ಫ್ಯಾಕ್ಟ್‌ಚೆಕ್ : ತೆಲುಗು ನಟ ಪ್ರಭಾಸ್ ರಾಮ ಮಂದಿರಕ್ಕೆ 50 ಕೋಟಿ ರೂ ದೇಣಿಗೆ ನೀಡಿದ್ದಾರೆ ಎಂಬುದು ನಿಜವೇ?

ಅಯೋಧ್ಯೆಯ ರಾಮಮಂದಿರದಲ್ಲಿ ರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ದಿನಗಣನೆ ಶುರುವಾಗಿದೆ. ಸೋಮವಾರ(ಜನವರಿ 22) ರಾಮಮಂದಿರ ಉದ್ಘಾಟನೆ ನಡೆಯಲಿದೆ. ಅಯೋಧ್ಯೆಯ ರಾಮ ಮಂದಿರದ ಉದ್ಘಾಟನೆಗೆ ತೆಲುಗು ನಟ ಪ್ರಭಾಸ್ 50 ಕೋಟಿ ರೂ ದೇಣಿಗೆ ನೀಡಿದ್ದಾರೆ ಎಂದು ಸುದ್ದಿಗಳು ಪ್ರಸಾರವಾಗುತ್ತಿವೆ.

ಏಷ್ಯಾನೆಟ್ ಸುವರ್ಣ ನ್ಯೂಸ್ ಕನ್ನಡ 24*7 ವಾಹಿನಿ ತನ್ನ ಸುದ್ದಿ ಪೋರ್ಟಲ್‌ನಲ್ಲಿ ಸುದ್ದಿಯನ್ನು ಪ್ರಸಾರ ಮಾಡಿದ್ದು ರಾಮ ಮಂದಿರ ಉದ್ಘಾಟನಾ ದಿನವಾದ ಜನವರಿ 22 ರಂದು ಬರುವ ಭಕ್ತರಿಗೆ ಊಟದ ವ್ಯವಸ್ಥೆಗೆಂದು ತೆಲುಗು ನಟ ಪ್ರಭಾಸ್ 50 ಕೋಟಿ ರೂ ದೇಣಿಗೆ ನೀಡುತ್ತಿದ್ದಾರೆ ಎಂದು ಸುದ್ದಿಯನ್ನು ಪ್ರಸಾರ ಮಾಡಲಾಗಿದೆ.

ಅಯೋಧ್ಯೆ ಪ್ರತಿಷ್ಠಾ ದಿನದಂದು ಆಹಾರದ ವೆಚ್ಚ ಬರೋಬ್ಬರಿ 50 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.  ಪ್ರಭಾಸ್ ಸಂಪೂರ್ಣ ವೆಚ್ಚವನ್ನು ಭರಿಸಲು ನಿರ್ಧರಿಸುವ ಮೂಲಕ ರಾಮಮಂದಿರದ  ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ಎಲ್ಲಾ ಭಕ್ತರಿಗೆ  ಔತಣವನ್ನು ಏರ್ಪಡಿಸುವ ವ್ಯವಸ್ಥೆ ವಹಿಸಿಕೊಂಡಿದ್ದಾರೆ .  ಸುಮಾರು 50 ಕೋಟಿ ರೂಪಾಯಿಗಳ ಅಂದಾಜು ವೆಚ್ಚವನ್ನು ತಾವೇ ನೀಡುತ್ತಿದ್ದಾರೆ ಎಂದು ಸುದ್ದಿ ಪ್ರಸಾರವಾಗಿದೆ.

ಸದ್ಯ ಟಾಲಿವುಡ್‌ನಲ್ಲಿ ಇದೇ ವಿಚಾರ ಭಾರೀ ಸದ್ದು ಮಾಡುತ್ತಿದ್ದು, ನಟ ಪ್ರಭಾಸ್ ಅಯೋಧ್ಯೆ ರಾಮಮಂದಿರಕ್ಕೆ ಬರೋಬ್ಬರಿ 20 ಕೋಟಿ ರೂ. ದೇಣಿಗೆ ನೀಡಿದ್ದಾರೆ ಎನ್ನುವ ವದಂತಿ ಹರಡಿದೆ. ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚಿಸುತ್ತಿದ್ದಾರೆ. ಮತ್ತೆ ಕೆಲವರು 20 ಕೋಟಿ ರೂ. ಅಲ್ಲ, 50 ಕೋಟಿ ರೂ. ಎನ್ನುತ್ತಿದ್ದಾರೆ. ಹಾಗಿದ್ದರೆ ಈ ಸುದ್ದಿ ನಿಜವೇ ಪ್ರಭಾಸ್ ನಿಜವಾಗಿಯೂ ರಾಮ ಮಂದಿರ ಉದ್ಘಾಟನೆಗೆ ಆಗಮಿಸುವ ಭಕ್ತರಿಗೆ ಊಟಕ್ಕೆ 50 ಕೋಟಿ ರೂ ದೇಣಿಗೆ ನೀಡಿದ್ದಾರೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ರಾಮ ಮಂದಿರ ಉದ್ಘಾಟನೆಗೆ ಬರುವ ಭಕ್ತರಿಗೆ ಪ್ರಸಾದ ವಿತರಿಸಲು ಪ್ರಭಾಸ್ 50 ಕೋಟಿ ರೂ. ವ್ಯಯಿಸುತ್ತಾರೆ ಎಂದು ಹೇಳಿದ್ದು ಆ ವಿಡಿಯೋ ವೈರಲ್ ಆಗುತ್ತಿದೆ. ರಾಮಮಂದಿರ ಲೋಕಾರ್ಪಣೆ ದಿನ 300 ಜಾಗಗಳಲ್ಲಿ ಭಕ್ತಿರಿಗೆ ಪ್ರಸಾದ ವಿತರಿಸುವ ಪ್ರಯತ್ನ ನಡೆಯುತ್ತದೆ. ಅದಕ್ಕೆ ತಗುಲುವ ವೆಚ್ಚವನ್ನು ಭರಿಸಲು ತೆಲುಗು ನಟ ಪ್ರಭಾಸ್ ಮುಂದೆ ಬಂದಿದ್ದಾರೆ. ಬರೋಬ್ಬರಿ 50 ಕೋಟಿ ರೂ. ವ್ಯಯಿಸುತ್ತಿದ್ದಾರೆ ಎಂದು ಆ ವಿಡಿಯೋದಲ್ಲಿ ಹೇಳಲಾಗಿದೆ.

ಪ್ರಭಾಸ್ 50 ಕೋಟಿ ದೇಣಿಗೆ ನೀಡಿದ್ದಾರೆ ಎಂಬುದು ಸುಳ್ಳು

ಪ್ರಭಾಸ್ ರಾಮ ಮಂದಿರಕ್ಕೆ 50 ಕೋಟಿ ರೂ ದೇಣಿಗೆ ನೀಡಿದ್ದಾರೆ ಎಂಬ ಸುದ್ದಿ ಸುಳ್ಳು ಎಂದು ಇಂಡಿಯಾ ಟುಡೆ ವರದಿ ಮಾಡಿದೆ.  ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ, ಆಂಧ್ರ ಪ್ರದೇಶದ ಶಾಸಕ ಚಿರ್ಲಾ ಜಗ್ಗಿರೆಡ್ಡಿ ಅವರು ಮಾನಾಡುತ್ತಾ, ರಾಮ ಮಂದಿರದ ಉದ್ಘಾಟನೆಯ ದಿನದಂದು ಪ್ರಭಾಸ್ ಆಹಾರದ ವೆಚ್ಚವನ್ನು ನೋಡಿಕೊಳ್ಳುತ್ತಾರೆ ಎಂದು ಹೇಳಿಕೆ ನೀಡಿದ್ದರು. ಆದರೆ ಪ್ರಭಾಸ್ ತಂಡದ ಸದಸ್ಯರು ಈ ವದಂತಿಗಳನ್ನು ತಳ್ಳಿಹಾಕಿದ್ದು ಇದು “ನಕಲಿ ಸುದ್ದಿ” ಎಂದು ಹೇಳಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತೆಲುಗು ನಟ ಪ್ರಭಾಸ್ ರಾಮ ಮಂದಿರಕ್ಕೆ 50 ಕೋಟಿ ರೂ ದೇಣಿಗೆ ನೀಡಿದ್ದಾರೆ ಎನ್ನುವ ಸುದ್ದಿ ಜೋರು ಸದ್ದು ಮಾಡುತ್ತಿರುವಾಗಲೇ, ಪ್ರಭಾಸ್ ರಾಮಮಂದಿರಕ್ಕೆ 20 ಕೋಟಿ ರೂ. ಆಗಲಿ 50 ಕೋಟಿ ರೂ. ಆಗಲಿ ದೇಣಿಗೆ ನೀಡಿದ್ದಾರೆ ಎನ್ನುವುದು ಕೇವಲ ವದಂತಿ. ಅದರಲ್ಲಿ ಯಾವುದೇ ಹುರುಳಿಲ್ಲ ಎಂದು ಪ್ರಭಾಸ್ ಆಪ್ತರೇ ಸ್ಪಷ್ಟಪಡಿಸಿರುವುದಾಗಿ M9 ಸುದ್ದಿ ಪೋರ್ಟಲ್‌ವೊಂದು ವರದಿ ಮಾಡಿದೆ.

ರಾಮ ಮಂಧಿರ ಉದ್ಘಾಟನೆಗೆ ತೆಲುಗು ನಟ ಪ್ರಭಾಸ್ 50 ಕೋಟಿ ದೇಣಿಗೆ ನೀಡಿದ್ದಾರೆ ಎಂಬುದಾಗಲಿ ಅಥವಾ 20 ಕೋಟಿ ರೂ ನೀಡಿದ್ದಾರೆ ಎಂಬ ಸುದ್ದಿಯಾಗಲಿ ನಿಜವಲ್ಲ ಎಂಬುದನ್ನು ಅವರ ಆಪ್ತರು ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆಯೂ ಕನ್ನಡ ಚಿತ್ರ ನಟ ಯಶ್ ರಾಮ ಮಂದಿರಕ್ಕೆ 50 ಕೋಟಿ ರೂ ದೇಣಿಗೆ ನೀಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು ಆದರೆ ಆದು ಸುಳ್ಳು ಸುದ್ದಿ ಎಂದು ಫ್ಯಾಕ್ಟ್‌ಚೆಕ್ ಮೂಲಕ ವಾಸ್ತವ ತಿಳಿಸಲಾಗಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, ರಾಮ ಮಂದಿರ ಉದ್ಘಾಟನಾ ದಿನವಾದ ಜನವರಿ 22 ರಂದು ಬರುವ ಭಕ್ತರಿಗೆ ಊಟದ ವ್ಯವಸ್ಥೆಗೆಂದು ತೆಲುಗು ನಟ ಪ್ರಭಾಸ್ 50 ಕೋಟಿ ರೂ ದೇಣಿಗೆ ನೀಡಿದ್ದಾರೆ ಎಂಬುದು ಸುಳ್ಳು.

ದೇಶದಲ್ಲಿ ಬೇರೇ ಯಾವುದೇ ಸಮಸ್ಯೆಗಳೇ ಇಲ್ಲವೆಂಬಂತೆ ಕೇಂದ್ರ ಸರ್ಕಾರ ಸೇರಿದಂತೆ ಎಲ್ಲಾ ಮುಖ್ಯವಾಹಿನಿಯ ಮಾಧ್ಯಮಗಳು ರಾಮನ ಭಜನೆಯಲ್ಲಿ ನಿರತವಾಗಿವೆ. 24*7  ನ್ಯೂಸ್ ಚಾನೆಲ್ ಗಳಲ್ಲೂ  ರಾಮಮಂದಿರ ಸುದ್ದಿಗಳದ್ದೇ ಪಾರುಪತ್ಯ, 24 ಗಂಟೆಗಳಲ್ಲಿ ಸುಮಾರು 20 ಗಂಟೆ ರಾಮನ ಭಜನೆಗೆಂದು ಮೀಸಲಿರಿಸಲಾಗಿದೆ. ಹಾಗಾಗಿ ಇಂತಹ ಸುಳ್ಳು ಸುದ್ದಿಗಳು ರಾಮನ ಹೆಸರಿನಲ್ಲಿ ಪ್ರಸಾರವಾಗುತ್ತಿವೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಲಾಲ್ ಚೌಕ್‌ನಲ್ಲಿ ರಾಮನ ಚಿತ್ರ ಪ್ರದರ್ಶಿಸಲಾಗಿದೆ ಎಂಬುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights