ಫ್ಯಾಕ್ಟ್‌ಚೆಕ್ : ದೆಹಲಿ ಗಡಿಯಲ್ಲಿನ ರೈತರ ಹೋರಾಟದ ದೃಶ್ಯಗಳು ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ

ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದೇಶದ ರೈತರು ‘ದೆಹಲಿ ಚಲೋ’ ಹೆಸರಿನಲ್ಲಿ ಬೃಹತ್ ಪ್ರತಿಭಟನೆ ಆರಂಭಿಸಿದ್ದಾರೆ. ಪ್ರತಿಭಟನೆಯ ಭಾಗವಾಗಿ ರೈತರು ಪಂಜಾಬ್ – ಹರಿಯಾಣ ಗಡಿಯ ಶಂಭು ಪ್ರದೇಶವನ್ನು ತಲುಪಿದ್ದಾರೆ. ಪಂಜಾಬ್, ಹರ್ಯಾಣ ಹಾಗೂ ಉತ್ತರ ಪ್ರದೇಶ ರಾಜ್ಯಗಳ ರೈತರೇ ಹೆಚ್ಚಿನ ಸಂಖ್ಯೆಯಲ್ಲಿ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕನಿಷ್ಟ ಬೆಂಬಲ ಬೆಲೆ ಸೇರಿದಂತೆ 12 ಪ್ರಮುಖ ಬೇಡಿಕೆಗಳನ್ನು ಇಟ್ಟುಕೊಂಡು 2024 ರ ಫೆಬ್ರವರಿ 13 ರಿಂದ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲು ಕೃಷಿಕರು ಮುಂದಾಗಿದ್ದಾರೆ.

ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸದಂತೆ ರೈತರ `ದೆಹಲಿ ಚಲೋ’ ಮೆರವಣಿಗೆಯನ್ನು ತಡೆಯಲು ದೆಹಲಿ ಗಡಿಗಳಲ್ಲಿ ಹಲವು ಹಂತದಲ್ಲಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಬ್ಯಾರಿಕೇಡ್‍ಗಳು, ಕಾಂಕ್ರೀಟ್ ಬ್ಲಾಕ್‍ಗಳು, ಕಬ್ಬಿಣದ ಮೊಳೆಗಳು ಮತ್ತು ಕಂಟೈನರ್‍ಗಳನ್ನು ಬಳಸಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ರೈತ ಮುಖಂಡರು ಮತ್ತು ಕೇಂದ್ರದ ನಡುವಿನ ಮಾತುಕತೆ ವಿಫಲವಾದ ಬಳಿಕ ರೈತರನ್ನು ಗಡಿಯಲ್ಲಿ ತಡೆಯುವ ಪ್ರಯತ್ನ ಆರಂಭವಾಗಿದೆ.

ಇದರ ಬೆನ್ನಲ್ಲೆ ಸಾಮಾಜಿಕ ಮಧ್ಯಮಗಳಲ್ಲಿ ರೈತರ ದೆಹಲಿ ಚಲೋ ಪ್ರತಿಭಟನೆಗೆ ಸಂಬಂಧಿಸಿದಂತೆ ಪೋಸ್ಟ್‌ಗಳು ಪ್ರಸಾರವಾಗುತ್ತಿದ್ದು, ಪ್ರತಿಭಟನಾ ರೈತರು ದೆಹಲಿಯತ್ತ ದಾವಿಸುತ್ತಿದ್ದಾರೆ ಎಮದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಮಣ್ಣಿನ ಮಕ್ಕಳನ್ನು ತಡೆಯುವುದು ಅಷ್ಟು ಸುಲಭವಲ್ಲ ಎಂದು ಪ್ರತಿಪಾದಿಸಿ ಫೇಸ್‌ಬುಕ್‌ನಲ್ಲಿ ವಿಡಿಯೋ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗಿದೆ. ಪೊಲೀಸರು ನಿರ್ಮಿಸಿದ್ದ ತಂತಿ ತಡೆಗೋಡೆಯನ್ನು ಟ್ರ್ಯಾಕ್ಟರ್‌ ಮೂಲಕ ಮುರಿದು ಮುನ್ನುಗುತ್ತಿರುವ ದೃಶ್ಯಗಳನ್ನು ವಿಡಿಯೋದಲ್ಲಿ ಕಾಣಬಹುದು.

ಇದೇ ರೀತಿ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ದೃಶ್ಯಗಳು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಹೋರಾಟದ ದೃಶ್ಯಗಳೆ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯಂತೆ ಪೊಲೀಸರು ನಿರ್ಮಿಸಿದ್ದ ತಂತಿ ತಡೆಗೋಡೆಯನ್ನು ಟ್ರ್ಯಾಕ್ಟರ್‌ ಮೂಲಕ ಮುರಿದು ಮುನ್ನುಗುತ್ತಿರುವ ದೃಶ್ಯಗಳನ್ನು ದೆಹಲಿ ರೈತ ಹೋರಾಟಕ್ಕೆ ಸಂಬಂಧಿಸಿದ್ದೆ ಎಂದು ಪರಿಶೀಲಿಸಿದಾಗ, ಫೆಬ್ರವರಿ 4, 2024 ರಂದು ಇನ್ಸ್ಟಾಗ್ರಾಮ್ ಖಾತೆಯೊಂದರಿಂದ ಹಂಚಿಕೊಳ್ಳಲಾದ ವೀಡಿಯೋವೊಂದು ಲಭ್ಯವಾಗಿದೆ.

ಫೆಬ್ರವರಿ 3, 2024 ರಂದು ಗೆಮ್ ಟಿವಿ ಎಂಬ ಫೇಸ್ಬುಕ್ ಖಾತೆಯಿಂದ ಹಂಚಿಕೊಳ್ಳಲಾದ ವೀಡಿಯೋವನ್ನು ಪಂಜಾಬಿ ಭಾಷೆಯಲ್ಲಿ ಬರೆಯಲಾದ ಪೋಸ್ಟ್ ನ ಶೀರ್ಷಿಕೆಯಲ್ಲಿ “ಭಾನಾ ಸಿಧು ಅವರ ಬೆಂಬಲಿಗರು ಟ್ರಾಕ್ಟರ್‌ಗಳಿಂದ ಬ್ಯಾರಿಕೇಡ್ ಮುರಿದು ಮುಂದೆ ಸಾಗುವ ವಿಡಿಯೋ ಎಂದು ಹೇಳಲಾಗಿದೆ ಎಂದು ನ್ಯೂಸ್ ಚೆಕ್ಕರ್ ವರದಿ ಮಾಡಿದೆ.

ಭಾನಾ ಸಿಧು ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನೆ :

30ರ ಹರೆಯದ ಭಾನಾ ಸಿಧು ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಮೊಹಾಲಿ ಮೂಲದ ವಲಸೆ ಕಂಪನಿಯ ಮಾಲೀಕ ಕಿಂಡರ್ಬೀರ್ ಸಿಂಗ್ ಬಿದೇಶಾ ಅವರನ್ನು ಬೆದರಿಸಿ ಸುಲಿಗೆ ಮಾಡಿದ ಆರೋಪದ ಮೇಲೆ ಬಲ್ವಂತ್ ಸಿಂಗ್ ಅಲಿಯಾಸ್ ಭಾನಾ ಸಿಧು ಅವರನ್ನು ಜನವರಿ 29 ರಂದು ಬಂಧಿಸಲಾಗಿತ್ತು. ಸಿಧು ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡ ನಂತರ, ಅವರ ಸಾವಿರಾರು ಬೆಂಬಲಿಗರು ಫೆಬ್ರವರಿ 3 ರಂದು ಸಂಗ್ರೂರ್ ನಲ್ಲಿ ಪ್ರತಿಭಟನಾ ರಾಲಿ ನಡೆಸಲು ಬರ್ನಾಲಾದ ಅವರ ಹುಟ್ಟೂರಾದ ಕೊಟ್ಡುನಾದಲ್ಲಿ ಒಟ್ಟುಗೂಡುವುದಾಗಿ ಘೋಷಿಸಿದ್ದರು.

ಟ್ರಿಬ್ಯೂನ್ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಫೆಬ್ರವರಿ 3 ರಂದು, ಭಾನಾ ಸಿಧು ಅವರ ಬಿಡುಗಡೆಗೆ ಒತ್ತಾಯಿಸಿ ಸಿಎಂ ಭಗವಂತ್ ಮಾನ್ ಅವರ ನಿವಾಸದ ಬಳಿ ಪ್ರತಿಭಟನೆ ನಡೆಯಿತು, ನಂತರ ಹಲವಾರು ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಭಾರಿ ಭದ್ರತಾ ವ್ಯವಸ್ಥೆಗಳ ಹೊರತಾಗಿಯೂ, ವ್ಲಾಗರ್ ಭಾನಾ ಸಿಧು ಅವರ ಸಾವಿರಾರು ಬೆಂಬಲಿಗರು ಬಟಿಂಡಾ-ಸಂಗ್ರೂರ್-ಪಟಿಯಾಲ ರಾಷ್ಟ್ರೀಯ ಹೆದ್ದಾರಿಯನ್ನು ತಡೆದರು ಮತ್ತು ಸಂಗ್ರೂರ್ನಲ್ಲಿರುವ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ನಿವಾಸದಿಂದ ಒಂದು ಕಿಲೋಮೀಟರ್ ದೂರದಲ್ಲಿ ಧರಣಿ ನಡೆಸಿದರು ಎಂದು ವರದಿ ತಿಳಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಭಾನಾ ಸಿಧು ಅವರ ಬಿಡುಗಡೆಗೆ ಒತ್ತಾಯಿಸಿ ಸಿಎಂ ಭಗವಂತ್ ಮಾನ್ ಅವರ ನಿವಾಸದ ಎದುರು ನಡೆದ ಪ್ರತಿಭಟನೆಯಲ್ಲಿ ಟ್ರ್ಯಾಕ್ಟರ್‌ ಮೂಲಕ ತಡೆಗೋಡೆಯನ್ನು ಉರುಳಿಸಿ ನಡೆಸಲಾದ ಪ್ರತಿಭಟನೆಯನ್ನು, ದೆಹಲಿ ಚಲೋ ಭಾಗವಾಗಿ ರೈತರು ನಡೆಸಿದ ಹೋರಾಟದ ದೃಶ್ಯಗಳು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಈಗಾಗಲೇ ಕೆಲವರು ದೆಹಲಿ ಗಡಿಯಲ್ಲಿ ನಡೆಸುತ್ತಿರುವ ರೈತರ ಹೋರಾಟವನ್ನು ಖಲಿಸ್ತಾನದ ಭಯೋತ್ಪಾದಕರ ಹೋರಾಟ ಎಂದು ದಿಕ್ಕು ತಪ್ಪಿಸುವ ಹುನ್ನಾರಗಳು ನಡೆಯುತ್ತಿದ್ದು ಇಂತಹ ಸುಳ್ಳು ಸುದ್ದಿಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ದಲಿತರಿಗೆ ಮತದಾನದ ಹಕ್ಕು ನೀಡಬಾರದು ಎಂದು ಕಾಂಗ್ರೆಸ್ ಹೇಳಿತ್ತು ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights