ಫ್ಯಾಕ್ಟ್‌ಚೆಕ್: ಉಡುಪಿ ಶೌಚಾಲಯ ವಿಡಿಯೋದ ಅಸಲಿಯತ್ತೇನು? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್‌

20 ಜುಲೈ 2023 ರ ಗುರುವಾರ ಪ್ಯಾರಾ ಮೆಡಿಕಲ್ ಡಿಪ್ಲೊಮಾ ದ್ವಿತೀಯ ವರ್ಷದ ಮೂವರು ವಿದ್ಯಾರ್ಥಿನಿಯರು ಸೇರಿ ತಮ್ಮ ಸಹಪಾಠಿ ವಿದ್ಯಾರ್ಥಿನಿ ವಾಶ್ ರೂಂನಲ್ಲಿರುವಾಗ ರಹಸ್ಯವಾಗಿ ವಿಡಿಯೋ ಮಾಡಿದ್ದಾರೆ. ಈ ಬಗ್ಗೆ ವಿದ್ಯಾರ್ಥಿನಿ ಕಾಲೇಜಿನ ಕಚೇರಿಗೆ ದೂರು ನೀಡಿದ್ದು, ನಂತರ ಕಚೇರಿ ಮುಖ್ಯಸ್ಥರು ವಿಡಿಯೋ ಮಾಡಿದ್ದ ವಿದ್ಯಾರ್ಥಿನಿಯರ ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಕಾಲೇಜು ಆಡಳಿತ ಮಂಡಳಿ ಮೂವರು ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಿದೆ.

ಈ ಘಟನೆ ತಿಳಿಯುತ್ತಿದಂತೆ ಬಲಪಂಥೀಯ ಸಂಘಟನೆಗಳ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಘಟನೆಗೆ ಸಂಬಂಧಿಸಿದಂತೆ  ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದು ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ನಡೆದಿರುವ ಘಟನೆಯನ್ನು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

“ಅನ್ಯ ಕೋಮಿನ ವಿದ್ಯಾರ್ಥಿನಿಯರಿಂದ ಶೌಚಾಲಯದಲ್ಲಿ
ಹಿಂದೂ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ..
ಈ ವಿಡಿಯೋ ಉಚ್ಚಿಲದ ಯುವಕನಿಗೆ ವಾಟ್ಸಪ್ ಮೂಲಕ ಹಂಚಿಕೆ
ಮೂವರು ವಿದ್ಯಾರ್ಥಿನಿಯರ ಅಮಾನತು..” ಎಂದು ಸುರಂ ಟಿವಿ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಂಡಿದೆ.

ಹಿಂದೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಉದ್ದೇಶ ಪೂರ್ವಕವಾಗಿ ಪ್ಯಾರಾ ಮೆಡಿಕಲ್ ಡಿಪ್ಲೋಮ ಕಲಿಯುತ್ತಿರುವ ಶಬನಾಜ್, ಅಲ್ಫಿಯಾ, ಮತ್ತು ಅಲಿಮಾತುಲ್ ಶಾಫಿಯ ಎಂಬ ವಿದ್ಯಾರ್ಥಿನಿಯರು ಕಾಲೇಜಿನ ಶೌಚಾಲಯದಲ್ಲಿ ಮೊಬೈಲ್ ಕೆಮರಾ ಇಟ್ಟು ಹಿಂದೂ ವಿದ್ಯಾರ್ಥಿನಿಯರ ನಗ್ನ ವಿಡಿಯೋ ಚಿತ್ರೀಕರಣ ಮಾಡಿ ಅದನ್ನು ಮುಸ್ಲಿಂ ಯುವಕರಿಗೆ ಹಂಚುತ್ತಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಪೊಲೀಸರಿಗೆ ದೂರು ನೀಡಿದೆ, ಅದರ ಪ್ರತಿಯನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದೆ.

ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಅನ್ಯ ಕೋಮಿನ ವಿದ್ಯಾರ್ಥಿನಿಯರು ವಾಶ್ ರೂಂ ನಲ್ಲಿ ಹಿಡನ್ ಕ್ಯಾಮರಾ ಮೂಲಕ ಹಿಂದೂ ವಿದ್ಯಾರ್ಥಿನಿಯ ಚಿತ್ರೀಕರಣ ಮಾಡಿರುವ ಬಗ್ಗೆ ಆರೋಪ ಕೇಳಿ ಬಂದಿದ್ದು, ಕಾಲೇಜು ಆಡಳಿತ ಮಂಡಳಿ ಮೂವರು ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಿದೆ. ಉಚ್ಚಿಲ ಮೂಲದ ಮುಸ್ಲಿಂ ಯುವಕನೊಬ್ಬನ ಕುಮ್ಮಕ್ಕಿನಿಂದ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಕೆಲವು ಹಿಂದುಗಳ ಯುವತಿಯರು ಶೌಚಾಲಯದಲ್ಲಿರುವುದನ್ನು ವಿಡಿಯೋ ಚಿತ್ರೀಕರಣ ಮಾಡಿ ಆ ಮುಸ್ಲಿಂ ಯುವಕನಿಗೆ whatsApp ಮೂಲಕ forward ಮಾಡ್ತಾ ಇದ್ದ ದುರಂತ ಘಟನೆ ವರದಿಯಾಗಿದೆ. ಎಂಬ ಪ್ರತಿಪಾದನೆಯೊಂದಿಗೆ ಜಾಗೋ ಹಿಂದೂ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ನಡೆದ ಘಟನೆಗೆ ಸಂಬಂಧಿಸದಂತೆ ಬಲಪಂಥೀಯ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಿಂದೂ ಮುಸ್ಲಿಂ ಎಂಬ ಕೋಮು ಆಯಾಮಗಳೊಂದಿಗೆ ಹಂಚಿಕೊಳ್ಳುತ್ತಿದ್ದು, ಉಡುಪಿ ಎಸ್ಪಿ ಅಕ್ಷಯ್ ಹಾಕೆ ಮಚ್ಚೀಂದ್ರ ಸ್ಪಷ್ಟನೆ ನೀಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳ ಸ್ಪಷ್ಟನೆ :

20 ಜುಲೈ 2023 ರಂದು ಉಡುಪಿಯ ಖಾಸಗಿ ಕಾಲೇಜೊಂದರ ಶೌಚಾಲಯದಲ್ಲಿ ಕ್ಯಾಮರಾ ಇಟ್ಟು ವಿಡಿಯೋ ಚಿತ್ರೀಕರಣ ಮಾಡಿದ ಘಟನೆಗೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳಿಗೆ ಉಡುಪಿ ಎಸ್ ಪಿ ಅಕ್ಷಯ್ ಹಾಕೆ ಸ್ಪಷ್ಟನೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆಗೆ ಸಂಬಂಧಪಟ್ಟಂತೆ ಯಾವುದೇ ವಿಡಿಯೋ ನಮಗೆ ಸಿಕ್ಕಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಕೂಡಾ ನಮ್ಮ ಗಮನಕ್ಕೆ ಬಂದಿಲ್ಲ. ಹೀಗಾಗಿ ಸಾರ್ವಜನಿಕರು ಊಹಾಪೋಹದ ಮಾಹಿತಿಗಳನ್ನು ನಂಬಬಾರದು ಎಂದಿದ್ದಾರೆ.

ಘಟನೆಗೆ ಸಂಬಂಧಪಟ್ಟಂತೆ ಹಲವಾರು ವಿಡಿಯೋಗಳನ್ನು ಎಡಿಟ್ ಮಾಡಿ ಬ್ಲಾಕ್ ಮೇಲ್ ಮಾಡಲಾಗುತ್ತಿದೆ ಎಂದು ಸುದ್ದಿಯಾಗುತ್ತಿದೆ. ಆದರೆ ಇಲ್ಲಿಯ ತನಕ ನಮಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಸಾಮಾಜಿಕ ಜಾಲತಾಣಗಳ ಮೇಲೆ ನಾವೂ ನಿಗಾ ಇಟ್ಟಿದ್ದು ನಮಗೂ ಯಾವುದೇ ವಿಡಿಯೋ ಲಭ್ಯವಾಗಿಲ್ಲ. ಕೆಲವರು ಬೇರೆ ಕಡೆ ಆದ ವಿಡಿಯೋಗಳಿಗೆ ಧ್ವನಿ ಎಡಿಟ್ ಮಾಡಿ ಉಡುಪಿ ಘಟನೆ ಎಂದು ಬಿಂಬಿಸುವ ಪ್ರಸಂಗ ನಡೆದಿದ್ದು, ಅದಕ್ಕೆ ನಾವು ಸ್ಪಷ್ಟನೆ ನೀಡಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ಸತ್ಯಾಂಶ ತಿಳಿಯದೆ ಸುಮ್ಮನೆ ಮಾಹಿತಿ ಹರಡುವುದರಿಂದ ಜನರಿಗೆ ಗೊಂದಲ ಸೃಷ್ಟಿಯಾಗುತ್ತಿದೆ ಎಂದಿದ್ದಾರೆ.

ಘಟನೆ ಸಂಬಂಧಪಟ್ಟಂತೆ ಒಂದಷ್ಟು ಮಾಹಿತಿಗಳು ಹರಿದಾಡುತ್ತಿದೆ. ಆದರೆ ಪೊಲೀಸ್ ಇಲಾಖೆಗೆ ಘಟನೆಯ ವಿಡಿಯೋ ಸಿಕ್ಕಿಲ್ಲ. ಸಾಮಾಜಿಕ ಜಾಲತಾಣಗಳ ಮೇಲೂ ನಾವು ನಿಗಾ ಇಟ್ಟಿದ್ದು, ಅಲ್ಲೂ ನಮ್ಮ ಕಣ್ಣಿಗೆ ಬಿದ್ದಿಲ್ಲ. ಯಾರಿಗಾದರೂ ಸಿಕ್ಕಿದರೆ ನಮಗೆ ಮಾಹಿತಿ ತಿಳಿಸಿ ಎಂದಿದ್ದಾರೆ. ಘಟನೆಯ ಬಗ್ಗೆ ಯಾವುದೇ ದೂರು ನೀಡಲಾಗಿಲ್ಲ. ನಾವು ಸುಮೋಟೋ ಕೇಸು ದಾಖಲಿಸಲು ಸಾಮಾಜಿಕ ಜಾಲತಾಣದಿಂದ ಯಾವುದೇ ಸಾಕ್ಷಿ ದಾಖಲೆಗಳು ಸಿಕ್ಕಿಲ್ಲ. ಮೊಬೈಲ್ ಪರಿಶೀಲನೆ ಮಾಡಲಾಗಿದೆ, ಅದರಲ್ಲಿಯೂ ಏನೂ ಸಿಕ್ಕಿಲ್ಲ ಎಂದು ಸ್ಪಷ್ಟನೆ ನೀಡಿದರು.

ರಶ್ಮಿ ಸಾವಂತ್ ಹೆಸರಿನಲ್ಲಿ ಟ್ವೀಟ್ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು, ಟ್ವೀಟ್ ಮಾಡಿದವರು ಘಟನೆಯ ಸತ್ಯಾಸತ್ಯತೆಯ ಬಗ್ಗೆ ತಿಳಿದುಕೊಳ್ಳಬೇಕಿತ್ತು. ಅವರನ್ನು ಪೊಲೀಸರು ಸಂಪರ್ಕಿಸಿದ್ದು ಘಟನೆಯ ಮಾಹಿತಿ ನೀಡುವ ಉದ್ದೇಶದಿಂದ ಹೊರತು ತೊಂದರೆ ಕೊಡಲು ಅಲ್ಲ ಎಂದರು.

ಸಾರ್ವಜನಿಕರಿಗೆ ಮನವಿ:

ಸಾಮಾಜಿಕ ಜಾಲತಾಣಗಳಲ್ಲಿ ಸಂಬಂಧವಿಲ್ಲದ ವಿಚಾರಗಳನ್ನು ಉಡುಪಿ ಕಾಲೇಜಿನ ಘಟನೆಗೆ ಲಿಂಕ್ ಮಾಡಿ ಜನರ ಮನಸ್ಸಿನಲ್ಲಿ ಆತಂಕ ಸೃಷ್ಟಿ ಮಾಡುವ ಅಥವಾ ಗೊಂದಲವುಂಟು ಮಾಡುವ ಪೋಸ್ಟ್ ಹಾಕಬೇಡಿ. ಏನಾದರೂ ಖಚಿತ ಮಾಹಿತಿ ಸಿಕ್ಕಿದರೆ ಶೇರ್ ಮಾಡುವ ಮೊದಲು ನಮಗೆ ತಿಳಿಸಿ. ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ. ವದಂತಿ ಹರಡಬೇಡಿ ಎಂದು ಎಸ್ ಪಿ ಅಕ್ಷಯ್ ಹಾಕೆ ಮಚ್ಚೀಂದ್ರ ಮನವಿ ಮಾಡಿದ್ದಾರೆ.

ಘಟನೆಗೆ ಕಾಲೇಜು ಆಡಳಿತ ಮಂಡಳಿ ಏನು ಹೇಳಿದೆ?

ಶೌಚಾಲಯದಲ್ಲಿ ಮೊಬೈಲ್ ಇಟ್ಟು ವಿಡಿಯೋ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳು ತಪ್ಪೊಪ್ಪಿಗೆ ನೀಡಿದ್ದಾರೆ. ನಂತರ ನಾವು ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ತಮಾಷೆಗೆ ವಿಡಿಯೋ ಮಾಡಿರುವುದಾಗಿ ಮೂವರು ವಿದ್ಯಾರ್ಥಿನಿಯರು ಹೇಳಿದ್ದಾರೆ. ಕಾಲೇಜಿಗೆ ಮೊಬೈಲ್ ತರುವಂತಿಲ್ಲ, ಕಾನೂನು ಉಲ್ಲಂಘನೆ ಮಾಡಿರುವ ಕಾರಣ ಅವರ ಮೊಬೈಲ್ ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದೇವೆ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.

Udupi: ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ವಿಡಿಯೋ ರೆಕಾರ್ಡ್ ಪ್ರಕರಣ​! ಕಾಲೇಜು ಆಡಳಿತ ಮಂಡಳಿ ಹೇಳಿದ್ದೇನು? | girls filmed in udupi college washroom management gives information of case– News18 Kannada

ವಿಡಿಯೋವನ್ನು ಡಿಲೀಟ್ ಮಾಡಿದ್ದೇವೆ

ಮೂವರು ತಮಾಷೆಗಾಗಿ ವೀಡಿಯೋ ಮಾಡಿರುವುದಾಗಿ ನಮ್ಮ ಮುಂದೆ ಹೇಳಿದ್ದಾರೆ. ಮೊಬೈಲ್ ಕೊಡುವಾಗಲೇ ಅದರಲ್ಲಿ ಯಾವುದೇ ವೀಡಿಯೋ ಇರಲಿಲ್ಲ. ಸಂತ್ರಸ್ತ ವಿದ್ಯಾರ್ಥಿನಿ ವಾಶ್​ ರೂಮ್​ಗೆ ಹೋದಾಗ ಮೊಬೈಲ್ ನೋಡಿದ್ದು, ತಕ್ಷಣ ಹೊರ ಬಂದಿದ್ದಾಳೆ. ಅಲ್ಲದೆ ಆಕೆ ಸ್ಥಳದಲ್ಲೇ ವಿಡಿಯೋ ಡಿಲೀಟ್ ಮಾಡಿಸಿರುವುದಾಗಿ ಯುವತಿ ನಮಗೆ ಹೇಳಿದ್ದಾಳೆ. ಕೈಯಿಂದಲೇ ಆಕೆ ವೀಡಿಯೋ ಮಾಡಿದ್ದು, ಇದನ್ನು ಗಮನಿಸಿದ ಸಂತ್ರಸ್ತ ವಿದ್ಯಾರ್ಥಿನಿ ವಿಡಿಯೋಗಳನ್ನು ಅಲ್ಲೇ ಡಿಲಿಟ್ ಮಾಡಿಸಿದ್ದಾಳೆ ಎಂದು ತಿಳಿಸಿದ್ದಾರೆ.

ವಿಷಯ ತಿಳಿದು ಮೊಬೈಲ್ ಸಂಸ್ಥೆ ಕೈ ಸೇರಿದಾಗ ಅದರಲ್ಲಿ ಏನೂ ಇರಲಿಲ್ಲ. ಯಾರಿಗೂ ಆ ವೀಡಿಯೋ ರವಾನೆ ಆಗಿಲ್ಲ. ತನ್ನ ಭವಿಷ್ಯ ಹಾಗೂ ಇತರೆ ವಿದ್ಯಾರ್ಥಿನಿ ಭವಿಷ್ಯದಿಂದ ವಿದ್ಯಾರ್ಥಿನಿ ಕೂಡ ದೂರು ನೀಡಿಲ್ಲ. ತಪ್ಪೊಪ್ಪಿಗೆ ಮೇಲೆ ಮೂವರು ವಿದ್ಯಾರ್ಥಿನಿಯರನ್ನ ಅಮಾನತು ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿನಿ ದೂರು ನೀಡಿಲ್ಲ

ಕಾಲೇಜು ನಿರ್ದೇಶಕಿ ರಶ್ಮಿ ಕೃಷ್ಣಪ್ರಸಾದ್ ಮಾತನಾಡಿ, ವಿಡಿಯೋ ಮಾಡಿದ ಮೂವರು ವಿದ್ಯಾರ್ಥಿನಿಯರು ಒಂದೇ ಕ್ಲಾಸ್, ಇನ್ನೊಬ್ಬಳು ಹುಡುಗಿ ಬೇರೆ ಕ್ಲಾಸ್ ನವಳು. ಇಂತಹ ಘಟನೆ ನಡೆಯಬಾರದು ಎಂಬ ಕಾರಣಕ್ಕೆ ಕಾಲೇಜಿನಲ್ಲಿ ಮೊಬೈಲ್ ನಿಷೇಧ ಮಾಡಿದ್ದೇವೆ. ಅದು ನಮ್ಮ ಜವಾಬ್ದಾರಿ, ಸುರಕ್ಷತೆ ದೃಷ್ಟಿಯಿಂದ ನಿಯಮ ಮಾಡಿದ್ದೇವೆ. ಆದರೆ ಸಂತ್ರಸ್ತೆ ಯಾವುದೇ ದೂರು ಕೊಟ್ಟಿಲ್ಲ, ಕಾಲೇಜ್ ಮೇಟ್ ಆಗಿರುವ ಕಾರಣ ದೂರು ಕೊಡುವುದು ಬೇಡ ಎಂದಿದ್ದಾಳೆ ಎಂದು ತಿಳಿಸಿದ್ದಾರೆ.

ನೂರಾರು ವಿದ್ಯಾರ್ಥಿನಿಯರ ವಿಡಿಯೋ ಶೂಟ್ ಮಾಡಿದ್ದಾರೆ ಎಂಬುದು ಸುಳ್ಳು

ಕಾಲೇಜಿಗೆ ಮೊಬೈಲ್ ತಂದದ್ದು, ವಿಡಿಯೋ ಶೂಟ್ ಮಾಡಿದ್ದು ತಪ್ಪು. ಹಾಗಾಗಿ ಮೂವರನ್ನು ಸಸ್ಪೆಂಡ್ ಮಾಡಿದ್ದೇವೆ. ಆದರೆ ನೂರಾರು ವಿದ್ಯಾರ್ಥಿನೀಯರ ವಿಡಿಯೋಗಳನ್ನು ಚಿತ್ರೀಕರಣ ಮಾಡಲಾಗಿದೆ ಎಂಬುದು ಸರಿಯಲ್ಲ. ವಿಚಾರ ತಿಳಿಯದೆ ತಪ್ಪು ಮಾಹಿತಿ ಯಾರೂ ಹಾಕಬೇಡಿ. ಸುಳ್ಳು ವಿಚಾರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಡಬೇಡಿ ಎಂದು ರಶ್ಮಿ ಕೃಷ್ಣಪ್ರಸಾದ್ ಮನವಿ ಮಾಡಿದ್ದಾರೆ.

ಕಾಲೇಜಿನ ಮಕ್ಕಳಲ್ಲಿ ನಾವು ಧರ್ಮವನ್ನು ನೋಡುವುದಿಲ್ಲ. ವಿಡಿಯೋ ಚಿತ್ರೀಕರಿಸಿದ ಧರ್ಮದ ವಿದ್ಯಾರ್ಥಿನಿಯರೇ ಕಾಲೇಜಿನಲ್ಲಿ ನಡೆದ ಘಟನೆ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಇನ್ನೂ ತಮಾಷೆಗೆ ವಿಡಿಯೋ ಮಾಡಿರುವುದರಿಂದ ನನ್ನ ಭವಿಷ್ಯ ಮತ್ತು ಮೂವರ ವಿದ್ಯಾರ್ಥಿನಿಯರ ಭವಿಷ್ಯ ಮುಖ್ಯ ಅಂತಾ ಸಂತ್ರಸ್ಥೆ ಮನವಿ ಪತ್ರ ಬರೆದು ನೀಡಿದ್ದಾಳೆ ಎಂದು ನಿರ್ದೇಶಕಿ ಮಾಹಿತಿ ನೀಡಿದ್ದಾರೆ.

ತಮಿಳುನಾಡಿನ ಮೂಲದ ವಿಡಿಯೋ

ಘಟನೆಗೆ ಸಂಬಂಧಿಸಿದಂತೆ ಯಾವುದೇ ವಿಡಿಯೋ ವರ್ಗಾವಣೆ ಯಾಗಿಲ್ಲ ಎಂದು ಪೊಲೀಸರು ಈಗಾಗಲೇ ತಿಳಿಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವಿಡಿಯೋ ತಮಿಳುನಾಡು ಮೂಲದ್ದಾಗಿದ್ದು, ಇದನ್ನೆ ಉಡುಪಿ ಖಾಸಗಿ ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿನಿಯರು, ಶೌಚಾಲಯದಲ್ಲಿದ್ದ ತನ್ನ ಸಹಪಾಠಿಗೆ ತಿಳಿಯದಂತೆ ಚಿತ್ರೀಕರಿಸಿದ ವಿಡಿಯೋ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ ಎಂದು ಉಡುಪಿಯ ಸರ್ವ ಕಾಲೇಜು ವಿದ್ಯಾರ್ಥಿ ಸಂಘಟನೆ (ರಿ) ಪ್ರಕಟಣೆಯನ್ನು ಪ್ರಜ್ವಲ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಉಡುಪಿಯ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ತಮಾಷೆಗೆಂದು ಮಾಡಿದ ಒಂದು ವಿಡಿಯೋಗೆ (ಸದ್ಯ ಈಗ ಆ ವಿಡಿಯೋ ಡಿಲಿಟ್ ಆಗಿದೆ) ಸಂಬಂಧವಿಲ್ಲದ ಬೇರೆ ಬೇರೆ ವಿಡಿಯೋಗಳನ್ನು ಸೇರಿಸಿ ಹಂಚಿಕೊಂಡು ಹಿಂದೂ ಹುಡುಗಿಯರನ್ನು ಗುರಿಯಾಗಿಸಿಕೊಂಡು ಹಿಡನ್ ಕ್ಯಾಮರಾ ಬಳಸಿ ಅಶ್ಲೀಲ ವಿಡಿಯೋಗಳನ್ನು ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಮೂಲಕ ಹಿಂದೂ ಹೆಣ್ಣು ಮಕ್ಕಳನ್ನು ಬ್ಲಾಕ್ ಮೇಲ್ ಮಾಡಲಾಗುತ್ತಿದೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ  ಹಿಂದೂ-ಮುಸ್ಲಿಮರ ಕೋಮು ಸಾಮರಸ್ಯ ಕದಡಲು ಹಂಚಿಕೊಳ್ಳಲಾಗುತ್ತಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಪ್ರಾನ್ಸ್‌ನಲ್ಲಿ ಜಿಹಾದಿಗಳಿಂದ ದಾಳಿ ಎಂದು ಸಿನಿಮಾ ದೃಶ್ಯಗಳ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights