ಫ್ಯಾಕ್ಟ್ಚೆಕ್ : ಕೇಂದ್ರ ಸರ್ಕಾರ ರೈತರ ಖಾತೆಗೆ ಲಕ್ಷ ಲಕ್ಷ ಹಣ ಹಾಕಿದೆ ಎಂದು ಸುಳ್ಳು ಹೇಳಿದ ನಳಿನ್ ಕುಮಾರ್ ಕಟೀಲ್
ಕರ್ನಾಟಕದಲ್ಲಿ ಸದ್ಯಕ್ಕೆ ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಚುನಾವಣಾ ಪ್ರಚಾರದಲ್ಲಿ ಫುಲ್ ಬ್ಯೂಸಿ. ಕಾಂಗ್ರೆಸ್, ಜೆಡಿಎಸ್ ಮತ್ತು BJP ಪಕ್ಷಗಳು ಈ 2023ರ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಬಂಪರ್ ಕೊಡುಗೆಗಳನ್ನು ಕೊಡುತ್ತೇವೆ ಎಂದು ಮತದಾರ ಪ್ರಭುಗಳನ್ನು ಮನವೊಲಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
BJP ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಕೇಂದ್ರ ಸರ್ಕಾರದಿಂದ ಯೋಜನೆಗಳನ್ನು ಉಲ್ಲೇಖಿಸಿ ಪ್ರಚಾರ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ರಾಜ್ಯದ ಎಲ್ಲಾ ರೈತರ ಖಾತೆಗೆ ಪ್ರತಿ ವರ್ಷ ಒಂದು ಲಕ್ಷದಿಂದ ಮೂರು ಲಕ್ಷದವರೆಗೆ ಹಣ ಜಮಾವಣೆ ಮಾಡುತ್ತಿದೆ ಎಂದು ಹೇಳುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಒಂದು ಪ್ರಚಾರ ಸಭೆಯಲ್ಲಿ ಮಾತನಾಡುತ್ತ ನಳಿನ್ ಕುಮಾರ್ ಕಟೀಲ್ ಹೀಗೆ ಹೇಳುತ್ತಾರೆ, “ನಾನು ಮೊನ್ನೆ ಹೋಗ್ತೀನಿ, ನನ್ನ ತಾಯಿ ಹೇಳ್ತಾರೆ, ನನ್ನ ಅಕೌಂಟ್ ನಲ್ಲಿ ಒಂದು ಲಕ್ಷ ಇದೆ. ಅದು ಹೇಗಮ್ಮ ಅಂತ ಕೇಳಿದೆ. ನನಗೆ ಗೊತ್ತಿಲ್ಲ, ಸರ್ಕಾರದಿಂದ ಬಂದಿದೆ. ಹೀಗೆ ಇವತ್ತು ಪ್ರತಿಯೊಬ್ಬ ರೈತನ ಅಕೌಂಟಿಗೆ ಒಂದು ಲಕ್ಷ, ಎರಡು ಲಕ್ಷ, ಮೂರು ಲಕ್ಷ ರೂಪಾಯಿ ಬಂದಿದೆ. ಯಾರೂ ಅರ್ಜಿ ಹಾಕದೆ ನೇರವಾಗಿ ಬಂದಿದ್ದರೆ ಅದು ನರೇಂದ್ರ ಮೋದಿ ಸರ್ಕಾರದ ಕೊಡುಗೆ, ನರೇಂದ್ರ ಮೋದಿ ಸರ್ಕಾರದ ಕೊಡುಗೆ” ಎಂದು ಹೇಳುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಹಾಗಿದ್ದರೆ ನಳಿನ್ ಕುಮಾರ್ ಕಟೀಲ್ ಹೇಳಿದಂತೆ ರೈತರಿಗೆ ಪ್ರತಿ ವರ್ಷ ಕೇಂದ್ರ ಸರ್ಕಾರ ಲಕ್ಷ ಲಕ್ಷ ಹಣ ಹಾಕುತ್ತಿದೆಯೇ? ಯಾವ ಯೋಜನೆ ಅಡಿಯಲ್ಲಿ ಈ ಹಣವನ್ನು ಹಾಕುತ್ತಿದೆ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ನಳಿನ್ ಕುಮಾರ್ ಕಟೀಲ್ ಅವರ ವೈರಲ್ ವಿಡಿಯೊದಲ್ಲಿ ಹೇಳಿರುವಂತೆ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ರೈತರ ಯೋಜನೆಗಳನ್ನು ಪರಿಶೀಲಿಸಿದಾಗ ಯಾವುದೇ ಯೋಜನೆಯಲ್ಲಿ ರೈತ ತಾನು ಅರ್ಜಿ ಹಾಕದೇ ತನ್ನ ಖಾತೆಗೆ ಸರ್ಕಾರ ಹಣ ಹಾಕಿರುವ ಉದಾಹರಣೆ ಇಲ್ಲ.
ಕೇಂದ್ರ ಸರ್ಕಾರದ ಪ್ರಮುಖ ಕೃಷಿ ಯೋಜನೆಗಳ ಪಟ್ಟಿ ಹೀಗಿದೆ: 1. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ (PMKSY), 2. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY), 3. ಸುಸ್ಥಿರ ಕೃಷಿಗಾಗಿ ರಾಷ್ಟ್ರೀಯ ಮಿಷನ್ (NMSA), 4. ಪರಂಪರಾಗತ್ ಕೃಷಿ ವಿಕಾಸ ಯೋಜನೆ (PKVY), 5. ಕಿಸಾನ್ ಕ್ರೆಡಿಟ್ ಕಾರ್ಡ್ (KCC), 6. ಇ-ನ್ಯಾಮ್, 7. ಕಿರು ನೀರಾವರಿ ನಿಧಿ ಯೋಜನೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ, 9. ಪ್ರಧಾನ ಮಂತ್ರಿ ಕಿಸಾನ್ ಮಾನ್-ಧನ್ ಯೋಜನೆ (PM-KMY), 10. ಗ್ರಾಮೀಣ ಭಂಡಾರನ್ ಯೋಜನೆ. ಇವುಗಳು ಮಾತ್ರವಲ್ಲದೆ ಬಡ್ಡಿಯಲ್ಲಿ ವಿನಾಯಿತಿ, ಪ್ರೋತ್ಸಾಹ ಧನವಾಗಿ ರೈತರಿಗೆ ನೀಡಲಾಗುತ್ತದೆ.
ರೈತರಿಗೆ ನೇರವಾಗಿ ಹಣ ತಲುಪಿಸುವ ಯೋಜನೆ ಅಂದರೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ (PMKSY), ಅದರ ಮೂಲಕ ಪ್ರತಿ ನಾಲ್ಕು ತಿಂಗಳಿಗೆ ಒಮ್ಮೆ ಎರಡು ಸಾವಿರ ರೂಪಾಯಿಯಂತೆ, ವರ್ಷಕ್ಕೆ ಆರು ಸಾವಿರ ರೂಪಾಯಿ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಆಗುತ್ತದೆ. ಇತ್ತೀಚೆಗೆ ಒಂದಿರುವ ಮಾಹಿತಿ ಪ್ರಕಾರ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಯಲ್ಲಿ ಈ ಹಿಂದೆ ಸರ್ಕಾರ ರೈತರ ಖಾತೆಗೆ 2000 ರೂ.ಗಳನ್ನು ವರ್ಗಾಯಿಸುತ್ತಿತ್ತು, ಇನ್ನು ಮುಂದೆ ಪೂರ್ಣ 4000 ರೂ. ಸಿಗುವಂತೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಆದರೆ ಇನ್ನು ಅದು ಅನುಷ್ಠಾನ ಆಗಿಲ್ಲ. ಅಂದರೆ ಹನ್ನೆರಡು ಸಾವಿರ ಜಮೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಆದರೆ, ನಳಿನ್ ಕುಮಾರ್ ಕಟೀಲ್ ಹೇಳಿದಂತೆ ಅರ್ಜಿಯನ್ನೇ ಹಾಕದೆ ರೈತರು ಹಣ ಪಡೆಯುತ್ತಿದ್ದಾರೆ ಎಂಬುದು ಸುಳ್ಳು. “ಕೇಂದ್ರ ಸರ್ಕಾರದ ಯೋಜನೆಗಳ ಅಡಿಯಲ್ಲಿ ರೈತರ ಖಾತೆಗಳಿಗೆ ಹಣ ಬರುವುದು ಹೌದು. PMKSY ಅಡಿಯಲ್ಲಿ ರೈತರಿಗೆ ನಾಲ್ಕು ತಿಂಗಳಿಗೊಮ್ಮೆ 2 ಸಾವಿರ ನೀಡಲಾಗುತ್ತಿದೆ, ವರ್ಷಕ್ಕೆ 6 ಸಾವಿರ ಬರುತ್ತದೆ ಕೆಲ ಸಂದರ್ಭದಲ್ಲಿ ಅದೂ ಕೂಡ ಬಂದಿರುವುದಿಲ್ಲ. ಆದರೆ ಪ್ರತಿ ರೈತನ ಖಾತೆಗೆ, ಅರ್ಜಿಯನ್ನೇ ಹಾಕಿಕೊಳ್ಳದೆ ಮೊತ್ತ ವರ್ಗಾವಣೆ ಆಗುವಂಥ ಯಾವ ಯೋಜನೆಯೂ ಜಾರಿಯಲ್ಲಿಲ್ಲ. ಸಾಲದಕ್ಕೆ ಲಕ್ಷ ಲಕ್ಷ ಹಣ ಬರುತ್ತದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿರುವುದು ಮಹಾ ಸುಳ್ಳು ಎಂದು ಮಂಡ್ಯದ ರೈತ ಕೃಷ್ಣೇಗೌಡ ಏನ್ಸುದ್ದಿ.ಕಾಂ ತಿಳಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ನಳಿನ್ ಕುಮಾರ್ ಕಟೀಲ್ ರೈತರ ಖಾತೆಗೆ ಲಕ್ಷ ಲಕ್ಷ ಹಣ ವರ್ಗಾವಣೆ ಆಗುತ್ತದೆ ಎಂದು ಹೇಳಿರುವ ವಿಡಿಯೋ 2022 ಮೇ ತಿಂಗಳಿನಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿರುವ ವಿಡಿಯೋವನ್ನು ಸದ್ಯ ಚುನಾವಣಾ ಸಂದರ್ಭದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ ನಳಿನ್ ಕುಮಾರ್ ಹೇಳಿರುವಂತೆ ರೈತರ ಖಾತೆಗೆ ಲಕ್ಷ ಲಕ್ಷ ರೂ ಜಮೆ ಆಗಿರುವುದು ಸುಳ್ಳು.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್ಚೆಕ್: BJP ವಿರುದ್ದದ ಜನಾಕ್ರೋಶದ ವಿಡಿಯೋ ಕರ್ನಾಟಕದ್ದೆ?

