ಫ್ಯಾಕ್ಟ್‌ಚೆಕ್ : BJP ಮುಖಂಡರು ಮತದಾರರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ನಕಲಿ ವಿಡಿಯೋ ಹಂಚಿಕೆ

ಚುನಾವಣಾ ಹೊಸ್ತಿಲಲ್ಲಿರುವ ಕರ್ನಾಟಕದಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ರೋಡ್ ಶೋ.. ಮನೆ ಮನೆ ಪ್ರಚಾರದ ಮೂಲಕ ಮತ ಭೇಟೆ ಜೋರಾಗಿ ನಡೆದಿದೆ. ಒಂದು ಕಡೆ ಭರವಸೆಗಳ ಮಹಾಪೂರವನ್ನೆ ಹರಿಸುತ್ತಿರುವ ನಾಯಕರು ಮತ್ತೊಂದು ಕಡೆ ಉಡುಗೊರೆಗಳನ್ನು ನೀಡುವುದರ ಮೂಲಕ ಮತದಾರರನ್ನು ಸೆಳೆಯಲು ಕಸರತ್ತು ನಡೆಸುತ್ತಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು BJP ಪಕ್ಷದವರು ಮತದಾರರಿಗೆ ಸೀರೆ ಹಂಚುವಾಗ ಹಿರಿಯ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವಿಡಿಯೋವನ್ನು ಪ್ರಸಾರ ಮಾಡಲಾಗುತ್ತಿದೆ.

ಕರ್ನಾಟಕದಲ್ಲಿ ಚುನಾವಣೆಗೆ ಮುನ್ನ ಈ ಪರಿಸ್ಥಿತಿ. BJP ಪಕ್ಷದ ಪದಾಧಿಕಾರಿ ಬಡವರಿಗೆ ಬಟ್ಟೆ ಹಂಚುವಾಗ ನೋಡಿ BJPಯ ನಿಜವಾದ ಮುಖ. ಚುನಾವಣೆಯಲ್ಲಿ ಗೆದ್ದ ನಂತರ ನಿಮಗೆ ಅರ್ಥವಾಗುತ್ತದೆ. ಬಡವರ ಜೊತೆ ಈ ರೀತಿಯ ವರ್ತನೆ ಶೋಚನೀಯ ಎಂದು ಪ್ರತಿಪಾದಿಸಿ ವಿಡಿಯೋ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ,  ಮಾರ್ಚ್ 2023 ರಲ್ಲಿ ಬಾಂಗ್ಲಾದೇಶದ ಹಲವಾರು YouTube ಬಳಕೆದಾರರು ವಿಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ ಎಂದು ಕಂಡುಬಂದಿದೆ. ಬಾಂಗ್ಲಾದೇಶದಲ್ಲಿ  ಚಾರಿಟಿ ಕಾರ್ಯಕ್ರಮವೊಂದರಲ್ಲಿ ಸ್ಥಳೀಯ ರಾಜಕೀಯ ಮುಖಂಡರೊಬ್ಬರು ಹಿರಿಯ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ವಿಡಿಯೊ ಇದಾಗಿದೆ. 2022 ರ ರಂಜಾನ್ ಸಮಯದಲ್ಲಿ ನಡೆದ ಬಟ್ಟೆ ವಿತರಣಾ ಸಮಾರಂಭದಲ್ಲಿ ಸ್ಥಳೀಯ ನಾಯಕ ಹಬೀಬುರ್ ರೆಹಮಾನ್ ಬಿಟು ಎಂಬಾತ ಮಹಿಳೆಯ ಮೇಲೆ ಹಲ್ಲೆ ಮಾಡಿದ ಘಟನೆಯ ವಿಡಿಯೋ ಎಂದು ಬೂಮ್ ವರದಿ ಮಾಡಿದೆ.

ಏಪ್ರಿಲ್ 2, 2023 ರಂದು ಬಾಂಗ್ಲಾದೇಶದ ದಿನಪತ್ರಿಕೆ ಜುಗಾಂತರ್ ಇದೇ ಘಟನೆಯನ್ನು ಅವಾಮಿ ಲೀಗ್‌ನ ಪ್ರಸ್ತುತ ಜಿಲ್ಲಾ ಅಧ್ಯಕ್ಷ ಮತ್ತು ಸತ್ಖಿರಾಗಾಗಿ ಜಿಲಾ ಪರಿಷತ್‌ನ ಅಧ್ಯಕ್ಷರಾದ ನಜ್ರುಲ್ ಇಸ್ಲಾಂ ಅವರನ್ನು ಉಲ್ಲೇಖಿಸಿ ವರದಿ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೊ ಬಗ್ಗೆ ತನಗೆ ತಿಳಿದಿದೆ ಎಂದು ನಜ್ರುಲ್ ಇಸ್ಲಾಂ ಹೇಳಿದ್ದು, ವಿಡಿಯೋ ಸಾಕಷ್ಟು ಹಳೆಯದು ಎಂದು ತಿಳಿಸಿದ್ದಾರೆ.

ವರದಿಗಳ ಪ್ರಕಾರ ಮಹಿಳೆಯನ್ನು ಸತ್ಖಿರಾ ಪಟ್ಟಣದ ಮಜಿತ್‌ಪುರ ಪ್ರದೇಶದ ಬಾಬುಲ್ ಅವರ ಪತ್ನಿ ಮಾರ್ಗಿನಾ ಬೇಗಂ ಎಂದು ಗುರುತಿಸಲಾಗಿದೆ. ಆಕೆಯ ತಲೆಗೆ ಹಬೀಬುರ್ ರೆಹಮಾನ್ (ಬಿಟು) ಮೂರು ಬಾರಿ ಹೊಡೆದು ಆಮೇಲೆ ಸೀರೆ ನೀಡುತ್ತಿರುವುದು ವಿಡಿಯೊದಲ್ಲಿದೆ. ವಿಡಿಯೊಗೆ ಸಂಬಂಧಿಸಿದಂತೆ ರೆಹಮಾನ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ ಎಂದು ಬೂಮ್ ವರದಿ ಮಾಡಿದೆ.

ಅದೇ ವೈರಲ್ ವಿಡಿಯೊವನ್ನು ಮಾರ್ಚ್ 31, 2023 ರಲ್ಲಿ ಢಾಕಾ ಟೈಮ್ಸ್ ವರದಿ ಮಾಡಿದೆ. ಮಾರ್ಚ್ 31 ರಂದು ಸ್ಥಳೀಯ ಔಟ್‌ಲೆಟ್, ಸತ್ಖಿರಾ ಟ್ರಿಬ್ಯೂನ್‌ಗೆ ಮಾರ್ಜಿನಾ ಬೇಗಂ ನೀಡಿದ ಪ್ರತಿಕ್ರಿಯೆ ಪ್ರಕಾರ, ಘಟನೆ ಹಳೆಯದು. ಹಬೀಬುರ್ ರೆಹಮಾನ್ ಜನರೊಂದಿಗೆ ತುಂಬಾ ಅಸಭ್ಯವಾಗಿ ವರ್ತಿಸುತ್ತಾನೆ, ಆತ ಸೀರೆ ಹಂಚುವಾಗ, ನಾನು ಕೈಚಾಚಿದೆ. ಆತ ನನಗೆ ಮೂರು ಬಾರಿ ಹೊಡೆದ. ನನಗೆ ಪ್ರಜ್ಞೆ ತಪ್ಪುವ ಅನುಭವ ಆದ ಕಾರಣಕ್ಕಾಗಿ ನಾನು ಹೋಗಿ ಕುಳಿತುಕೊಂಡೆ. ನಂತರ ಅವನು ನನಗೆ ಸೀರೆ ಕೊಟ್ಟ ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋ ಕರ್ನಾಟಕದ BJP ಮುಖಂಡರು ಸೀರೆ ಹಂಚುವಾಗ ಹಿರಿಯ ಮಹಿಳೆಯೊಬ್ಬರಿಗೆ ಹಲ್ಲೆ ನಡೆಸಿದ್ದಾರೆ ಎಂದು ಸಂಬಂಧವಿಲ್ಲದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಾಸ್ತವವಾಗಿ ಆ ವಿಡಿಯೋ ಬಾಂಗ್ಲಾದೇಶದ್ದು ಎಂದು ಬೂಮ್ ವರದಿ ಮಾಡಿದೆ.

ಕರ್ನಾಟಕದಲ್ಲೂ ರಾಜಕೀಯ ಪಕ್ಷಗಳು ಈ ಬಾರಿಯ ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ಹಲವು ರೀತಿಯ ಉಡುಗೊರೆಗಳನ್ನು ನೀಡುತ್ತ ಆಮಿಷಗಳನ್ನು ಒಡ್ಡುತ್ತಿರುವ ವರದಿಯಾಗಿದೆ. ಆದರೆ ವೈರಲ್ ವಿಡಿಯೋಗೂ ಕರ್ನಾಟಕಕ್ಕೂ ಸಂಬಂಧವಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ : ಬೂಮ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ವಿಶ್ವದ 7 ಅದ್ಭುತಗಳಲ್ಲಿ ಒಂದಾದ ಪಿರಮಿಡ್ ಅಡಿಯಲ್ಲಿ ಹಿಂದೂ ದೇವಾಲಯ ಪತ್ತೆಯಾಗಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights