FACT CHECK | AAP ಶಾಸಕನನ್ನು ಬಂಧಿಸಲಾಗಿದೆ ಎಂದು ಹಳೆಯ ವಿಡಿಯೋ ಹಂಚಿಕೆ
ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಅವರ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ಪೊಲೀಸರು ಅಮಾನತುಲ್ಲಾ ಖಾನ್ ಅವರನ್ನು ಬಂಧಿಸಿ ಕರೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ದೆಹಲಿ ಪೊಲೀಸರಿಗೆ ಬೆದರಿಕೆ ಹಾಕಿದ್ದ ಶಾಸಕ ಅಮಾನತುಲ್ಲಾ ಖಾನ್ ಬಂಧನ ಎಂದು ಅನೇಕ ಬಳಕೆದಾರರು ಹೇಳುತ್ತಿದ್ದಾರೆ.

ಫೇಸ್‌ಬುಕ್ ಬಳಕೆದಾರರೊಬ್ಬರು ಫೆಬ್ರವರಿ 15, 2025 ರಂದು ಈ ವಿಡಿಯೋವನ್ನು ಹಂಚಿಕೊಂಡು, ‘‘ಇದು ನಮ್ಮ ಏರಿಯಾ. ಇಲ್ಲಿಂದ ಹೊರಟು ಹೋಗಿ, ಇಲ್ಲದಿದ್ದರೆ ಜೀವಂತವಾಗಿ ಹೊರಗೆ ಹೋಗುವುದು ನಿಮಗೆ ಕಷ್ಟವಾಗಬಹುದು. ನಮ್ಮ ಒಂದು ಕೂಗಿಗೆ ಎಷ್ಟು ಜನ ಸೇರುತ್ತಾರೆಂದರೆ ನೀವು ಎಲ್ಲಿದ್ದಿರೀ ಎಂದು ನಿಮಗೇ ತಿಳಿಯುವುದಿಲ್ಲ ಎಂದು ತನ್ನನ್ನು ಬಂಧಿಸಲು ಹೋದ ದೆಹಲಿ ಪೊಲೀಸರಿಗೆ ಬೆದರಿಕೆ ಹಾಕಿದ್ದ. ದೆಹಲಿಯ ಶಾಸಕ ಅಮಾನತುಲ್ಲಾ ಖಾನ್ ನನ್ನು ದೇಹಲಿ ಪೋಲಿಸರು ಬಂಧಿಸಿ ತಮ್ಮ ವಶಕ್ಕೆ ಪಡೆಯುತ್ತಿರುವ ಕ್ಷಣ…’’ ಎಂದು ಬರೆದುಕೊಂಡಿದ್ದಾರೆ. (Archive)
ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ವಿಡಿಯೋದ ವಿವಿಧ ಕ್ರೀ ಫ್ರೇಮ್ ಬಳಸಿ ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಏಪ್ರಿಲ್ 16, 2023 ರಂದು ಅಮನತುಲ್ಲಾ ಖಾನ್ ಅವರು ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ ಇದೇ ವೈರಲ್ ವಿಡಿಯೋ ಲಭ್ಯವಾಗಿದೆ.
ಈ ಪೋಸ್ಟ್‌ನಲ್ಲಿ, ಖಾನ್ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಸಿಬಿಐ ಮತ್ತು ಇಡಿ ಕ್ರಮಗಳನ್ನು ಟೀಕಿಸುತ್ತಾ, ‘‘ದೆಹಲಿ ಮುಖ್ಯಮಂತ್ರಿ ಶ್ರೀ ಅರವಿಂದ್ ಕೇಜ್ರಿವಾಲ್ ಅವರನ್ನು ಬೆದರಿಸಲು ಸಿಬಿಐ ಮತ್ತು ಇಡಿ ನಡೆಸಿದ ವಿಫಲ ಪ್ರಯತ್ನದ ವಿರುದ್ಧ ಪ್ರತಿಭಟನೆ. ಬಿಜೆಪಿ ಸರ್ಕಾರದ ಸರ್ವಾಧಿಕಾರದ ವಿರುದ್ಧ ನಾವು ನಮ್ಮ ಧ್ವನಿಯನ್ನು ಎತ್ತುವುದನ್ನು ಮುಂದುವರಿಸುತ್ತೇವೆ’’ ಎಂದು ಬರೆದುಕೊಂಡಿದ್ದಾರೆ.

ಮತ್ತಷ್ಟು ಮಾಹಿತಿಗಾಗಿ ಗೂಗಲ್‌ನಲ್ಲಿ ಕೀವರ್ಡ್ ಸರ್ಚ್ ಮಾಡಿದಾಗ, ಏಪ್ರಿಲ್ 17, 2023 ರಂದು ದಿ ಹಿಂದೂ ಪತ್ರಿಕೆಯ ವರದಿ ಲಭ್ಯವಾಗಿದೆ. “ಸಿಬಿಐ ಕೇಜ್ರಿವಾಲ್ ಅವರನ್ನು ಪ್ರಶ್ನಿಸಿದ್ದನ್ನು ಪ್ರತಿಭಟಿಸಲು ಎಎಪಿ ಸರ್ವ ಪ್ರಯತ್ನ ನಡೆಸುತ್ತದೆ; 1,000 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ” ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಪ್ರಕಟಿಸಲಾಗಿದೆ.
ಇದರಲ್ಲಿರುವ ಮಾಹಿತಿಯ ಪ್ರಕಾರ, ‘‘ಕೇಂದ್ರ ತನಿಖಾ ದಳ (ಸಿಬಿಐ) ಪ್ರಧಾನ ಕಚೇರಿಯಲ್ಲಿ ನಡೆದ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭಾನುವಾರ ವಿಚಾರಣೆಗೆ ಒಳಪಡಿಸಿದ್ದನ್ನು ವಿರೋಧಿಸಿ ದೆಹಲಿ ಮತ್ತು ಪಂಜಾಬ್‌ನ ಆಮ್ ಆದ್ಮಿ ಪಕ್ಷದ (ಎಎಪಿ) ಕಾರ್ಯಕರ್ತರು ರಾಷ್ಟ್ರ ರಾಜಧಾನಿಯ ಬೀದಿಗಿಳಿದು ಪ್ರತಿಭಟನೆ ನಡೆಸಿದರು’’ ಎಂದು ಬರೆಯಲಾಗಿದೆ.
ಇಂಡಿಯಾ ಟುಡೆ ಕೂಡ ಏಪ್ರಿಲ್ 16, 2023 ರಂದು ‘‘ಭಾರೀ ಭದ್ರತೆಯ ನಡುವೆ ವಿಚಾರಣೆಗಾಗಿ ಸಿಬಿಐ ಕಚೇರಿಯಲ್ಲಿ ಕೇಜ್ರಿವಾಲ್, ಪ್ರತಿಭಟನಾ ನಿರತ ಎಎಪಿ ಕಾರ್ಯಕರ್ತರ ಬಂಧನ’’ ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಪ್ರಕಟಿಸಿದೆ.
ದಿಲ್ಲಿ ತಕ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಏಪ್ರಿಲ್ 16, 2023 ರಂದು ‘‘ಪೊಲೀಸರು ಅಮಾನತುಲ್ಲಾ ಖಾನ್ ಅವರನ್ನು ಎಳೆದುಕೊಂಡು ಹೋದರು’’ ಎಂಬ ಶೀರ್ಷಿಕೆಯೊಂದಿಗೆ ಇದೇ ವೈರಲ್ ವೀಡಿಯೊವನ್ನು ಅಪ್‌ಲೋಡ್ ಮಾಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಅರವಿಂದ್ ಕೇಜ್ರಿವಾಲ್ ಅವರ ಸಿಬಿಐ ಸಮನ್ಸ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಎಎಪಿ ಶಾಸಕ ಅಮಾನತುಲ್ಲಾ ಖಾನ್ ಅವರನ್ನು ಪೊಲೀಸರು ಎಳೆದೊಯ್ದ ಏಪ್ರಿಲ್ 2023 ರ ವಿಡಿಯೋವನ್ನು ಇತ್ತೀಚಿನದ್ದು ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಭಾರತೀಯ ಕರೆನ್ಸಿ ನೋಟುಗಳಲ್ಲಿರುವ ಗಾಂಧಿ ಚಿತ್ರವನ್ನು ತೆಗೆಯಲು RBI ನಿರ್ಧರಿಸಿದೆಯೇ?

