ಫ್ಯಾಕ್ಟ್‌ಚೆಕ್ : ಭಾರತದಲ್ಲಿ ಹುಟ್ಟುವುದೇ ಮಹಾಪಾಪ ಎಂದರೇ ಮಲ್ಲಿಕಾರ್ಜುನ ಖರ್ಗೆ?

‘ಇಂಡಿಯಾ ಟಿವಿ’ ಸುದ್ದಿ ವಾಹಿನಿಯ ಪೋಸ್ಟರ್‌ವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.   “ಭಾರತದಲ್ಲಿ ಹುಟ್ಟುವುದೇ ಮಹಾಪಾಪ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಗುರಿಯಾಗಿಸಿಕೊಂಡು ‘ಇಂಡಿಯಾ ಟಿವಿ’ ಸುದ್ದಿ ವಾಹಿನಿಯ ಗ್ರಾಫಿಕ್ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಇನ್ನು ಕೆಲವು ಬಳಕೆದಾರರು ‘ಇಂಡಿಯಾ ಟಿವಿ’ ಪ್ರಕಟಿಸಿದ ಪೋಸ್ಟ್‌ರ್‌ಅನ್ನು ಟೀಕಿಸಿ, ಅದನ್ನು ನಕಲಿ ಎಂದು ತಿಳಿಸಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ಗಳಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ವಿದೇಶಗಳಲ್ಲಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಲೋಕಸಭೆಯಲ್ಲಿ ಆಡಳಿತಾರೂಢ BJP ಸಂಸದರು ಆಕ್ರೋಶ ವ್ಯಕ್ತಪಡಿಸಿದ್ದರು. ರಾಹುಲ್ ಗಾಂಧಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಸಚಿವ ಪ್ರಲ್ಹಾದ್ ಜೋಶಿ, ‘ಭಾರತದ ಪ್ರಜಾಪ್ರಭುತ್ವ ಸೇರಿದಂತೆ ದೇಶದ ಆಂತರಿಕ ವಿಚಾರಗಳ ಬಗ್ಗೆ ವಿದೇಶ ಶಕ್ತಿಗಳ ಮುಂದೆ ರಾಹುಲ್ ಗಾಂಧಿ ಬಾಯಿಗೆ ಬಂದಂತೆ ಮಾತಾಡಿದ್ದಾರೆ.

“ಸದನದಲ್ಲಿ ಯಾವತ್ತು ವಿಪಕ್ಷಗಳ ಮೈಕ್ ಆಫ್ ಆಗಿಲ್ಲ. ಆಧಾರ ರಹಿತ ಆರೋಪವನ್ನ ವಿದೇಶಗಳಲ್ಲಿ ರಾಹುಲ್ ಗಾಂಧಿ ಮಾಡಿದ್ದು, ಸದನ ಗೌರವಕ್ಕೆ ಧಕ್ಕೆ ತಂದಿದ್ದಾರೆ. ರಾಹುಲ್ ಗಾಂಧಿ ಅವರು ಸದನಕ್ಕೆ ಬಂದು ಕ್ಷಮೆ ಕೇಳಬೇಕು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಅಜ್ಜಿ ಇಂದಿರಾ ಗಾಂಧಿ ಅವರು ದೇಶದಲ್ಲಿ‌ ತುರ್ತು ಪರಿಸ್ಥಿತಿ ಹೇರಿ ವಿಪಕ್ಷಗಳ ನಾಯಕರನ್ನ ಬಂಧಿಸಿದ್ದರು. ಆಗ ಪ್ರಜಾಪ್ರಭುತ್ವವಿತ್ತೇ? ಎಂದು ಸದನದಲ್ಲಿ ಪ್ರಲ್ಹಾದ್ ಜೋಶಿ ಕಾಂಗ್ರೆಸ್ ಸದಸ್ಯರನ್ನ ಪ್ರಶ್ನಿಸಿದ್ದರು.

ಪ್ರಧಾನಿ ಮೋದಿ ವಿರುದ್ದ ಖರ್ಗೆ ವಾಗ್ದಾಳಿ

ಸದನದಲ್ಲಿ ರಾಹುಲ್ ಗಾಂಧಿಯನ್ನು ಟೀಕಿಸಿದ ಬೆನ್ನಲ್ಲೆ ಪ್ರಧಾನಿ ನರೇಂದ್ರ  ಮೋದಿಯವರು ಹಿಂದೆ ಚೀನಾದಲ್ಲಿ ಆಡಿದ್ದಾರೆ ಎನ್ನಲಾದ ಮಾತುಗಳನ್ನು ಉಲ್ಲೇಖಿಸಿ ಟ್ವೀಟ್ ಮೂಲಕ ಪ್ರಧಾನಿ ವಿರುದ್ದ ಖರ್ಗೆ ತಿರುಗೇಟು ನೀಡಿದ್ದರು.

“ಚೀನಾದಲ್ಲಿ ನೀಡಿದ ನಿಮ್ಮ ಹೇಳಿಕೆಯನ್ನು ನಾನು ನಿಮಗೆ ನೆನಪಿಸಲು ಬಯಸುತ್ತೇನೆ.  “ಮೊದಲು ನೀವು ಭಾರತೀಯನಾಗಿರುವುದಕ್ಕೆ ನಾಚಿಕೆಪಡುತ್ತಿದ್ದಿರಿ, ಆದರೆ ಈಗ ನೀವು ದೇಶವನ್ನು ಪ್ರತಿನಿಧಿಸಲು ಹೆಮ್ಮೆಪಡುತ್ತೀರಿ. ಇದು ಭಾರತ ಮತ್ತು ಭಾರತೀಯರಿಗೆ ಮಾಡಿದ ಅವಮಾನವಲ್ಲವೇ? ನಿಮ್ಮ ಮಂತ್ರಿಗಳಿಗೆ ಅವರ ನೆನಪುಗಳನ್ನು ರಿಫ್ರೆಶ್ ಮಾಡಲು ಹೇಳಿ! ಎಂದು ಟ್ವೀಟ್ ಮಾಡಿದ್ದಾರೆ.

ಖರ್ಗೆ ಹೇಳಿಕೆಯನ್ನು ತಿರುಚಿದ India TV

ಪ್ರಧಾನಿ ಮೋದಿಯವರ ಹೇಳಿಕೆಯನ್ನುಉಲ್ಲೇಖಿಸಿ ಖರ್ಗೆ ಆಡಿದ ಮಾತುಗಳನ್ನು @indiatvnews ತಪ್ಪಾಗಿ ಹಂಚಿಕೊಂಡಿದೆ ಎಂದು INC ಸದಸ್ಯೆ ರಿತು ಚೌಧರಿ ಟ್ವೀಟ್ ಮಾಡಿದ್ದಾರೆ.

“ಕಾಂಗ್ರೆಸ್ ಅಧ್ಯಕ್ಷರ ಹೇಳಿಕೆಯನ್ನು @indiatvnews ಹೇಗೆ ಬಹಿರಂಗವಾಗಿ ತಪ್ಪಾಗಿ ಪ್ರತಿನಿಧಿಸುತ್ತಿದೆ ಎಂಬುದನ್ನು ನೋಡಿ, ಈ ಪೋಸ್ಟರ್ ಸಂಪೂರ್ಣವಾಗಿ ತಪ್ಪಾಗಿದೆ. ಖರ್ಗೆ ಜೀ ಅವರು ಮೋದಿಯವರ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ, ಆದರೆ ಈ ಪೋಸ್ಟರ್ ನೋಡಿದರೆ ಅವರೇ ಮಾತನಾಡಿದ್ದಾರೆ ಎಂಬಂತೆ ಬಿಂಬಿಸಲಾಗಿದೆ. ಎಂದು India Tv ವಿರುದ್ದ ಹರಿಹಾಯ್ದಿದ್ದಾರೆ

ಸ್ವಲ್ಪವೂ ನಾಚಿಕೆಯಾಗುವುದಿಲ್ಲವೇ ಮಾಲೀಕರ ದಲ್ಲಾಳಿಯಂತೆ ಈ ಮಟ್ಟಕ್ಕೆ ಇಳಿಯಬೇಡಿ, @RajatSharmaLive ಇಷ್ಟೆಲ್ಲಾ ಮಾಡುವುದರಿಂದ ನಿಮಗೆ ಏನು ಸಿಗುತ್ತದೆ? ಎಂದು ಭಾರತೀಯ ಯೂತ್ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ ಟ್ವೀಟ್ ಮಾಡಿದ್ದಾರೆ. “ಪ್ರಧಾನಿಯವರ ಹೇಳಿಕೆಯನ್ನು ಖರ್ಗೆ ಅವರ ಹೇಳಿಕೆ ಎಂದು ಹೇಳುವ ಮೂಲಕ ನೀವು ಪತ್ರಿಕೋದ್ಯಮ ಮಾಡುತ್ತಿದ್ದೀರಾ ಅಥವಾ ಬಿಜೆಪಿ ಐಟಿ ಸೆಲ್‌ನ ಸುಳ್ಳು ಕಾರ್ಖಾನೆಗೆ ವಸ್ತುಗಳನ್ನು ತಯಾರಿಸುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿಯವರ ಹೇಳಿಕೆಯನ್ನು ಉಲ್ಲೇಖಿಸಿ ಮಾಡಿದ ಟ್ವೀಟ್ ಅನ್ನು ಮಲ್ಲಿಕಾರ್ಜುನ ಖರ್ಗೆಯವರೇ ಹೇಳಿದ್ದಾರೆ ಎಂಬಂತೆ  INDIA TV ಸುದ್ದಿವಾಹಿಸಿ ಪ್ರಸಾರ ಮಾಡಿದೆ. ಇದರ ವಿರುದ್ದ ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕುತ್ತಿದಂತೆ ವಿವಾದವನ್ನು ಶಮನ ಮಾಡಲು ಇಂಡಿಯಾ ಟಿವಿ ನ್ಯೂಸ್ ತನ್ನ ಪೋಸ್ಟ್‌ರ್‌ಅನ್ನು ಅಳಿಸಿ, ವಿಷಾದ ವ್ಯಕ್ತಪಡಿಸಿದೆ.

ಹಾಗಾಗಿ “ಭಾರತದಲ್ಲಿ ಹುಟ್ಟುವುದೇ ಮಹಾಪಾಪ” ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಲ್ಲ. ಮೋದಿಯವರ ಮಾತುಗಳನ್ನು ಉಲ್ಲೇಖಿಸಿ ಮಾಡಿದ ಟ್ವೀಟ್ ಅನ್ನು ಇಂಡಿಯಾ ಟಿವಿ ಸುದ್ದಿವಾಹಿನಿ ತಪ್ಪಾಗಿ ಹಂಚಿಕೊಂಡಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: DFRAC

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ದ್ವಿಚಕ್ರ ವಾಹನ ಸವಾರರಿಗೆ ಇನ್ಮುಂದೆ ಹೆಲ್ಮೆಟ್ ಕಡ್ಡಾವಲ್ಲ ಎಂಬ ಸಂದೇಶ ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights