FACT CHECK | ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡುತ್ತಿರುವ ವಿಡಿಯೋ ವಕ್ಫ್ ಮಸೂದೆಗೆ ಸಂಬಂಧಿಸಿದ್ದಲ್ಲ

ಲೋಕಸಭೆಯಲ್ಲಿ ವಕ್ಫ್ ಅಭಿವೃದ್ಧಿ ಮಸೂದೆಯನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಗಿದೆ. ದೇಶಾದ್ಯಂತ ಮಸೂದೆಯ ಜಾರಿಯ ಕುರಿತಂತೆ ಪರ ವಿರೋದದ ಚರ್ಚೆಗಳು ನಡೆದಿದ್ದವು. ಈ ವಿಷಯದಲ್ಲಿ ಪ್ರತಿಪಕ್ಷಗಳು ಕೂಡ ಟೀಕೆ ವ್ಯಕ್ತಪಡಿಸಿದವು. ಮಸೂದೆ ಅಂಗೀಕಾರದ ವಿರುದ್ಧ ಹಲವು ಪ್ರತಿಭಟನೆಗಳು ನಡೆದವು. ವಕ್ಫ್‌ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ನಡೆದಿದೆ ಎಂದು ಹೇಳುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ.

ಏಪ್ರಿಲ್ 4, 2025 ರಂದು ಸ್​ಬುಕ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ‘‘ಉತ್ತರ ಪ್ರದೇಶದಲ್ಲಿ ವಕ್ಫ್ ಮಸೂದೆಯ ವಿರುದ್ಧ ಒಂದು ನಿರ್ದಿಷ್ಟ ಸಮುದಾಯದ ಜನರು ಗುಂಪುಗೂಡಿದರು. ತಕ್ಷಣ ಚಿಕಿತ್ಸೆ ಮಾಡಲಾಯಿತು. ದೀರ್ಘಕಾಲದ ಬೆನ್ನು ನೋವು, ಸೊಂಟ ನೋವು, ಕಾಲು ನೋವಿನಿಂದ ತ್ವರಿತ ಪರಿಹಾರಕ್ಕಾಗಿ. ಬೋಲ್ಡ್ಸರ್ ಬಾಬಾ’’ ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ವಿಡಿಯೋದ ಕೀಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಜನವರಿ 2020 ರಂದು ಫೇಸ್‌ಬುಕ್​ನಲ್ಲಿ ಪೋಸ್ಟ್‌ ಮಾಡಿರುವ ಇದೇ ವಿಡಿಯೋ ಲಭ್ಯವಾಗಿದೆ. ಈ 2020 ರ ಪೋಸ್ಟ್ ಉತ್ತರ ಪ್ರದೇಶದಲ್ಲಿ CAA (ಪೌರತ್ವ ತಿದ್ದುಪಡಿ ಕಾಯ್ದೆ) ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಪೊಲೀಸ್ ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಹೇಳುತ್ತದೆ.

ಫೇಸ್‌ಬುಕ್ ಪೋಸ್ಟ್‌ನಲ್ಲಿನ ವಿವರಣೆಯಿಂದ ಸುಳಿವುಗಳನ್ನು ತೆಗೆದುಕೊಂಡು ಕೀವರ್ಡ್ ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ,  20 ಡಿಸೆಂಬರ್ 2019 ರಂದು ಲೈವ್ ಹಿಂದೂಸ್ತಾನ್ ಯೂಟ್ಯೂಬ್ ಚಾನೆಲ್ ಪ್ರಕಟಿಸಿದ ಸುದ್ದಿ ವರದಿ ಲಭ್ಯವಾಗಿದೆ. ಇದಕ್ಕೆ ‘‘ಗೋರಖ್‌ಪುರ: ಸಿಎಎ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಕಲ್ಲು ತೂರಾಟ, ಲಾಠಿ ಚಾರ್ಜ್‌ನಲ್ಲಿ ಇಬ್ಬರು ಗಾಯಗೊಂಡರು.’’ ಎಂಬ ಶೀರ್ಷಿಕೆ ನೀಡಲಾಗಿದೆ. ವರದಿಯ ಪ್ರಕಾರ, 2019 ರ ಡಿಸೆಂಬರ್ 20 ರಂದು ಗೋರಖ್‌ಪುರದ ನಖಾಸ್ ಚೌಕ್‌ನಲ್ಲಿ ಸಿಎಎ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಕಲ್ಲುಗಳನ್ನು ಎಸೆದ ಪ್ರತಿಭಟನಾಕಾರರನ್ನು ಪೊಲೀಸರು ತಡೆದು ಲಾಠಿ ಚಾರ್ಜ್ ನಡೆಸಿದರು. ಈ ಸಂದರ್ಭ ನಡೆದ ಪೊಲೀಸ್ ಲಾಠಿ ಚಾರ್ಜ್​ನ ವೀಡಿಯೊವನ್ನು ವಿಭಿನ್ನ ಕೋನದಿಂದ ಇಲ್ಲಿ ತೋರಿಸಲಾಗಿದೆ.

ಎರಡು ವೀಡಿಯೊಗಳನ್ನು ಹೋಲಿಸಿದಾಗ, ವೈರಲ್ ವೀಡಿಯೊ ಮತ್ತು ಸುದ್ದಿ ವರದಿ ಎರಡರಲ್ಲೂ ಕಾಣಿಸಿಕೊಂಡಿರುವ ಸ್ಥಳದಲ್ಲಿ ನಾವು ಹೋಲಿಕೆಗಳನ್ನು ಗಮನಿಸಿದ್ದೇವೆ, ಅದನ್ನು ಕೆಳಗೆ ನೋಡಬಹುದು.

ವಿಡಿಯೋದಲ್ಲಿ,  ಹಲವಾರು ಅಂಗಡಿಗಳು ಮತ್ತು ಅವುಗಳ ಹೆಸರನ್ನು ಬೋರ್ಡ್‌ಗಳಲ್ಲಿ ಕಾಣಬಹುದು. ಗೂಗಲ್ ಮ್ಯಾಪ್ಸ್​ನಲ್ಲಿ ಈ ಹೆಸರುಗಳನ್ನು ಸರ್ಚ್‌ ಮಾಡಿದಾಗ, ವೀಡಿಯೊ ಉತ್ತರ ಪ್ರದೇಶದ ಗೋರಖ್‌ಪುರ ಜಿಲ್ಲೆಯದ್ದು, ಇದು ಸಂಭಾಲ್‌ನಿಂದ 650 ಕಿಲೋಮೀಟರ್‌ಗಿಂತಲೂ ಹೆಚ್ಚು ದೂರದಲ್ಲಿದೆ ಎಂಬುದು ಖಚಿತವಾಯಿತು. ಗೂಗಲ್ ಮ್ಯಾಪ್‌ನಲ್ಲಿ ತೋರಿಸಿರುವ ಪ್ರಕಾರ ಈ ಪ್ರದೇಶವು ಗೋರಖ್‌ಪುರದ ನಖಾಸ್ ಚೌಕ್ ಆಗಿದೆ. ವೈರಲ್ ಕ್ಲಿಪ್ ಮತ್ತು ಗೂಗಲ್ ಮ್ಯಾಪ್ಸ್ ಸ್ಟ್ರೀಟ್ ವ್ಯೂನಲ್ಲಿ ಕಂಡುಬರುವ ಅಂಗಡಿಯ ಹೋಲಿಕೆಯನ್ನು ಕೆಳಗೆ ನೋಡಬಹುದು.

ಸಿಎಎ ವಿರೋಧಿ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ ನಂತರ ಗೋರಖ್‌ಪುರದಲ್ಲಿ ಪೊಲೀಸರ ಕ್ರಮದ ಕುರಿತು ಹಲವಾರು ಮಾಧ್ಯಮಗಳು ವರದಿ ಮಾಡಿವೆ. ಅಂತಹ ವರದಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.ಈ ಎಲ್ಲ ಮಾಹಿತಿಯ ಆಧಾರದ ಮೇಲೆ ವೈರಲ್ ಆಗುತ್ತಿರುವ ವೀಡಿಯೊ ವಕ್ಫ್ ಮಸೂದೆಯ ವಿರುದ್ಧದ ಪ್ರತಿಭಟನೆಯದ್ದಲ್ಲ, ಬದಲಾಗಿ 2019 ರ ಡಿಸೆಂಬರ್‌ನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಯದ್ದು ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2019 ರ ಡಿಸೆಂಬರ್‌ನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಲಾಠಿ ಚಾರ್ಜ್‌ನ ವಿಡಿಯೋವನ್ನು ವಕ್ಫ್ ಮಸೂದೆಯ ವಿರುದ್ಧದ ಪ್ರತಿಭಟನೆಯದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿದಿ : FACT CHECK | ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ವಕೀಲರು ಪ್ರತಿಭಟಿಸಿದ್ದಾರೆ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights