FACT CHECK | ಡಾ. ಬಿ.ಆರ್. ಅಂಬೇಡ್ಕರ್ ಕಾಲಿಗೆ ಗಾಂಧಿ ನಮಸ್ಕರಿಸಿದ್ದಾರೆ ಎಂದು ಎಡಿಟ್ ಮಾಡಿದ ಫೋಟೊ ಹಂಚಿಕೆ
ಅಂಬೇಡ್ಕರ್ ಮತ್ತು ಗಾಂಧಿ ಭಾರತದ ಎರಡು ಧ್ರುವತಾರೆಳು. ಮಹಾತ್ಮ ಗಾಂಧಿ ಮತ್ತು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಭಿನ್ನ ಗುರಿಗಳನ್ನು ಹೊಂದಿದ್ದರು ಎಂಬ ವಾದಗಳು ಸದಾ ಪ್ರಚಲಿತದಲ್ಲಿರುತ್ತವೆ. ಆದರೆ ಅವರಿಬ್ಬರ ಚಿಂತನೆಗಳು ಭಾರತದ ದೇಹ ಮತ್ತು ಆತ್ಮ ಎಂದರೆ ತಪ್ಪಾಗಲಾರದು. ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ಚಿತ್ರವೊಂದು ಪ್ರಸಾರವಾಗುತ್ತಿದ್ದು, ಮಹಾತ್ಮ ಗಾಂಧಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕಾಲಿಗೆ ನಮಸ್ಕರಿಸುತ್ತಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.
ಈ ಫೋಟೋ ನೋಡಿ.. ಇದೊಂದು ಅಪರೂಪದ ಫೋಟೋ, ಇದರಲ್ಲಿ ಮಹಾತ್ಮ ಗಾಂಧಿ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಪಾದಗಳನ್ನು ಸ್ಪರ್ಷಿಸಿ ಅವರಿಂದ ಆಶಿರ್ವಾದಗಳನ್ನು ಪಡೆದುಕೊಂಡಿದ್ದಾರೆ. ಇಂತಹ ಅಪರೂಪದ ಫೋಟೋಗಳನ್ನು ಸರ್ಕಾರ ನಮ್ಮಿಂದ ಮುಚ್ಚಿಟ್ಟಿದ್ದು ಯಾಕೆ? ಈ ಫೋಟೋವನ್ನು ಆದಷ್ಟು ಎಲ್ಲರಿಗೂ ಹಂಚಿಕೊಳ್ಳಿ ಎಂದು” ವೈರಲ್ ಫೋಟೋದೊಂದಿಗೆ ವಿವಿಧ ರೀತಿಯಾದ ಟಿಪ್ಪಣಿಗಳನ್ನು ಬರೆದು ಹಂಚಿಕೊಳ್ಳಲಾಗುತ್ತಿದೆ.
ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಇದೇ ಪ್ರತಿಪಾದನೆಯೊಂದಿಗೆ ಫೋಟೊವನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೊಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋ ಕುರಿತು ಪರಿಶೀಲನೆ ನಡೆಸಲು ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ವೈರಲ್ ಚಿತ್ರದ ಬೇರೆ ಬೇರೆ ಆವೃತ್ತಿಯ ಫೋಟೋಗಳು ಲಭ್ಯವಾಗಿವೆ. ಆ ಫೋಟೋಗಳ ಮೂಲಕ ವೈರಲ್ ಫೋಟೋ ಎಡಿಟೆಡ್ ಆಗಿದೆ ಎಂಬುದನ್ನು ಕಂಡು ಕೊಂಡಿದ್ದೇವೆ.
ಮ್ತಷ್ಟು ಮಾಹಿತಿಗಾಗಿ ಎರಡು ಫೋಟೊಗಳನ್ನು ಪ್ರತ್ಯೇಕವಾಗಿ ಪರಿಶೀಲಿನೆ ಮಾಡಿದಾಗ, “ಡಾ . ಅಂಬೇಡ್ಕರ್ ಗೆ ಸಂಬಂಧಿಸಿದ ಚಿತ್ರದ ಶೀರ್ಷಿಕೆಯಲ್ಲಿ ಅಂಬೇಡ್ಕರ್ ಅವರ ಪತ್ನಿ ಡಾ. ಸವಿತಾ ಅಂಬೇಡ್ಕರ್, ಸಾಹಾಯಕ ಸುದಾಮ ಮತ್ತು ಅವರ ನಾಯಿಯೊಂದಿಗೆ” ಎಂದು alamy ವೆಬ್‌ತಾಣದಲ್ಲಿ ತಿಳಿಸಲಾಗಿದೆ. ಈ ಚಿತ್ರದಲ್ಲಿ ಗಾಂಧೀಜಿ ಕಂಡುಬರುವುದಿಲ್ಲ.
ಇದರ ಜೊತೆಗೆ ಗಾಂಧಿಯವರ ಚಿತ್ರದ ಕುರಿತು ಹೆಚ್ಚಿನ ಪರಿಶೀಲನೆಯನ್ನು ನಡೆಸಿದಾಗ, ದಂಡಿ ಮಾರ್ಚ್ 1930 ರ ಸಮಯಕ್ಕೆ ಹಿಂದಿನದು, ಈ ಚಿತ್ರದಲ್ಲಿ ಗಾಂಧಿಯವರು ಉಪ್ಪನ್ನು ಎತ್ತುತ್ತಿರುವುದನ್ನು ಕಾಣಬಹುದು. ಇದೇ ಫೋಟೋವನ್ನು ಅಂಬೇಡ್ಕರ್ ಫೋಟೊದೊಂದಿಗೆ ಬಳಸಿಕೊಂಡು ಎಡಿಟ್ ಮಾಡಿ ಹಂಚಿಕೊಂಡು ಸುಳ್ಳು ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಮಹಾತ್ಮ ಗಾಂಧಿಯವರು ಬಾಬಾಸಾಹೇಬ್ ಅಂಬೇಡ್ಕರ್ ಅವರ ಕಾಲಿಗೆ ನಮಸ್ಕರಿಸುತ್ತಿದ್ದಾರೆ ಎಂದು ಎರಡು ಬೇರೆ ಬೇರೆ ಫೋಟೋಗಳನ್ನು ಎಡಿಟ್ ಮಾಡಿ ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಇಂತಹ ಅಸಂಬದ್ದ ಪ್ರಯತ್ನಗಳನ್ನು ಮಾಡಿ ಅಂಬೇಡ್ಕರ್ ಮತ್ತು ಗಾಂಧಿ ಅನುಯಾಯಿಗಳ ನಡುವೆ ವೈಮನಸ್ಸು ಮೂಡುವಂತೆ ಮಾಡುವ ದುರುದ್ದೇಶದ ಇಂತಹ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮುನ್ನ ಪರಿಶೀಲಿಸಿ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಮುಸ್ಲಿಂ ವ್ಯಕ್ತಿಯನ್ನು ಜೈ ಶ್ರೀರಾಮ್ ಎಂದು ಕೂಗುವಂತೆ ಹಿಂದೂಗಳು ಹಲ್ಲೆ ಮಾಡಿದ್ದಾರೆ ಎಂಬುದು ನಿಜವೇ?