ಫ್ಯಾಕ್ಟ್‌ಚೆಕ್ : ಐಸಿಸ್ ಉಗ್ರರಿಂದ ಅಪಹರಿಸಲ್ಪಟ್ಟ ಹಿಂದೂ ಹೆಣ್ಣು ಮಕ್ಕಳನ್ನು ಮಹಿಳಾ ಸೈನಿಕರು ರಕ್ಷಿಸಿದ್ದು ನಿಜವೇ?

ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು,  ಫೆಸ್‌ಬುಕ್, ಟ್ವಿಟರ್ ಮತ್ತು ವಾಟ್ಸಾಪ್‌ಗಳಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳುತ್ತಾ, ಸುಳ್ಳು ಎಂದು ವಾದ ಮಾಡುವವರಿಗೆ ನಿಜವಾದ ಕೇರಳ ಸ್ಟೋರಿ ಇಲ್ಲಿದೆ ನೊಡಿ. ISIS ಭಯೋತ್ಪಾದಕರು ಹೆಣ್ಣು ಮಕ್ಕಳನ್ನು ಅಪಹರಿಸಿ ನಿಗೂಢವಾದ ಸ್ಥಳವೊಂದ ಟೆಂಟಿನಲ್ಲಿ ಕಾಲಿಗೆ ಸರಪಳಿ ಹಾಕಿ ಬಂಧಿಸಿಟ್ಟಿದ್ದರು, ಈ ಹೆಣ್ಣು ಮಕ್ಕಳನ್ನು ಸೈನ್ಯ ರಕ್ಷಿಸಿದೆ ಎಂಬ ಹೇಳಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

‘ನಿಜವಾದ ಕೇರಳ ಸ್ಟೋರಿ. ಹೆಣ್ಣು ಮಕ್ಕಳನ್ನು ಐಎಸ್‌ಐಎಸ್‌ ಭಯೋತ್ಪಾದಕರು ತಮ್ಮ ಟೆಂಟಿನಲ್ಲಿ ಕಾಲಿಗೆ ಸರಪಳಿ ಬಿಗಿದು ಕಟ್ಟಿದ್ದಾರೆ. ಈ ಹೆಣ್ಣು ಮಕ್ಕಳು ಜೀವಂತ ಹೆಣವಾಗಿದ್ದಾರೆ. ಪೋಷಕರೇ ಹೆಣ್ಣು ಮಕ್ಕಳನ್ನು ಜೋಪಾನವಾಗಿ ಕಾಪಾಡಿ. ಇಂತಹ ಸತ್ಯವನ್ನು ನಮ್ಮ ಹಿಂದೂಗಳೇ ಅರ್ಥ ಮಾಡುಕೊಳ್ಳುತ್ತಿಲ್ಲ ಏಕೆ? ಏನಾಗಿದೆ ನಮ್ಮ ಹಿಂದೂಗಳಿಗೆ? ಇದೇನು ಹೊಸದಲ್ಲ. ಇದೇನು ಮೊದಲಲ್ಲ ಇದೇನು ಮುಗಿಯುವುದಿಲ್ಲ. ನಮ್ಮ ಹಿಂದೂ ಹೆಣ್ಮಕ್ಕಳ ರೋದನೆ ಕೇಳುವವರೇ ಇಲ್ಲ’ ಎಂಬ ವಿವರ ಇರುವ ಸಂದೇಶ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದೆ. ಇದೇ ಹೇಳಿಕೆಯೊಂದಿಗೆ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ಸಂದೇಶದ ಜತೆಗೆ ಒಂದು ವಿಡಿಯೊವನ್ನೂ ಹಂಚಿಕೊಳ್ಳಲಾಗಿದೆ. ಬಾಂಗ್ಲಾದೇಶದಲ್ಲಿದ್ದ ಐಎಸ್‌ ಉಗ್ರ ಸಂಘಟನೆಯ ಟೆಂಟ್‌ನಿಂದ ಭಾರತದ 38 ಹಿಂದೂ ಹುಡುಗಿಯರನ್ನು ಸೇನೆಯು ರಕ್ಷಿಸಿದೆ ಎಂಬ ಮಾಹಿತಿಯನ್ನು ವಿಡಿಯೊ ಜತೆಗೆ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ಗಳಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ,  2020ರ ಕೋವಿಡ್‌ ಸಂದರ್ಭದಲ್ಲಿ ಟರ್ಕಿ ಗಡಿಯಲ್ಲಿದ್ದ ಐಸಿಸ್ ಉಗ್ರರ ಶಿಬಿರದ ಮೇಲೆ ವೈಪಿಜೆ ಮಹಿಳಾ ಸೇನೆಯ ತುಕಡಿಯು ದಾಳಿ ನಡೆಸಿತ್ತು. ಆ ಶಿಬಿರದಲ್ಲಿ ಬಂಧನದಲ್ಲಿದ್ದ ಬಾಲಕಿಯರನ್ನು ಮಹಿಳಾ ಸೈನಿಕರು ರಕ್ಷಿಸಿದ್ದರು ಎಂದು ಪ್ರಜಾವಾಣಿ ಫ್ಯಾಕ್ಟ್‌ಚೆಕ್ ವರದಿ ಮಾಡಿದೆ.

‘ವೈಪಿಜೆ ನೆವಾಂಡಾ’ ಎಂಬ ಯುಟ್ಯೂಬ್‌ ಚಾನೆಲ್‌ ಮತ್ತು ನೆವಾಂಡಾ ಮೀಡಿಯಾ ಸೆಂಟರ್‌ ಎಂಬ ಟ್ವಿಟರ್‌ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೊಗೂ ಭಾರತೀಯರಿಗೂ ಯಾವುದೇ ಸಂಬಂಧವಿಲ್ಲ. ವೈಪಿಜೆ ನೆವಾಂಡಾ ಎಂಬುದು ಸಿರಿಯಾದ ಖುರ್ದ್‌ ಜನಾಂಗದ ಮಹಿಳಾ ಸೇನೆಯ ಹೆಸರು. ಐಸಿಸ್ ಉಗ್ರರ ವಿರುದ್ಧ ಹೋರಾಡಲು ಖುರ್ದ್‌ ಮಹಿಳೆಯರೇ ಕಟ್ಟಿದ ಸೇನೆ ಇದು.

ಒಟ್ಟರೆಯಾಗಿ ಹೇಳುವುದಾದರೆ, ಸಾನಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೊಗೂ, ಭಾರತಕ್ಕೂ ಸಂಬಂಧವೇ ಇಲ್ಲ. ಭಾರತದ ಹಿಂದೂ ಯುವತಿಯರಿಗೂ ಸಂಬಂಧವೇ ಇಲ್ಲದ ವಿಡಿಯೊವನ್ನು ಭಾರತದ್ದೆಂದು ತಿರುಚಿ ಹಂಚಿಕೊಳ್ಳಾಗಿದೆ. ಜತೆಗೆ ಸಿರಿಯಾ–ಟರ್ಕಿಯಲ್ಲಿ ನಡೆದ ಕಾರ್ಯಾಚರಣೆಯ ವಿಡಿಯೊವನ್ನು ಬಾಂಗ್ಲಾದೇಶದಲ್ಲಿ ನಡೆದ ಕಾರ್ಯಾಚರಣೆ ಎಂದು ತಪ್ಪು ಮಾಹಿತಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಹಿಂದೂಗಳೇ ಎಚ್ಚರ! ಮುಸ್ಲಿಮರು ತಯಾರಿಸುವ ಬಿರಿಯಾನಿಯಲ್ಲಿ ಇದೆಯಂತೆ ಸಂತಾನ ಶಕ್ತಿ ಹರಣ ಮಾತ್ರೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights