FACT CHECK | ನಿಧನರಾಗಿರುವ ಸಂತನನ್ನು ಮಹಾ ಕುಂಭಮೇಳದಲ್ಲಿ ಭಾಗಿಯಾಗಿದ್ದಾರೆಂದು ಸುಳ್ಳು ಪೋಸ್ಟ್ ಹಂಚಿಕೆ
ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ಮಹಾ ಕುಂಭಮೇಳ ಅದ್ಧೂರಿಯಾಗಿ ನಡೆಯುತ್ತಿದೆ. ಇದರ ಮಧ್ಯೆ ಹಿರಿಯ ಸ್ವಾಮೀಜಿಯೊಬ್ಬರಿಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಈ ಸ್ವಾಮೀಜಿಗೆ 154 ವರ್ಷ ಎಂದು ಹೇಳಲಾಗುತ್ತಿದ್ದು, ಮಹಾಕುಂಭಮೇಳದಲ್ಲಿ ಭಾಗವಹಿಸಲು ಹಿಮಾಲಯದಿಂದ ಬಂದಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

‘‘154 ವರ್ಷ wow.. ಗ್ರೇಟ್ ನಾಗ ಸಾಧು ಹಿಮಾಲಯದಿಂದ ಇಳಿದು ಕುಂಭ ಮೇಳಕ್ಕೆ ಆಗಮನ’’ ಎಂದು ಬರೆದುಕೊಂಡು ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವಿಡಿಯೋವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ಅನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಡಿಸೆಂಬರ್ 11, 2024 ರಂದು ಎಕ್ಸ್ ಬಳಕೆದಾರರೊಬ್ಬರು ಹಂಚಿಕೊಂಡಿರುವ ವಿಡಿಯೋ ಲಭ್ಯವಾಗಿದೆ. ‘‘ಸಿಯಾರಾಮ್ ಬಾಬಾ ಇಂದು ಮೋಕ್ಷದ ಏಕಾದಶಿಯ ಶುಭ ದಿನದಂದು ತಮ್ಮ ಸ್ವರ್ಗೀಯ ನಿವಾಸಕ್ಕೆ ತೆರಳಿದರು. ಓಂ ಶಾಂತಿ. ಭಗವಾನ್ ಶ್ರೀ ರಾಮನ ಮೇಲಿನ ಅವರ ಭಕ್ತಿ ಯಾವಾಗಲೂ ನಮ್ಮ ಹೃದಯದಲ್ಲಿರುತ್ತದೆ. ಜೈ ಜೈ ಶ್ರೀ ರಾಮ್’’ ಎಂದು ಬರೆದುಕೊಂಡಿದ್ದಾರೆ. ಹೀಗಾಗಿ ಮಹಾಕುಂಭ ಆರಂಭಕ್ಕೂ ಮುನ್ನವೇ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಇರುವುದು ಸ್ಪಷ್ಟವಾಗಿದೆ. ಮಹಾಕುಂಭ ಶುರುವಾಗಿರುವುದು ಜನವರಿ 13, 2025 ರಂದು. ಇದಕ್ಕೂ ಮುನ್ನವೇ ಈ ವಿಡಿಯೋವನ್ನು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ.
Siyaram Baba departed for his heavenly abode today on auspicious day of Mokshada Ekadashi Om Shanti His Devotion To Bhagwan Shri Ram will always be in our Hearts ❤️ Jai Jai Shri Ram pic.twitter.com/02bvFEHJWX
— Rosy (@rose_k01) December 11, 2024
ಹೆಚ್ಚಿನ ಸಾಮಾಜಿಕ ಮಾಧ್ಯಮ ಬಳಕೆದಾರರು ಡಿಸೆಂಬರ್ನಲ್ಲಿ ಇದೇ ವೀಡಿಯೊವನ್ನು ಹಂಚಿಕೊಂಡು ಸಿಯಾರಾಮ್ ಬಾಬಾ ಅವರ ನಿಧನಕ್ಕೆ ಸಂತಾಪ ಸೂಚಿಸಿರುವುದು ನಮಗೆ ಕಂಡುಬಂದಿದೆ. ಇದೇ ವೇಳೆ ನಮಗೆ ಈ ವೀಡಿಯೊದ ಮೂಲ ಆವೃತ್ತಿಯೂ ಲಭ್ಯವಾಗಿದೆ. ಬ್ಲಾಗರ್ ಆಗಿರುವ ವಿಕೆನ್ ಕುಶ್ವಾ ಎಂಬವರು ಈ ವೀಡಿಯೊವನ್ನು 11 ಅಕ್ಟೋಬರ್ 2024 ರಂದು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.
View this post on Instagram
ಇನ್ನು ಇವರ ನಿಧನದ ಸುದ್ದಿಯನ್ನು ಖಚಿತ ಪಡಿಸಿಕೊಳ್ಳಲು ಸಂಬಂಧಪಟ್ಟ ಕೀವರ್ಡ್ ಮೂಲಕ ಗೂಗಲ್ನಲ್ಲಿ ಸರ್ಚ್ ಮಾಡಿದ್ದೇವೆ. ಆಗ The Economic Times ಡಿಸೆಂಬರ್ 11, 2024 ರಂದು ‘‘ಸಿಯಾರಾಮ್ ಬಾಬಾ ಅವರು 95 ರಲ್ಲಿ ಮೋಕ್ಷದ ಏಕಾದಶಿ ಮತ್ತು ಗೀತಾ ಜಯಂತಿಯಂದು ನಿಧನರಾದರು’’ ಎಂದು ಸುದ್ದಿ ಪ್ರಕಟಿಸಿದೆ.

ಇದರಲ್ಲಿರುವ ಮಾಹಿತಿಯ ಪ್ರಕಾರ, ‘‘ಭಗವಾನ್ ಹನುಮಾನ್ ಮತ್ತು ನರ್ಮದಾ ನದಿಯ ಮೇಲಿನ ಭಕ್ತಿಗೆ ಹೆಸರುವಾಸಿಯಾದ ಪೂಜ್ಯ ಆಧ್ಯಾತ್ಮಿಕ ವ್ಯಕ್ತಿ ಸಿಯಾರಾಮ್ ಬಾಬಾ ಅವರು ಬುಧವಾರ 95 ನೇ ವಯಸ್ಸಿನಲ್ಲಿ ನಿಧನರಾದರು. ಭಟ್ಟಯನ್ ಬುಜುರ್ಗ್‌ನಲ್ಲಿರುವ ಅವರ ಆಶ್ರಮದಲ್ಲಿ ಬೆಳಿಗ್ಗೆ 6:10 ಕ್ಕೆ ಕೊನೆಯುಸಿರೆಳೆದರು. ಕಳೆದ ಹತ್ತು ದಿನಗಳಿಂದ ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರು ಆರಂಭದಲ್ಲಿ ಸನವಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆದಾಗ್ಯೂ, ಆಧ್ಯಾತ್ಮಿಕ ನಾಯಕನು ತಾನು ಆಶ್ರಮಕ್ಕೆ ಮರಳಿ ಅಲ್ಲಿ ಜಿಲ್ಲಾ ಆಸ್ಪತ್ರೆಯ ವೈದ್ಯರಿಂದ ಆರೈಕೆ ಪಡೆಯುತ್ತಿದ್ದರು’’ ಎಂದು ಬರೆಯಲಾಗಿದೆ.

Money Control ಕೂಡ ಡಿಸೆಂಬರ್ 11, 2024 ರಂದು, ಸಂತ ಸಿಯಾರಾಮ್ ಬಾಬಾ 11 ಡಿಸೆಂಬರ್ 2024 ರಂದು ಮೋಕ್ಷ ಏಕಾದಶಿಯಂದು ನಿಧನರಾದರು ಎಂದು ಸುದ್ದಿ ಪ್ರಕಟಿಸಿದೆ. ಅವರು ಮಧ್ಯಪ್ರದೇಶದ ನರ್ಮದಾ ನದಿಯ ದಡದಲ್ಲಿರುವ ಭಟ್ಟಯಾನ್ ಭುಜುರ್ಗ್‌ನಲ್ಲಿರುವ ತಮ್ಮ ಆಶ್ರಮದಲ್ಲಿ ತಂಗುತ್ತಿದ್ದರು. ಆದರೆ.. ವೈರಲ್ ಪೋಸ್ಟ್‌ನಲ್ಲಿ ಹೇಳಿರುವಂತೆ ಅವರ ವಯಸ್ಸು 154 ವರ್ಷ ಎಂದು ಯಾವುದೇ ಸುದ್ದಿ ಲೇಖನವೂ ಉಲ್ಲೇಖಿಸಿಲ್ಲ. ಅವರ ವಯಸ್ಸು 95 ಎಂದು ಬರೆಯಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, 154 ವರ್ಷದ ಸನ್ಯಾಸಿಯೊಬ್ಬರು ಮಹಾ ಕುಂಭಮೇಳದಲ್ಲಿ ಭಾಗವಹಿಸಲು ಹಿಮಾಲಯದಿಂದ ಬಂದಿದ್ದರು ಎಂಬ ವೈರಲ್ ಆಗುತ್ತಿರುವ ವಿಡಿಯೋ ಸುಳ್ಳು. ಅಲ್ಲದೆ ಈ ಸಂತ ಸಿಯಾರಾಮ್ ಬಾಬಾ 11 ಡಿಸೆಂಬರ್ 2024 ರಂದು ನಿಧನರಾಗಿದ್ದು ಅವರಿಗೆ 95 ವರ್ಷ ವಯಸ್ಸಾಗಿತ್ತು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ಸುಳ್ಳಾಗಿದ್ದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಹೊಸ ರೀತಿಯಲ್ಲಿ ಅಂಬಾಸಿಡರ್ ಕಾರು ಮತ್ತೆ ಮಾರುಕಟ್ಟೆ ಪ್ರವೇಶಿಸಿದೆಯೇ?

