ಫ್ಯಾಕ್ಟ್‌ಚೆಕ್: ಜಗತ್ತಿನ ಅತೀ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಶ್ರೀರಾಮನ ಚಿತ್ರ ಪ್ರದರ್ಶನ ಮಾಡಲಾಯಿತೇ?

ಪ್ರತಿ ವರ್ಷದಂತೆ ಈ ವರ್ಷವೂ ಶ್ರೀರಾಮನವಮಿಯಂದು ದೇವಸ್ಥಾನಗಳನ್ನು ತಳಿರು-ತೋರಣಗಳಿಂದ ಸಿಂಗರಿಸಿ, ಅಭಿಷೇಕ, ಹೂವಿನ ಅಲಂಕಾರ, ವಿಶೇಷ ಪೂಜಾ ಕೈಂಕರ್ಯಗಳ ಮೂಲಕ  ವಿಜೃಂಭಣೆಯಿಂದ ಆಚರಿಸಲಾಗಿದೆ. ಭಕ್ತರಿಗೆ ಪಾನಕ ಮತ್ತು ಮಜ್ಜಿಗೆಯನ್ನು ಹಂಚಿ ಶ್ರೀರಾಮನ ಮೂರ್ತಿಯನ್ನು ಮೆರವಣಿಗೆ ಮಾಡಲಾಗಿದೆ. ಇದಕ್ಕೂ ಮತ್ತೊಂದು ವಿಶೇಷ ಎಂದರೆ ಶ್ರೀರಾಮನವಮಿಯ ಪ್ರಯುಕ್ತ  ಶ್ರೀರಾಮನ ಚಿತ್ರವನ್ನು ಜಗತ್ತಿನ ಅತೀ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಪ್ರಸಾರ ಮಾಡಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.

ಶ್ರೀರಾಮನವಮಿಯಂದು ದುಬೈನ ಜನಪ್ರಿಯ ಗಗನಚುಂಬಿ ಕಟ್ಟಡವಾದ ಬುರ್ಜ್ ಖಲೀಫಾದ ಮೇಲೆ ಶ್ರೀ ರಾಮನ ಚಿತ್ರವನ್ನು ಲೇಸರ್ ಮೂಲಕ ಡಿಸ್​​ಪ್ಲೇ ಮಾಡಲಾಗಿದೆ ಎಂದು ತೋರಿಸುವ ವಿಡಿಯೋ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ  ರಾಮನವಮಿಯಂದು ವೈರಲ್ ಆಗಿತ್ತು.

ಬುರ್ಜ್ ಖಲೀಫಾದಲ್ಲಿ ಶ್ರೀ ರಾಮನ ಲೇಸರ್ ಪ್ರೊಜೆಕ್ಷನ್ ಅನ್ನು ತೋರಿಸುವ ವಿಡಿಯೊದ ಸ್ಕ್ರೀನ್‌ಶಾಟ್‌ನಂತೆ ಕಂಡುಬರುವ ಫೋಟೊ ವೈರಲ್ ಆಗಿದೆ. ಚಿತ್ರದಲ್ಲಿ ಜೈ ಶ್ರೀ ರಾಮ್ ಎಂಬ ಪಠ್ಯ ಕೂಡಾ ಇದೆ. ಇದು ನವ ಭಾರತದ ಶಕ್ತಿ. ದುಬೈನ ಬುರ್ಜ್ ಖಲೀಫಾದಲ್ಲಿ ರಾಮ್ ನವಮಿ ಆಚರಣೆ ಎಂಬ ಶೀರ್ಷಿಕೆಯೊಂದಿಗೆ ಫೋಟೋ ವೈರಲ್ ಆಗಿದೆ. ಹಾಗಿದ್ದರೆ ನಿಜವಾಗಿಯೂ ಬುರ್ಜ್ ಖಲೀಫಾದ ಕಟ್ಟಡದ ಮೇಲೆ ಶ್ರೀರಾಮ ಚಿತ್ರ ಮೂಡಿಸಲಾಗಿದೆಯೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಟೋವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಸ್ಟಾಕ್ ಇಮೇಜಸ್ ಸೈಟ್‌ಗಳಲ್ಲಿ, ಇಸ್ಟಾಕ್‌ಫೋಟೋ ಮತ್ತು ಅಡೋಬಿ ಸ್ಟಾಕ್‌ನಲ್ಲಿ  ಬುರ್ಜ್ ಖಲೀಫಾದ ಚಿತ್ರ ಲಭ್ಯವಾಗಿದೆ. ಆದರೆ ಅದರಲ್ಲಿ ರಾಮನ ಫೋಟೊ ಇದರಲಿಲ್ಲ. ವೈರಲ್ ಚಿತ್ರ ಎಡಿಟ್ ಮಾಡಿದ್ದು. ಮೂಲ ಚಿತ್ರದಲ್ಲಿ ರಾಮನ ಫೋಟೊ ಇಲ್ಲ ಎಂದು ಬೂಮ್ ಲೈವ್ ಫ್ಯಾಕ್ಟ್ ಚೆಕ್ ವರದಿ ಮಾಡಿದೆ.

ಬುರ್ಜ್ ಖಲೀಫಾದ ವೆರಿಫೈಡ್ ಫೇಸ್‌ಬುಕ್ ಪುಟವನ್ನು ಪರಿಶೀಲಿಸಿದೆ. ಮಾರ್ಚ್ 30 ರಂದು ಈ ಪುಟದಲ್ಲಿನ ಫೇಸ್‌ಬುಕ್ ಪೋಸ್ಟ್ ಈ ಋತುವಿನ ಕೊನೆಯ ಲೇಸರ್ ಮತ್ತು ಲೈಟ್ ಶೋ ಅನ್ನು ಮಾರ್ಚ್ 31 ರಂದು ನಡೆಸಲಿದೆ ಎಂದು ಘೋಷಿಸಿದೆ.

ಬುರ್ಜ್ ಖಲೀಫಾದ ಪರಿಶೀಲಿಸಿದ ಸಾಮಾಜಿಕ ಮಾಧ್ಯಮ ಪುಟಗಳಾದ Facebook ಮತ್ತು Instagram ನಲ್ಲಿ ರಾಮನವಮಿ ದೃಶ್ಯಗಳನ್ನು ಸೂಚಿಸುವ ಯಾವುದೇ ಪೋಸ್ಟ್ ಕಂಡುಬಂದಿಲ್ಲ. ಈ ಬಗ್ಗೆ ಯಾವುದೇ ಅಧಿಕೃತ ಸುದ್ದಿ ವರದಿಗಳು ಅಥವಾ ಬುರ್ಜ್ ಖಲೀಫಾದಿಂದ ಅಧಿಕೃತ ದೃಢೀಕರಣವೂ ಸಿಕ್ಕಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಶ್ರೀರಾಮನವಮಿಯಂದು ದುಬೈನ ಜನಪ್ರಿಯ ಗಗನಚುಂಬಿ ಕಟ್ಟಡವಾದ ಬುರ್ಜ್ ಖಲೀಫಾದ ಮೇಲೆ ಶ್ರೀ ರಾಮನ ಚಿತ್ರವನ್ನು ಲೇಸರ್ ಮೂಲಕ ಡಿಸ್​​ಪ್ಲೇ ಮಾಡಲಾಗಿದೆ ಎಂದು ಎಡಿಟ್ ಮಾಡಿದ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ವಾಸ್ತವವಾಗಿ ಅಂತಹ ಯಾವುದೇ ಚಿತ್ರವನ್ನು ಬುರ್ಜ್ ಖಲೀಫಾದಲ್ಲಿ ಅನಾವರಣ ಮಾಡಲಾಗಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಬೂಮ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಭತ್ತದ ಗದ್ದೆಯಲ್ಲಿ ಸಿಕ್ಕ 250ಕ್ಕೂ ಹೆಚ್ಚು ಪಾಸ್‌ಪೋರ್ಟ್‌ಗಳು ಮುಸ್ಲಿಮರಿಗೆ ಸಂಬಂಧಿಸಿದ್ದೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights