ಫ್ಯಾಕ್ಟ್‌ಚೆಕ್ : ಹಿಂದೂಗಳೇ ಎಚ್ಚರ! ಮುಸ್ಲಿಮರು ತಯಾರಿಸುವ ಬಿರಿಯಾನಿಯಲ್ಲಿ ಇದೆಯಂತೆ ಸಂತಾನ ಶಕ್ತಿ ಹರಣ ಮಾತ್ರೆ?

ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದು, ಕೊಯಮತ್ತೂರಿನಲ್ಲಿ ಸಂತಾನ ಶಕ್ತಿ ಹರಣ ಮಾತ್ರೆಯನ್ನು ಬಿರಿಯಾನಿಗೆ ಬೆರೆಸಿ ಹಿಂದೂಗಳಿಗೆ ಮಾರಲಾಗುತ್ತದೆ. ಮುಸ್ಲಿಮರಿಗೆ ಮಾತ್ರೆ ರಹಿತ ಬಿರಿಯಾನಿ ಪೂರೈಕೆ. ಮಾರಾಟ ಮಾಡುತ್ತಿದ್ದ ಮುಸ್ಲಿಂ ಹೋಟೆಲ್ ಮಾಲಿಕನನ್ನು ಬಂಧಿಸಲಾಗಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

‘ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿರುವ ರಸ್ತೆಬದಿಯ ಬಿರಿಯಾನಿ ಅಂಗಡಿಗಳಲ್ಲಿ ದೊರೆಯುವ ಬಿರಿಯಾನಿಗಳಲ್ಲಿ ಸಂತಾನ ಶಕ್ತಿ ಹರಣ ಔಷಧವನ್ನು ಬೆರೆಸಲಾಗುತ್ತದೆ’ ಎಂಬುದಾಗಿ ಟ್ವಿಟರ್‌ನಲ್ಲಿ ಚರ್ಚೆಯಾಗುತ್ತಿದೆ. ‘ಹಿಂದೂಗಳು ಅದರಲ್ಲೂ ಮದುವೆಯಾಗದ ಯುವಕರನ್ನು ಗುರಿಯಾಗಿಸಿ ಈ ಕೃತ್ಯ ಎಸಗಲಾಗುತ್ತಿದೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.

ತಮಿಳುನಾಡಿನ ಕೊಯಮತ್ತೂರಿನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂಗಳಿಗೆ ಬಿರಿಯಾನಿ ಮಾರಾಟ ಮಾಡುತ್ತಿದ್ದಾನೆ. ಈ ಬಿರಿಯಾನಿಗೆ ಪುರುಷತ್ವ ಹರಣ ಔಷಧವನ್ನು ಸೇರಿಸಿದ್ದಾನೆ. ಈ ಬಿರಿಯಾನಿ ತಿನ್ನುವ ಗಂಡಸು ಅಥವಾ ಹೆಂಗಸರಿಗೆ ಮಕ್ಕಳಾಗೋದಿಲ್ಲ. ಹೀಗಾಗಿ, ಮುಸ್ಲಿಮರಿಂದ ಯಾವುದೇ ವಸ್ತು ಖರೀದಿಸಬೇಡಿ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.

ಕೊಯಮತ್ತೂರಿನ ಮುಸ್ಲಿಂ ವ್ಯಕ್ತಿಯೊಬ್ಬ ಮಾಷಾ ಅಲ್ಲಾ ಎಂಬ ಬಿರಿಯಾನಿ ಅಂಗಡಿ ಇಟ್ಟುಕೊಂಡಿದ್ದಾನೆ. ಈತನ ಬಳಿ 2 ಬಿರಿಯಾನಿ ಪಾತ್ರೆಗಳಿವೆ. ಒಂದು ಪಾತ್ರೆಯಲ್ಲಿ ಇರುವ ಬಿರಿಯಾನಿಯನ್ನು ಕೇವಲ ಮುಸ್ಲಿಮರಿಗೆ ಮಾತ್ರ ನೀಡುತ್ತಾನೆ. ಮತ್ತೊಂದು ಪಾತ್ರೆಯಲ್ಲಿ ಇರುವ ಬಿರಿಯಾನಿ ಹಿಂದೂಗಳಿಗೆ ಸೀಮಿತವಾಗಿದೆ. ಹಿಂದೂಗಳಿಗೆ ನೀಡುವ ಬಿರಿಯಾನಿ ಪಾತ್ರೆಯಲ್ಲಿ ಬಂಜೆತನಕ್ಕೆ ಕಾರಣವಾಗುವ, ಪುರುಷತ್ವ ಹರಣ ಮಾತ್ರೆಗಳನ್ನು ಬೆರೆಸಲಾಗಿದೆ. ಈ ಬಿರಿಯಾನಿ ತಿನ್ನುವ ಪುರುಷರು ಹಾಗೂ ಮಹಿಳೆಯರಿಗೆ ಮಕ್ಕಳಾಗೋದಿಲ್ಲ. ಅವರು ಬಂಜೆತನಕ್ಕೆ ಒಳಗಾಗುತ್ತಾರೆ. ಈ ಮೂಲಕ ಹಿಂದೂಗಳ ಜನಸಂಖ್ಯೆ ಕಡಿಮೆ ಮಾಡಲು ಕುತಂತ್ರ ರೂಪಿಸಿದ್ದಾರೆ.

ಇದು ಕೇವಲ ಟ್ರೇಲರ್ ಅಷ್ಟೇ. ದೊಡ್ಡ ಮಟ್ಟದ ಚಿತ್ರಣ ಬೇರೆಯೇ ಇದೆ. ಜಿಹಾದಿಗಳು ನಮ್ಮ ಸುತ್ತಲೂ ಷಡ್ಯಂತ್ರ ಹೆಣೆಯುತ್ತಿದ್ದಾರೆ. ನಮಗೆ ಜಿಹಾದಿಗಳ ತಂತ್ರಗಾರಿಕೆಯೇ ಗೊತ್ತಾಗುತ್ತಿಲ್ಲ. ಹಿಂದೂಗಳನ್ನು ನಿರ್ನಾಮ ಮಾಡುವ ಷಡ್ಯಂತ್ರವಿದು. ಆದ್ರೆ, ಹಿಂದೂಗಳು ಇದರ ಅರಿವಿಲ್ಲದೆ ನಿದ್ರಿಸುತ್ತಿದ್ದಾರೆ. ಹಿಂದೂಗಳನ್ನು ಎಚ್ಚರಿಸಲು ಹೊರಡುವವರನ್ನು ಮಟ್ಟ ಹಾಕಲಾಗುತ್ತಿದೆ. ಈಗಲೂ ಸಮಯವಿದೆ. ಮುಸ್ಲಿಮರಿಂದ ವಸ್ತುಗಳನ್ನು ಖರೀದಿಸಬೇಡಿ, ಬಹಿಷ್ಕಾರ ಹಾಕಿ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ಸುದ್ದಿ ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಈ ಪೋಸ್ಟ್‌ಅನ್ನು ಪರಿಶೀಲಿಸುವಂತೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವೈರಲ್ ಪೋಸ್ಟ್‌ಅನ್ನು ಪರಿಶೀಲಿಸುವಂತೆ ಏನ್‌ಸುದ್ದಿ.ಕಾಂಗೆ ಸಂದೇಶಗಳ ಮೂಲಕ ವಿನಂತಿಸಿದ್ದಾರೆ. ಹಾಗಾಗಿ ಈ ಪೋಸ್ಟ್‌ನೊಂದಿಗೆ ಇರುವ ಫೋಟೊಗಳನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಮೂರು ಭಿನ್ನ ಭಿನ್ನ ಫೋಟೊಗಳನ್ನು ಕೊಲಾಜ್ ಮಾಡಿ ಪೇಕ್‌ ಸುದ್ದಿಯನ್ನು ವೈರಲ್ ಮಾಡಲಾಗಿದೆ.

ಫೋಟೋ-1

ವೈರಲ್ ಚಿತ್ರದಲ್ಲಿರುವ ಈ ಫೋಟೊ ಯೂಟ್ಯೂಬ್‌ ವಿಡಿಯೋ ಒಂದರ ಫೋಟೋ ಎಂದು ತಿಳಿದುಬಂದಿದೆ. ಸ್ಟ್ರೀಟ್‌ ಫುಡ್ ಅಫಿಷಿಯಲ್ ಎಂಬ ಯೂಟ್ಯೂಬ್‌ ಚಾನಲ್‌ನಲ್ಲಿ ಮುಸ್ಲಿಂ ರೆಸಿಪಿ ಅಡುಗೆ ಎಂಬ ಹೆಡ್‌ಲೈನ್‌ ಹಾಕಿ ಜೂನ್ 30, 2016ರಲ್ಲಿ ಒಂದು ವಿಡಿಯೋ ಪೋಸ್ಟ್‌ ಮಾಡಲಾಗಿತ್ತು.

fact check

ಮುಸ್ಲಿಮರ ಖಾದ್ಯ ತಯಾರಿಕೆಯನ್ನು ತೋರಿಸುವ, ರುಚಿಕಟ್ಟಾದ ಬಿರಿಯಾನಿ ತಯಾರಿಸುವುದು ಹೇಗೆ ಎಂದು ವಿವರಿಸುವ ವಿಡಿಯೋ ಇದು. ಇದರ ಒಂದು ಫೋಟೋವನ್ನು ದುರುದ್ದೇಶಕ್ಕೆ ಬಳಸಿಕೊಳ್ಳಲಾಗಿದೆ.

ಫೋಟೊ-2

ವೈರಲ್ ಆಗಿರಿವ ಪೋಸ್ಟ್‌ನಲ್ಲಿರುವ ಎರಡನೇ ಫೋಟೊವನ್ನು ಪರಿಶೀಲಿಸಿದಾಗ, ಈ ಫೋಟೋಗಳು ಉತ್ತರ ಪ್ರದೇಶದ ಬಿಜ್ನೂರ್‌ಗೆ ಸೇರಿದವು ಎಂದು ತಿಳಿದುಬಂದಿದೆ. ಪೊಲೀಸರು ಮದರಸಾ ಒಂದರ ಮೇಲೆ ದಾಳಿ ನಡೆಸಿದ ವೇಳೆ ತೆಗೆದ ಫೋಟೋಗಳಿವು. ಅಕ್ರಮ ಶಸ್ತ್ರಾಸ್ತ್ರ ಮಾರಾಟ ದಂಧೆಯನ್ನು ಬೇಧಿಸಿದ್ದ ಪೊಲೀಸರು ಈ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಈ ಸಂಬಂಧ ಬಿಜ್ನೂರ್‌ ಪೊಲೀಸರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಡಿರುವ ಪೋಸ್ಟ್‌ ಕೂಡಾ ಲಭ್ಯವಾಗಿದೆ.

ಫೋಟೊ-3

fact check

ಮಾತ್ರೆಗಳಿರುವ ಕೊನೆಯ ಫೋಟೋದ ಸತ್ಯಾಂಶವೆಂದರೆ, ಶ್ರೀಲಂಕಾದ ಕೊಲಂಬೋದಲ್ಲಿ ವಶಕ್ಕೆ ಪಡೆಯಲಾದ ಮಾದಕ ವಸ್ತುಗಳ ಫೋಟೋ ಎಂದು ತಿಳಿದುಬಂದಿದೆ. ಈ ಫೋಟೋಗಳನ್ನು ಕಳೆದ ವರ್ಷ ತೆಗೆಯಲಾಗಿತ್ತು. ಅಂದರೆ ಈ ಎಲ್ಲ ಪೋಟೋವನ್ನು ಪರಿಶೀಲಿಸಿ ನೋಡಿದಾಗ ಇದೆಲ್ಲವೂ ಸುಳ್ಳುಸುದ್ದಿ ಎಂದು ಆಲ್ಟ್‌ನ್ಯೂಸ್ ವರದಿ ಮಾಡಿದೆ.

ಇತ್ತೀಚೆಗೆ ನಡೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಮುಸ್ಲಿಮರನ್ನು ಗುರುಯಾಗಿಸಿಕೊಂಡು ಕೋಮುದ್ವೇಷ ಬಿತ್ತುವಂತಹ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಿಂದೂ ಮುಸ್ಲಿಂ ಸಾಮರಸ್ಯವನ್ನು ಹಾಳು ಮಾಡಲು ಹೊಂಚುಹಾಕುತ್ತಿರುವವರ ಬಗ್ಗೆ ಮತ್ತು ಅಂತಹ ಪೋಸ್ಟ್‌ಗಳಬಗ್ಗೆ ಎಚ್ಚರವಿರಲಿ. ಈ ಹಿಂದೆಯೂ ಇಂತಹ ಸುಳ್ಳು ಸುದ್ದಿಗಳನ್ನು ಏನ್‌ಸುದ್ದಿ.ಕಾಂ ಫ್ಯಾಕ್ಟ್‌ಚೆಕೆ ಮೂಲಕ ಸತ್ಯವನ್ನು ಬಿತ್ತರಿಸಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, ಮುಸ್ಲಿಮರು ತಯಾರಿಸುವ ಬಿರಿಯಾನಿ ಬೇರೆ ಇತರೆ ಬಿರಿಯಾನಿಗಿಂತಲೂ ಹೆಚ್ಚು ರುಚಿಯಾಗಿ ಇರುತ್ತದೆ. ಇದನ್ನು ಸಹಿಸದ ಕೆಲವರು ಅವರ ವ್ಯಾಪಾರಕ್ಕೆ ತೊಂದರೆ ನೀಡುವ ಉದ್ದೇಶದಿಂದ ಇಂತಹ ಸುಳ್ಳು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಆಲ್ಟ್‌ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಕಾಂಗ್ರೆಸ್ ಬೆಂಬಲಿಗರು ಪೊಲೀಸರಿಗೆ ಬೆದರಿಕೆ ಹಾಕಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights