FACT CHECK | ಹಿಜ್ಬುಲ್ಲಾ ನಾಯಕನ ಹತ್ಯೆಯನ್ನು ಇಸ್ರೇಲ್ ಪ್ರಧಾನಿ ಸಂಭ್ರಮಿಸಿದ್ದು ನಿಜವೇ?
ಒಬ್ಬ ಉಗ್ರನ ಹತ್ಯೆಗೆ ಪ್ರಧಾನಿಯೊಬ್ಬರು ಈ ರೀತಿ ಸಂಭ್ರಮಿಸಿದ್ದು ಇದೇ ಮೊದಲು ಮತ್ತು ಈ ರೀತಿಯ ಸಂಭ್ರಮ ಎಲ್ಲಾ ದೇಶದ ಉಗ್ರರಿಗೆ ಒಂದು ಎಚ್ಚರಿಕೆಯ ಗಂಟೆಯಾಗಿದೆ. ಇನ್ನು ಲೆಬನಾನ್‌ನ ಹಿಜ್ಬುಲ್ಲಾ ಹಾಗೂ ಹಮಾಸ್ ಉಗ್ರರ ಸರ್ವನಾಶಕ್ಕೆ ಕೆಲವೇ ದಿನಗಳು ಬಾಕಿ” ಎಂದು “ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ವಾಹನದೊಳಗೆ ಶಿಳ್ಳೆ ಹೊಡೆಯುವ ಮೂಲಕ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಹತ್ಯೆಗೆ ಸಂಭ್ರಮಿಸಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿಹಂಚಿಕೊಳ್ಳಲಾಗಿದೆ.
ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಈ ಬಗ್ಗೆ ವಿವಿಧ ರೀತಿಯ ಕಾಮೆಂಟ್‌ಗಳನ್ನು ಮಾಡುವ ಮೂಲಕ, ಇಸ್ರೇಲ್ ಪ್ರಧಾನಿಯನ್ನು ಹಾಡಿ ಹೊಗಳಿದ್ದಾರೆ. ಆದರೆ ಈ ವೈರಲ್ ವಿಡಿಯೋದ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಹಾಗಾಗಿ ವೈರಲ್ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕುರಿತು ಪರಿಶೀಲಿಸಲು ವಿಡಿಯೋದ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 11 ಮಾರ್ಚ್ 2021 ರಂದು ಇಸ್ರೇಲ್ ಔಟ್‌ಲೆಟ್ ಕಿಕರ್‌ನಲ್ಲಿ ಪ್ರಕಟವಾದ ಸುದ್ದಿ ವರದಿಯೊಂದು ಲಭ್ಯವಾಗಿದೆ.
ಈ ವರದಿಯ ಪ್ರಕಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು 10 ಮಾರ್ಚ್ 2021 ರಂದು ತಮ್ಮ ಕಾರಿನಲ್ಲಿ ಕುಳಿತಿರುವಾಗ ತನ್ನ ಪಕ್ಷದ ಲಿಕುಡ್ ಗೀತೆಯನ್ನು ಕೇಳುತ್ತ ಶಿಳ್ಳೆ ಹೊಡೆಯುತ್ತಿರುವುದನ್ನು ಹಿಬ್ರು ಭಾಷೆಯಲ್ಲಿ ವರದಿ ಮಾಡಿದೆ. ಬೆಂಜಮಿನ್ ನೆತನ್ಯಾಹು ಅವರು ಕಾರಿನಲ್ಲಿ ಪ್ರಯಾಣಿಸುವಾಗ ತಮ್ಮ ಬೆಂಬಲಿಗರೊಂದಿಗೆ ಚರ್ಚೆಯಲ್ಲಿ ತೊಡಗಿದ್ದರು ಮತ್ತು 2021 ರಲ್ಲಿ ಇಸ್ರೇಲ್ ನಲ್ಲಿ ನಡೆಯಲಿರುವ ಚುನಾವಣೆ ಸಂಬಂಧ ಮಾತುಕತೆ ನಡೆಸಿದರು ಎಂಬ ಅಂಶಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಇದೇ ರೀತಿಯ ವಿಡಿಯೋ 9 ಮಾರ್ಚ್ 2021 ರಂದು ಬೆಂಜಮಿನ್ ನೆತನ್ಯಾಹು ಅವರ ಅಧಿಕೃತ ಫೇಸ್ಬುಕ್ ಪ್ರೊಫೈಲ್ ಮತ್ತು ಟಿಕ್‌ಟಾಕ್‌ನಲ್ಲಿ ಕೂಡ ಕಂಡುಬಂದಿದ್ದು, ಅದರಲ್ಲಿ ಚುನಾವಣೆ ವಿಚಾರಕ್ಕೆ ಸಂಬಂಧ ಪಟ್ಟಂತೆ ತಮ್ಮ ಹಲವು ಬೆಂಬಲಿಗರೊಂದಿಗೆ ಚರ್ಚೆ ನಡೆಸಿದನ್ನು ಕೂಡ ಹಂಚಿಕೊಳ್ಳಲಾಗಿದೆ. ಇದು ದೀರ್ಘ ಅವಧಿಯ ಚರ್ಚೆ ಎಂದು ಕೂಡ ಕೆಲವೊಂದು ವರದಿಗಳಲ್ಲಿ ಕಂಡು ಬಂದಿದೆ. ಹಾಗಾಗಿ ಈ ವೈರಲ್ ವಿಡಿಯೋ 2021ಕ್ಕೆ ಸಂಬಂಧಿಸಿದ್ದಾಗಿದೆ ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋ 2021ರದ್ದಾಗಿದ್ದು, ಇದನ್ನು ಇತ್ತೀಚಿನ ಹಿಜ್ಬುಲ್ಲಾ ನಾಯಕನ ಹತ್ಯೆಗೆ ಬೆಂಜಮಿನ್ ನೆತನ್ಯಾಹು ಅವರು ಸಂಭ್ರಮಿಸಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಭಟ್ಕಳ-ಸಾಗರ ರಸ್ತೆಯಲ್ಲಿ ಸಿಂಹಗಳು ಕಾಣಿಸಿಕೊಂಡಿವೆ ಎಂದು ಗುಜರಾತ್‌ನ ವಿಡಿಯೋ ಹಂಚಿಕೆ