FACT CHECK | 2023 ಹೈದರಾಬಾದ್‌ನಲ್ಲಿ ಮಿಲಾದ್-ಉನ್-ನಬಿ ಕಾರ್ಯಕ್ರಮದಲ್ಲಿ ಹಾರಿಸಿದ ಧಾರ್ಮಿಕ ಧ್ವಜವನ್ನು ಪಾಕ್ ಧ್ವಜ ಎಂದು ಹಂಚಿಕೊಂಡ ಬಿಜೆಪಿ

ತೆಲಂಗಾಣದ ರಾಜಧಾನಿ ಮುತ್ತಿನ ನಗರಿ ಎಂದೇ ಪ್ರಖ್ಯಾತಿ ಹೊಂದಿರುವ ಹೈದರಾಬಾದ್ ನಗರದ ಟ್ಯಾಂಕ್ ಬಂಡ್ ಪ್ರದೇಶದಲ್ಲಿ ಪಾಕಿಸ್ತಾನದ ಧ್ವಜ ಹಾರಾಟ ಮಾಡಲಾಗಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ವಾಹನಗಳ ದಟ್ಟಣೆ ನಡುವೆ ಹಸಿರು ಬಣ್ಣದ ಧ್ವಜವೊಂದನ್ನು ಹಿಡಿದಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ.

ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಈ ದೃಶ್ಯಗಳು ಕಂಡುಬಂದಿದ್ದು, ಸೆಕ್ರೆಟರಿಯೇಟ್ ಬಳಿ ಮುಸ್ಲಿಮರು ಪಾಕಿಸ್ತಾನದ ಧ್ವಜ ಹಿಡಿದು ಮೆರವಣಿಗೆ ನಡೆಸಿದ್ದಾರೆ ಎಂದು ಆರೋಪಿಸಿ ಹಸಿರು ಬಾವುಟಗಳನ್ನು ಪ್ರದರ್ಶಿಸುತ್ತಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮಳಲ್ಲಿ  ಹಂಚಿಕೊಳ್ಳಲಾಗಿದೆ.

ಲೋಕಸಭಾ ಚುನಾವಣೆ ನಂತರ ಬಿಜೆಪಿಯೇತರ ರಾಜ್ಯಗಳಲ್ಲಿಯೇ ಹೆಚ್ಚಾಗಿ ಪಾಕ್ ಧ್ವಜ ಕಾಣಿಸಿಕೊಳ್ಳುತ್ತಿವೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ವೈರಲ್ ವಿಡಿಯೋ ಕುರಿತು ಹೈದರಾಬಾದ್ ಪೊಲೀಸರು ನೀಡಿದ್ದ ಎಚ್ಚರಿಕೆಯ ಸಂದೇಶ ಲಭ್ಯವಾಗಿದೆ.

ಸಂದೇಶದ ಪ್ರಕಾರ ಈ ದೃಶ್ಯವು ಕಳೆದ ವರ್ಷ ನಡೆದ ಮಿಲಾದ್ – ಉನ್ – ನಬಿ ಕಾರ್ಯಕ್ರಮದ ದೃಶ್ಯವಾಗಿತ್ತು. ಈ ಕುರಿತಾಗಿ ಪೊಲೀಸರು ತಮ್ಮ ಟ್ವಿಟ್ಟರ್ (ಎಕ್ಸ್) ಖಾತೆಯಲ್ಲಿ ಮಾಹಿತಿ ಪ್ರಕಟಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿದೆ. ಇಂಥಾ ವಿಡಿಯೋವನ್ನು ಹಂಚಿಕೊಳ್ಳಬೇಡಿ, ನಿಮ್ಮ ವಿರುದ್ಧವೂ ಪ್ರಕರಣ ದಾಖಲು ಮಾಡಲಾಗುವುದು ಎಂದು ಹೇಳಿದ್ದರು.

ಹೈದರಾಬಾದ್ ಡೆಕ್ಕನ್ ನ್ಯೂಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ 2 ಅಕ್ಟೋಬರ್ 2023 ರಂದು ಅದೇ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದು, ಮಿಲಾದ್ – ಉನ್ – ನಬಿ ಕಾರ್ಯಕ್ರಮವನ್ನು ಮುಸ್ಲಿಂ ಸಮುದಾಯ ಆಚರಿಸುತ್ತದೆ. ಪ್ರವಾದಿ ಮೊಹಮ್ಮದರ ಜನ್ಮ ದಿನವನ್ನು ಆಚರಣೆ ಮಾಡುವ ದಿನ ಇದಾಗಿದ್ದು, ಹೈದರಾಬಾದ್‌ನ ಟ್ಯಾಂಕ್ ಬಂಡ್‌ನಲ್ಲಿ ನಡೆದ ಬೈಕ್ ರ್ಯಾಲಿಯನ್ನು ಚಿತ್ರಿಸುತ್ತದೆ ಎಂದು ವಿವರಣೆಯಲ್ಲಿ ತಿಳಿಸಲಾಗಿದೆ.

ಪಾಕಿಸ್ತಾನದ ಧ್ವಜ ಮತ್ತು ಮಿಲಾದ್-ಉನ್-ನಬಿ ಮೆರವಣಿಗೆಯಲ್ಲಿ ಬಳಸಿದ ಧಾರ್ಮಿಕ ಧ್ವಜದ ನಡುವಿನ ವ್ಯತ್ಯಾಸವನ್ನು ಕೆಳಗೆ ನೋಡಬಹುದು.

ಇದೇ ವಿಡಿಯೋ 2023ರ ಅಕ್ಟೋಬರ್‌ನಿಂದಲೂ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ. ಅಂದರೆ ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ಬರುವ ಮುಂಚಿನಿಂದಲೂ ಈ ವಿಡಿಯೋ ಅಂತರ್ಜಾಲದಲ್ಲಿ ಲಭ್ಯವಿದೆ. ಈ ಘಟನೆ ನಡೆದ ವೇಳೆ ತೆಲಂಗಾಣ ರಾಜ್ಯದಲ್ಲಿ ಬಿಆರ್‌ಎಸ್ ಸರ್ಕಾರ ಇತ್ತು. ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದಿದ್ದು 2023ರ ಡಿಸೆಂಬರ್‌ನಲ್ಲಿ.

ಒಟ್ಟಾರೆಯಾಗಿ ಹೇಳುವುದಾದರೆ, 2023ರಲ್ಲಿ ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ಮಿಲಾದ್ – ಉನ್ – ನಬಿ ಕಾರ್ಯಕ್ರಮವನ್ನು (ಪ್ರವಾದಿ ಮೊಹಮ್ಮದರ ಜನ್ಮ ದಿನವನ್ನು ಆಚರಣೆ ಮಾಡುವ ದಿನ ಇದಾಗಿದ್ದು,) ಆಚರಿಸುವ ವೇಳೆ  ಮುಸ್ಲಿಮರು ಹಿಡಿದಿದ್ದ ಧಾರ್ಮಿಕ ಧ್ವಜವನ್ನು ಪಾಕ್‌ ಧ್ವಜ ಎಂದು ತಪ್ಪಾಗಿ ಹಂಚಿಕೊಳ್ಳುವುದಲ್ಲದೆ, ಕಾಂಗ್ರೆಸ್‌ ಸರ್ಕಾರವನ್ನು ಗುರಿಯಾಗಿಸಿಕೊಂಡು ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ರಾಜ್ಯ ಸರ್ಕಾರ ಮಾಡಿರುವ ಸಾಲದ ಕುರಿತು BJP ಹೇಳುತ್ತಿರುವ ಅಂಕಿ ಅಂಶಗಳು ಎಷ್ಟು ನಿಜ? ಎಷ್ಟು ಸುಳ್ಳು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights