ಫ್ಯಾಕ್ಟ್‌ಚೆಕ್ : ಇನ್ನು ಮುಂದೆ ಗೂಗಲ್ ಪೇ, ಫೋನ್ ಪೇ ಮೂಲಕ ಪಾವತಿ ಮಾಡಿದರೆ ಹೆಚ್ಚುವರಿ ಶೇ1.1% ಶುಲ್ಕ ತೆರಬೇಕೆ? ಇಲ್ಲಿದೆ ಡೀಟೀಲ್ಸ್‌

ಬೀದಿ ಬದಿ ವ್ಯಾಪಾರಿಯಿಂದ ದೊಡ್ಡ ದೊಡ್ಡ ಹೋಟೆಲ್‌ವರೆಗೂ UPI ಪಾವತಿ ಬಳಕೆಯಲ್ಲಿದೆ. ಆದರೆ, ಇನ್ಮುಂದೆ ಫೋನ್‌ ಪೇ ಹಾಗೂ ಗೂಗಲ್‌ಪೇ ಸೇರಿದಂತೆ ಇನ್ನಿತರೆ ಆಪ್‌ಗಳ ಮೂಲಕ ಪಾವತಿ ಮಾಡುವವರು ಹೆಚ್ಚುವರಿ ಶುಲ್ಕ ನೀಡಬೇಕಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದು “ಇನ್ನು ಮುಂದೆ ಗೂಗಲ್ ಪೇ, ಫೋನ್ ಪೇ ಮತ್ತು UPI ಮೂಲಕ ಹಣ ಪಾವತಿಸುವವರು ತೆರಬೇಕಾಗಿ ಬರುವ ಶುಲ್ಕದ ಪಟ್ಟಿ ಎಂದು ಪ್ರತಿಪಾದಿಸಿ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಎಷ್ಟು ಹಣ ವರ್ಗಾಯಿಸಿದರೆ ಎಷ್ಟು ತೆರಿಗೆ ರೂಪದಲ್ಲಿ ಕಟ್ಟಬೇಕಾಗುತ್ತದೆ ಎಂಬ ಪಟ್ಟಿಯನ್ನು ನೀಡಲಾಗಿದೆ.

“ಕ್ಯಾಷ್ ಲೆಸ್ ಎಕನಾಮಿಯಾ ಲೂಟಿ ನೋಡಿ.. ಮೋದಿ ಜನರನ್ನು ಲೂಟಿ ಮಾಡಿ ಅಂಬಾನಿ ಅಧಾನಿ ಸಾಕುತ್ತಿದ್ದಾರೆ. BJP ತೊಲಗಿಸಿ ಜನಸಾಮಾನ್ಯರ ಬದುಕು ಉಳಿಸಿ” ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಹಾಗಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವಂತೆ ಇನ್ಮುಂದೆ ಫೋನ್‌ಪೇ ಮತ್ತು ಗೂಗಲ್ ಪೇಯಂತಹ ಆಪ್‌ಗಳನ್ನು ಬಳಸುವವರು ಇಷ್ಟೊಂದು ಹಣ ತೆರಬೇಕಾಗಿದೆಯೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಿದಾಗ, ಏಪ್ರಿಲ್ 1 ರಿಂದ ಮರ್ಚಂಟ್‌ UPI (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ವಹಿವಾಟುಗಳ ಮೇಲೆ ಶೇಕಡಾ 1.1 ರವರೆಗೆ ಇಂಟರ್ಚೇಂಜ್ ಶುಲ್ಕ ಅನ್ವಯಿಸುತ್ತದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI)  ಹೇಳಿದೆ.

UPI ವಹಿವಾಟುಗಳಿಗೆ ಬಳಸುವ ಪ್ರಿಪೇಯ್ಡ್ ಪಾವತಿ ಉಪಕರಣ (ಪಿಪಿಐ)ಗಳಿಗೆ ಇಂಟರ್ಚೇಂಜ್ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು NPCI ಹೇಳಿದೆ. ವಹಿವಾಟು 2,000 ರೂ.ಗಿಂತ ಹೆಚ್ಚಿದ್ದರೆ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ಪೇಮೆಂಟ್ಸ್‌ ಕಾರ್ಪೊರೇಷನ್‌ ಸ್ಪಷ್ಟಪಡಿಸಿದೆ.

ಅಧಿಸೂಚನೆಯ ಪ್ರಕಾರ ಈ ಶುಲ್ಕವು ಪ್ರಿಪೇಯ್ಡ್ ಪಾವತಿ ಸಾಧನಗಳ ಮೂಲಕ ಮಾಡಿದ ವ್ಯಾಪಾರಿ ವಹಿವಾಟುಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಎನ್‌ಪಿಸಿಐ ತಿಳಿಸಿದ್ದು, “ಬ್ಯಾಂಕ್ ಖಾತೆಯಿಂದ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವ,” ಸಾಮಾನ್ಯ ಯುಪಿಐ ಪಾವತಿಗಳ ಮೇಲೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಅದೇ ರೀತಿ ಜನರು ವ್ಯಾಪಾರಿಗಳಿಗೆ ಪಾವತಿಸುವ ಹಣಕ್ಕೂ ಯಾವುದೇ ಶುಲ್ಕ ಇರುವುದಿಲ್ಲ.

ಈ ಶುಲ್ಕ ಪಾವತಿ ಎಲ್ಲರೂ ಮಾಡಬೇಕೆ?

ಭಾರತದಲ್ಲಿ ಬಹುಪಾಲು ಜನರು ಫೋನ್‌ಪೇ, ಗೂಗಲ್‌ಪೇ ಹಾಗೂ ಪೇಟಿಎಮ್‌ ಸೇರಿದಂತೆ ಇನ್ನಿತರೆ ಆಪ್‌ಗಳ ಮೂಲಕ ನಿತ್ಯ ವ್ಯವಹಾರ ನಡೆಸುತ್ತಾರೆ. ಅದರಂತೆ ಎಲ್ಲರೂ ಸಹ ಈ ಶುಲ್ಕ ಪಾವತಿ ಮಾಡಬೇಕೇ ಎಂಬ ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಉತ್ತರ ಖಂಡಿತಾ ಇಲ್ಲ.ಸದ್ಯ ಅಂದರೆ ಬ್ಯಾಂಕ್ ಖಾತೆಗಳು ಮತ್ತು PPI ವ್ಯಾಲೆಟ್‌ಗಳ ನಡುವಿನ ಪೀರ್-ಟು-ಪೀರ್ (P2P) ಮತ್ತು ಪೀರ್-ಟು-ಪೀರ್-ಮರ್ಚೆಂಟ್ (P2PM) ವಹಿವಾಟಿನ ಮೇಲೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ.

ಸರಳವಾಗಿ ಹೇಳಬೇಕೆಂದರೆ, ಯಾವುದೇ ಗ್ರಾಹಕರು ಬ್ಯಾಂಕ್‌ ಖಾತೆಯಿಂದ 2,000 ರೂ.ಗಿಂತ ಹೆಚ್ಚಿನ ಮೊತ್ತವನ್ನು ವ್ಯಾಲೆಟ್‌ಗೆ ವರ್ಗಾಯಿಸಿದರೆ, ಆಗ ಈ ವ್ಯಾಲೆಟ್‌ ನಿರ್ವಹಿಸುವ ಗೂಗಲ್‌ಪೇ, ಪೇಟಿಎಂ, ಫೋನ್‌ಪೇ ಮೊದಲಾದ ಸಂಸ್ಥೆಗಳು ಬ್ಯಾಂಕ್‌ಗಳಿಗೆ ಸಣ್ಣ ಮೊತ್ತವನ್ನು ಶುಲ್ಕವಾಗಿ ಪಾವತಿಸಬೇಕಾಗುತ್ತದೆ.

ಸೆಪ್ಟೆಂಬರ್ 30, 2023ರಂದು ಅಥವಾ ಅದಕ್ಕೂ ಮೊದಲು ಈ ಶುಲ್ಕಗಳನ್ನು ಪರಿಶೀಲಿಸಲಾಗುತ್ತದೆ ಎಂದು ಎನ್‌ಪಿಸಿಐ ಹೇಳಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ ಹಣಕಾಸು ಸಚಿವಾಲಯವು ಯುಪಿಐ ಡಿಜಿಟಲ್ ಸಾರ್ವಜನಿಕ ಸರಕು ಆಗಿದ್ದು, ಇದರ ಮೂಲಕ ಮಾಡಿದ ವಹಿವಾಟುಗಳ ಮೇಲೆ ಯಾವುದೇ ಶುಲ್ಕವನ್ನು ವಿಧಿಸುವುದನ್ನು ಪರಿಗಣಿಸುತ್ತಿಲ್ಲ ಎಂದು ಹೇಳಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, ಇದು ನೀವು Paytm ವ್ಯಾಲೆಟ್ ಮೂಲಕ ವ್ಯಾಪಾರಿಗೆ ಪಾವತಿ ಮಾಡುತ್ತಿದ್ದೀರಿ ಎಂದು ಭಾವಿಸೋಣ. ನೀವು ವ್ಯಾಪಾರಿಯ QR ಕೋಡ್ ಅನ್ನು ಒಮ್ಮೆ ಸ್ಕ್ಯಾನ್ ಮಾಡಿದರೆ, ವ್ಯಾಪಾರಿಯ ಬ್ಯಾಂಕ್ ಖಾತೆಗೆ ನೇರವಾಗಿ ಪಾವತಿಸಲು ಇದು ನಿಮ್ಮನ್ನು ಅನುಮತಿಸುತ್ತದೆ. ಆದ್ದರಿಂದ ಏಪ್ರಿಲ್‌ನಿಂದ, ಇದನ್ನು ವ್ಯಾಪಾರಿಯು ಪಾವತಿಸಬೇಕಾದ 2000 ರೂಪಾಯಿಗಿಂತ ಹೆಚ್ಚಿನ ವಹಿವಾಟುಗಳಿಗೆ 1.1% ವರೆಗೆ ಇಂಟರ್‌ಚೇಂಜ್ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ಹೇಳಲಾಗಿದೆ. ಹಾಗಾಗಿ ಇದು ಸಾಮಾನ್ಯ UPI ಪಾವತಿಗೆ ಅನ್ವಹಿಸುವುದಿಲ್ಲ ಎಂದು ನಾವು ಗ್ರಹಿಸಬೇಕಾಗಿದೆ.

ಆದರೆ ಮುಂದಿನ ದಿನಗಳಲ್ಲಿ ಅಂದರೆ ಸೆಪ್ಟಂಬರ್ 30, 2023ರ ನಂತರ ಇದನ್ನು ಮತ್ತಷ್ಟು ಮಾರ್ಪಾಡುಗಳ ಮೂಲಕ ಜನ ಸಾಮಾನ್ಯರ ಸಾಮಾನ್ಯ UPI ಪಾವತಿಗಳ ಮೇಲೂ ಶುಲ್ಕ ವಿಧಿಸಬಹುದು ಅಥವಾ ಇಲ್ಲದಿರಬಹುದು. ನಂತರದ ದಿನಗಳಲ್ಲಿ ಏನಾಗುವುದೋ ಕಾದುನೋಡಬೇಕಿದೆ.

ಕೃಪೆ: PIB Fact check

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಜಗತ್ತಿನ ಅತೀ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಶ್ರೀರಾಮನ ಚಿತ್ರ ಪ್ರದರ್ಶನ ಮಾಡಲಾಯಿತೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights