FACT CHECK | ಹಾಸ್ಟೆಲ್ ಹುಡುಗರು ಪಟಾಕಿ ಸಿಡಿಸುವ ವಿಡಿಯೋವನ್ನು ಕೋಮು ನಿರೂಪಣೆಯೊಂದಿಗೆ ತಪ್ಪಾಗಿ ಹಂಚಿಕೆ
“ಒಡಿಶಾದಲ್ಲಿ ದೀಪಾವಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಮುಸಲ್ಮಾನರು ಹಿಂದೂಗಳ ಮೇಲೆ ದಾಳಿ ಮಾಡಿದ್ದರು, ಈ ದಾಳಿಯ ನಂತರ ಹಿಂದೂಗಳು ಪಟಾಕಿಗಳ ಮೂಲಕ ಮುಸಲ್ಮಾನರ ಮೇಲೆ ದಾಳಿ ನಡೆಸಿ ಪ್ರತೀಕಾರವನ್ನು ತೀರಿಸಿಕೊಂಡಿದ್ದಾರೆ. ಹೀಗೆ ಸುಮ್ಮನಿರುವ ಹಿಂದೂಗಳ ಮೇಲೆ ದಾಳಿ ಮಾಡಿದಾಗ ಹಿಂದೂಗಳು ಇದೇ ರೀತಿಯ ಪ್ರತಿಕ್ರಿಯೆ ಕೊಟ್ಟಾಗ ಮುಸಲ್ಮಾನರು ಸುಮ್ಮನಾಗುತ್ತಾರೆ ಇಲ್ಲದಿದ್ದರೆ ಇದೇ ರೀತಿಯ ದಾಳಿಯನ್ನು ಪದೇಪದೇ ಮಾಡುತ್ತಲೇ ಇರುತ್ತಾರೆ” ಎಂದು ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.

ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹೆಲ್ಮೆಟ್ ಧರಿಸಿ ಪಟಾಕಿಯನ್ನು ಕೈಯಲ್ಲಿ ಹಿಡಿದು ಎದುರಿಗಿರುವವರ ಕಡೆಗೆ ಹಾರಿಸುವುದನ್ನು ಕಾಣಬಹುದಾಗಿದೆ. ಇನ್ನು ಆ ವ್ಯಕ್ತಿಯ ಜೊತೆಗೂ ಹಲವರಿದ್ದು, ತದನಂತರ ಕಟ್ಟಡದೊಳಕ್ಕೆ ಪಟಾಕಿಯನ್ನು ಹಾರಿಸುವುದು ವಿಡಿಯೋದಲ್ಲಿ ಕಾಣಬಹುದು.

ಇದೆ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲಿಸಲು ವಿಡಿಯೋದ ವಿವಿಧ ಕೀ ಪ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ನವಂಬರ್ 1ರಂದು ಒಡಿಶಾ ಟಿವಿ ಡಾಟ್ ಇನ್ ಎಂಬ ವೆಬ್ಸೈಟ್ನಲ್ಲಿ ಪ್ರಕಟವಾದ ವರದಿಯೊಂದು ಲಭ್ಯವಾಗಿದೆ. ಈ ವರದಿಯಲ್ಲಿ ವಿಡಿಯೋವಿನ ಸ್ಕ್ರೀನ್ ಗ್ರ್ಯಾಬ್ ಅನ್ನು ಹಂಚಿಕೊಂಡಿರುವುದು ಕಂಡುಬಂದಿದ್ದು, ವರದಿಯಲ್ಲಿ ಹಾಸ್ಟೆಲ್ ಹುಡುಗರು ಪಟಾಕಿಯನ್ನು ಬಳಸಿ ಹುಚ್ಚಾಟ ಆಡಿದ್ದಾರೆ ಎಂಬುದನ್ನು ಉಲ್ಲೇಖಿಸಲಾಗಿದೆ.
ನವೆಂಬರ್ 2, 2024ರಂದುಕನಕ ನ್ಯೂಸ್ ಎಂಬ ಯುಟ್ಯೂಬ್ ಚಾನೆಲ್ ನಲ್ಲಿ ಈ ಘಟನೆಯ ವಿಡಿಯೋವನ್ನು ಹಂಚಿಕೊಂಡು ದೀಪಾವಳಿ ಸಂದರ್ಭದಲ್ಲಿ ಹಾಸ್ಟೆಲ್ ಹುಡುಗರು ಪರಸ್ಪರ ಪಟಾಕಿ ಸಿಡಿಸಿ ಗಲಾಟೆ ಮಾಡಿಕೊಂಡಿದ್ದಾರೆ ಎಂದು ವರದಿ ಮಾಡಲಾಗಿದೆ. ಈ ಘಟನೆಯಲ್ಲಿ ಯಾವುದೇ ರೀತಿಯಾದ ಕೋಮು ಆಯಾಮವನ್ನು ಉಲ್ಲೇಖಿಸಲಾಗಿಲ್ಲ. ಇದೇ ರೀತಿಯಾಗಿ ಹಲವು ವರದಿಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿದ್ದು, ಈ ಯಾವುದೇ ವರದಿಗಳಲ್ಲಿಯೂ ಕೋಮು ಆಯಾಮ ಇಲ್ಲದಿರುವುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಹಾಸ್ಟೆಲ್ ಹುಡುಗರು ಪರಸ್ಪರ ಪಟಾಕಿ ಸಿಡಿಸುತ್ತಿರುವ ವಿಡಿಯೋವನ್ನು,ಹಿಂದೂಗಳ ಮೇಲೆ ಮುಸಲ್ಮಾನರು ದಾಳಿಯನ್ನು ನಡೆಸಿದರು ಮತ್ತು ಅದಕ್ಕೆ ಪ್ರತಿಯಾಗಿ ಹಿಂದೂಗಳು ಕೂಡ ಪಟಾಕಿಗಳನ್ನು ಸಿಡಿಸಿ ಮುಸಲ್ಮಾನರ ವಿರುದ್ಧ ಪ್ರತೀಕಾರವನ್ನು ತೀರಿಸಿಕೊಂಡಿದ್ದಾರೆ ಎಂಬ ಸುಳ್ಳು ಪ್ರತಿಪಾದನೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ. ಈ ಘಟನೆಯಲ್ಲಿ ಯಾವುದೇ ಕೋಮು ಆಯಾಮವಿಲ್ಲ ಎಂಬುದು ಸ್ಪಷ್ಟವಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಬ್ರಾಹ್ಮಣರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ದ ತಮಿಳುನಾಡಿನಲ್ಲಿ ಬೃಹತ್ ರ್ಯಾಲಿ ಎಂದು 2012ರ ದೇವಸ್ಥಾನದ ಬ್ರಹ್ಮೋತ್ಸವದ ಫೋಟೊ ಹಂಚಿಕೆ

