FACT CHECK | ಬಾಂಗ್ಲಾದಲ್ಲಿ ಹಿಜಾಬ್ ಧರಿಸಿಲ್ಲವೆಂದು ಅಮೇರಿಕ ಮಹಿಳೆಗೆ ಕಿರುಕುಳ ನೀಡಲಾಗಿದೆಯೇ?

ಬಾಂಗ್ಲಾದೇಶಕ್ಕೆ ಸಂಬಂಧಿಸಿದಂತೆ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು ಅಮೆರಿಕಾದ ಮಹಿಳೆಯೊಬ್ಬರು ಇಜಾಬ್ ಧರಿಸಿಲ್ಲವೆಂದು ಕಿರುಕುಳ ನೀಡಲಾಗುತ್ತಿದೆ ಎಂದು ಹೇಳುವ ಹಲವು ವಿಡಿಯೋಗಳನ್ನು ಫೇಸ್‌ಬುಕ್ ಮತ್ತು ಎಕ್ಸ್‌ ಖಾತೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

‘‘ಬಾಂಗ್ಲಾದೇಶದಲ್ಲಿ ವಿದೇಶಿಗರಿಗೆ ಕಿರುಕುಳ ನೋಡಿ. ಇನ್ನೂ ಅಪ್ರಾಪ್ತ ಬಾಲಕರು ಅವರು.. ಇನ್ಯಾವ ಶಿಕ್ಷಣ, ಸಂಸ್ಕಾರ, ನೀತಿ, ಶಿಸ್ತಿನ ವಿದ್ಯೆಯನ್ನು ಪಡೆದಿರಬಹುದು.’’ ಎಂಬ ಹೇಳಿಕೆಯೊಂದಿಗೆ ಫೇಸ್‌ಬುಕ್‌ನಲ್ಲಿ ವಿಡಿಯೋ ಪೋಸ್ಟ್‌ವೊಂದು  ವೈರಲ್ ಆಗುತ್ತಿದೆ.


ಬಾಂಗ್ಲಾದೇಶದಲ್ಲಿ ಹಿಜಾಬ್ ಧರಿಸದಿದ್ದಕ್ಕಾಗಿ ಅಮೆರಿಕದ ಮಹಿಳೆಯೊಬ್ಬರಿಗೆ ಬಾಂಗ್ಲಾದೇಶಿಗಳು ಕಿರುಕುಳ ನೀಡಿದ್ದಾರೆ. ಇದು ನೊಬೆಲ್ ಪ್ರಶಸ್ತಿ ವಿಜೇತ ಮೊಹಮ್ಮದ್ ನೇತೃತ್ವದಲ್ಲಿ ಬಾಂಗ್ಲಾದೇಶದಲ್ಲಿ ನಡೆದಿದೆ’’ ಎಂದು ಹೇಳಿಕೊಂಡಿದ್ದಾರೆ. ಮಹಿಳೆಯೊಬ್ಬರು ಸೈಕಲ್ ಗಾಡಿಯಲ್ಲಿ ತೆರಳುತ್ತಿರುವಾಗ ಓರ್ವ ಯುವಕ ಹೊಡೆಯಲು ಮುಂದಾಗುತ್ತಾನೆ, ಬಳಿಕ ಮತ್ತೋರ್ವ ಯುವಕ ಗಾಡಿಯ ಹಿಂಭಾಗಕ್ಕೆ ಕೈಯಿಂದ ಒದೆಯುತ್ತಾನೆ. ಆಗ ಮಹಿಳೆ ಗಾಡಿಯಿಂದ ಇಳಿದು ತೆರುಳಿದ್ದಾರೆ.


ಪ್ರವಾಸಿ ಪಾಶ್ಚಿಮಾತ್ಯ ಉಡುಗೆ ತೊಟ್ಟಿದ್ದ ಕಾರಣಕ್ಕೆ ಬಾಂಗ್ಲಾದೇಶದ ಜಿಹಾದಿ ಮಕ್ಕಳು ಕಿರುಕುಳ ನೀಡಿದ್ದಾರೆ. ಜಿಹಾದಿಗಳು ಆಕೆಯನ್ನು ಹಿಜಾಬ್ ಅಥವಾ ಬುರ್ಕಾ ಧರಿಸುವಂತೆ ಒತ್ತಾಯಿಸುತ್ತಿದ್ದರು. ಇಸ್ಲಾಮಿಕ್ ದೇಶವು ಮುಸ್ಲಿಮೇತರರು ಮತ್ತು ಮಹಿಳೆಯರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂದು ವಿಡಿಯೋ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಇದೇ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿಇಲ್ಲಿ ಮತ್ತು ಇಲ್ಲಿ ನೋಡಬಹುದು.

ಬಾಂಗ್ಲಾದೇಶವು ಸಾಂವಿಧಾನಿಕವಾಗಿ ಜಾತ್ಯತೀತ ರಾಷ್ಟ್ರವಾಗಿದ್ದರೂ, ಬಹುಸಂಖ್ಯಾತ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದೆ ಮತ್ತು ಸಮಾಜದ ಅನೇಕ ಭಾಗಗಳಲ್ಲಿ ಹಿಜಾಬ್ ಅನ್ನು ಸಾಂಸ್ಕೃತಿಕ ಅಥವಾ ಧಾರ್ಮಿಕ ರೂಢಿ ಎಂದು ಪರಿಗಣಿಸಲಾಗುತ್ತದೆ. ಈ ಸನ್ನಿವೇಶವು ವೈಯಕ್ತಿಕ ಸ್ವಾತಂತ್ರ್ಯ, ಸಾಂಸ್ಕೃತಿಕ ನಿರೀಕ್ಷೆಗಳು ಮತ್ತು ಧಾರ್ಮಿಕ ಸಂಪ್ರದಾಯವಾದದ ನಡುವಿನ ಸಂಘರ್ಷಗಳು ಆಗಾಗ್ಗೆ ಕಂಡುಬರುತ್ತಿರುತ್ತದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಕೀಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಸೆಪ್ಟೆಂಬರ್ 30, 2024 ರಂದು The Daily Inqilab ವೆಬ್​ಸೈಟ್​ನಲ್ಲಿ ಪ್ರಕಟವಾದ ವರದಿಕೊಂದು ಲಭ್ಯವಾಗಿದೆ.  The Daily Inqilab ವೆಬ್​ಸೈಟ್​ನಲ್ಲಿ ‘ಶೇಖ್ ಹಸೀನಾ ಹುಟ್ಟುಹಬ್ಬಕ್ಕೆ TSC ಯಲ್ಲಿ ನಟಿ ಕೇಕ್ ಕತ್ತರಿಸಲು ಬಂದಿದ್ದಕ್ಕೆ ನೆಟ್ಟಿಗರ ಕೋಪ’ ಎಂಬ ಶೀರ್ಷಿಕೆಯೊಂದಿಗೆ ಸುದ್ದಿಯನ್ನು ಪ್ರಕಟಿಸಿದೆ.

ವರದಿಯ ಪ್ರಕಾರ,  ‘‘ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ 78ನೇ ಹುಟ್ಟುಹಬ್ಬವನ್ನು ಆಚರಿಸಲು ಬಾಂಗ್ಲಾದ ಸಾಂಸ್ಕೃತಿಕ ಒಕ್ಕೂಟದ ನಾಯಕಿ ಮತ್ತು ನಟಿ, ರೂಪದರ್ಶಿ ಮಿಶ್ತಿ ಸುಬಾಸ್ ಅವರು ಢಾಕಾ ವಿಶ್ವವಿದ್ಯಾಲಯದ ವಿದ್ಯಾರ್ಥಿ-ಶಿಕ್ಷಕ ಕೇಂದ್ರದಲ್ಲಿ (TSC) ಕೇಕ್ ನೊಂದಿಗೆ ಕಾಣಿಸಿಕೊಂಡರು. ಆದರೆ, ಅನೇಕರು ಇವರ ನಡೆಗೆ ಕಿಡಿಕಾರಿದ್ದಾರೆ. ಶೇಖ್ ಹಸೀನಾ ದೇಶವನ್ನು ನಾಶಪಡಿಸಿದ್ದಾರೆ ಮತ್ತು ಅಮಾಯಕ ವಿದ್ಯಾರ್ಥಿಗಳನ್ನು ಕೊಂದಿದ್ದಾರೆ. ಇವರ ಹುಟ್ಟುಹಬ್ಬವನ್ನು ಆಚರಿಸಲು ಬಂದ ಈ ನಾಯಕಿಯನ್ನು ಶೀಘ್ರ ಬಂಧಿಸಬೇಕು ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿದ್ದಾರೆ’’ ಎಂಬ ಸುದ್ದಿ ಇದರಲ್ಲಿದೆ.

ಹಾಗೆಯೆ Protidiner Bangladesh ಯೂಟ್ಯೂಬ್ ಚಾನೆಲ್​ನಲ್ಲಿ ಸೆಪ್ಟೆಂಬರ್ 30, 2024 ರಂದು ‘TSC ಯಲ್ಲಿ ಮಾಡೆಲ್ ಮಿಶ್ತಿ ಸುಬಾಸ್‌ಗೆ ಏನಾಯಿತು?’ ಎಂಬ ಶೀರ್ಷಿಕೆಯಲ್ಲಿ ಈ ಕುರಿತು ವೀಡಿಯೊ ಹಂಚಿಕೊಳ್ಳಲಾಗಿದೆ. ಬಾಂಗ್ಲಾದೇಶಿ ನಟಿ ಮತ್ತು ಶೇಖ್ ಹಸೀನಾಳ ಬೆಂಬಲಿಗ ಮಿಶ್ತಿ ಸುಬಾಸ್ ಅವರು ಹಸೀನಾ ಅವರ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿದ್ದಕ್ಕಾಗಿ ಆಕೆಗೆ ಕಿರುಕುಳ ನೀಡಲಾಗಿದೆ ಎಂಬ ಮಹಿತಿ ಇದರಲ್ಲಿ ನೀಡಲಾಗಿದೆ.

ಬಾಂಗ್ಲಾದೇಶದ ಮತ್ತೊಂದು ಸುದ್ದಿ ಮಾಧ್ಯಮ The Report ಕೂಡ ಈ ಕರಿತು ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದ ನಟಿ, ಮಿಶ್ತಿ ಸುಬಾಸ್. ಇವರು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ ಆಚರಿಸಿದ್ದನ್ನು ವಿರೋದಿಸಿ ನಟಿಗೆ ಕಿರುಕುಳ ನೀಡುವ ವಿಡಿಯೋವನ್ನು, ಹಿಜಾಬ್ ಧರಿಸಿಲ್ಲವೆಂದು ಅಮೆರಿಕಾ ಮಹಿಳೆಗೆ ಬಾಂಗ್ಲಾದೇಶದಲ್ಲಿ ಕಿರುಕುಳ ನೀಡಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಕೃಪೆ: ನ್ಯೂಸ್ ಮೀಟರ್
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights