ಫ್ಯಾಕ್ಟ್‌ಚೆಕ್ : ಹಲಾಲ್‌ಗಾಗಿ ಮುಸ್ಲಿಮರು ಆಹಾರದ ಮೇಲೆ ಉಗುಳುತಾರೆ, ಅವರ ಬಳಿ ವ್ಯಾಪಾರ ಮಾಡಬೇಡಿ ಎಂದು ಸುಳ್ಳು ಪೋಸ್ಟ್‌ ಹಂಚಿಕೆ

ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊವೊಂದು ವೈರಲ್ ಆಗುತ್ತಿದ್ದು, ಕುಡಿಯುವ ನೀರನ್ನು ಪೂರೈಕೆ ಮಾಡುವ ವಾಟರ್ ಪ್ಲಾಂಟ್‌ನಲ್ಲಿ 20ಲೀಟರ್ ಕ್ಯಾನ್‌ಗಳನ್ನು ಸ್ವಚ್ಛ ಮಾಡುವ ವ್ಯಕ್ತಿ ಕ್ಯಾನ್ ತೊಳೆದು ಅದರಲ್ಲಿ ಉಗುಳುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ. ಅದೇ ವಿಡಿಯೋದ ಮತ್ತೊಂದು ದೃಶ್ಯದಲ್ಲಿ ತಂದೂರಿ ರೊಟ್ಟಿ ಮಾಡುವ ಅಡುಗೆಯವ ರೊಟ್ಟಿಯ ಮೇಲೆ ಉಗುಳುವುದನ್ನು ಕಾಣಬಹುದು. ಹೀಗೆ ಆಹಾರಗಳ ಮೇಲೆ ಉಗುಳುವ ಮೂರು ನಾಲ್ಕು ಬೇರೆ ಬೇರೆ ವಿಡಿಯೋಗಳನ್ನು ಒಟ್ಟಿಗೆ ಸೇರಿಸಿ ಮುಸ್ಲಿಮರು ಆಹಾರಗಳಿಗೆ ಉಗುಳುತ್ತಿದ್ದಾರೆ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಿದ್ದಾರೆ.

ತಿನ್ನುವ ಆಹಾರ ಪದಾರ್ಥಗಳ ಮೇಲೆ ಉಗುಳುವ ಕೆಲವು ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈಗ ಉಗುಳುವುದನ್ನು ನ್ಯಾಯಾಲಯ ಎತ್ತಿಹಿಡಿದಿದೆ ಎಂದು ಪ್ರತಿಪಾದಿಸಲಾಗುತ್ತಿದೆ. ಇತ್ತೀಚೆಗೆ ಆಹಾರದಲ್ಲಿ ಉಗುಳುವುದನ್ನು ಸಮರ್ಥಿಸಲು, ಆಹಾರ ಪದಾರ್ಥದ ಹಲಾಲ್ ಪ್ರಮಾಣೀಕರಣಕ್ಕೆ ಉಗುಳನ್ನು (ಎಂಜಿಲನ್ನು) ಸೇರಿಸುವುದು ಅವಶ್ಯಕ ಎಂದು ಸಮರ್ಥಿಸಿ ನ್ಯಾಯಾಲಯದಲ್ಲಿ ಮುಸ್ಲಿಮರು ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

“ಮುಸ್ಲಿಂ ಹೋಟೆಲ್‌ಗಳಲ್ಲಿ ಆಹಾರವನ್ನು ಹಲಾಲ್ ಮಾಡಲು ಉಗುಳುವುದನ್ನು ನ್ಯಾಯಾಲಯ ಒಪ್ಪಿಕೊಂಡಿದೆ. ತಮಿಳುನಾಡಿನ ನ್ಯಾಯಾಲಯದ ಪ್ರಕರಣದಲ್ಲಿ, ಅಡುಗೆಯವರು ಉಗುಳದ ಹೊರತು ಹಲಾಲ್ ಪೂರ್ಣವಾಗುವುದಿಲ್ಲ ಎಂದು ಮುಸ್ಲಿಮರು ವಾದಿಸಿದರು. ಆದ್ದರಿಂದಲೇ ಮುಸಲ್ಮಾನರು ತಯಾರಿಸಿದ ಆಹಾರ ಉಗುಳದೆ ಅಪೂರ್ಣ. ಕೋರ್ಟ್ ಕೇಸ್ ನಲ್ಲಿ ಉಗುಳುವುದನ್ನು ಒಪ್ಪಿಕೊಂಡರು.. ಕಾಫಿರರು ಮುಸಲ್ಮಾನರಾಗುತ್ತಾರೆ. ಜನರೇ, ನೀವು ಮುಸಲ್ಮಾನರ ಅಂಗಡಿಗೆ ಅವರ ಲಾಲಾರಸ ತಿನ್ನಲು ಹೋಗುತ್ತೀರಾ?  ಎಂಬ ಪ್ರಶ್ನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಹಾಗಿದ್ದರೆ ಹಲಾಲ್ ಎಂದರೆ ತಿನ್ನುವ ಆಹಾರಕ್ಕೆ ಎಂಜಿಲನ್ನು ಉಗುಳುವುದು, ಇದನ್ನು ನ್ಯಾಯಾಲಯ ಒಪ್ಪಿಕೊಂಡಿದೆ ಎಂದು ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ವೈರಲ್ ವಿಡಿಯೋದಲ್ಲಿ ಪ್ರಸಾರವಾಗುತ್ತಿರುವ ಉಗುಳುವ ದೃಶ್ಯಾವಳಿಗಳ ಬಗ್ಗೆ ತಿಳಿದುಕೊಳ್ಳುವ ಮೊದಲು ಮುಸ್ಲಿಮರ ಪವಿತ್ರ ಆಚರಣೆಯಾದ ಹಲಾಲ್‌ಗೆ ಸಂಬಂಧಿಸಿದಂತೆ ತಮಿಳುನಾಡು ನ್ಯಾಯಾಲಯದಲ್ಲಿ ಮುಸ್ಲಿಮರು ಆಹಾರಕ್ಕೆ ಉಗುಳುವುದನ್ನು ಸಮರ್ಥಿಸಿಕೊಂಡಿದ್ದಾರೆಂದು, ಅದನ್ನ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದಾರೆ ಎಂದು ಪ್ರತಿಪಾದಿಸಲಾಗಿದೆ. ಆದರೆ ಈ ವಾದವು ತಪ್ಪಾಗಿದ್ದು ವಾಸ್ತವವೇ ಬೇರೆ ಇದೆ.

ಶಬರಿಮಲೆ ಅಯ್ಯಪ್ಪನ ಪ್ರಸಾದಕ್ಕೆ ಹಲಾಲ್ ಬೆಲ್ಲ ಬಳಕೆ ವಿವಾದ

ಶ್ರದ್ಧಾ ಭಕ್ತಿ, ನಂಬಿಕೆಯ ಕೇಂದ್ರಬಿಂದುವಾಗಿದ್ದ ಪ್ರಸಿದ್ದ ಶಬರಿಮಲೆ ದೇವಸ್ಥಾನದ ಪ್ರಸಾದ ವಿವಾದಕ್ಕೆ ಕಾರಣವಾವಾಗಿತ್ತು. ದೇವಸ್ಥಾನದ ಅರವನ ಪಾಯಸಂ ಸೇರಿ ಕೆಲ ಪ್ರಸಾದಲ್ಲಿ ಬಳಕೆ ಮಾಡಿರುವುದು ಹಲಾಲ್ ಬೆಲ್ಲ ಅನ್ನೋ ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಈ ವಿವಾದದ ಕುರಿತು ಕೇರಳ ದೇವಸ್ವಂ ಬೋರ್ಡ್ ಸ್ಪಷ್ಟನೆಯನ್ನು ನೀಡಿತ್ತು.

ಅಯ್ಯಪ್ಪ ದೇವಸ್ಥಾನದಲ್ಲಿ ನೀಡುತ್ತಿರುವ ಪ್ರಸಾದದಲ್ಲಿ ಮುಸ್ಲಿಮರ ಹಲಾಲ್ ಬೆಲ್ಲ ಬಳಕೆ ಮಾಡಿದೆ ಅನ್ನೋ ವಿವಾದ ಆಧಾರ ರಹಿತವಾಗಿದೆ. ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಶಬರಿಮಲೆ ಅಯ್ಯಪ್ಪ ಪ್ರಸಾದದಲ್ಲಿ ಯಾವುದೇ ಅಪಚಾರವಾಗಿಲ್ಲ ಎಂದು ಟ್ರಾವಂಕೂರ್ ದೇವಸ್ವಂ ಬೋರ್ಡ್ ಹೈಕೋರ್ಟ್‌ನಲ್ಲಿ(Kerala High Court) ಸ್ಪಷ್ಟನೆ ನೀಡಿತ್ತು.

ಶಬರಿಮಲೆ ಕರ್ಮ ಸಮಿತಿಯ ಪ್ರಧಾನ ಸಂಚಾಲಕ ಎಸ್‌ಜೆಆರ್ ಕುಮಾರ್ ಅಯ್ಯಪ್ಪ ಪ್ರಸಾದದಲ್ಲಿ ಹಲಾಲ್ ಬೆಲ್ಲ ಬಳಕೆ ಮಾಡುತ್ತಿರುವುದಾಗಿ ಆರೋಪಿಸಿ  ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಶಬರಿಮಲೆ ದೇವಸ್ಥಾನದಲ್ಲಿನ ಅರವಣ ಪಾಯಸಂ ಹಾಗೂ ಅಪ್ಪಂ ಪ್ರಸಾದದಲ್ಲಿ ಅಶುದ್ದ ಹಲಾಲ್ ಬೆಲ್ಲ ಬಳಕೆ ಮಾಡಲಾಗಿದೆ. ಹೀಗಾಗಿ ಅರವಣ ಪಾಯಸಂ ಹಾಗೂ ಅಪ್ಪಂ ಪ್ರಸಾದ ವಿತರಣೆಯನ್ನು ತಕ್ಷಣ ನಿಲ್ಲಸಬೇಕು. ಈ ಕುರಿತು ಕ್ರಮ ಕೈಗೊಳ್ಳಿ ಎಂದು ಕೇರಳ ದೇವಸ್ವಂ ಬೋರ್ಡ್ ಹಾಗೂ ಕೇರಳ ಆಹಾರ ಸುರಕ್ಷತಾ ಕಮಿಷನರೇಟ್‌ಗೆ ಶಬರಿಮಲೆ ಕರ್ಮ ಸಮಿತಿ ನಿರ್ದೇಶನ ನೀಡಿತ್ತು.

ಸಾಮಾಜಿಕ ಜಾಲತಾಣದಲ್ಲಿ ಈ ಹಲಾಲ್ ಪಾಯಸಂ ಹಾಗೂ ಅಶುದ್ಧತೆ ಕುರಿತು ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಅರ್ಜಿ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ದೇವಸ್ವಂ ಬೋರ್ಡ್ ಬಳಿ ಸ್ಪಷ್ಟನೆ ಕೇಳಿತ್ತು. 2020ರಲ್ಲಿ ಖರೀದಿಸಿದ್ದ ಬೆಲ್ಲದ ಚೀಲದಲ್ಲಿ ಒಂದು ಚೀಲ ಹಲಾಲ್ ಪ್ರಮಾಣೀಕರಣ ಹೊಂದಿತ್ತು. ಈ ಕುರಿತು ಕೇರಳ ದೇವಸ್ವಂ ಬೋರ್ಡ್ ವಿತರಕರನ್ನು ವಿಚಾರಿಸಿದೆ. ರಫ್ತು ಕಾರಣ ಪ್ರಮಾಣೀಕರಣ ಅಗತ್ಯವಿದೆ. ಆದರೆ ಶಬರಿಮೆಲೆಗೆ ತಯಾರಿಸಿದ ಬೆಲ್ಲ ಹಲಾಲ್ ಬೆಲ್ಲವಲ್ಲ. ರಫ್ತು ಮಾಡಲು ತಯಾರಿಸಿದ ಹಲಾಲ್ ಬೆಲ್ಲದ ಚೀಲ, ಶಬರಿಮಲೆ ಬೆಲ್ಲದ ಚೀಲದೊಂದಿಗೆ ಬೆರೆತಿದೆ ಎಂದು ವಿತರಕರು ಹೇಳಿದ್ದರು. ದೇವಸ್ಥಾನಕ್ಕೆ ಬಂದಿರುವ ಹಲಾಲ್ ಪ್ರಮಾಣೀಕೃತ ಬೆಲ್ಲದ ಚೀಲವನ್ನು ಪ್ರಸಾದಕ್ಕೆ ಬಳಕೆ ಮಾಡಿಲ್ಲ ಎಂದು ದೇವಸ್ವಂ ಬೋರ್ಡ್ ಕೇರಳ ಹೈಕೋರ್ಟ್‌ಗೆ ಹೇಳಿತ್ತು.

ಮಹಾರಾಷ್ಟ್ರದ ಕಂಪನಿಯಿಂದ ಬೆಲ್ಲ ಖರೀದಿಸಲಾಗಿದೆ. ಎಲ್ಲಿಂದ ಬೆಲ್ಲ ಖರೀದಿಸಿದರೂ ಪಂಪಾದಲ್ಲಿ ಗುಣಮಟ್ಟ ತಪಾಸಣೆ ನಡೆಸಲಾಗುತ್ತದೆ. ಗುಣಮಟ್ಟದಲ್ಲಿ ಯಾವುದೇ ಲೋಪವಿದ್ದರೂ ಬೆಲ್ಲ ಸೇರಿದಂತೆ ಯಾವುದೇ ಅಹಾರ ವಸ್ತುಗಳ ಖರೀದಿ ಮಾಡುವುದಿಲ್ಲ. 2019 ಹಾಗೂ 2020ರಲ್ಲಿ ಖರೀದಿಸಿದ ಬೆಲ್ಲಗಳು ಕೋವಿಡ್ ಕಾರಣ ಬಳಕೆ ಮಾಡಲು ಯೋಗ್ಯವಲ್ಲ ಎಂದು ಪಂಪಾ ಲ್ಯಾಬನಲ್ಲಿ ದೃಢಪಟ್ಟಿದೆ. ಹೀಗಾಗಿ ಈ ಬೆಲ್ಲವನ್ನು ಜಾನುವಾರುಗಳ ಮೇವು ತಯಾರಿಕೆ ಹರಾಜು ಮಾಡಲಾಗಿದೆ ಎಂದು ತನ್ನ ಗುಣಮಟ್ಟದ ಕುರಿತು ಸ್ಪಷ್ಟನೆಯನ್ನು ದೇವಸ್ವಂ ಬೋರ್ಡ್ ಕೇರಳ ಹೈಕೋರ್ಟ್‌ಗೆ ತಿಳಿಸಿತ್ತು ಎಂದು ಬಾರ್ ಆಂಡ್ ಬೆಂಚ್ ವರದಿ ಮಾಡಿದೆ. ಹಾಗಾಗಿ ಸಾಮಾಜಿಕ ಮಾಧ್ಯಮಗಳ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಇನು ವೈರಲ್ ಪೋಸ್ಟ್‌ನಲ್ಲಿ ಪ್ರಸಾರವಾಗುತ್ತಿರುವ ವಿಡಿಯೋಗಳಿಗೂ ಮೇಲಿನಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಕೋವಿಡ್-19 ರ ಸಂದರ್ಭದಲ್ಲಿ ಮುಸ್ಲಿಮರು ಕೊರೋನಾ ಹರಡುತ್ತಿರುವ ತಬ್ಲಿಗಿಗಳು ಎಂದು ಮುಸ್ಲಿಮರು ಹಿಂದೂಗಳ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಇಂತಹ ಹಲವಾರು ವಿಡಿಯೊಗಳನ್ನು ಹಂಚಿಕೊಳ್ಳಲಾಗಿತ್ತು ಎಂಬುದನ್ನು ಗಮನಿಸಬೇಕು.

ಮೌಲ್ವಿಯೊಬ್ಬರು ಆಹಾರಕ್ಕೆ ಊದುತ್ತಿರುವ ಈ ದೃಶ್ಯಗಳನ್ನು ತಪ್ಪು ಪ್ರತಿಪಾದನೆಯೊಂದಿಗೆ ಉಗುಳುತ್ತಿರುವುದು ಎಂದು ಹಂಚಿಕೊಳ್ಳಲಾಗಿದೆ
ಮೌಲ್ವಿಯೊಬ್ಬರು ಆಹಾರಕ್ಕೆ ಊದುತ್ತಿರುವ ಈ ದೃಶ್ಯಗಳನ್ನು ತಪ್ಪು ಪ್ರತಿಪಾದನೆಯೊಂದಿಗೆ ಉಗುಳುತ್ತಿರುವುದು ಎಂದು ಹಂಚಿಕೊಳ್ಳಲಾಗಿದೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಕೊರೋನಾ ಸಂದರ್ಭದಲ್ಲಿ ಮುಖ್ಯವಾಹಿನಿಗಳು ಒಳಗೊಂಡಂತೆ ಹಲವು ಬಲಪಂಥೀಯ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಈ ವೈರಲ್ ವಿಡಿಯೋಗಳನ್ನು ಮುಸ್ಲಿಮರು ವಿರುದ್ದ ಒಂದು ಅಭಿಯಾನವನ್ನಾಗಿ ಬಳಸಿಕೊಂಡು, ಮುಸ್ಲಿಮರು ಆಹಾರದ ಮೇಲೆ ಉಗುಳುತ್ತಿದ್ದಾರೆ ಎಂದು ಬಿಂಬಸಲಾಗಿತ್ತು.

ಕೊರೋನಾ ಸಂದರ್ಭದಲ್ಲಿ ಈ ವಿಡಿಯೋವನ್ನು ಬಳಸಿಕೊಂಡಿ ಆಹಾರಕ್ಕೆ ಉಗುಳುತ್ತಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಹಂಚಿಕೊಳ್ಳಲಾಗಿತ್ತು
ಕೊರೋನಾ ಸಂದರ್ಭದಲ್ಲಿ ಈ ವಿಡಿಯೋವನ್ನು ಬಳಸಿಕೊಂಡಿ ಆಹಾರಕ್ಕೆ ಉಗುಳುತ್ತಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಹಂಚಿಕೊಳ್ಳಲಾಗಿತ್ತು. ಇದರ ಫ್ಯಾಕ್ಟ್‌ಚೆಕ್ ಲಿಂಕ್ ಗೆ ಇಲ್ಲಿ ಕ್ಲಿಕ್ ಮಾಡಿ

ಇದೇ ರೀತಿ ಅಮೇರಿಕಾದಲ್ಲಿ ಪಿಜ್ಜಾ ಡೆಲಿವರಿ ಬಾಯ್ ಒಬ್ಬ ಆಹಾರಕ್ಕೆ ಉಗುಳಿದ ದೃಶ್ಯವನ್ನು ಭಾರತದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿತ್ತು.

ಒಟ್ಟಾರೆಯಾಗಿ ಹಳೆಯ ಮತ್ತು ಸಂಬಂಧವಿಲ್ಲದ ವಿಡಿಯೋಗಳನ್ನು ಹಂಚಿಕೊಳ್ಳುತ್ತ, ಮುಸ್ಲಿಮರು ಆಹಾರದ ಮೇಲೆ ಉಗುಳುವುದನ್ನು ಸಮರ್ಥಿಸಿಕೊಂಡು, ನ್ಯಾಯಾಲಯದಲ್ಲಿ ಅದನ್ನೆ ಒಪ್ಪಿಕೊಂಡಿದ್ದಾರೆ ಎಂದು ಕೇರಳದಲ್ಲಿ ನಡೆದ ಒಂದು ಪ್ರಕರಣವನ್ನು ತಿರುಚಿ ಮುಸ್ಲಿಮರ ಮೇಲೆ ಆಪಾಧನೆಯನ್ನು ಮಾಡುತ್ತ ಅವರ ಬಳಿ ವ್ಯಾಪಾರ ಮಾಡಬೇಡಿ ಎಂಬ ಕೋಮು ಹಿನ್ನಲೆಯಲ್ಲಿ ಹಂಚಿಹೊಳ್ಳಲಾಗಿದೆ ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಆಲ್ಟ್‌ನ್ಯೂಸ್, ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಶಾಲಾ ಬಾಲಕಿಗೆ ಕಿರುಕುಳ ನೀಡಿ ಪೋಷಕರಿಂದ ಏಟು ತಿಂದ ವ್ಯಕ್ತಿ ಮುಸ್ಲಿಂ ಅಲ್ಲ! ಮತ್ತ್ಯಾರು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights