FACT CHECK | ಪಂಚಾಯ್ತಿ ಅಧಿಕಾರಿಯೊಬ್ಬ ಟೇಬಲ್ ಕ್ಲೀನ್ ಮಾಡಲು ರಾಷ್ಟ್ರ ಧ್ವಜ ಬಳಸಿದ ಘಟನೆ ನಡೆದಿದ್ದು ಎಲ್ಲಿ ಗೊತ್ತೇ?

ಸರ್ಕಾರಿ ಕಚೇರಿಯೊಂದರಲ್ಲಿ ವ್ಯಕ್ತಿಯೊಬ್ಬ ಟೇಬಲ್‌ಗಳನ್ನು ಸ್ವಚ್ಛಗೊಳಿಸಲು  ರಾಷ್ಟ್ರಧ್ವಜವನ್ನು ಬಳಸಿರುವ ವಿಡಿಯೋ ವನ್ನು  ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ವೈರಲ್‌ ವಿಡಿಯೋದಲ್ಲಿ ಕಂಡುಬರುವ ವ್ಯಕ್ತಿಯು ಆಂಧ್ರಪ್ರದೇಶದ ಅನಂತಪುರದ ಡೆಪ್ಯುಟಿ ರಿಜಿಸ್ಟ್ರಾರ್. ಇವರು  ರಾಷ್ಟ್ರಧ್ವಜಕ್ಕೆ  ಅಗೌರವ ತೋರಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಆಂಧ್ರಪ್ರದೇಶದಲ್ಲಿ ಡೆಪ್ಯುಟಿ ರಿಜಿಸ್ಟ್ರಾರ್‌ ರಾಷ್ಟ್ರ ಧ್ವಜದಿಂದ ಟೇಬಲ್‌ಅನ್ನು ಸ್ವಚ್ಚಗೊಳಿಸಿರುವುದು ನಿಜವೇ ಎಂದು ಪರಿಶೀಲಿಸೋಣ. 

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವಂತೆ ಆಂಧ್ರಪ್ರದೇಶದ ಡೆಪ್ಯೂಟಿ ರಿಜಿಸ್ಟರ್‌ ತನ್ನ ಟೇಬಲ್‌ಅನ್ನು ರಾಷ್ಟ್ರ ಧ್ವಜದಲ್ಲಿ ಸ್ವಚ್ಚಗೊಳಿಸಿಕೊಳ್ಳುತ್ತಿರುವುದು ನಿಜವೇ ಎಂದು ಪರಿಶೀಲಿಸಲು, ವಿಡಿಯೋಗೆ ಸಂಬಂಧಿಸಿದ ಕೆಲವು ಕೀವರ್ಡ್‌ಗಳನ್ನು ಬಳಸಿ ಗೂಗಲ್ ಸರ್ಚ್ ಮಾಡಿದಾಗ, ಜನವರಿ 2023ರಲ್ಲಿ ಪ್ರಕಟವಾದ ಸುದ್ದಿ ವರದಿಗಳು ಲಭ್ಯವಾಗಿದೆ.

ಈ ವರದಿಗಳ ಪ್ರಕಾರ, ಒಡಿಶಾದ ಪುರಿ ಜಿಲ್ಲೆಯ ಗೋಪ್ ಬ್ಲಾಕ್‌ನ ಸಿಮಿಲಿ ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿ (PDO) ಪ್ರಶಾಂತ್ ಕುಮಾರ್ ಸ್ವೈನ್ ಅವರು ಟೇಬಲ್ ಅನ್ನು ಸ್ವಚ್ಛಗೊಳಿಸಲು ರಾಷ್ಟ್ರಧ್ವಜವನ್ನು ಬಳಸಿದ್ದರು. ಆದರೆ, ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಪ್ರಶಾಂತ್ ಕುಮಾರ್ ಸ್ವೈನ್ ತಮ್ಮ ತಪ್ಪನ್ನು ಒಪ್ಪಿಕೊಂಡು ಮಾಧ್ಯಮಗಳ ಮುಂದೆ ಕ್ಷಮೆ ಯಾಚಿಸಿದ್ದಾರೆ. ಈ ಘಟನೆ ಒಡಿಶಾದಲ್ಲಿ ನಡೆದಿದೆ ಎಂದು ಸ್ಪಷ್ಟವಾಗಿ ತಿಳಿದುಬಂದಿದೆ. ಆದ್ದರಿಂದ ಆಂಧ್ರಪ್ರದೇಶಕ್ಕೂ ಈ ವೈರಲ್‌ ವಿಡಿಯೋಗೂ ಯಾವುದೇ ಸಂಬಂಧವಿಲ್ಲ.

2023ರ ಜನವರಿ 13ರಂದು ಪ್ರಕಟವಾದ ಟೈಮ್ಸ್ ಆಫ್ ಇಂಡಿಯಾ ವರದಿ ಸಹ ಲಭ್ಯವಾಗಿದೆ. ಈ ವರದಿಯ ಪ್ರಕಾರ, ಅಕ್ಟೋಬರ್ 2022ರಲ್ಲಿ ಕೋನಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ಸಿಮಿಲಿ ಗ್ರಾಮ ಪಂಚಾಯತ್ ಕಚೇರಿಯಲ್ಲಿ ನಡೆದ ಘಟನೆಯಿಂದ. ಪೊಲೀಸರು ಪ್ರಶಾಂತ್ ಕುಮಾರ್ ಸ್ವೈನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪಂಚಾಯಿತಿ ಕಚೇರಿಯಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

2023ರ ಜನವರಿ 23ರಂದು ಫ್ಯಾಕ್ಟ್ ಚೆಕ್ ವಿಭಾಗದ ಆಂಧ್ರಪ್ರದೇಶ ಸರ್ಕಾರ ಎಂಬ ಅಧಿಕೃತ ಖಾತೆಯಿಂದ ಹಂಚಿಕೊಳ್ಳಲಾದ ಟ್ವಿಟರ್‌ ಪೋಸ್ಟ್‌ವೊಂದು ಲಭ್ಯವಾಗಿದೆ. ಈ ವಿಡಿಯೋ ಅನಂತಪುರದಲ್ಲ, ಒಡಿಶಾದ್ದು ಎಂದು ಈ ಪೋಸ್ಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ. ತೆಲುಗಿನಲ್ಲಿ ಅದೇ ವಿಡಿಯೋವನ್ನು ಒಳಗೊಂಡಿರುವ ತಪ್ಪುದಾರಿಗೆಳೆಯುವ ಹಲವಾರು ಟ್ವೀಟ್‌ ಪೋಸ್ಟ್‌ಗಳು ಲಭ್ಯವಾಗಿವೆ. ಸುಳ್ಳು ಸುದ್ದಿಗಳನ್ನು ಹರಡುವುದು ಕಾನೂನುಬದ್ಧ ಅಪರಾಧ ಎಂದು ಪೋಸ್ಟ್‌ನಲ್ಲಿ ದೊಡ್ಡಕ್ಷರಗಳಿಂದ ಬರೆಯಲಾಗಿದೆ.

ಸಭೆ ಪ್ರಾರಂಭವಾಗುವ ಸ್ವಲ್ಪ ಸಮಯದ ಮೊದಲು, ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ (PDO) ಸ್ವೈನ್ ಅವರು ಕುರ್ಚಿ ಮತ್ತು ಟೇಬಲ್‌ಗಳ ಮೇಲಿರುವ ಧೂಳನ್ನು ಸ್ವಚ್ಛಗೊಳಿಸಲು ಪಂಚಾಯತ್ ಕಚೇರಿಯಲ್ಲಿದ್ದ ರಾಷ್ಟ್ರಧ್ವಜವನ್ನು ಬಳಸಿದ್ದಾರೆ. ಈ ಘಟನೆಯ ವಿಡಿಯೋವನ್ನು ವಾರ್ಡ್ ಸದಸ್ಯರೊಬ್ಬರು ಹಂಚಿಕೊಂಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಒಡಿಶಾದಲ್ಲಿ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಷ್ಟ್ರಧ್ವಜವನ್ನು ಬಳಸಿ ಟೇಬಲ್  ಸ್ವಚ್ಛಗೊಳಿಸಿರುವ 2022ರ ಹಳೆಯ ವಿಡಿಯೋವನ್ನು ಆಂಧ್ರಪ್ರದೇಶದಲ್ಲಿ ನಡೆದಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights