ಫ್ಯಾಕ್ಟ್‌ಚೆಕ್ : ಸುಳ್ಳು ಪೋಸ್ಟ್‌ ಹಂಚಿಕೊಂಡ BJP ಕಾರ್ಯಕರ್ತೆ ಶಕುಂತಲಾ ವಿರುದ್ದ FIR! ಆ ಸುಳ್ಳಿನ ಪೋಸ್ಟ್‌ ಏನು ಗೊತ್ತೇ?

ಕೇರಳದ ಲುಲು ಮಾಲ್‌ನಲ್ಲಿ ಭಾರತದ ರಾಷ್ಟ್ರಧ್ವಜಕ್ಕಿಂತ ಪಾಕಿಸ್ತಾನದ ರಾಷ್ಟ್ರ ಧ್ವಜವನ್ನು ದೊಡ್ಡದಾಗಿ ಇರಿಸಲಾಗಿದೆ ಎಂಬ ಫೋಟೋಗಳು ಮತ್ತು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಇಂತಹದೇ ಪೋಸ್ಟ್‌ಅನ್ನು BJP ಕಾರ್ಯಕರ್ತೆ ಶಕುಂತಲಾ ನಟರಾಜ್ ಹಂಚಿಕೊಳ್ಳುತ್ತಾ “ಲುಲು ಶಾಪಿಂಗ್‌ ಮಾಲ್‌ನಲ್ಲಿ ಭಾರತದ ಬಾವುಟಕ್ಕಿಂತ ಎತ್ತರದಲ್ಲಿ ಪಾಕಿಸ್ತಾನ ಬಾವುಟ ಹಾರಿಸಿದ್ದಾರೆ ” ʼಭಾರತದ ಬಾವುಟಕ್ಕಿಂತ ಬೇರೆ ಯಾವುದೇ ಬಾವುಟ ಎತ್ತರದಲ್ಲಿ ಇರಬಾರದು ಅನ್ನೋ ಸಾಮಾನ್ಯ ಜ್ಞಾನ ಇಲ್ಲವೇ? ನಿಮ್ಮ ಮಾಲ್​ನವರಿಗೆ ಎಂದು ಪ್ರಶ್ನೆ ಮಾಡಿದ್ದ ಶಕುಂತಲಾ, ಬೆಂಗಳೂರಿನ ಲುಲು ಮಾಲ್​ ಬಹಿಷ್ಕರಿಸಿʼʼ ಎಂದು ಹ್ಯಾಷ್​ಟ್ಯಾಗ್​ ಬಳಸಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರಿಗೆ ಟ್ಯಾಗ್​ ಮಾಡಿದ್ದರು.

ಫ್ಯಾಕ್ಟ್‌ಚೆಕ್ :

ಅಸಲಿಗೆ ಲುಲು ಮಾಲ್‌ನಲ್ಲಿ ಸಮಾನ ಅಳತೆಯ ವಿವಿಧ ರಾಷ್ಟ್ರಗಳ ಧ್ವಜಗಳನ್ನು ಸಮಾನ ಅಂತರದಲ್ಲಿ ತೂಗು ಬಿಡಲಾಗಿದೆ. ವಿವಿಧ ಆಯಾಮಗಳಲ್ಲಿ ನೋಡಿದಾಗ ಬೇರೆ ಬೇರೆ ರಾಷ್ಟ್ರಗಳ ಧ್ವಜಗಳು ದೊಡ್ಡದಾಗಿರುವಂತೆ ಮತ್ತು ಅತಿ ಎತ್ತರದಲ್ಲಿರುವಂತೆ ಕಂಡುಬರುತ್ತವೆ. ಇದೆಲ್ಲವೂ ನಾವು ಎಲ್ಲಿಂದ ನಿಂತು ನೋಡುತ್ತೇವೆ ಮತ್ತು ಯಾವ ಆಯಾಮದಲ್ಲಿ, ಯಾವ ಮಹಡಿಯಲ್ಲಿ ನಿಂತು ಫೋಟೊ ತೆಗೆಯುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಲುಲು ಮಾಲ್‌ನ ಹಲವಾರು ಚಿತ್ರಗಳನ್ನು ಆಲ್ಟ್ ನ್ಯೂಸ್ ಪತ್ರಕರ್ತ ಮೊಹಮ್ಮದ್ ಜುಬೇರ್ ಟ್ವೀಟ್ ಮಾಡಿದ್ದಾರೆ.

ಪಾಕ್ ಧ್ವಜ ದೊಡ್ಡದಾಗಿದೆ ಎಂಬ ಪ್ರತಿಪಾದನೆ ಸುಳ್ಳು ಎಂದಿರುವ ಲುಲು ಮಾಲ್ ಮ್ಯಾನೇಜ್‌ಮೆಂಟ್, “ಮಾಲ್‌ನ ಕೇಂದ್ರ ಕಟ್ಟಡದಿಂದ ವಿವಿಧ ದೇಶಗಳ ಧ್ವಜಗಳನ್ನು ಒಂದೇ ಮಟ್ಟದಲ್ಲಿ ನೇತುಹಾಕಲಾಗಿದೆ. ಮೇಲಿನಿಂದ ಫೋಟೊ ತೆಗೆದಾಗ ಹತ್ತಿರದಲ್ಲಿರುವ ಧ್ವಜ ದೊಡ್ಡದಾಗಿ ಕಾಣುತ್ತದೆ. ನೀವು ಯಾವ ಕಡೆಯಿಂದ ಫೋಟೊ ತೆಗೆಯುತ್ತೀರಿ ಅದಕ್ಕೆ ಹತ್ತಿರವಿರುವ ಧ್ವಜ ದೊಡ್ಡದಾಗಿ ಕಾಣುತ್ತದೆ.  ಆದರೆ ಕೆಳಗಿನಿಂದ ಫೋಟೊ ತೆಗೆದಾಗ ಎಲ್ಲವೂ ಒಂದೇ ಗಾತ್ರದಲ್ಲಿ ಕಂಡುಬರುತ್ತವೆ” ಎಂದು ಸ್ಪಷ್ಟನೆ ನೀಡಿದೆ.

ಸುಳ್ಳು ಪೋಸ್ಟ್‌ ಹಂಚಿಕೊಂಡ ಶಕುಂತಲಾ ನಟರಾಜ್ :

ಬಿಜೆಪಿ ಕಾರ್ಯಕರ್ತೆಯ ಈ ಪೋಸ್ಟ್ ನಕಲಿ ಮತ್ತು ಸುಳ್ಳು ಎಂದು ಸತ್ಯ ಪರಿಶೀಲನಾ ವಿಭಾಗ ಖಚಿತಪಡಿಸಿದ್ದು, ನಂತರ ಆಕೆಯ ವಿರುದ್ಧ ತುಮಕೂರು ನಗರದ ಜಯನಗರ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಐಪಿಸಿ ಸೆಕ್ಷನ್ 153 (ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖಾಧಿಕಾರಿಯ ಮುಂದೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಸಹ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತೆ ಶಕುಂತಲಾ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿ ಸುಳ್ಳು ಸುದ್ದಿ, ವಿವಾದಾತ್ಮಕ ಪೋಸ್ಟ್ ಗಳನ್ನು ಹಂಚಿರುವುದು ಇದೇ ಮೊದಲಲ್ಲ.

250ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವ ಜೂನ್ 2 ರಂದು ನಡೆದ ಒಡಿಶಾದ ರೈಲು ಅಪಘಾತ ಪ್ರಕರಣಕ್ಕೆ ಕೋಮು ಬಣ್ಣ ನೀಡಿದ್ದ ಆಕೆ, ಹಳಿಯ ಬಳಿ ಮಸೀದಿಯಿತ್ತು. ಘಟನೆಗೆ ಮಸೀದಿ ಪಕ್ಕದಲ್ಲಿ ಇರುವುದು ಕಾರಣ ಎಂದು ಬಿಂಬಿಸುವ ಅರ್ಥದಲ್ಲಿ ಫೋಟೊವೊಂದನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಳು. ವಾಸ್ತವದಲ್ಲಿ ಅದು ಮಸೀದಿಯಾಗಿರಲಿಲ್ಲ, ಇಸ್ಕಾನ್‌ ದೇವಾಲಯವಾಗಿತ್ತು. ಅಲ್ಲಿ ಮಸೀದಿ ಇರಲೇ ಇಲ್ಲ. ಈ ಬಗ್ಗೆ altnews.in ಸೇರಿದಂತೆ ಹಲವು ಸುದ್ದಿ ಸಂಸ್ಥೆಗಳು ಫ್ಯಾಕ್ಟ್ ಚೆಕ್ ಮಾಡಿ ಶಕುಂತಲಾ ಸುಳ್ಳನ್ನು ಬಯಲು ಮಾಡಿದ್ದವು.

ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಮಾಡಿದ್ದ ಆರೋಪದ ಮೇರೆಗೆ ಶಂಕುತಲಾ‌ ನಟರಾಜ್ ಅವರು ಬೆಂಗಳೂರು ಪೊಲೀಸರಿಂದ ಬಂಧನಕ್ಕೊಳಗಾಗಿದ್ದರು.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಪ್ಲಾಸ್ಟಿಕ್‌ ಅಕ್ಕಿ ಆಯ್ತು ಈಗ ಪ್ಲಾಸ್ಟಿಕ್‌ ಗೋಧಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights