ಫ್ಯಾಕ್ಟ್‌ಚೆಕ್ : ಮೈಸೂರಿನಲ್ಲಿ ನಾಳೆ(ಏ.9) ಮೋದಿ ತಮ್ಮ ಸ್ನಾತಕೋತ್ತರ ಪದವಿ ಪತ್ರವನ್ನು ಬಿಡುಗಡೆ ಮಾಡುವರೇ? ಈ ಸ್ಟೋರಿ ಓದಿ

ಪ್ರಧಾನಿ ನರೇಂದ್ರ ಮೋದಿ ಏ.9 ರಂದು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನ ಪ್ರಕಾರ ಇಡೀ ದೇಶದಲ್ಲಿ ಚರ್ಚೆಯಾಗುತ್ತಿರುವ ಮೋದಿಯವರ ಶಿಕ್ಷಣ ಮತ್ತು ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಅವರ ಪದವಿ ಪ್ರಮಾಣ ಪತ್ರವನ್ನು ಮೈಸೂರು ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡುತ್ತಾರೆ ಎಂದು ಹೇಳಲಾಗಿದೆ.

” ಇಡೀ ದೇಶ ನಿರೀಕ್ಷೆ ಮಾಡುತ್ತಿದ್ದ ಬೆಳವಣಿಗೆ ಕಡೆಗೂ ನಡೆಯುತ್ತಿದೆ ಇದೇ ಏಪ್ರಿಲ್ 9ರಂದು ಮೈಸೂರು ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ  ತಮ್ಮ ಎಂಟೈರ್ ಪೊಲಿಟಿಕಲ್ ಸೈನ್ಸ್‌ನ ಸ್ನಾತಕ್ಕೋತ್ತರ ಪದವಿ ಪ್ರಮಾಣ ಪತ್ರವನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ”.

ಹಾಗಿದ್ದರೆ ಮೋದಿ ನಿಜವಾಗಿಯೂ ತಮ್ಮ ಸ್ನಾತಕೋತ್ತರ ಪ್ರಮಾಣ ಪತ್ರವನ್ನು ಬಿಡುಗಡೆ ಮಾಡುವ ಯೋಜನೆ ಪ್ರವಾಸದ ವೇಳಾ ಪಟ್ಟಿಯಲ್ಲಿ ಇದೆಯೇ? ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಪ್ರಧನಿ ಮೋದಿ ಏಪ್ರಿಲ್​ 8 ಮತ್ತು 9ರಂದು ಮೈಸೂರು ಪ್ರವಾಸ ಮಾಡುತ್ತಿರುವ ಹಿನ್ನೆಲೆಯಲ್ಲಿ, ಮೈಸೂರು ಪ್ರವಾಸದ ಕುರಿತು ವೇಳಾ ಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಪ್ರವಾಸದ ಪಟ್ಟಿಯಲ್ಲಿ ಮೈಸೂರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡುವ ಪ್ಲಾನ್ ಒಳಗೊಂಡಿದೆ. ಆದರೆ ಈ ಸಂದರ್ಭದಲ್ಲಿ ಅವರು ತಮ್ಮ ಪದವಿ ಪ್ರಮಾಣ ಪತ್ರವನ್ನು ಬಿಡುಗಡೆ ಮಾಡುವ ಕಾರ್ಯಕ್ರಮ ಅಧಿಕೃತವಾಗಿ ಎಲ್ಲೂ ಉಲ್ಲೇಖವಾಗಿಲ್ಲ.

Image

ಇಂದು (ಏ.8)  ರಾತ್ರಿ 8.40ಕ್ಕೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದು, ಬಳಿಕ ವಿಮಾನ‌ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ರಾತ್ರಿ 8.50ಕ್ಕೆ ಮೈಸೂರಿನ ರಾಡಿಸನ್​​​​​​​ ಬ್ಲೂ ಹೋಟೆಲ್​ಗೆ ತೆರಳಲಿದ್ದಾರೆ. ಇಂದು ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಬಳಿಕ ನಾಳೆ ಬೆಳಗ್ಗೆ 6.20ಕ್ಕೆ ಹೋಟೆಲ್​ನಿಂದ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಬಂಡೀಪುರಕ್ಕೆ ತೆರಳಲಿದ್ದಾರೆ.

ಏ.9ರ ಬೆಳಗ್ಗೆ 7.30ಕ್ಕೆ ಬಂಡೀಪುರ ಉದ್ಯಾನವನಕ್ಕೆ ಭೇಟಿ ನೀಡಿ, ಬಳಿಕ ಸಫಾರಿ ಮಾಡಲಿದ್ದಾರೆ. ನೀಲಗಿರಿಸ್​​ ಅರಣ್ಯ ಪ್ರದೇಶಕ್ಕೂ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ನಂತರ ಮುದುಮಲೈ ಅರಣ್ಯಪ್ರದೇಶಕ್ಕೆ ಭೇಟಿ‌ ನೀಡಲಿದ್ದು, ಅಲ್ಲಿಯ ತೆಪ್ಪಕಾಡು ಆನೆಕ್ಯಾಂಪ್‌ನಲ್ಲಿ ಬೊಮ್ಮ ಮತ್ತು ಬೆಳ್ಳಿ ದಂಪತಿಯನ್ನು ಸನ್ಮಾನ ಮಾಡಲಿದ್ದಾರೆ.

ನಂತರ ಮೈಸೂರಿಗೆ ವಾಪಸ್​ ಆಗಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿರುವ ಮೋದಿ, ಹುಣಸೂರು ರಸ್ತೆ ಮೂಲಕ ಬೆಳಗ್ಗೆ 10.30ಕ್ಕೆ ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯಕ್ಕೆ ಆಗಮಿಸಿ ಕೆಎಸ್​ಒಯು ಘಟಿಕೋತ್ಸವ ಭವನದಲ್ಲಿ ಹುಲಿ ಸಂರಕ್ಷಣಾ ಯೋಜನೆ 50ನೇ ವರ್ಷಾಚರಣೆ ಕಾರ್ಯಕ್ರಮವನ್ನ ಉದ್ಘಾಟಿಸಲಿದ್ದಾರೆ. ನಂತರ ಮಧ್ಯಾಹ್ನ 12.05ಕ್ಕೆ ಕೆಎಸ್​ಒಯುನಿಂದ ಹುಣಸೂರು ರಸ್ತೆ ಮಾರ್ಗವಾಗಿ ಮೈಸೂರು ಹೆಲಿಪ್ಯಾಡ್​ಗೆ ತಲುಪಿ, ಬಳಿಕ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 12.35ಕ್ಕೆ ದೆಹಲಿಗೆ ವಾಪಸ್​ ಆಗಲಿದ್ದಾರೆ.

ಇದಿಷ್ಟು ಮೋದಿ ಮೈಸೂರು ಪ್ರವಾಸದ ಅಧಿಕೃತ ಪ್ರವಾಸದ ಪಟ್ಟಿಯಾಗಿದ್ದು, ಇಲ್ಲಿ ಎಲ್ಲಿಯೂ ಅವರ ಪ್ರಮಾಣ ಪತ್ರದ ಬಿಡುಗಡೆಯ ಕುರಿತಾಗಿ ಉಲ್ಲೇಖವಾಗಲಿ, ಪ್ರಸ್ತಾಪವಾಗಲಿ ಇಲ್ಲ. ಹಾಗಾಗಿ ಪೊಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ಸಧ್ಯಕ್ಕೆ ಸುಳ್ಳು ಎಂದು ತೀರ್ಮಾನಿಸಬಹುದು.

ಇತ್ತೀಚೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನರೇಂದ್ರ ಮೋದಿ ಅವರ ಪದವಿ ಪ್ರಮಾಣಪತ್ರಗಳನ್ನು ಬಹಿರಂಗ ಪಡಿಸುವಂತೆ ಒತ್ತಾಯಿಸಿದ್ದರು.ಮೋದಿಯವರ ಶೈಕ್ಷಣಿಕ ವಿವರಗಳ ಕುರಿತು ಮಾಹಿತಿ ಹಕ್ಕು ಕಾನೂನಿನಡಿಯಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಲ್ಲಿಸಿದ ಅರ್ಜಿಯಿಂದ ಕೆರಳಿದ ಗುಜರಾತ್ ವಿವಿ ಅವರ ವಿರುದ್ಧ ಮೊಕದ್ದಮೆ ಹೂಡಿತ್ತು.

ನಂತರ ನಡೆದ ಬೆಳವಣಿಗೆಯಲ್ಲಿ ಗುಜರಾತ್ ನ್ಯಾಯಾಲಯ ಮೋದಿಯವರ ಕುರಿತು ಹೀಗೆಲ್ಲ ಮಾಹಿತಿ ಕೇಳಿದ್ದಕ್ಕಾಗಿ ಕೇಜ್ರಿವಾಲ್ ಅವರಿಗೆ ರೂ.25,000 ದಂಡ ವಿಧಿಸಿತು. ಸದ್ಯ ನರೇಂದ್ರ ಮೋದಿಯವರ ಪದವಿ ಪ್ರಮಾಣ ಪತ್ರ ನೀಡುವ ಅಗತ್ಯವಿಲ್ಲ ಎಂದು ಕೋರ್ಟ್ ಹೇಳಿರುವುದನ್ನು ಇಲ್ಲಿ ಸ್ಮರಿಸಬಹದು.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಪ್ರಧಾನಿ ಮೋದಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಧರರೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights