FACT CHECK | 5 ಸಾವಿರ ರೂಪಾಯಿಯ ಹೊಸ ನೋಟನ್ನು RBI ಬಿಡುಗಡೆ ಮಾಡಲಿದೆಯೆ ? ಈ ಸ್ಟೋರಿ ಓದಿ
ಭಾರತೀಯ ರಿಸರ್ವ್ ಬ್ಯಾಂಕ್ (RBI) ಐದು ಸಾವಿರ ರೂಪಾಯಿ ನೋಟುಗಳನ್ನು ಬಿಡುಗಡೆ ಮಾಡಲು ಹೊರಟಿದೆ ಎಂಬ ಪೋಸ್ಟ್ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಹಸಿರು ಬಣ್ಣದಲ್ಲಿರುವ 5000 ರೂಪಾಯಿ ನೋಟಿನ ಚಿತ್ರವನ್ನು ಪ್ರಸಾರ ಮಾಡಲಾಗುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು 5000 ರೂ. ಎಂದು ಹೇಳಲಾಗುವ ಫೋಟೋವನ್ನು ಹಂಚಿಕೊಂಡು, ‘‘*BIG NEWS: 5000 ರೂಪಾಯಿಯ ಹೊಸ ನೋಟು ಬಿಡುಗಡೆ: RBI ನೀಡಿದೆ ಈ ಮಾಹಿತಿ|5000 New Note’’ ಎಂದು ಬರೆದುಕೊಂಡಿದ್ದಾರೆ. ಹಾಗಾದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ( RBI ) ನಿಜವಾಗಿಯೂ 5000 ರೂ. ಮುಖಬೆಲೆಯ ಹೊಸ ನೋಟನ್ನು ಬಿಡುಗಡೆ ಮಾಡುತ್ತಿದೆಯೇ? ಇದರ ಸತ್ಯಾಸತ್ಯತೆ ಏನು ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
5 ಸಾವಿರ ಮುಖಬೆಲೆಯ ನೋಟುಗಳನ್ನು RBI ಬಿಡುಗಡೆ ಮಾಡಲಿದೆ ಎಂಬ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಆರ್ಬಿಐ ಅಂತಹ ಯಾವುದೇ ನಿರ್ಧಾರ ತೆಗೆದುಕೊಂಡಿದೆ ಎಂದು ದೃಢಪಡಿಸುವ ಒಂದೇ ಒಂದು ಸುದ್ದಿಯೂ ಲಭ್ಯವಾಗಿಲ್ಲ. ತನಿಖೆಯನ್ನು ಮುಂದಕ್ಕೆ ತೆಗೆದುಕೊಂಡು, ಆರ್ಬಿಐ ವೆಬ್ಸೈಟ್ ಅನ್ನು ಸ್ಕ್ಯಾನ್ ಮಾಡಲಾಗಿದೆ. RBI
ಜನವರಿ 1, 2025 ರ ಇತ್ತೀಚಿನ ಪತ್ರಿಕಾ ಟಿಪ್ಪಣಿಯು ಬ್ಯಾಂಕ್ನ ವೆಬ್ಸೈಟ್ನಲ್ಲಿ ಕಂಡುಬಂದಿದೆ. ಮೇ 19, 2023 ರಂತೆ ಚಲಾವಣೆಯಲ್ಲಿರುವ 2000 ರೂ. ಬ್ಯಾಂಕ್ ನೋಟ್ಗಳಲ್ಲಿ 98.12% ರಷ್ಟು ಹಿಂತಿರುಗಿವೆ ಎಂದು ಅದು ಹೇಳಿದೆ. ಮೇ 2023 ರಲ್ಲಿ, ಕೇಂದ್ರ ಸರ್ಕಾರವು 2,000 ರೂ. ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಂಡಿತು. ಪ್ರಸ್ತುತ 10, 20, 50, 100, 200, 500 ರೂ. ಗಳ ನೋಟುಗಳು ಮಾತ್ರ ಚಲಾವಣೆಯಲ್ಲಿವೆ. 5000 ರೂಪಾಯಿ ನೋಟಿನ ಬಗ್ಗೆ ನಮಗೆ ಯಾವುದೇ ಪತ್ರಿಕಾ ಟಿಪ್ಪಣಿ ಕಂಡುಬಂದಿಲ್ಲ.

ಇದೇ ವೇಳೆ ಖಾಸಗಿ ವೆಬ್ಸೈಟ್ ಒಂದು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಆರ್ಬಿಐ ನೀಡಿರುವ ಸ್ಪಷ್ಟನೆ ನಮಗೆ ಸಿಕ್ಕಿದೆ. ‘‘ಆರ್ಬಿಐ ಗವರ್ನರ್ ಅವರು 5,000 ರೂ ನೋಟುಗಳನ್ನು ಬಿಡುಗಡೆ ಮಾಡುವ ಯಾವುದೇ ಯೋಜನೆ ಇಲ್ಲ ಎಂದು ಹೇಳಿದ್ದಾರೆ. ದೊಡ್ಡ ಮುಖಬೆಲೆಯ ಹೊಸ ನೋಟುಗಳನ್ನು ಚಲಾವಣೆಗೆ ತರಲು ಆರ್ಬಿಐ ಮನಸ್ಸು ಮಾಡುತ್ತಿಲ್ಲ. ದೇಶದ ಆರ್ಥಿಕ ಅಗತ್ಯಗಳಿಗೆ ಪ್ರಸ್ತುತ ದೇಶದ ಕರೆನ್ಸಿ ವ್ಯವಸ್ಥೆಯು ಸಾಕಾಗುತ್ತದೆ ಎಂದು ಆರ್ಬಿಐ ಹೇಳಿದೆ.

ಹಾಗೆಯೆ ಸರ್ಕಾರವು ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುತ್ತಿದೆ. UPI, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಡಿಜಿಟಲ್ ವ್ಯಾಲೆಟ್ಗಳಿಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿದೆ. ಆರ್ಬಿಐ ಕೇವಲ 2000 ರೂಪಾಯಿ ನೋಟುಗಳನ್ನು ಹಿಂಪಡೆಯಲು ನಿರ್ಧರಿಸಿದೆ. ಹಾಗಾಗಿ ಹೊಸ 5000 ರೂ. ನೋಟುಗಳನ್ನು ಪರಿಚಯಿಸುವ ಯೋಜನೆ ಇಲ್ಲ ತಿಳಿಸಿದ್ದಾರೆ ಎಂದು ಬರೆಯಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಹೊಸದಾಗಿ ಹಸಿರು ಬಣ್ಣದ ₹5000 ರೂಪಾಯಿ ನೋಟನ್ನು RBI ಬಿಡುಗಡೆ ಮಾಡುತ್ತದೆ ಎನ್ನುವುದು ಕೇವಲ ವದಂತಿ ಎಂದು RBI ಸ್ಪಷ್ಟಪಡಿಸಿದೆ. ಇದನ್ನ ಯಾರೂ ನಂಬಬಾರದು ಎಂದು ಕೇಳಿಕೊಂಡಿದೆ. ಈ ವದಂತಿಗಳಲ್ಲಿ ಯಾವುದೇ ಹುರುಳಿಲ್ಲ ಎಂದು RBI ಗವರ್ನರ್ ಕೂಡ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಭಾರತದ ಬಾಹ್ಯಾಕಾಶ ತ್ಯಾಜ್ಯ ಕೀನ್ಯಾದ ಗ್ರಾಮವೊಂದರಲ್ಲಿ ಬಿದ್ದಿರುವುದು ನಿಜವೇ?

