ಫ್ಯಾಕ್ಟ್‌ಚೆಕ್ : ಕಿರಣ್ ದೇವಿ ಬಳಿ ಅಕ್ಬರ್ ಪ್ರಾಣ ಭಿಕ್ಷೆ ಬೇಡಿದ್ದು ನಿಜವೇ?
ಈ ವೀರ ವನಿತೆ “ಕಿರಣ್ ದೇವಿ” ಮಹಾರಾಣ ಪ್ರತಾಪ್ ನ ಸಹೋದರ ಶಕ್ತಿಸಿಂಹನ ಮಗಳು. ಮೀನಾಬಜಾರ್ ನಲ್ಲಿ ಹೋಗತ್ತಿದ್ದಾಗ ಎದುರಿನಿಂದ ಬಂದ ಅಕ್ಬರ್ ತನ್ನ ಸೈನಿಕರಿಗೆ ಕಿರಣ್ ದೇವಿಯನ್ನು ಎಳೆದುಕೊಂಡು ಬನ್ನಿ ಎಂದು ಆಜ್ಞೆ ಮಾಡಿದ, ಸೈನಿಕರು ಬರುವುದಕ್ಕೆ ಮುನ್ನವೇ ಕಿರಣ್ ದೇವಿ ಅಕ್ಬರನ ಮೇಲೆ ಎರಗಿ ತನ್ನ ಸೊಂಟದಲ್ಲಿ ಅಡಗಿಸಿದ ಚೂರಿಯನ್ನು ಅವನ ಕುತ್ತಿಗೆಗೆ ತಾಗಿಸಿ ಹಿಡಿದಳು. ಭಯಭೀತನಾದ ಹೇಡಿ ಅಕ್ಬರ್ ಕಿರಣ್ ದೇವಿಯ ಕ್ಷೇಮೆಯಾಚಿಸಿ ಸಾಯಿಸದಂತೆ ಬೇಡಿಕೊಂಡ. ಕಿರಣ್ ದೇವಿ ಅವನನ್ನು ಕ್ಷೇಮಿಸಿ, ಇನ್ನೆಂದಿಗೂ ಈ ರೀತಿ ನೀಚ ಕೆಲಸ ಮಾಡಬಾರದೆಂದು ಎಚ್ಚರಿಕೆ ಕೊಟ್ಟು ಕಳುಹಿಸಿದಳು.
ಆದರೆ ನಮ್ಮ ಚರಿತ್ರೆ ಪಠ್ಯ ಪುಸ್ತಕಗಳಲ್ಲಿ ಈ ರೀತಿ ನೆಡೆದಿರುವ ಸಾವಿರಾರು ವಿಷಯಗಳನ್ನು ಮರೆಮಾಚಿದರು. ಕಾರಣ ಅಕ್ಬರ್ ದಿ ಗ್ರೇಟ್ ಎಂದು ಸುಳ್ಳು ಪ್ರಚಾರ ಮಾಡಲು. ಈ ಚಿತ್ರ ಇಂದಿಗೂ ಜೈಪುರದ ವಸ್ತುಸಂಗ್ರಹಾಲಯದಲ್ಲಿ ರಾರಾಜಿಸುತ್ತಿದೆ. ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್ ಮತ್ತು ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯಮ್ಮು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಹೇಳಿರುವ ಕಥೆಯ ವಾಸ್ತವವನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ ಇದೊಂದು ಕಾಪೋಲ ಕಲ್ಪಿತ ಕಥೆ ಎಂದು ತಿಳಿದು ಬಂದಿದೆ. ಈ ರೀತಿಯ ಕತೆ ಹುಟ್ಟಿಕೊಂಡಿದ್ದು 2019ರಲ್ಲಿ. ರಾಜಸ್ಥಾನದ ಬಿಜೆಪಿ ನಾಯಕ ಮದನ್ ಲಾಲ್ ಶೈನಿ ಅವರು ತಮ್ಮ ಭಾಷಣದ ಸಂದರ್ಭದಲ್ಲಿ ಈ ರೀತಿಯ ಸುಳ್ಳು ಕತೆಯನ್ನು ಹೇಳಿ ವಿವಾದವನ್ನು ಹುಟ್ಟು ಹಾಕಿದ್ದರು. ಈ ಕುರಿತು ಎನ್‌ಡಿಟಿವಿ ಸೇರಿದಂತೆ ಸಾಕಷ್ಟು ಮಾಧ್ಯಮಗಳು ವರದಿಯನ್ನು ಮಾಡಿದ್ದವು. ಬಳಿಕ ಹಲವು ಇತಿಹಾಸ ತಜ್ಙರು ಆ ಸಂದರ್ಭದಲ್ಲೇ ಈ ಕತೆಯನ್ನು ತಳ್ಳಿ ಹಾಕಿದ್ದರು. ಅದಕ್ಕೆ ಪ್ರಮುಖ ಕಾರಣ ಐತಿಹಾಸಿಕವಾಗಿ ಈ ಘಟನೆಗೆ ಯಾವುದೇ ರೀತಿಯ ಸಾಕ್ಷಿಗಳು ಇರಲಿಲ್ಲ ಮತ್ತು ಈ ಕತೆಯಲ್ಲೇ ಹಲವು ಸುಳ್ಳುಗಳನ್ನ ಆಗಲೇ ಸಾಕಷ್ಟು ಮಂದಿ ಕಂಡು ಹಿಡಿದಿದ್ದರು.
ಅಸಲಿಗೆ ಮಹಾರಾಣ ಪ್ರತಾಪ್ ನ ಸಹೋದರ ಶಕ್ತಿಸಿಂಗ್‌ಗೆ ಕಿರಣ್ ದೇವಿ ಎಂಬ ಮಗಳಿದ್ದಳು ಎಂಬುದಕ್ಕೆ ಯಾವುದೇ ಸ್ಪಷ್ಟ ಉಲ್ಲೇಖಗಳು ಇದುವರೆಗೂ ಸಿಕ್ಕಿಲ್ಲ. ಇನ್ನು ಭಿಕನೇರ್‌ನ ರಾಜ ಪೃಥ್ವಿರಾಜ್ ರಾಥೋನ ಮಡದಿ ಕಿರಣ್ ದೇವಿ ಎಂಬುದು ಕೂಡ ಗೊಂದಲಕಾರಿಯಾಗಿದೆ. ಏಕೆಂದರೆ ಅಕ್ಭರ್‌ನ ಆಡಳಿತ ಅವಧಿಯಲ್ಲಿ ರಾವ್ ಕಲ್ಯಾಣ್ ಮಾಲ್ 1541 ರಿಂದ 1574 ರವರೆಗೆ ಆಡಳಿತ ನಡೆಸಿದ್ದರೆ, ರಾವ್ ರೈ ಸಿಂಗ್ 1574 ರಿಂದ 1612ರವರೆಗೆ ಆಳ್ವಿಕೆ ನಡೆಸಿದ್ದರು ಎಂಬ ಉಲ್ಲೇಖವಿದೆ.
ಆದೆರೆ ಈ ಅವಧಿಯಲ್ಲಿ ಎಲ್ಲಿಯೂ ರಾಜ ಪೃಥ್ವಿರಾಜ್ ರಾಥೋರ್ ರಾಜನ ಉಲ್ಲೇಖ ಸ್ಪಷ್ಟವಾಗಿ ಸಿಕ್ಕಿಲ್ಲ. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಇದೊಂದು ಸುಳ್ಳಿನಿಂದ ಕೂಡಿದ ಕಪೋಲ ಕಲ್ಪಿತ ಕಥೆ. ಕೋಮು ಸೌಹಾರ್ಧತೆಯನ್ನು ಹಾಳು ಮಾಡುವ ಸಲುವಾಗಿ ಕೆಲವೊಂದು ಕಟ್ಟುಕತೆಯ ಪೋಸ್ಟ್‌ಗಳು ಆಗಾಗ ಸದ್ದು ಮಾಡುತ್ತಲೇ ಇರುತ್ತವೆ. ಇದೀಗ ಇಂತಹದ್ದೆ ಒಂದು ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಸಿ ಸುಳ್ಳಿನೊಂದಿಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ರಾಜಸ್ಥಾನ ಕಾಂಗ್ರೆಸ್ ರ‍್ಯಾಲಿಯಲ್ಲಿ ಮೋದಿ ಪರ ಘೋಷಣೆ! ವಾಸ್ತವವೇನು?