FACT CHECK | ಆಸಾದುದ್ದಿನ್ ಓವೈಸಿ ಕರೆದ ಮುಸ್ಲಿಂ ರ್‍ಯಾಲಿಯಲ್ಲಿ ಸೇರಿರುವ ಅಲ್ಪಸಂಖ್ಯಾತರನ್ನು ನೋಡಿ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ
ಮುಂಬೈ ಮಹಾನಗರಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಮರೆವಣಿಗೆಯಲ್ಲಿ ಸಾಗುತ್ತಿರುವ 27 ಸೆಕೆಂಡ್‌ಗಳ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು, ರಸ್ತೆಯ ಇಕ್ಕೆಲಗಳಲ್ಲಿ ನಡೆದುಕೊಂಡು ಹೋಗುವ ಜನರ ಜೊತೆಗೆ ರಸ್ತೆಯ ಮಧ್ಯದಲ್ಲಿ ಅನೇಕ ಕಾರುಗಳು, ವ್ಯಾನ್‌ಗಳು ಮತ್ತು ಟೆಂಪೋಗಳು ಹಾದುಹೋಗುವುದನ್ನು ನೋಡಬಹುದು.
ಹಿಂದೂಗಳೇ ಕಣ್ಣು ಬಿಟ್ಟು ನೋಡಿ! ಆಸಾದುದ್ದಿನ್ ಓವೈಸಿ ಕರೆದ ಮುಸ್ಲಿಂ ರ್‍ಯಾಲಿಯಲ್ಲಿ ಸೇರಿರುವ ಅಲ್ಪಸಂಖ್ಯಾತರನ್ನು ನೋಡಿ. ಇವರು ಇನ್ನೂ ಅಲ್ಪಸಂಖ್ಯಾತರಾಗಿ ಉಳಿದಿಲ್ಲ. ಮುಂದೊಂದು ದಿನ ಬಹು ಸಂಖ್ಯಾತರಿಗೆ ಸರಿಯಾಗಿ ಟಕ್ಕರ್ ಕೊಡುತ್ತಾರೆ. ಇವರು ನಮ್ಮ ತೆರಿಗೆ ಹಣದ ಸವಲತ್ತಿನಿಂದ ನಮ್ಮ ಮುಂದೆಯೇ ಈ ಪರಿಯಾಗಿ ಬೆಳೆಯುತ್ತಿದ್ದಾರೆ ಎಂದು ಪ್ರತಿಪಾದಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಇದೇ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾದ ಫೇಸ್‌ಬುಕ್ ಪೋಸ್ಟ್‌ಅನ್ನು ಇಲ್ಲಿ ನೋಡಬಹುದು. ಹಾಗಿದ್ದರೆ ಇಷ್ಟು ಬೃಹತ್ ಸಂಖ್ಯೆಯಲ್ಲಿ ಜನ ಸೇರಿರುವ ರ್‍ಯಾಲಿ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ನ ಅಧ್ಯಕ್ಷ ಆಸಾದುದ್ದಿನ್ ಓವೈಸಿ ಸಂಘಟಿಸಿರುವುದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 12 ಸೆಪ್ಟಂಬರ್ 2024 ರಂದು ಫೇಸ್‌ಬುಕ್ ಪೋಸ್ಟ್‌ವೊಂದು ಲಭ್ಯವಾಗಿದ್ದು, “ಪೋಪ್ ಫ್ರಾನ್ಸಿಸ್ ಅವರು 100% ಕ್ಯಾಥೋಲಿಕ್ ಬೇರುಗಳನ್ನು ಹೊಂದಿರುವ ದೇಶಕ್ಕೆ ಐತಿಹಾಸಿಕ ಭೇಟಿಯನ್ನು ಸ್ವಾಗತಿಸುತ್ತಾರೆ.” ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.
ವೈರಲ್ ವಿಡಿಯೋದಲ್ಲಿರುವಂತೆಯೇ ಜನಸಮೂಹದ ವಿಡಿಯೋವೊಂದನ್ನು ನೈಜೀರಿಯನ್ ಕ್ಯಾಥೋಲಿಕ್‌ಗಳು ಎಂಬ ಫೇಸ್‌ಬುಕ್ ಬಳಕೆದಾರರು ಸೆಪ್ಟೆಂಬರ್ 12 ರಂದು ಹಂಚಿಕೊಂಡ ಪೋಸ್ಟ್ ಲಭ್ಯವಾಗಿದೆ. ಇದರಲ್ಲಿ ಈ ವಿಡಿಯೋವನ್ನು ಟಿಮೋರ್-ಲೆಸ್ಟೆಯಲ್ಲಿ ಪೋಪ್ ಫ್ರಾನ್ಸಿಸ್ ಗೆ ನೀಡಿದ ಸ್ವಾಗತ ಎಂದು ವಿವರಿಸಲಾಗಿದೆ. “100% ಕ್ಯಾಥೋಲಿಕ್ ಮೂಲದ ದೇಶವಾದ ಟಿಮೊಲ್-ಲೆಸ್ಟೆಗೆ ಪೋಪ್ ಫ್ರಾನ್ಸಿಸ್ ನೀಡಿದ ಐತಿಹಾಸಿಕ ಭೇಟಿಯನ್ನು ಸ್ವಾಗತಿಸಿದ್ದಾರೆ” ಎಂಬ ಬರಹದೊಂದಿಗೆ ಹಂಚಿಕೊಳ್ಳಲಾಗಿದೆ.
ಸೆಪ್ಟೆಂಬರ್ 16 ರಂದು ಮೊರಾಕೊ ನ್ಯೂಸ್ (@ಮೊರೊಕೊಲಿಟಿಕ್) ಪೋಸ್ಟ್ ಮಾಡಿದ ಈ ವೀಡಿಯೊವೊಂದು ಲಭ್ಯವಾಗಿದ್ದು, ಈ ವಿಡಿಯೋವನ್ನು ಪೋಪ್ ಫ್ರಾನ್ಸಿಸ್ ಟಿಮೋರ್-ಲೆಸ್ಟೆಗೆ ಭೇಟಿ ಎಂದು ವಿವರಿಸಲಾಗಿದೆ.
ಕೆಲವು ಕೀವರ್ಡ್ ಸಹಾಯದಿಂದ ಮತ್ತಷ್ಟು ಸರ್ಚ್ ಮಾಡಿದಾಗ, 10 ಸೆಪ್ಟೆಂಬರ್ 2024ರಂದು ಅಸೋಸಿಯೇಟೆಡ್ ಪ್ರೆಸ್ ತನ್ನ YouTubeನಲ್ಲಿ ವಿಡಿಯೋವನ್ನು ಹಂಚಿಕೊಂಡಿದೆ “ಸುಮಾರು 600,000 ಜನರು ಪೋಪ್ ಫ್ರಾನ್ಸಿಸ್ ಅವರ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ” ಎಂಬ ಶೀರ್ಷಿಕೆಯನ್ನು ನೀಡಲಾಗಿದೆ.
ವಿಡಿಯೋಗೆ ನೀಡಿರುವ ವಿವರಣೆಯಲ್ಲಿ “ಅಂದಾಜು 600,000 ಜನರು – ಪೂರ್ವ ಟಿಮೋರ್‌ನ ಜನಸಂಖ್ಯೆಯ ಅರ್ಧದಷ್ಟು ಜನರು – 35 ವರ್ಷಗಳ ಹಿಂದೆ ಸೇಂಟ್ ಜಾನ್ ಪಾಲ್ II ಪ್ರಾರ್ಥನೆ ಮಾಡಿದ ಅದೇ ಮೈದಾನದಲ್ಲಿ ಪೋಪ್ ಫ್ರಾನ್ಸಿಸ್ ಅವರ ಅಂತಿಮ ಮಾಸ್‌ಗಾಗಿ ಮಂಗಳವಾರ ಕಡಲತೀರದ ಉದ್ಯಾನವನವನ್ನು ಪ್ಯಾಕ್ ಮಾಡಿದರು. ಇಂಡೋನೇಷ್ಯಾದಿಂದ ಸ್ವಾತಂತ್ರ್ಯಕ್ಕಾಗಿ ಹೋರಾಟ.” ಎಂದು ಬರೆಯಲಾಗಿದೆ. ಹಾಗಾಗಿ ಆಸಾದುದ್ದಿನ್ ಓವೈಸಿ ಕರೆ ನೀಡಿದಕ್ಕೆ ಮುಸ್ಲಿಮರು ನಡೆಸಿದ ರ್‍ಯಾಲಿಯ ದೃಶ್ಯ ಎಂದು ಎಂದು ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ದೃಶ್ಯಗಳು ಸುಳ್ಳು ಮತ್ತು ತಪ್ಪುದಾರಿಗೆಳೆಯುವಂತಿದೆ.
ಕೆಲವು ದಿನಗಳ ಹಿಂದೆ ಇದೇ ವಿಡಿಯೋವನ್ನು “ಸಂತ ರಾಮಗಿರಿ ಮತ್ತು ಬಿಜೆಪಿ ಶಾಸಕ ನಿತೀಶ್ ರಾಣೆ ಅವರ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಇಮ್ತಿಯಾಜ್ ಜಲೀಲ್ ನೇತೃತ್ವದಲ್ಲಿ ಎಐಎಂಐಎಂ ನಾಯಕರು ಮುಂಬೈನಲ್ಲಿ ನಡೆಸಿದ ಐತಿಹಾಸಿಕ ರ್‍ಯಾಲಿ ಎಂಬ ಹೇಳಿಕೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗಿತ್ತು ಅದನ್ನು ಏನ್‌ಸುದ್ದಿ.ಕಾಂ ಫ್ಯಾಕ್ಟ್‌ಚೆಕ್ ಮಾಡಿ ರ್‍ಯಾಲಿಯ ದೃಶ್ಯಗಳು ಎಲ್ಲಿಯದ್ದು ಎಂದು ತಿಳಿಸಿತ್ತು.
FACT CHECK | ಮುಂಬೈನ ಬೀದಿಗಳಲ್ಲಿ ಮುಸ್ಲಿಮರ ಶಕ್ತಿ ಪ್ರದರ್ಶನ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋ AIMIM ನಾಯಕ ಆಸಾದುದ್ದಿನ್ ಓವೈಸಿ ನೇತೃತ್ವದಲ್ಲಿ ನಡೆದ ರ್‍ಯಾಲಿಯದ್ದಲ್ಲ ಎಂದು ಈ ಮೂಲಕ ಖಚಿತವಾಗಿದೆ. ಈ ಹಿನ್ನಲೆಯಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ವಾಸ್ತವವಾಗಿ ಕ್ಯಾಥೋಲಿಕ್ ದೇಶವಾದ ಟಿಮೋರ್-ಲೆಸ್ಟೆಯಲ್ಲಿ ಪೋಪ್ ಫ್ರಾನ್ಸಿಸ್ ಅವರಿಗೆ ನೀಡಿದ ಭವ್ಯ ಸ್ವಾಗತದ ದೃಶ್ಯಗಳನ್ನು ಒಳಗೊಂಡಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ

