ಫ್ಯಾಕ್ಟ್‌ಚೆಕ್ : ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಿರುವ ಸೀತಾರಾಮನ ವಿಗ್ರಹ ಎಂದು ಹಳೆಯ ಮತ್ತು ಸಂಬಂಧವಿಲ್ಲದ ಮೂರ್ತಿಗಳ ಫೋಟೊವನ್ನು ಹಂಚಿಕೊಳ್ಳುತ್ತಿರುವ BJP ನಾಯಕರು

ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಿರುವ ಸೀತಾರಾಮರ ಮೂರ್ತಿಗಳ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ.

ಬಲಪಂಥೀಯ ಸಿದ್ದಾಂತದ ಪ್ರತಿಪಾದಕ, ಚಕ್ರವರ್ತಿ ಸೂಲಿಬೆಲೆ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದು ಮೈಸೂರಿನ ಕಲಾವಿದ ಅರುಣ್ ಯೋಗಿರಾಜ್ ಈ ವಿಗ್ರಹಗಳನ್ನು ವಿನ್ಯಾಸಗೊಳಿಸಿದ್ದಾರೆ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಶೇರ್ ಮಾಡಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಇದೇ ಫೋಟೋವನ್ನು ತಮ್ಮ ಎಕ್ಟ್‌ ಖಾತೆಯಲ್ಲಿ ಟ್ವೀಟ್ ಮಾಡಿದ್ದು “ಎಲ್ಲಿ ರಾಮನೋ ಅಲ್ಲಿ ಹನುಮನು” ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ಕೆ ವಿಗ್ರಹ ಆಯ್ಕೆ ಅಂತಿಮಗೊಂಡಿದೆ. ನಮ್ಮ ನಾಡಿನ ಹೆಸರಾಂತ ಶಿಲ್ಪಿ ನಮ್ಮ ಹೆಮ್ಮೆಯ ಶ್ರೀ @yogiraj_arun ಅವರು ಕೆತ್ತಿರುವ ಶ್ರೀರಾಮನ ವಿಗ್ರಹ ಪುಣ್ಯಭೂಮಿ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ. ರಾಮ ಹನುಮರ ಅವಿನಾಭಾವ ಸಂಬಂಧಕ್ಕೆ ಇದು ಮತ್ತೊಂದು ನಿದರ್ಶನ. ಹನುಮನ ನಾಡು ಕರ್ನಾಟಕದಿಂದ ರಾಮಲಲ್ಲಾನಿಗೆ ಇದೊಂದು ಮಹತ್ವಪೂರ್ಣ ಸೇವೆ ಎಂದರೆ ತಪ್ಪಾಗಲಾರದು. ಎಂದು ಪೋಸ್ಟ್‌ ಮಾಡಿದ್ದಾರೆ. ಅಲ್ಲದೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕೂಡ ಇಂತಹದೇ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಹಾಗಿದ್ದರೆ ಮೈಸೂರಿನ ಕಲಾವಿದ ಅರುಣ್ ಯೋಗಿರಾಜ್ ರಚಿಸಿದ ಸೀತಾರಾಮನ ಮೂರ್ತಿ ಅಯೋಧ್ಯಯಲ್ಲಿ ಪ್ರತಿಷ್ಠಾಪಿಸಲು ಅಂತಿಮಗೊಂಡಿದೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಮೈಸೂರಿನ ಕಲಾವಿದ ಅರುಣ್ ಯೋಗಿರಾಜ್ ರಚಿಸಿದ ಸೀತಾರಾಮನ ಮೂರ್ತಿ ಅಯೋಧ್ಯಯಲ್ಲಿ ಪ್ರತಿಷ್ಠಾಪಿಸಲು ಅಂತಿಮಗೊಂಡಿದೆ ಎಂದು ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸದಾಗ ಇದು ಸುಳ್ಳು ಎಂದು ತಿಳಿದುಬಂದಿದೆ. ವಾಸ್ತವವಾಗಿ ಅಯೋಧ್ಯಯಲ್ಲಿ ಪ್ರತಿಷ್ಠಾಪಿಸುವ ರಾಮನ ಮೂರ್ತಿ ಅಥವಾ ವಿಗ್ರಹ ಯಾವುದು ಎಂದು ಇನ್ನು ಬಹಿರಂಗಪಡಿಸದೆ ರಹಸ್ಯವಾಗಿಡಲಾಗಿದೆ ಎಂದು ಟ್ರಸ್ಟ್‌ ತಿಳಿಸಿದೆ.

ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ಮೂರ್ತಿಯೇ ಅಂತಿಮ ಆಗಿದೆ ಎಂಬ ವದಂತಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಶ್ರೀರಾಮ ಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ಅದನ್ನು ಅಲ್ಲಗಳೆದು, ಯಾವುದೂ ಅಂತಿಮ ಆಗಿಲ್ಲ ಎಂದಿದ್ದಾರೆ.

ಹಾಗಿದ್ದರೆ ವೈರಲ್ ಪೋಸ್ಟ್‌ನಲ್ಲಿ ಇರುವ ಮೂರ್ತಿ ಯಾವುದು?

ಇನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಯೋಧ್ಯಯಲ್ಲಿ ಪ್ರತಿಷ್ಠಾಪಿಸಲು ಉದ್ದೇಶಿಸಿರುವ ಅರುಣ್ ಯೋಗಿರಾಜ್ ರಚನೆಯ ರಾಮನ ಮೂರ್ತಿ ಎಂದು ಹೇಳಲಾಗುತ್ತಿರುವ ಚಿತ್ರ 2019ರಲ್ಲಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಯು “ಸ್ಕಲ್ಪ್ಟರ್ಸ್ ಮ್ಯಾಪಿಂಗ್ ಮೈಸೂರು” ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಿದ ವರದಿಯೊಂದು ಲಭ್ಯವಾಗಿದೆ.

A person posing with statues Description automatically generated

ಅಯೋಧ್ಯೆಯಲ್ಲಿನ ಬಾಲ ರಾಮನ ಪ್ರತಿಮೆ ಬಗ್ಗೆ ಸುಳ್ಳು ಮಾಹಿತಿ ಹರಡಲಾಗುತ್ತಿದೆ ಎಂದು ಶಿಲ್ಪಿ ಅರುಣ್ ಪತ್ನಿ ಹೇಳಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೋ ಅರುಣ್ ಕೆಲ ವರ್ಷಗಳ ಹಿಂದೆ ಗ್ರಾಹಕರಿಗಾಗಿ ಮಾಡಿದ್ದ ಚಿತ್ರ ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತು ಅಯೋಧ್ಯೆಯಲ್ಲಿ ಸ್ಥಾಪಿಸಲಿರುವ ರಾಮನ ಪ್ರತಿಮೆಯು ಐದು ವರ್ಷದ ಬಾಲಕನ ಶಿಲ್ಪದಂತೆ ಕಾಣುತ್ತದೆ. ಅದಲ್ಲದೆ, ಪ್ರೋಟೋಕಾಲ್ ಪ್ರಕಾರ ಈ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಬಾರದು ಎಂದು ಅರುಣ್ ಅವರ ಅಣ್ಣ ಕೂಡ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಆತುರಕ್ಕೆ ಬಿದ್ದ ಬಿಜೆಪಿ ನಾಯಕರು

ಅಯೋಧ್ಯೆಯ ಶ್ರೀರಾಮ ಮೂರ್ತಿ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ಮೂರ್ತಿಯಾಗಿದೆ ಎಂದು ಬಿಜೆಪಿಯ ಉನ್ನತ ನಾಯಕರು ಸೇರಿ ಪ್ರಮುಖರು ಹೇಳಿಕೆಗಳನ್ನು ನೀಡುವುದು, ಮಾಧ್ಯಮಗಳು ಈ ಕುರಿತು ಸುದ್ದಿಯನ್ನು ಬಿತ್ತರಿಸಿದ ವಿಷಯಗಳಿಂದಾಗಿ ಮೂರ್ತಿ ಆಯ್ಕೆ ದಿಢೀರನೆ ಗೊಂದಲ ಸೃಷ್ಟಿಗೂ ಕಾರಣವಾಗಿದೆ. ಯಾಕೆ ಹೀಗಾಯಿತು ಎಂಬುದು ಇನ್ನೂ ಗೊತ್ತಾಗಿಲ್ಲ. ಅಯೋಧ್ಯೆಯಲ್ಲಿ ಈ ಕುರಿತು ಯಾವುದೇ ಗೊಂದಲ ಇಲ್ಲ. ಆದರೆ ಕರ್ನಾಟಕದ ರಾಜಕಾರಣಿಗಳು ಪೈಪೋಟಿಗೆ ಬಿದ್ದಂತೆ ಹೇಳಿಕೆಗಳನ್ನು ನೀಡಿ ಅಭಿನಂದಿಸಿರುವುದು ಕುತೂಹಲಕ್ಕೂ ಕಾರಣವಾಗಿದ್ದು, ಇದರ ಹಿಂದೇನಾದರೂ ರಾಜಕೀಯ ಇದೆಯೇ ಎಂಬುದೂ ಅನುಮಾನಕ್ಕೆ ಕಾರಣವಾಗಿದೆ.

ವಾಸ್ತವವಾಗಿ ಮೈಸೂರಿನ ಅರುಣ್ ಯೋಗಿರಾಜ್, ಹೊನ್ನಾವರದ ಗಣೇಶ್ ಎಲ್. ಭಟ್ ಮತ್ತು ರಾಜಸ್ತಾನದ ಸತ್ಯನಾರಾಯಣ ಪಾಂಡೆ ಅವರೇ ಅಂತಿಮವಾಗಿ ಆಯ್ಕೆಗೊಂಡ ಶಿಲ್ಪಿಗಳು. ಇವರು ಕೆತ್ತಿದ 51 ಇಂಚು ಎತ್ತರದ ಬಾಲರಾಮನ ಮೂರ್ತಿಗಳೇ ಅಂತಿಮವಾಗಿದ್ದು, ಇವುಗಳಲ್ಲಿ ಫೈನಲ್ ಆಗಿ ಯಾವ ಮೂರ್ತಿ ಅಂತಿಮಗೊಳ್ಳಲಿದೆ ಎಂಬುದರ ಕುರಿತು ವೋಟಿಂಗ್ ಆಗಿದ್ದು, ಫಲಿತಾಂಶ ಹೊರಬೀಳುವುದು ಬಾಕಿ ಇದೆ. ವೋಟಿಂಗ್ ಮಾಡಿ ಬಂದಿದ್ದೇವೆ ಫಲಿತಾಂಶ ಪ್ರಕಟಿಸುತ್ತೇವೆ, ಅದನ್ನು ಟ್ರಸ್ಟ್ ಪ್ರಕಟಿಸಲಿದೆ ಎಂದು ಸ್ವತಃ ಪೇಜಾವರ ಶ್ರೀಗಳು ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, 2019ರಲ್ಲಿ ಮೈಸೂರಿನ ಅರುಣ್ ಯೋಗಿರಾಜ್ ಗ್ರಾಹಕರಿಗಾಗಿ ರಚಿಸಿದ ಸೀತಾರಾಮನ ಮೂರ್ತಿಯನ್ನು ಅಯೋಧ್ಯಯಲ್ಲಿ ಪ್ರತಿಷ್ಠಾಪಿಸಲು ಆಯ್ಕೆಯಾಗಿರುವ ರಾಮನ ಮೂರ್ತಿ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹೀಗೆ ಆತುರಕ್ಕೆ ಬಿದ್ದು ಸುಳ್ಳು ಹಂಚಿಕೊಳ್ಳುತ್ತಿರುವ ಬಿಜೆಪಿ ನಾಯಕರ ಉದ್ದೇಶದ ಹಿಂದೆ ರಾಜಕೀಯ ಅಡಗಿದೆ ಎಂದು ಹೇಳಲಾಗುತ್ತಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : 26ನೇ ವಯಸ್ಸಿನಲ್ಲಿ ನರೇಂದ್ರ ಮೋದಿ ಕೇದಾರನಾಥ ದೇವಾಲಯದಲ್ಲಿ ತಲೆಕೆಳಗಾಗಿ ಪ್ರದಕ್ಷಿಣೆ ಹಾಕುತ್ತಿದ್ದರಂತೆ? ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights