ ಇದು 3D ದೃಶ್ಯಗಳ ಮೂಲಕ ರಚಿತವಾದ ವಿಡಿಯೊ ಎಂದು ತಿಳಿದು ಬಂದಿದೆ.
ಫ್ಯಾಕ್ಟ್‌ಚೆಕ್ :
ಪೋಸ್ಟ್ ಮಾಡಿದ ವೀಡಿಯೊ ಮೂರು ವಿಭಿನ್ನ ಕ್ಲಿಪ್‌ಗಳನ್ನು ಹೊಂದಿದೆ. ಎಲ್ಲಾ ಮೂರು ಕ್ಲಿಪ್‌ಗಳನ್ನು ‘ಜೆಜೆಪಿಡಿ ಪ್ರೊಡಕ್ಷನ್ಸ್’ ಯೂಟ್ಯೂಬ್ ಚಾನೆಲ್ ಅಪ್‌ಲೋಡ್ ಮಾಡಿದ ವೀಡಿಯೊದಲ್ಲಿ ನೋಡಬಹುದು. ವೀಡಿಯೊದ ವಿವರಣೆಯಲ್ಲಿ, “ಇವು ಮನರಂಜನೆಗಾಗಿ ರಚಿಸಿದ ಸಾಮಾನ್ಯ ವೀಡಿಯೊಗಳಾಗಿವೆ. ತೋರಿಸಿರುವ ಎಲ್ಲಾ ಚಿತ್ರಗಳು ಕಾಲ್ಪನಿಕವಾಗಿವೆ. ಇದೇ ಚಾನೆಲ್‌ನಲ್ಲಿನ ಮತ್ತೊಂದು ವೀಡಿಯೊ ಕೂಡ ಮೇಕಿಂಗ್ ಪ್ರಕ್ರಿಯೆಯನ್ನು ತೋರಿಸುತ್ತದೆ.
ಪೋಸ್ಟ್ ಮಾಡಿದ ವೀಡಿಯೊದಲ್ಲಿರುವ ಜೀವಿ ನಿಜವಾದದ್ದಲ್ಲ. ‘ಜೆಜೆಪಿಡಿ ಪ್ರೊಡಕ್ಷನ್ಸ್’ನ ಯೂಟ್ಯೂಬ್ ಚಾನೆಲ್‌ನಲ್ಲಿ, ಅದೇ ವೀಡಿಯೊವನ್ನು ಕಂಪ್ಯೂಟರ್-ರಚಿತ (ಸಿಜಿಐ) ವೀಡಿಯೊ ಎಂದು ವಿವರಣೆಯೊಂದಿಗೆ ನೋಡಬಹುದು. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ 3D ತಂತ್ರಜ್ಞಾನದಿಂದ ರಚಿಸಿದ ವಿಡಿಯೊವನ್ನು ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ಸ್ಯಕನ್ಯೆಯರ ನೈಜ ದೃಶ್ಯಗಳು ಎಂದು ತಪ್ಪಾಗಿ ಹಂಚಿಕೊಂಡಿದ್ದಾರೆ. ಅಲ್ಲದೆ ವಾಸ್ತವವಾಗಿ ಮತ್ಸ್ಯಕನ್ಯೆಯರು ಅಸ್ತಿತ್ವದಲ್ಲಿದೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ಹಾಗಾಗಿ ಮನರಂಜನೆಗಾಗಿ ಮಾಡಲಾದ ವಿಡಿಯೊವನ್ನು ಕೆಲವರು ನಿಜವೆಂದು ನಂಬಿ ತಲೆಕೆಡಿಸಿಕೊಂಡಿರುವುದಂತು ನಿಜ ಅಷ್ಟರ ಮಟ್ಟಿಗೆ ವಿಡಿಯೊ ವೈರಲ್ ಆಗಿದೆ. ಆದರೆ ಇದು ನಿಜವಾದ ದೃಶ್ಯಗಳಲ್ಲ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಕುಡಿದ ಅಮಲಿನಲ್ಲಿ ವಧು ಬದಲಿಗೆ ಅತ್ತಿಗೆಯ ಕೊರಳಿಗೆ ಹಾರ ಹಾಕಿದ ವರ! ವಾಸ್ತವವೇನು ?