ಫ್ಯಾಕ್ಟ್‌ಚೆಕ್ : ಹಣೆ ಮೇಲೆ ಗಂಡನ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದು ನಿಜವೇ? ವಾಸ್ತವ ಇಲ್ಲಿದೆ

ಪ್ರೀತಿಯನ್ನು ಹೇಗೆಲ್ಲ ವ್ಯಕ್ತಪಡಿಸಬಹುದು ಎಂದು ಊಹಿಸಲು ಸಾಧ್ಯವಿಲ್ಲ,  ಕೆಲವರು ತಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆಗಳನ್ನು ನೀಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರೆ ಇನ್ನು ಕೆಲವರು ತಮ್ಮ ಪ್ರೀತಿ ಪಾತ್ರರ ಹೆಸರುಗಳನ್ನು ಹಚ್ಚೆ ಹಾಕಿಸಿಕೊಳ್ಳುವ ಮೂಲಕ ವ್ಯಕ್ತಪಡಿಸುತ್ತಾರೆ.

ಹಚ್ಚೆಗಳನ್ನು ಕೈ, ಕುತ್ತಿಗೆ, ಎದೆ, ತೋಳು ಸೇರಿ ದೇಹದ ಕೆಲ ಭಾಗಗಳಲ್ಲಿ ಹಾಕಿಸಿಕೊಳ್ಳುವುದನ್ನು ನೋಡಿದ್ದೇವೆ. ಆದರೆ ಇಲ್ಲಿ ಮಹಿಳೆಯೊಬ್ಬರು ತಮ್ಮ ಗಂಡನ ಹೆಸರನ್ನು ಹಣೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದು  ವಿಡಿಯೋ True Love ಎಂಬ ಹೇಳಿಕೆಯೊಂದಿಗೆ ಸಖತ್ ವೈರಲ್ ಆಗಿದೆ. ಬೆಂಗಳೂರಿನ ಕಿಂಗ್‌ ಮೇಕರ್‌ ಟ್ಯಾಟೂ ಸ್ಟುಡಿಯೊ ಮಹಿಳೆಯ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದೆ.

ಕನ್ನಡದ ಹಲವು ಮುಖ್ಯ ವಾಹಿನಿ ಸೇರಿದಂತೆ, ಸಾಮಾಜಿಕ ಮಾಧ್ಯಮಗಳು ಈ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ತರಾವರಿ ಶೀರ್ಷಿಕೆಯೊಂದಿಗೆ ವರದ ಮಾಡಿವೆ.

ಈ ಮಹಿಳೆ ಬೆಂಗಳೂರಿನಲ್ಲಿ ನೆಲೆಸಿದ್ದು, ಈಕೆಗೆ ಗಂಡನ ಮೇಲೆ ಅಪಾರ ಪ್ರೀತಿ. ಈಕೆಯ ಗಂಡನ ಹೆಸರು ಸತೀಶ್. ಈಕೆ ಗಂಡನ ಹೆಸರನ್ನು ಹಣೆ ಮೇಲೆ ಹಚ್ಚೆ ಹಾಕಿಸಿಕೊಂಡು ಗಮನ ಸೆಳೆದಿದ್ದಾರೆ. ಇದರಿಂದ ಖುಷಿಯಾಗುತ್ತಿದೆ ಎಂದು ಆಕೆ ಹೇಳಿಕೊಂಡಿದ್ದಾರೆ ಎಂದು ಸುದ್ದಿ ಬಿತ್ತರವಾಗಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದಂತೆ. ಈ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಆದರೆ ಕೆಲವರು ಈ ವೈರಲ್ ವಿಡಿಯೋ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ಏನ್‌ಸುದ್ದಿ.ಕಾಂ ಅನ್ನು ವಿನಂತಿಸಿದ್ದಾರೆ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಪರಿಶೀಲಿಸಲು king maker tattoo studio ದ ಇನ್‌ಸ್ಟಾಗ್ರಾಮ್‌ಅನ್ನು ಪರಿಶೀಲಿಸಿದಾಗ, ಮಾರ್ಚ್ 18, 2023 ರಂದು ಬೆಂಗಳೂರು ಮೂಲದ ಟ್ಯಾಟೂ ಸ್ಟುಡಿಯೋ ನಡೆಸುತ್ತಿರುವ ಖಾತೆಯಿಂದ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ. ಅಂದರೆ 2023 ಮೇ 18ರಂದು ಮಹಿಳೆ ತನ್ನ ಹಣೆಯ ಮೇಲೆ ಗಂಡನ ಹೆಸರನ್ನು ಹಚ್ಚೆ ಹಾಕಿಸಿಕೊಂಡಿರುವುದು ಕಂಡುಬಂದಿದೆ.

ಆದರೆ ಕೆಲವರು ಇದರ ವಿರುದ್ಧ ಕಮೆಂಟ್  ಮಾಡಿದ್ದು, “ಇದು ತುಂಬಾ ಅತಿಯಾಯಿತು.. ನಿಮ್ಮ ಸಂಗಾತಿಯನ್ನು ನೀವು ಎಷ್ಟು ಅರ್ಥಮಾಡಿಕೊಂಡಿದ್ದೀರಿ ಎಂದು ತೋರಿಸಲು ಟ್ಯಾಟೂ ಹಾಕುವುದು ಸರಿಯಲ್ಲ. ಪ್ರೀತಿ ಜೊತೆಗೆ ಇದು ಆಶ್ಚರ್ಯವೇನಿಲ್ಲ.. ಆ ದಿನಗಳಲ್ಲಿ ನಮ್ಮ ಅಜ್ಜ ಅಜ್ಜಿಯರು ತಮ್ಮ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ” ಎಂದು ಬರೆದಿದ್ದಾರೆ.

ಟ್ಯಾಟೂ ಹಾಕಿಸಿಕೊಂಡ ಮಹಿಳೆಯು ಹೊರಗೆ ಹೇಗೆ ತಿರುಗಾಡುತ್ತಾರೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, “ಇದು ದಡ್ಡತನದ ಪರಮಾವಧಿ. ನಿಜವಾದ ಪ್ರೀತಿಯನ್ನೂ ಯಾರೂ ತೋರ್ಪಡಿಸುವುದಿಲ್ಲ ಹಾಗೂ ಪ್ರೂವ್‌ ಮಾಡುವ ಅಗತ್ಯವೇ ಇಲ್ಲ” ಎಂದಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿ ಪ್ರತಿಕ್ರಿಯಿಸಿದ್ದಾರೆ.

ಇದು ಟ್ರೂ ಲವ್ವು ಅಲ್ಲ, ನಿಜವಾದ ಟ್ಯಾಟೋನೂ ಅಲ್ಲ

ಆದರೆ ನಂತರ ಇದೇ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಹಚ್ಚೆ ಹಾಕಿಸಿಕೊಂಡ ಮಹಿಳೆ ಕಾಣಿಸಿಕೊಂಡಿದ್ದು, ಆಕೆಯ ಹಣೆಯಲ್ಲಿ ಯಾವುದೇ ರೀತಿಯ ಹಚ್ಚೆ ಇಲ್ಲದಿರುವುದು ಮೇ 21ರಂದು ಅಪ್‌ಲೋಡ್‌ ಮಾಡಿದ ವಿಡಿಯೋದಲ್ಲಿ ಕಾಣಬಹುದು.

ಇನ್‌ಸ್ಟಾಗ್ರಾಮ್ ಪ್ರೊಫೈಲ್‌ ಮೂಲಕ ವೈರಲ್ ಆದ ವೀಡಿಯೊಗೆ queen maker of tattoo ಎಂಬ ಮತ್ತೊಂದು ಖಾತೆಯನ್ನು ಟ್ಯಾಗ್ ಮಾಡಿರುವುದನ್ನು ಕಾಣಬಹುದು. ಅಲ್ಲಿ ಡಿಸ್‌ಪ್ಲೇ ಆಗಿರುವ ಮಹಿಳೆಯ ಚಿತ್ರ ಮತ್ತು ವೈರಲ್ ವೀಡಿಯೊದಲ್ಲಿರುವ ಚಿತ್ರ ಒಬ್ಬರದ್ದೇ ಎಂದು ಕಂಡುಬಂದಿದೆ.

ಮೇ 18ರ ನಂತರ ಅಪ್‌ಲೋಡ್ ಮಾಡಿದ ಯಾವ ವಿಡಿಯೋದಲ್ಲೂ ಅಥವಾ ಫೋಟೊದಲ್ಲೂ ಮಹಿಳೆಯ ಹಣೆಯ ಮೇಲೆ Sathish ಎಂಬ ಹಚ್ಚೆ ಕಂಡುಬಂದಿಲ್ಲ.

ಇದರ ಸತ್ಯಾಸತ್ಯತೆಯನ್ನು ಬೂಮ್‌ ಫ್ಯಾಕ್ಟ್‌ಚೆಕ್ ಮಾಡಲು ಇನ್‌ಸ್ಟಾದಲ್ಲಿ ನಮೂದಿಸಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾತನಾಡಿದ್ದು ಮಹಿಳೆಯ ಹೆಸರು ರಕ್ಷಾ ಎಂದು ತಿಳಿದುಬಂದಿದೆ. ಆಕೆ ಆ ವಿಡಿಯೋವನ್ನು ಒಂದು ಪ್ರಾತ್ಯಕ್ಷಿಕೆಗಾಗಿ ಪ್ರೋಮೋ ಉದ್ದೇಶದಿಂದ ಮಾಡಲಾಗಿದೆ. ಅದು ನಿಜವಾದ ಹಚ್ಚೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಬೂಮ್ ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸೋಶಿಯಲ್ ಮೀಡಿಯಾ ಮೂಲಕ ದಿನ ಬೆಳಗಾಗುವುದರೊಳಗಾಗಿ ಫೇಮಸ್ ಆಗಬೇಕೆನ್ನುವ ಉದ್ದೇಶದಿಂದ ಹೀಗೆ ಹಣೆ ಮೇಲೆ ಹಚ್ಚೆ ಹಾಕಿಸಿಕೊಂಡಂತೆ ರೀಲ್ಸ್‌ ಮಾಡಿದ ವಿಡಿಯೋ ವೈರಲ್ ಆಗಿದೆ. ಆದರೆ ವಾಸ್ತವವಾಗಿ ಮಹಿಳೆ ಹಣೆ ಮೇಲೆ ತನ್ನ ಗಂಡನ ಹೆಸರನ್ನು ಹಚ್ಚೆ ಹಾಕಿಸಿಕೊಂಡು ನಿಜ ಪ್ರೇಮ ಮೆರದಿದ್ದಾರೆ ಎಂಬುದು ಸುಳ್ಳು. ಆದರೆ ಈ ವಿಡಿಯೋವನ್ನು ಪರಿಶೀಲಿಸದೇ ಹಲವು ಡಿಜಿಟಲ್ ಸುದ್ದಿ ತಾಣಗಳು ನಿಜ ಸಂಗತಿ ಎಂಬಂತೆ ವರದಿ ಮಾಡಿವೆ.

ಕೃಪೆ: ಬೂಮ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಐಸಿಸ್ ಉಗ್ರರಿಂದ ಅಪಹರಿಸಲ್ಪಟ್ಟ ಹಿಂದೂ ಹೆಣ್ಣು ಮಕ್ಕಳನ್ನು ಮಹಿಳಾ ಸೈನಿಕರು ರಕ್ಷಿಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights