ಫ್ಯಾಕ್ಟ್‌ಚೆಕ್: ಅನುಚಿತವಾಗಿ ವರ್ತಿಸಿದ ಮುಸ್ಲಿಂ ವ್ಯಕ್ತಿಗೆ ಹಿಂದೂ ಮಹಿಳೆಯರು ಹಿಗ್ಗಾಮಗ್ಗ ಥಳಿಸಿದ್ದು ನಿಜವೇ?

ಕೇರಳದಲ್ಲಿ ಹಿಂದೂ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಮುಸ್ಲಿಂ ಯುವಕನನ್ನು ಹಿಂದೂ ಮಹಿಳೆಯರು ಹಿಗ್ಗಾಮುಗ್ಗ ಥಳಿಸಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ.

“ಹಿಂದೂ ಮಹಿಳೆಯ ಜೊತೆ ಅಶ್ಲೀಲವಾಗಿ ವರ್ತಿಸಿದ ಮತಾಂಧ ಜೆಹಾದಿ ಮುಸಲ್ಮಾನೊಬ್ಬನಿಗೆ ತಕ್ಕ ಶಾಸ್ತಿ ಮಾಡಿದ ಕೇರಳದ ಜಾಗೃತ ಹಿಂದೂ ನಾರೀ ಶಕ್ತಿ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ಸುದ್ದಿ ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಹಲವು ಸುದ್ದಿ ಸಂಸ್ಥೆಗಳು ಇತ್ತೀಚೆಗೆ ಇದೇ ರೀತಿಯ ದೃಶ್ಯಗಳೊಂದಿಗೆ ವೀಡಿಯೊವನ್ನು ಪ್ರಕಟಿಸಿದೆ ಎಂದು ತಿಳಿದುಬಂದಿದೆ. ಆ ವೀಡಿಯೊಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಈ ಸುದ್ದಿ ಸಂಸ್ಥೆಗಳು ಕೇರಳ ರಾಜ್ಯದ ಮುರಿಯಾದ್ ಗ್ರಾಮದಲ್ಲಿ ಎಂಪರರ್ ಇಮ್ಯಾನುಯೆಲ್ ಚರ್ಚ್‌ನ ಭಕ್ತರು ಮತ್ತು ಚರ್ಚ್‌ನಿಂದ ಹೊರಬಂದವರ ನಡುವಿನ ಘರ್ಷಣೆಯ ದೃಶ್ಯಗಳನ್ನು ವರದಿ ಮಾಡಿವೆ.

ಘಟನೆಯ ಸಂಪೂರ್ಣ ವಿವರಗಳನ್ನು ವರದಿ ಮಾಡುವ ಪ್ರಕಟಿತ ಸುದ್ದಿ ಲೇಖನಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಈ ಲೇಖನಗಳು 05 ಜನವರಿ 2023 ರಂದು ಎಂಪರರ್ ಇಮ್ಯಾನುಯೆಲ್ ಚರ್ಚ್‌ಗೆ ಸೇರಿದ ಮಹಿಳೆಯರ ಗುಂಪು ಶಾಜಿ ಎಂಬ ವ್ಯಕ್ತಿ ಮತ್ತು ಅವನ ಕುಟುಂಬದ ಮೇಲೆ ದಾಳಿ ಮಾಡಿದೆ ಎಂದು ವರದಿ ಮಾಡಿದೆ. ಎಂಪರರ್ ಇಮ್ಯಾನುಯೆಲ್ ಚರ್ಚ್‌ಗೆ ಸೇರಿದ ಮಹಿಳೆಯ ಚಿತ್ರಗಳನ್ನು (ಅಶ್ಲೀಲವಾಗಿ) ಮಾರ್ಫಿಂಗ್ ಮಾಡಿ ಇಂಟರ್ನೆಟ್‌ನಲ್ಲಿ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿ ಕ್ರಿಶ್ಚಿಯನ್ ಮಹಿಳೆಯರ ಗುಂಪು ಶಾಜಿ ಮೇಲೆ ಹಲ್ಲೆ ನಡೆಸಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಶಾಜಿ ಮತ್ತು ಅವರ ಕುಟುಂಬ ಇತ್ತೀಚೆಗೆ ಇಮ್ಯಾನುಯೆಲ್ ಚರ್ಚ್‌ನಿಂದ ಬೇರ್ಪಟ್ಟಿದೆ ಎಂದು ಲೇಖನಗಳು ಹೇಳಿವೆ.


ಈ ಹಲ್ಲೆಗೆ ಸಂಬಂಧಿಸಿದಂತೆ 59 ಮಹಿಳೆಯರ ವಿರುದ್ಧ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. FIR ನಲ್ಲಿ, ಶಾಜಿ  ಅವರ ಕುಟುಂಬವು ಹೇಳಿಕೆ ನೀಡಿದ್ದು ಎಂಪರರ್ ಇಮ್ಯಾನ್ಯುಯೆಲ್ ಚರ್ಚ್‌ನ ಅನುಯಾಯಿಗಳು ನನ್ನನ್ನು ಪುನಃ ಚರ್ಚ್‌ಗೆ ಸೇರಲು ಒತ್ತಾಯಿಸಿದರು ಅದನ್ನು ನಿರಾಕರಿಸಿದಾಗ ತಮ್ಮ ಮೇಲೆ ದಾಳಿ ಮಾಡಿತು ಎಂದು ಆರೋಪಿಸಿದ್ದಾರೆ. 07 ಜನವರಿ 2023 ರಂದು ಪ್ರಕಟವಾದ ಲೇಖನವೊಂದರಲ್ಲಿ, ದಾಳಿಯಲ್ಲಿ ಭಾಗಿಯಾಗಿರುವ 11 ಮಹಿಳೆಯರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಈ ವೀಡಿಯೋದಲ್ಲಿ ಹಲ್ಲೆ ನಡೆಸುತ್ತಿರುವ ಮಹಿಳೆಯರು ಮತ್ತು ಹಲ್ಲೆಗೊಳಗಾದ ವ್ಯಕ್ತಿ ಎಲ್ಲರೂ ಕ್ರೈಸ್ತರು ಎಂದು ಉಲ್ಲೇಖಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಎಂಪರರ್ ಇಮ್ಯಾನುಯೆಲ್ ಚರ್ಚ್‌ಗೆ ಸೇರಿದ ಮಹಿಳೆಯ ಚಿತ್ರಗಳನ್ನು ಮಾರ್ಫಿಂಗ್ ಮಾಡಿ ಇಂಟರ್ನೆಟ್‌ನಲ್ಲಿ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿ ಕ್ರಿಶ್ಚಿಯನ್ ಮಹಿಳೆಯರ ಗುಂಪು ಶಾಜಿ ಮೇಲೆ ಹಲ್ಲೆ ನಡೆಸಿತು. ಹಾಗಾಗಿ ಈ ವಿಡಿಯೋದಲ್ಲಿ ಹಲ್ಲೆಗೊಳಗಾದ ವ್ಯಕ್ತಿ ಮತ್ತು ಹಲ್ಲೆ ನಡೆಸಿದ ಮಹಿಳೆಯರು ಎಲ್ಲರೂ ಕ್ರಿಶ್ಚಿಯನ್ನರು. ಇಲ್ಲಿ ಯಾರೂ ಹಿಂದೂವೂ ಇಲ್ಲ ಮುಸ್ಲಿಮರು ಇಲ್ಲ, ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದೂ ಮಹಿಳೆಯ ಜೊತೆ ಅಶ್ಲೀಲವಾಗಿ ವರ್ತಿಸಿದ ಮುಸಲ್ಮಾನ ವ್ಯಕ್ತಿಗೆ ತಕ್ಕ ಶಾಸ್ತಿ ಮಾಡಲಾಗಿದೆ ಎಂದು ಕೋಮು ದ್ವೇಷದ ನಿರೂಪಣೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಪಾಕ್ ಧ್ವಜ ಹಾರಿಸಿದ್ದ ಮಸೀದಿಯನ್ನು ಯುಪಿ ಸಿಎಂ ಯೋಗಿ ಆದಿತ್ಯನಾಥ್ ನೆಲಸಮ ಮಾಡಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.