FACT CHECK | ಪಾಕಿಸ್ತಾನದ ಒತ್ತೆಯಾಳಾಗಿದ್ದ ವಿಂಗ್ ಕಮಾಂಡರ್ ಅಭಿನಂದನ್ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬುದು ನಿಜವೇ?

ಮಹಿಳೆಯೊಬ್ಬರು ಬಾಲಿವುಡ್ ಹಾಡಿಗೆ ನೃತ್ಯ ಮಾಡುತ್ತಿರುವ ವಿಡಿಯೋವನ್ನು ಪಾಕ್ ಮೂಲದ ಸೋಶಿಯಲ್ ಮೀಡಿಯಾ ಎಕ್ಸ್‌ ಹ್ಯಾಂಡಲ್  (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಂಡಿದ್ದು, ವಿಡಿಯೊದಲ್ಲಿರುವ ಮಹಿಳೆಯು, ಫೆಬ್ರವರಿ 2019ರಲ್ಲಿ ನಡೆದ ಪಾಕಿಸ್ತಾನದೊಂದಿಗಿನ ವೈಮಾನಿಕ ಚಕಮಕಿಯಲ್ಲಿ ಪಾಕಿಸ್ತಾನಿ ಪಡೆಗಳು ಒತ್ತೆಯಾಳಾಗಿ ಇಟ್ಟುಕೊಂಡಿದ್ದ ಅಭಿನಂದನ್ ವರ್ಧಮಾನ್ ಅವರ ಪತ್ನಿ, ಪಾಕ್ ವಾಯುಪಡೆಯಿಂದ ಅವಮಾನಕ್ಕೊಳಗಾದ ವ್ಯಕ್ತಿಯೊಂದಿಗೆ ನಾನು ಇರಲು ಬಯಸುವುದಿಲ್ಲ, ಹಾಗಾಗಿ ಅವರಿಂದ ವಿಚ್ಛೇದನ ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.

ಫೆಬ್ರವರಿ 2019ರಲ್ಲಿ ನಡೆದ ಪಾಕಿಸ್ತಾನದೊಂದಿಗಿನ ವೈಮಾನಿಕ ಚಕಮಕಿಯಲ್ಲಿ ಅಭಿನಂದನ್ ,  ಪಾಕಿಸ್ತಾನಿ ಪಡೆಗಳು ಒತ್ತೆಯಾಳಾಗಿ ಇಟ್ಟುಕೊಂಡಿದ್ದವು. ನಂತರ ಭಾರತದ ಒತ್ತಡ ಹಾಗೂ ಭವಿಷ್ಯತ್ತಿನಲ್ಲಿ ಆಗಬಹುದಾದ ಆಪತ್ತುಗಳನ್ನು ಮನಗಂಡು ಪಾಕಿಸ್ತಾನದ ಸರ್ಕಾರ, ಯೋಧ ಅಭಿನಂದನ್‍ನ್ನು ರಿಲೀಸ್ ಮಾಡಲು ಒಪ್ಪಿಗೆ ನೀಡಿತ್ತು.

ಈಗ ಭಾರತದ ವಿರುದ್ಧ ಸದಾ ತಪ್ಪು ಮಾಹಿತಿ ಹರಡಲು ಹೆಸರುವಾಸಿಯಾಗಿರುವ PSYWAR ಬ್ಯೂರೋ ಎಂಬ ಹೆಸರಿನ ಪಾಕ್ ಎಕ್ಸ್‌ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿ, ಹೀಗೆ ಬರೆದಿದೆ “#ಭಾರತೀಯ ಪೈಲಟ್ ಮತ್ತು #ಪಾಕಿಸ್ತಾನದ ಯುದ್ಧ ಕೈದಿ ಅಭಿನಂದನ್ ವರ್ಧಮಾನ್ ಅವರ ಪತ್ನಿ ನೃತ್ಯ ಪ್ರದರ್ಶನ ಮಾಡುತ್ತಿದ್ದಾರೆ ಎಂದು, ಉನ್ನತ ಶ್ರೇಣಿಯ ಜನರಲ್‌ಗಳು ಮತ್ತು ಅವರ ಸಂಗಾತಿಗಳ ಮುಂದೆ  ನೃತ್ಯ ಮಾಡುತ್ತಿದ್ದಾರೆ ಎಂಬ ಬರಹದೊಂದಿಗೆ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಅಭಿನಂದನ್ ವರ್ಧಮಾನ್ ಎಂಬ ಕೀವರ್ಡ್ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ, ವೈರಲ್ ಪೋಸ್ಟ್‌ಅನ್ನು ಬೆಂಬಲಿಸುವ ಯಾವುದೇ ಮಾಧ್ಯಮಗಳು ವರದಿಗಳನ್ನು ಪ್ರಕಟಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಮೇಲಾಗಿ, ವೈರಲ್ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ  ವಿಡಿಯೋದಲ್ಲಿ ನೃತ್ಯ ಮಾಡುತ್ತಿರುವ ಮಹಿಳೆ  ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಆಗಿದ್ದ ಅಭಿನಂದನ್‌ರವರ ಹೆಂಡತಿಯಲ್ಲ ಎಂಬುದು ಸ್ಪಷ್ಟವಾಗಿದೆ.

ಈ ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ ಮತ್ತಷ್ಟು ಸರ್ಚ್ ಮಾಡಲು ಮುಂದಾದಾಗ, ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಎಕ್ಸ್ ಹ್ಯಾಂಡಲ್‌ನಲ್ಲಿ ಲಭ್ಯವಿರುವ 2019 ರ ಟ್ವೀಟ್ ಲಭ್ಯವಾಗಿದ್ದ, ಪೈಲಟ್ ಬಿಡುಗಡೆಯಾದ ನಂತರ ಮಾಜಿ ರಕ್ಷಣಾ ಸಚಿವರು ಬಿಡುಗಡೆಯಾದ ಪೈಲಟ್‌ನನ್ನು ಭೇಟಿ ಮಾಡಲು ಆಸ್ಪತ್ರೆಗೆ ಭೇಟಿ ನೀಡಿ ಸಂವಾದ ನಡೆಸಿದಾಗ ಕೆಲವು ಚಿತ್ರಗಳನ್ನು ತೋರಿಸಲಾಗಿದೆ. ಇದರಲ್ಲಿ ಅಭಿನಂದನ್ ವರ್ಧಮಾನ್  ಅವರ ಪತ್ನಿ ತನ್ವಿ ಮರ್ವಾಹಾ ಮತ್ತು ಮಗು ಸೇರಿದಂತೆ ಅವರ ಕುಟುಂಬದ ಎಲ್ಲ ಸದಸ್ಯರು ಜೊತೆಯಲ್ಲಿದ್ದಾರೆ.

ಪೈಲಟ್‌ನ ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಯಾವುದೇ ವರದಿಗಳು ಲಭ್ಯವಾಗಿಲ್ಲ.ಅಲ್ಲದೆ ವಿಡಿಯೋದಲ್ಲಿ ನೃತ್ಯ ಮಾಡುತ್ತಿರುವ ಮಹಿಳೆ ಅಭಿನಂದನ್ ಅವರ ಪತ್ನಿಯ ಚಿತ್ರಗಳೊಂದಿಗೆ ಹೊಂದಿಕೆಯಾಗುತ್ತಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಭಾರತದ ವಿರುದ್ಧ ಸದಾ ತಪ್ಪು ಮಾಹಿತಿ ಹರಡುವ ಪಾಕ್‌ ಮೂಲದ ಎಕ್ಸ್‌ ಖಾತೆಯಿಂದ ಪಾಕಿಸ್ತಾನದೊಂದಿಗಿನ ವೈಮಾನಿಕ ಚಕಮಕಿಯಲ್ಲಿ , ಪಾಕ್ ಯುದ್ಧ ವಿಮಾನವನ್ನು ಹೊಡೆದುರುಳಿಸಿ, ಭಾರತದ ಪಾಲಿನ ಹೀರೋ ಆಗಿದ್ದ ಅಭಿನಂದನ್ ವರ್ಧಮಾನ್ ಅವರ ಪತ್ನಿ ಹಾಗೂ ಕುಟುಂಬದ ಬಗ್ಗೆ ಸುಳ್ಳು ಮತ್ತು ತಪ್ಪು ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮುಂಬೈನ ಬೀದಿಗಳಲ್ಲಿ ಮುಸ್ಲಿಮರ ಶಕ್ತಿ ಪ್ರದರ್ಶನ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights