FACT CHECK | ಭಾಷಣ ಮಾಡುವಾಗ ವ್ಯಕ್ತಿಯೊಬ್ಬ ಟ್ರಂಪ್ ತಲೆಗೆ ಹೊಡೆಯುತ್ತಿರುವಂತೆ ಎಡಿಟ್ ವಿಡಿಯೋ ಹಂಚಿಕೆ
ಇತ್ತೀಚೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬೇರೆ ಬೇರೆ ದೇಶಗಳ ಮೇಲೆ ತೆರಿಗೆ ವಿಧಿಸುವ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಈ ನಡುವೆ, ಅವರ ಮೇಲೆ ಹಲ್ಲೆ ಮಾಡಿವ ವಿಡಿಯೋ ವೈರಲ್ ಆಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾಷಣ ಮಾಡುತ್ತಿರುವ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿ, ಟ್ರಂಪ್ ಅವರು ಜನರನ್ನು ಉದ್ದೇಶಿಸಿ ಮಾತನಾಡುತ್ತಿರುವಾಗ, ವ್ಯಕ್ತಿಯೊಬ್ಬ ಹಿಂದಿನಿಂದ ಬಂದು ತಲೆಗೆ ಹೊಡೆದು ಹಲ್ಲೆ ಮಾಡಿ ಹೋಗುವುದನ್ನು ಕಾಣಬಹುದು.
PAl ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದು. “ಟ್ರಂಪ್ ಮೇಲೆ ಹಲ್ಲೆ” ಎಂದು ಬರೆದು ವಿಡಿಯೋ ಹಂಚಿಕೊಂಡಿದ್ದಾರೆ. FREEDOM BD ಎಂಬ ಯೂಟ್ಯೂಬ್ ಚಾನೆಲ್ ಕೂಡ ಇದೇ ವಿಡಿಯೋವನ್ನು ಹಂಚಿಕೊಂಡಿದೆ. ಈ ಯೂಟ್ಯೂಬರ್‌ಗಳಲ್ಲದೆ, ಅನೇಕ ಜನರು ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಟ್ರಂಪ್ ಮೇಲೆ ಹಲ್ಲೆ ಆಗಿದೆ ಎಂದು ಹೇಳಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ವಿಡಿಯೋದ ಕೀ ಫ್ರೇಮ್‌ಗಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, VidAddis ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ 6 ವರ್ಷಗಳ ಹಿಂದಿನ ವಿಡಿಯೋ ಲಭ್ಯವಾಗಿದೆ.
ಆ ವಿಡಿಯೋದಲ್ಲಿ ಟ್ರಂಪ್ ಹೆದರುತ್ತಿರುವಂತೆ ಕಾಣುತ್ತಾರೆ. ಆದರೆ, ಅವರ ಹಿಂದೆ ಯಾರೂ ಇರುವುದಿಲ್ಲ. ನಂತರ, CBS News ನಲ್ಲಿ 9 ವರ್ಷಗಳ ಹಿಂದಿನ ವಿಡಿಯೋ ಲಭ್ಯವಾಗಿದೆ. ಪ್ರತಿಭಟನಾಕಾರರು ವೇದಿಕೆಯ ಕಡೆಗೆ ಬಂದಾಗ, ಭದ್ರತಾ ಸಿಬ್ಬಂದಿ ಟ್ರಂಪ್ ಅವರನ್ನು ಸುತ್ತುವರೆದು ರಕ್ಷಿಸಿದರು ಎಂದು ಆ ವರದಿಯಲ್ಲಿ ಹೇಳಲಾಗಿದೆ. ಇದರಿಂದ ಟ್ರಂಪ್‌ಗೆ ಹಿಂದಿನಿಂದ ಹೊಡೆದಿದ್ದಾರೆ ಎನ್ನುವ ವಿಡಿಯೋ ಎಡಿಟ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ.
ಮೂಲ ವಿಡಿಯೋ 9 ವರ್ಷಗಳಷ್ಟು ಹಳೆಯದು ಮತ್ತು ಟ್ರಂಪ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ನಡೆದ ಘಟನೆ ಅದು. ಆದರೆ, ಈಗ ಈ ವಿಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ವ್ಯಕ್ತಿಯೊಬ್ಬ ಹಿಂದಿನಿಂದ ತಲೆಗೆ ಹೊಡೆದಿದ್ದಾನೆ ಎಂಬುದು ಸುಳ್ಳು. ಡೊನಾಲ್ಡ್ ಟ್ರಂಪ್ ಅವರ ಹಳೆಯ ವಿಡಿಯೋವನ್ನು ಎಡಿಟ್ ಮಾಡಿ, ಅವರಿಗೆ ಯಾರೋ ಹೊಡೆದಿದ್ದಾರೆ ಎನ್ನುವಂತೆ ಎಡಿಟ್ ಮಾಡಿ ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | IPLನಲ್ಲಿ ಪಂಜಾಪ್ ಕಿಂಗ್ಸ್ ಗೆಲುವನ್ನು ನಾಯಕ ಶ್ರೇಯಸ್ ಅಯ್ಯರ್ ಮತ್ತು ಪ್ರೀತಿ ಜಿಂಟಾ ಸಂಭ್ರಮಿಸಿದ್ದು ಹೀಗೆ ಎಂದು AI ಫೋಟೊ ಹಂಚಿಕೆ

