ಫ್ಯಾಕ್ಟ್‌ಚೆಕ್ : ಕೇರಳದಲ್ಲಿ ಲಾಟರಿ ಅಂಗಡಿಯೊಂದಕ್ಕೆ ಬೆಂಕಿ ಹಚ್ಚಿದ ಘಟನೆಯನ್ನು ತಮಿಳುನಾಡಿನದ್ದು ಎಂದು ತಪ್ಪಾಗಿ ಹಂಚಿಕೆ

ಇತ್ತೀಚೆಗೆ ತಮಿಳುನಾಡಿನಲ್ಲಿ ಹಿಂದಿ ಭಾ‍ಷಿಕರ ಮೇಲೆ ದಾಳಿ ನಡೆಸಲಾಗಿದೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಇದಕ್ಕೆ ಪ್ರತಿಯಾಗಿ ಬಿಹಾರಿಗಳಿಂದ ತಮಿಳುನಾಡಿನ ಅಂಗಡಿಯೊಂದಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ವ್ಯಕ್ತಿಯೊಬ್ಬ ಕೈಯಲ್ಲಿ ಪೆಟ್ರೋಲ್ ಬಾಟಲಿ ಹಿಡಿದು ಅಂಗಡಿಯೊಂದರ ಬಳಿ ಬಂದು ಪೆಟ್ರೋಲ್ ಸುರಿದು ಏಕಾಏಕಿ ಬೆಂಕಿ ಹಚ್ಚುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋವನ್ನು ಹಂಚಿಕೊಳ್ಳುತ್ತ ಇದು ತಮಿಳುನಾಡಿನಲ್ಲಿ ನಡೆದ ಘಟನೆ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಅಂಗಡಿಯೊಂದಕ್ಕೆ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿರುವುದು ತಮಿಳುನಾಡಿನಲ್ಲಿ ಅಲ್ಲ ಎಂದು ತಿಳಿದುಬಂದಿದೆ. ಹಾಗಿದ್ದರೆ ಈ ಘಟನೆ ಮತ್ತೆಲ್ಲಿ ನಡೆದಿದೆ ಎಂದು ಪರಿಶೀಲಿಸಿದಾಗ ಘಟನೆಯು ಕೇರಳದ ತ್ರಿಪ್ಪುನಿತುರಾ ದಲ್ಲಿ ಮಾರ್ಚ್ 3 ರಂದು ನಡೆದಿದೆ ಎಂದು ದಿ ಕ್ವಿಂಟ್ ವರದಿ ಮಾಡಿದೆ.

ಘಟನೆಯ ವಿವರ :

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ  ವ್ಯಕ್ತಿಯನ್ನು ರಾಜೇಶ್ ಟಿ ಎಂದು ಗುರುತಿಸಿದೆ ಮತ್ತು ಫೇಸ್‌ಬುಕ್ ಲೈವ್‌ನಲ್ಲಿ ಬೆದರಿಕೆ ಹಾಕಿದ ನಂತರ  ರಾಜೇಶ್ ಕೈಯಲ್ಲಿ ಗ್ಯಾಸೋಲಿನ್ ಬಾಟಲ್ ಹಿಡಿದುಕೊಂಡು ಶಾಪ್ ಕಡೆಗೆ ಹೋಗಿ ಬೆಂಕಿ ಹಚ್ಚಿದ್ದಾನೆ ಎಂದು ಉಲ್ಲೇಖಿಸಲಾಗಿದೆ.

ತ್ರಿಪ್ಪುನಿತುರಾ ದಲ್ಲಿ ಶುಕ್ರವಾರ ಸಂಜೆ 5.40ರ ಸುಮಾರಿಗೆ ಈ ಘಟನೆ ನಡೆದಿದೆ. ದಾಳಿಕೋರ ವಡಕ್ಕೆಕೋಟಾ ಮೂಲದ ರಾಜೇಶ್ ಟಿಎಸ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಲವು ಲಾಟರಿ ಟಿಕೆಟ್‌ಗಳು ಬೆಂಕಿಗೆ ಆಹುತಿಯಾಗಿದ್ದು, 1.5 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ವರದಿಯಾಗಿದೆ.

ಕಾರ್ಮಿಕರು ನೀರು ಹಾಕಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ ಎಂದು ವರದಿಯಾಗಿದೆ. ಅನಾಹುತಕ್ಕೊಳಗಾದ ಸಂಸ್ಥೆಯ ಸಿಬ್ಬಂದಿ ಪ್ರಕಾರ ಆರೋಪಿ ರಾಜೇಶ್ ಸಮೀಪದಲ್ಲೇ ಲಾಟರಿ ಟಿಕೆಟ್ ಮಾರಾಟ ಮಾಡುತ್ತಾರೆ. ಈ ದಾಳಿಯ ಉದ್ದೇಶ ಇನ್ನೂ ನಿಗೂಢವಾಗಿದೆ.

SHO ಪ್ರಕಾರ, ಅಂಗಡಿಗೆ ಬೆಂಕಿ ಹಚ್ಚಿದ ರಾಜೇಶ್ ಎಂಬ ವ್ಯಕ್ತಿ ಮನಸಿಕ ಅಸ್ವಸ್ಥನಾಗಿದ್ದು, ಘಟನೆಯ ನಂತರ ಅವರನ್ನು ಬಂಧಿಸಿ ನಂತರ ಆಸ್ಪತ್ರೆಗೆ ಧಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಲಾಟರಿ ಅಂಗಡಿಯೊಂದಕ್ಕೆ ಬೆಂಕಿ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿದ ಘಟನೆ ನಡೆದಿರುವುದು ತಮಿಳುನಾಡಿನಲ್ಲಿ ಅಲ್ಲ, ಕೇರಳದ  ತ್ರಿಪ್ಪುನಿತುರಾದಲ್ಲಿ ಮಾರ್ಚ್ 3 ರಂದು ನಡೆದ ಘಟನೆಯನ್ನು ತಪ್ಪಾಗಿ ತಮಿಳುನಾಡಿಗೆ ಲಿಂಕ್ ಮಾಡಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ದಿ ಕ್ವಿಂಟ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ:  ಫ್ಯಾಕ್ಟ್‌ಚೆಕ್ : ಇಟಲಿ ಪ್ರಧಾನಿ ಮೋದಿಯವರನ್ನು ಅವಮಾನಿಸಿದರೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights