ಫ್ಯಾಕ್ಟ್‌ಚೆಕ್ : 2013ರಲ್ಲಿ ಕಾಂಗ್ರೆಸ್‌ ಮಂಡಿಸಿದ ಮಸೂದೆ ಬಗ್ಗೆ ಸುಳ್ಳು ಹೇಳಿದ ಯೂಟ್ಯೂಬ್ ನ ನಿರೂಪಕಿ

ಕ್ರಿಮಿನಲ್ ಅಪರಾಧಗಳಿಗೆ ಸಂಬಂಧಿಸಿದ ಕಾನೂನುಗಳಲ್ಲಿ ಆಮೂಲಾಗ್ರ ಬದಲಾವಣೆಯನ್ನು ತರುವ ಉದ್ದೇಶ ಹೊಂದಿರುವ ಮೂರು ಮಸೂದೆಗಳಿಗೆ ಲೋಕಸಭೆಯು ಬುಧವಾರ ಅಂಗೀಕಾರ ನೀಡಿದೆ. ಭಾರತೀಯ ನ್ಯಾಯ (ಎರಡನೆಯ) ಸಂಹಿತಾ ಮಸೂದೆ, ಭಾರತೀಯ ನಾಗರಿಕ ಸುರಕ್ಷಾ (ಎರಡನೆಯ) ಸಂಹಿತಾ ಮಸೂದೆ ಮತ್ತು ಭಾರತೀಯ ಸಾಕ್ಷ್ಯ (ಎರಡನೆಯ) ಮಸೂದೆ, ದೇಶದ ಜನರನ್ನು ವಸಾಹತು ಕಾಲದ ಮನಃಸ್ಥಿತಿಯಿಂದ ಮುಕ್ತಗೊಳಿಸಲಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಇದೇ ಸಮಯದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದು 2005 ಮತ್ತು 2013ರಲ್ಲಿ  “ಕೋಮು ಮತ್ತು ಉದ್ದೇಶಿತ ಹಿಂಸಾಚಾರ ತಡೆ (ಪಿಸಿಟಿವಿ) ಮಸೂದೆಯನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಸಂಸತ್ತಿನಲ್ಲಿ ಮಂಡಿಸಿತು. ಅದರ ನಿಬಂಧನೆಗಳನ್ನು‌ ಗಮನಿಸಿದರೆ ಮುಸ್ಲಿಂ ಪರವಾಗಿದ್ದು, ಹಿಂದೂಗಳನ್ನು ಗುರಿಯಾಗಿಸಿ ತಾರತಮ್ಯವೆಸಗಿದೆ.” ಎಂದು ಟಿವಿ ವಿಕ್ರಮ ಯೂಟ್ಯೂಬ್ ಚಾನೆಲ್‌ನಲ್ಲಿ ಜಾಹ್ನವಿ ಎಂಬ ನಿರೂಪಕಿ ಮಾಡಿರುವ ವಿಶ್ಲೇಷಣೆ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ”

ಈ ವಿಡಿಯೋದಲ್ಲಿ (PCTV)  ಪ್ರಿವೆನ್ಷನ್‌ ಆಫ್‌ ಕಮ್ಯುನಲ್‌ ಆಂಡ್‌ ಟಾರ್ಗೆಟೆಡ್‌ ವೈಲೆನ್ಸ್‌ ಮಸೂದೆ ಕೇವಲ ಮುಸ್ಲಿಮರ ಪರವಾಗಿದೆ ಮತ್ತು ಇದು ಹಿಂದೂಗಳನ್ನು ಹತ್ತಿಕ್ಕು ಮಸೂದೆಯಾಗಿದೆ ಎಂಬ ರೀತಿಯಲ್ಲಿ ಬಿಂಬಿಸಲಾಗಿದೆ. ಈ ರೀತಿ ಬಿಂಬಿಸುವ ಕೆಲ ವರದಿಗಳು ಕೂಡ ಕಂಡು ಬಂದಿದೆ. ಇದೇ ವಿಡಿಯೋವನ್ನು ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ. ಹಾಗಿದ್ದರೆ ವಿಡಿಯೋ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್‌

ವೈರಲ್‌ ಆಗುತ್ತಿರುವ ವಿಡಿಯೋ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ಇದು ತಪ್ಪು ತಿಳುವಳಿಕೆಯಿಂದ ಹಂಚಿಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿದೆ. ಈ ಕುರಿತು ನಾವು ಪರಿಶೀಲನೆ ನಡೆಸಿದಾಗ ಕೋಮು ಹಿಂಸಾಚಾರ ತಡೆಗಟ್ಟುವಿಕೆ, ನಿಯಂತ್ರಣ ಮತ್ತು ಸಂತ್ರಸ್ಥರಿಗೆ ಪುನರ್ವಸತಿ ಮಸೂದೆ, 2005 ( The Communal Violence (Prevention, Control and Rehabilitation of Victims) Bill, 2005 )ನ್ನು 5 ಡಿಸೆಂಬರ್‌ 2005 ರಂದು ರಾಜ್ಯಸಭೆಯಲ್ಲಿ ಪರಿಚಯಿಸಲಾಯಿತು ಎಂಬುದನ್ನು ಪತ್ತೆ ಹಚ್ಚಿದೆವು. ಈ ಕುರಿತು ಅಂದಿನ ಕೇಂದ್ರಿಯ ಗೃಹ ಇಲಾಖೆ ಈ ಮಸೂದೆಯ ಕುರಿತು 2006ರಲ್ಲಿ ವರದಿಯನ್ನು ಸಲ್ಲಿಸಿತ್ತು

ಇನ್ನು ವಿಡಿಯೋದಲ್ಲಿ ಹೇಳಿದಂತೆ ಸೆಕ್ಷನ್‌ 7 ಮತ್ತು 42 ಹಿಂದೂಗಳನ್ನು ಹತ್ತಿಕ್ಕುವಂತೆ ಇದೆಯೇ ಎಂದು ಪರಿಶೀಲಿಸಿದಾಗ ಪಿಸಿಟಿವಿ ಮಸೂದೆಯ ಹಲವು ಮಾಹಿತಿಗಳು ಸರ್ಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಪತ್ತೆಯಾದವು. ಅದರಲ್ಲಿ ಸೆಕ್ಷನ್ 7 ಲೈಂಗಿಕ ದೌರ್ಜನ್ಯದ ಅರ್ಥವನ್ನು ಮಾತ್ರ ಹೇಳುತ್ತದೆ, ಸೆಕ್ಷನ್ 42 ರಾಷ್ಟ್ರೀಯ ಪ್ರಾಧಿಕಾರದ ಮುಂದೆ ಸಾಕ್ಷಿಯಾಗಿ ವ್ಯಕ್ತಿ ನೀಡಿದ ಯಾವುದೇ ಹೇಳಿಕೆಯನ್ನು ಯಾವುದೇ ಸಿವಿಲ್ ಅಥವಾ ಕ್ರಿಮಿನಲ್ ವಿಚಾರಣೆಯಲ್ಲಿ ಅವನ ವಿರುದ್ಧ ಬಳಸಲಾಗುವುದಿಲ್ಲ ಎಂದು ಉಲ್ಲೇಖಿಸಲಾಗಿದೆ. ಈ ಎರಡೂ‌ ಸೆಕ್ಷನ್‌ಗಳಲ್ಲಿ ಯಾವುದೇ ಧರ್ಮ ಅಥವಾ ಸಮುದಾಯದ ಬಗ್ಗೆ ಮಾತನಾಡುವುದಿಲ್ಲ ಎಂಬುದನ್ನು ನಾವು ಕಂಡುಕೊಂಡಿದ್ದೇವೆ.

ಕೇವಲ ಇಷ್ಟು ಮಾತ್ರವಲ್ಲದೆ, ಹಿಂದೂ ತನ್ನ ಮನೆಯನ್ನು ಮುಸ್ಲಿಮರಿಗೆ ಮಾರಲು ನಿರಾಕರಿಸಿದರೆ ಕಾನೂನು ಕ್ರಮ ಜರುಗಿಸುವ ಯಾವುದೇ ಷರತ್ತು ಅಥವಾ ಸೆಕ್ಷನ್ ಇಲ್ಲ. ಮಸೂದೆಯಲ್ಲಿ, ‘ಗುಂಪು’ ಎಂದಿದೆ ಹೊರತು ಧರ್ಮವನ್ನು ಹೆಸರಿಸಿಲ್ಲ. ಒಟ್ಟಾರೆಯಾಗಿ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ PCTV ಬಿಲ್‌ ಕುರಿತು ಸಂಪೂರ್ಣ ಮಾಹಿತಿಯನ್ನು ಗೂಗಲ್‌ ಸೇರಿದಂತೆ ಸರ್ಕಾರದ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಹುಡುಕಿದ್ದು ಅದರಲ್ಲಿ ಎಲ್ಲಿಯೂ ಹಿಂದೂಗಳಿಗೆ ತಾರತಮ್ಯವೆಸಗಲು ಸಾಧ್ಯತೆ ಇರುವ ಅಂಶಗಳು ಪತ್ತೆಯಾಗಿಲ್ಲ.

ಕೃಪೆ: ಕನ್ನಡ ಫ್ಯಾಕ್ಟ್‌ಚೆಕ್ 

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಹೆಸರಿನಲ್ಲಿ ಅಮೆರಿಕ ಗ್ರಂಥಾಲಯವನ್ನು ನಿರ್ಮಿಸಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಫ್ಯಾಕ್ಟ್‌ಚೆಕ್ : 2013ರಲ್ಲಿ ಕಾಂಗ್ರೆಸ್‌ ಮಂಡಿಸಿದ ಮಸೂದೆ ಬಗ್ಗೆ ಸುಳ್ಳು ಹೇಳಿದ ಯೂಟ್ಯೂಬ್ ನ ನಿರೂಪಕಿ

  • December 22, 2023 at 6:35 pm
    Permalink

    ಇಂತಹವರ ಮೇಲೆ ಕಾನೂನು ರೀತ್ಯಾ ದಯಾ ದಾಕ್ಷಿಣ್ಯ ವಿಲ್ಲದೆ ಕ್ರಮ ತೆಗೊದುಕೊಳ್ಳಿ. ಸುಳ್ಳುಗಳನ್ನು ಹೇಳಿ ದುಡ್ಡು ಮಾಡೋ ಜನ ಇವರು.

    Reply

Leave a Reply

Your email address will not be published.

Verified by MonsterInsights