ಫ್ಯಾಕ್ಟ್‌ಚೆಕ್ : ಶತಾಯುಷಿ ಸಾಲು ಮರದ ತಿಮ್ಮಕ್ಕರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಸುಳ್ಳು ಸುದ್ದಿ
ತನ್ನದೆಲ್ಲವನ್ನೂ ಬಿಟ್ಟು ಗಿಡಮರಗಳನ್ನು ತನ್ನ ಮಕ್ಕಳಂತೆ ಜೋಪಾನ ಮಾಡಿ ಜಗತ್ತಿಗೆ ಮಾದರಿಯಾಗಿದ್ದ ಸಾಲು_ಮರದ_ತಿಮ್ಮಕ್ಕ ಇನ್ನಿಲ್ಲ. ಭಾವಪೂರ್ಣ ಶ್ರದ್ದಾಂಜಲಿ ಎಂಬ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಬೆಳಗ್ಗಿನಿಂದ ಪ್ರಸಾರವಾಗುತ್ತಿದೆ.
ಸಾಲು ಮರದ ತಿಮ್ಮಕ್ಕ ಇನ್ನಿಲ್ಲ ಎಂಬಂತಹ ಪೋಸ್ಟ್‌ಗಳು ಫೇಸ್‌ಬುಕ್‌ನಲ್ಲಿ ಹಲವರು ಹಂಚಿಕೊಂಡಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ಪೋಸ್ಟ್ ವೈರಲ್ ಆಗುತ್ತಿದಂತೆ ತಿಮ್ಮಕ್ಕರವರ ದತ್ತು ಪುತ್ರ ಉಮೇಶ್ ತಿಮ್ಮಕ್ಕರವರ ಆರೋಗ್ಯದ ಮಾಹಿತಿ ಹಂಚಿಕೊಂಡಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.
ಮಗ ಉಮೇಶ್ ಸ್ಪಷ್ಟನೆ :
ರಾಷ್ಟ್ರಪ್ರಶಸ್ತಿ ಪುರಸ್ಕೃತೆ, ಶತಾಯುಷಿ ಸಾಲು ಮರದ ತಿಮ್ಮಕ್ಕ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಇನ್ನಿಲ್ಲ, ಸಾವನ್ನಪ್ಪಿದ್ದಾರೆ ಅಂತ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ವೈರಲ್ ಆಗಿತ್ತು. ಆ ಬಗ್ಗೆ ದತ್ತು ಪುತ್ರ ಸುದ್ದಿಗಾರರಿಗೆ ಮಾಹಿತಿ ನೀಡಿರುವಂತ ಉಮೇಶ್ ಅವರು, ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಸಾಲು ಮರದ ತಿಮ್ಮಕ್ಕ ಆರೋಗ್ಯ ಸ್ಥಿರವಾಗಿದೆ.
ಅಕ್ಟೋಬರ್ 5ರ ಇಂದು ಬೆಳಿಗ್ಗೆ ಅವರು ಆಸ್ಪತ್ರೆಯಲ್ಲಿ ತಿಂಡಿ ಸೇವಿಸುತ್ತಿರುವ ವಿಡಿಯೋವನ್ನು ಸಾಲು ಮರದ ತಿಮ್ಮಕ್ಕನವರ ದತ್ತು ಪುತ್ರ ಉಮೇಶ್ ವನಸಿರಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲಿ ಅವರು ಚೇತರಿಸಿಕೊಳ್ಳುತ್ತಿರುವುದನ್ನು ನೋಡಬಹುದು.
ಎರಡು ದಿನಗಳ ಹಿಂದೆ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರ ಚಿಕಿತ್ಸೆಗೆ ಸ್ಪಂದನೆ ನೀಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರು ಇನ್ನಿಲ್ಲ, ನಿಧನ ಅನ್ನೋ ಸುದ್ದಿ ಪ್ರಸಾರವಾಗುತ್ತಿದೆ ಆದರೆ ಇದು ಸುಳ್ಳು. ಇಂತಹ ಸುದ್ದಿಗಳನ್ನು ಹರಡಬೇಡಿ. ಅವರು ಬೇಗ ಗುಣಮುಖರಾಗುವಂತೆ ಬೇಡಿಕೊಳ್ಳಿ ಎಂದು ದತ್ತು ಪುತ್ರ ಉಮೇಶ್ ಮನವಿ ಮಾಡಿದ್ದಾರೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಸಿದ್ದರಾಮಯ್ಯ ಸೊಸೆ ಸ್ಮಿತಾ ರಾಕೇಶ್ ಹೆಸರಿನಲ್ಲಿ ಇದೆಯಂತೆ ಏಷ್ಯಾದ ಅತೀ ದೊಡ್ಡ ಐಷಾರಾಮಿ ಪಬ್ !

