Fact Check | ಹೌದು! KRS ಅಣೆಕಟ್ಟು ಆರಂಭಿಸಿದ್ದು ‘ಮೈಸೂರು ಹುಲಿ’ ಟಿಪ್ಪು ಸುಲ್ತಾನ್

ಇತ್ತೀಚೆಗೆ ತುಮಕೂರಿನಲ್ಲಿ ನಡೆದ ಹಿಂದುಳಿದ ವರ್ಗಗಳ ಒಕ್ಕೂಟದ 10ನೇ ವರ್ಷದ ಸಂಭ್ರಮಾಚರಣೆ ವೇಳೆ ಕರ್ನಾಟಕದ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಅವರು ನೀಡಿರುವ ಹೇಳಿಕೆಯ ಸುದ್ದಿಯ ಸ್ಕ್ರೀನ್‌ಶಾಟ್‌ಅನ್ನು ಹಲವು ಬಲಪಂಥೀಯ ಪ್ರತಿಪಾದಕ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ ಮೂಲಕ ಹಂಚಿಕೊಳ್ಳುತ್ತಿದ್ದಾರೆ.

ಸಚಿವ ಕೆ.ಎನ್.ರಾಜಣ್ಣ ಏನು ಹೇಳಿದ್ದರು?

ಮೈಸೂರು ಸಮೀಪದ ಮಂಡ್ಯ ಜಿಲ್ಲೆಯಲ್ಲಿರುವ ಕನ್ನಂಬಾಡಿ ಕಟ್ಟೆ (ಕೆಆರ್‌ಎಸ್) ಅಣೆಕಟ್ಟಿನ ನಿರ್ಮಾಣವನ್ನು ಆರಂಭದಲ್ಲಿ ಟಿಪ್ಪು ಸುಲ್ತಾನ್ ಪ್ರಾರಂಭಿಸಿದರು ನಂತರ ಅದನ್ನು ಮೈಸೂರು ಮಹಾರಾಜರು, ವಿಶೇಷವಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮುಂದುವರಿಸಿದರು ಎಂದು ತಮ್ಮ ಭಾಷಣದಲ್ಲಿ ಹೇಳಿದ್ದರು. ಈ ಹೇಳಿಕೆಯನ್ನು ಹಲವರು ಅಲ್ಲೆಗಳೆದಿದ್ದು ಸಚಿವ ರಾಜಣ್ಣ ಹೇಳಿಕೆ ತಪ್ಪು ಮತ್ತು ಇದು ಮತಾಂತರ ಮಾಡಿದ ಟಿಪ್ಪುವಿನ ವೈಭವೀಕರಣ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಿದ್ದಾರೆ.

ಸಾಬು ಚಂದ್ರಿಕಿ ಎಂಬ ಸಾಮಾಜಿಕ ಮಾಧ್ಯಮದ ಬಳಕೆದಾರರು ” KRS ಅಣೆಕಟ್ಟು ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದು ದಿನಾಂಕ 11 ನವೆಂಬರ್ 1911. ಟಿಪ್ಪು ಸುಲ್ತಾನ್ ಮರಣ ಹೊಂದಿದ್ದು 04 ಮೇ 1799. 1799 ರಲ್ಲೇ ಮರಣ ಹೊಂದಿದ ಟಿಪ್ಪುವಿನ ‘ಕುಲೇ’ ಬಂದು 1911 ರಲ್ಲಿ ಅಡಿಗಲ್ಲು ಹಾಕಿತ್ತಾ?? ಕಾಂಗ್ರೆಸಿನವರು ಇಷ್ಟು ವರ್ಷ ದೇಶದ ಜನತೆಗೆ ಕಿವಿಯಲ್ಲಿ ಹೂ ಇಟ್ಟು ಆಡಳಿತ ಮಾಡ್ತಿದ್ರು ಈಗ ಕಬ್ಬನ್ ಪಾರ್ಕನ್ನೇ ಜನರ ಕಿವಿಗೆ ಇಡೋಕೆ ಪ್ರಯತ್ನ ಮಾಡ್ತಾ ಇದ್ದಾರೆ” ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಿದ್ದಾರೆ.

“ಸ್ವಲ್ಪ ಸಮಯ ಹೋದ್ರೆ ಇವರು ಮಂಗಳೂರು ಪಂಪ್ವೇಲ್ ಮೇಲ್ಸೇತುವೆ ಕಟ್ಟಿದ್ದು ಟಿಪ್ಪು, ಹಾಸನ ಬಸ್ ಸ್ಟ್ಯಾಂಡ್ ಕಟ್ಟಿದ್ದು ಟಿಪ್ಪು, ಬೆಂಗಳೂರು- ಮೈಸೂರು ಹೆದ್ದಾರಿ ಮಾಡಿದ್ದು, ಭಾರತ್ ಸಿನಿಮಾಸ್ ಬಿಲ್ಡಿಂಗ್ ಕಟ್ಟಿದ್ದು ಟಿಪ್ಪು ಅಂತ ಹೇಳೋಕೆ ಶುರು ಮಾಡ್ಕೊಳ್ತಾರೆ. ಕಾಂಗ್ರೆಸಿನವರು ಇಷ್ಟು ವರ್ಷ ದೇಶದ ಜನತೆಗೆ ಕಿವಿಯಲ್ಲಿ ಹೂ ಇಟ್ಟು ಆಡಳಿತ ಮಾಡ್ತಿದ್ರು ಈಗ ಈಗ ಕಬ್ಬನ್ ಪಾರ್ಕನ್ನೇ ಜನರ ಕಿವಿಗೆ ಇಡೋಕೆ ಪ್ರಯತ್ನ ಮಾಡ್ತಾ ಇದ್ದಾರೆ” ಎಂಬ ಹೇಳಿಕೆಯೊಂದಿಗೆ ಸಚಿನ್ ಜೈನ್ ಹಳೆಯೂರ್ ಎಂಬುವವರು ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ.

ಪ್ರಶಾಂತ್ ಆಚಾರ್ಯ ಎಂಬ ಎಕ್ಸ್ ಬಳಕೆದಾರರೊಬ್ಬರು ತಮ್ಮ ಖಾತೆ ಮೂಲಕ ಪೋಸ್ಟ್‌ ಹಂಚಿಕೊಂಡಿದ್ದು, ಕಾಂಗ್ರೆಸ್ ಗಳಿಗೆ, ಇತಿಹಾಸ ತಿರುಚಿ ಸುಳ್ಳು ಹೇಳುವುದು ಕಾಯಕ, ಮೈಸೂರು & ರಾಜ್ಯದ ಹೆಸರನ್ನು ಹಾಳು ಮಾಡುತ್ತಿದ್ದಾರೆ@KNRajanna_Off  ಮೊದಲು ಇತಿಹಾಸ ಓದಿ, ವಿಶ್ವೇಶ್ವರಯ್ಯ ಅವರ ಸಾರಥ್ಯದಲ್ಲಿ ಕಲ್ಲಂಬಾಡಿ ಕಟ್ಟೆ ಕಟ್ಟಲು ಮೈಸೂರು ಮಹಾರಾಜರು ಚಿನ್ನ ಅಡವಿಟ್ಟಿದ್ದರು, ಕಾಂಗ್ರೆಸ್ಸಿಗಳು ನಿಮ್ಮ ಸ್ವಾರ್ಥಕ್ಕೆ ದೇಶವನ್ನೇ ಅಡವಿಟ್ಟಿರಿ ಎಂದು ಬರೆದೆಕೊಂಡಿದ್ದಾರೆ.

ಹಾಗಿದ್ದರೆ ಸಚಿವ ರಾಜಣ್ಣನವರು ಕಾರ್ಯಕ್ರಮವೊಂದರಲ್ಲಿ ಹೇಳಿದಂತೆ ಕನ್ನಂಬಾಡಿ ಕಟ್ಟೆಯನ್ನು ಮೊದಲು ಪ್ರಾರಂಭ ಮಾಡಿದ್ದು ಟಿಪ್ಪು ಸುಲ್ತಾನ್  ಅವರ ನಂತರ ನಾಲ್ವಡಿ ಕೃಷ್ಣರಾಜ ಓಡೆಯರು ಮುಂದುವರೆಸಿದರು ಎಂಬ ಹೇಳಿಕೆ ಸುಳ್ಳೇ? ಸೋಶಿಯಲ್ ಮೀಡಿಯಾದಲ್ಲಿ ಮಾಡಲಾಗುತ್ತಿರುವ ಪ್ರತಿಪಾದನೆ ನಿಜವೇ? ಇವೆರಡರಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಹಕಾರಿ ಸಚಿವ ರಾಜಣ್ಣನವರು ಕನ್ನಂಬಾಡಿ ಅಣೆಕಟ್ಟಿಗೆ ಸಂಬಂಧಿಸಿದಂತೆ ಉಲ್ಲೇಖಿಸಿರುವ ಟಿಪ್ಪು ಹೆಸರು ಈಗ ಚರ್ಚೆಯ ಕೇಂದ್ರಬಿದ್ದುವಾಗಿದ್ದು ನಿಜವಾಗಿಯೂ ಟಿಪ್ಪು ಕನ್ನಂಬಾಡಿ ಅಣೆಕಟ್ಟ (ಕೆಆರ್‌ಎಸ್‌ ಡ್ಯಾಂ) ನ್ನು ಪ್ರಾರಂಭಿಸಿದ್ದು ನಿಜವೇ ಎಂದು ಪರಿಶೀಲಿಸಿದಾಗ, ಕೆಲವು ಶಿಲಾ ಶಾಸನದ ಉಲ್ಲೇಖಗಳು ಮತ್ತು ಲೇಖನಗಳು ಹೌದು ಎಂದು ಹೇಳುತ್ತವೆ.

ಈ ಕುರಿತು ಫ್ಯಾಕ್ಟ್‌ಚೆಕ್ ನಡೆಸಿದಾಗ KRS ಅಣೆಕಟ್ಟೆ ನಿರ್ಮಾಣ ಮಾಡಲು ಅನೇಕ ಜನ ಶ್ರಮಿಸಿದ್ದಾರೆ. ಕ್ರಿ.ಶ. 1595ರಲ್ಲಿ ದಳವಾಯಿ ಕುಮಾರರಾಮ, 1659-1673ರ ನಡುವೆ ಕಂಠೀರವ ನರಸರಾಜ ಓಡೆಯರು ಶ್ರೀರಂಗಪಟ್ಟಣದ ಉತ್ತರದಲ್ಲಿ ಅಣೆಕಟ್ಟನ್ನು ನಿರ್ಮಿಸಿದ್ದರು. 1638-1659 ಚಿಕ್ಕದೇವರಾಜ ಓಡೆಯರ್ ಕಾಲದಲ್ಲಿ ಕಾವೇರಿಗೆ ಒಂದು ಅಣೆಕಟ್ಟು ಕಟ್ಟಲು ಪ್ರಯತ್ನಿಸಿದ್ದರು. ಹಾಗೆಯೇ. ಟಿಪ್ಪು ಸುಲ್ತಾನ್ ಕೂಡ ಅಣೆಕಟ್ಟೆ ಕಟ್ಟಲು ಶಂಕುಸ್ಥಾಪನೆ ನೆರವೇರಿಸಿ ಪರ್ಶಿಯನ್ ಭಾಷೆಯಲ್ಲಿ ಶಾಸನವೊಂದನ್ನು ಬರೆಸಿದ್ದು 1911 ರಲ್ಲಿ ಪತ್ತೆಯಾಗಿದೆ.

ಈ ಶಾಸನದಲ್ಲಿ “ದೇವನ ಛಾಯ ಸ್ವರೂಪದ ಹಜರತ್ ಟಿಪ್ಪು ಸುಲ್ತಾನನಾದ ನಾನು ಬೇಡಿದ್ದನ್ನು ನಿಡುವ ಭಗವಂತನ ಕೃಪೆಯಿಂದ ಪವಿತ್ರವಾದ ಕಲೀಫ್ ಪದವಿಯಲ್ಲಿದ್ದು, ಜಗತ್ತಿನಲ್ಲಿಯೇ ಸರ್ವಶ್ರೇಷ್ಠರಾಗಿದ್ದ ಪೈಗಂಬರ್ ಮಹಮ್ಮದ್ ರವರ ಪ್ರೇರಣಾರೂಪವಾದ ದಿವ್ಯ ಸಹಾಯದಿಂದಲೂ, ರಾಜಧಾನಿಗೆ ಪಶ್ಚಿಮ ದಿಕ್ಕಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಶಾಶ್ವತವಾದ ಅಣೆಯನ್ನು ನಿರ್ಮಾಣ ಮಾಡಲು ಶಂಕುಸ್ಥಾಪನೆ ನೆರವೇರಿಸಿದ್ದೇನೆ.” ಎಂದು ಬರೆಯಲಾಗಿದೆ.

1911 ರಲ್ಲಿ ಕೃಷ್ಣರಾಜ ಸಾಗರ ಅಣಿಕಟ್ಟೆ(ಕನ್ನಬಾಂಡಿ ಅಣೆಕಟ್ಟೆ)ಯ  ಶಂಕು ಸ್ಥಾಪನೆ ನೆರವೇರಿಸುವ ಸಂದರ್ಭದಲ್ಲಿ ಸಿಕ್ಕ ಈ ಶಾಸನವನ್ನು ಅಂದಿನ ಮೈಸೂರು ಮಹಾರಾಜರದ ನಾಲ್ಪಡಿ ಕೃಷ್ಣರಾಜ ಒಡೆಯರ್‌ರವರು ಕನ್ನಡಕ್ಕೆ ಅನುವಾದಿಸಿದ ಈ ಶಾಸನದ ಪೂರ್ಣಪ್ರತಿಯನ್ನು ಹಾಕಿಸಿರುವುದನ್ನು ನಾವು ನೋಡಬಹುದಾಗಿದೆ.

ಪಠ್ಯ ನ ಚಿತ್ರವಾಗಿರಬಹುದು

ಡೆಕ್ಕನ್ ಕ್ರೋನಿಕಲ್ ಸಹ ಟಿಪ್ಪು ಸುಲ್ತಾನ್ ಕಾವೇರಿಗೆ ಅಣೆಕಟ್ಟೆ ಕಟ್ಟಲು ಪ್ರಯತ್ನಿಸಿ ಶಂಕುಸ್ಥಾಪನೆ ನೆರವೇರಿಸಿದ್ದನ್ನು ತನ್ನ ಲೇಖನದಲ್ಲಿ ಉಲ್ಲೇಖಿಸಿದೆ. 

ಮೈಸೂರು ಸಾಮ್ರಾಜ್ಯದ ಆರ್ಥಿಕತೆ ಎಂಬ ಲೇಖನದಲ್ಲಿ ಟಿಪ್ಪು ಸುಲ್ತಾನ್ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಉಲ್ಲೇಖಿಸುತ್ತ, ಆತ KRS ಅಣೆಕಟ್ಟೆಗೆ ಶಂಕುಸ್ಥಾಪನೆ ನೆರವೇರಿರುವುದನ್ನು ಉಲ್ಲೇಖಿಸಲಾಗಿದೆ. KRS ಅಣೆಕಟ್ಟೆಗೆ ಸಂಬಂಧಿಸಿದಂತೆ ಇತಿಹಾಸಕಾರ ಪ್ರೋ. ನಂಜರಾಜ ಅರಸು ಅವರು ಕೂಡ “ನಾನು ಕನ್ನಂಬಾಡಿ ಕಟ್ಟೆ- ಹೀಗೊಂದು ಆತ್ಮಕಥೆ’ ಎಂಬ ಮಹತ್ವದ ಕೃತಿಯನ್ನು ರಚಿಸಿದ್ದಾರೆ ಎಂದು ಕನ್ನಡ ಫ್ಯಾಕ್ಟ್‌ಚೆಕ್ ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕನ್ನಂಬಾಡಿ ಅಣೆಕಟ್ಟನ್ನು ಪ್ರಾರಂಭಿಸಿದ್ದು ಟಿಪ್ಪು. ಕಾಲಾ ನಂತರ ಅದನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಪೂರ್ಣಗೊಳಿಸಿದ್ದಾರೆ ಎಂಬ ಸಚಿವ ರಾಜಣ್ನ ಅವರ ಹೇಳಿಕೆಯಲ್ಲಿ ಸತ್ಯವಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಇಲ್ಲಿ ಟಿಪ್ಪು ಹೆಸರನ್ನು ಉಲ್ಲೇಖಿಸಲಾಗಿದೆ ಎಂಬ ಒಂದೇ ಕಾರಣಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ರಾಜಣ್ಣರವರ ಹೇಳಿಕೆ ಸುಳ್ಳು ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ತೆಲುಗು ನಟ ಪ್ರಭಾಸ್ ರಾಮ ಮಂದಿರಕ್ಕೆ 50 ಕೋಟಿ ರೂ ದೇಣಿಗೆ ನೀಡಿದ್ದಾರೆ ಎಂಬುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights