FACT CHECK | 14 ಸಾವಿರಕ್ಕೆ ಬರುತ್ತಾ ಪತಂಜಲಿ EV ಸ್ಕೂಟರ್?
ಪತಂಜಲಿ ಬ್ರ್ಯಾಂಡ್ ಸದಾ ಸುದ್ದಿಯಲ್ಲಿರುತ್ತದೆ. ವಿವಾದ ಎಂಬುದು ಪತಂಜಲಿ ಮತ್ತು ಯೋಗ ಗುರು ಬಾಬ ರಾಮ್ದೇವ್ಗೆ ಹೊಸದೇನು ಅಲ್ಲ. ಈಗ ಪತಂಜಲಿಯು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡುತ್ತದೆ ಎಂದು ಹೇಳಲಾಗುತ್ತಿದೆ.
ಯೋಗ ಗುರು ಬಾಬಾ ರಾಮದೇವ್ ಅವರ ಕಂಪನಿ ಪತಂಜಲಿ ಶೀಘ್ರದಲ್ಲೇ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂಬ ಚರ್ಚೆ ಹಲವು ದಿನಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ನಡೆಯುತ್ತಿದೆ. ಈ ಸ್ಕೂಟರ್ ಒಮ್ಮೆ ಚಾರ್ಜ್ ಮಾಡಿದರೆ 440 ಕಿ. ಮೀ ದೂರ ಚಲಿಸುತ್ತದೆ ಎಂದು ಹೇಳಲಾಗುತ್ತಿದೆ. ಇಷ್ಟೇ ಅಲ್ಲ, ಸ್ಕೂಟರ್ನ ಬೆಲೆ ಕೇವಲ 14,000 ರೂ. ಗಳಿಂದ ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ. ಈ ಹೇಳಿಕೆಗಳ ಜೊತೆಗೆ, ಎಲೆಕ್ಟ್ರಿಕ್ ಸ್ಕೂಟರ್ನ ಫೋಟೋ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

Electric Scooter just for ₹14000/- (Fourteen thousand only) launched by Patanjali. pic.twitter.com/2M4nC55bCq
— E த ಕ മ తె (@YogadhayaInfota) May 4, 2025

ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು, ಇದೇ ಪೋಸ್ಟ್ಅನ್ನು ಹಂಚಿಕೊಂಡಿದ್ದು, ನಿಜವಾಗಿಯೂ ಪತಂಜಲಿ 14 ಸಾವಿರ ಬೆಲೆಯ ಎಲೆಕ್ಟ್ರಿಕಲ್ ಸ್ಕೂಟರ್ಅನ್ನು ಬಿಡುಗಡೆ ಮಾಡಿದೆಯೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಲಾಗುತ್ತಿರುವ ಪ್ರತಿಪಾದನೆಯನ್ನು ಪರಿಶೀಲಿಸಲು ಪತಂಜಲಿ ವೆಬ್ಸೈಟ್ಅನ್ನು ಪರಿಶೀಲಿಸಿದಾಗ, ಅಂತಹ ಯಾವುದೇ ಅಪ್ಡೇಟ್ಗಳು ಕಂಡುಬಂದಿಲ್ಲ. ಅಲ್ಲದೆ ಪತಂಜಲಿ ಸ್ವತಃ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡುವ ಬಗ್ಗೆ ಎಲ್ಲೂ ಹೇಳಿಲ್ಲ. ಇದಲ್ಲದೆ, ಪತಂಜಲಿ ಎಲೆಕ್ಟ್ರಿಕ್ ಸ್ಕೂಟರ್ಗೆ ನೀಡಲಾಗಿರುವ ಫೀಚರ್ಸ್ ತುಂಬಾ ತಮಾಷೆಯಂತೆ ಕಾಣುತ್ತದೆ. ಆಟೋಮೊಬೈಲ್ಗಳ ಬಗ್ಗೆ ಸ್ವಲ್ಪ ಜ್ಞಾನವಿರುವ ಯಾರಿಗಾದರೂ ಈ ಹೇಳಿಕೆ ಆಧಾರರಹಿತವಾಗಿರಬಹುದು ಎಂದು ತಿಳಿದಿರುತ್ತದೆ.
ಇದು ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್ ಎಂದು ಹೇಳಲಾಗುತ್ತದೆ. ಇದರ ಮೈಲೇಜ್ 440 ಕಿ.ಮೀ ಎಂದು ಹೇಳಲಾಗುತ್ತಿದೆ, ಆದರೆ ಇಲ್ಲಿಯವರೆಗೆ ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ಅನ್ನು ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಸಿಂಪಲ್ ಒನ್ ಆಗಿದ್ದು, ಅದರ ವ್ಯಾಪ್ತಿಯು 248 ಕಿ.ಮೀ. ಆಗಿದೆ. ಇದು 5.0 kWh ಬ್ಯಾಟರಿಯೊಂದಿಗೆ ಬರುತ್ತದೆ. ಅದೇ ಸಮಯದಲ್ಲಿ, ಅಲ್ಟ್ರಾವೈಲೆಟ್ ಟೆಸ್ಸೆರಾಕ್ಟ್ ಹೆಸರಿನ ಮೋಟಾರ್ಸೈಕಲ್ 261 ಕಿಲೋಮೀಟರ್ ವ್ಯಾಪ್ತಿಯೊಂದಿಗೆ ಬರುತ್ತದೆ, ಇದು 6kWh ಬ್ಯಾಟರಿಯನ್ನು ಹೊಂದಿದೆ. 440 ಕಿ.ಮೀ ವ್ಯಾಪ್ತಿಯನ್ನು ಸಾಧಿಸಲು, ಸ್ಕೂಟರ್ಗೆ ತುಂಬಾ ದೊಡ್ಡ ಬ್ಯಾಟರಿ ಬೇಕಾಗುತ್ತದೆ. ಇದನ್ನು ಸ್ಕೂಟರ್ಗಾಗಿ ವಿನ್ಯಾಸಗೊಳಿಸುವುದು ಅಸಾಧ್ಯ.

ಇಷ್ಟೇ ಅಲ್ಲ, ಈ ಸ್ಕೂಟರ್ನ ಆರಂಭಿಕ ಬೆಲೆ ಕೇವಲ 14,000 ರೂ. ಎಂದು ಹೇಳಲಾಗುತ್ತದೆ. ಅಂದರೆ ಇದರ ಬೆಲೆ ಮಧ್ಯಮ ಶ್ರೇಣಿಯ ಸ್ಮಾರ್ಟ್ಫೋನ್ಗಿಂತ ಕಡಿಮೆಯಾಗಿದ್ದು, ಇದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ನಮ್ಮ ತನಿಖೆಯ ಪ್ರಕಾರ, ಪತಂಜಲಿ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಡಲಾಗುತ್ತಿರುವ ಹೇಳಿಕೆಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ. ಪತಂಜಲಿ ಎಲೆಕ್ಟ್ರಿಕ್ ಸ್ಕೂಟರ್ನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ಉಲ್ಲೇಖಿಸುವುದು ಸಂಪೂರ್ಣ ಸುಳ್ಳು.
ಒಟ್ಟಾರೆಯಾಗಿ ಹೇಳುವುದಾದರೆ, ಪತಂಜಲಿ ಕಂಪನಿಯು 14 ಸಾವಿರಕ್ಕೆ 440 ಕಿ.ಮೀ ಮೈಲೇಜ್ ನೀಡುವ EV ಸ್ಕೂಟರ್ಅನ್ನು ಬಿಡುಗಡೆ ಮಾಡಲಿದೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಪೋಸ್ಟ್ಅನ್ನು ಹಂಚಿಕೊಳ್ಳಲಾಗುತ್ತಿದೆ. 14 ಸಾವಿರಕ್ಕೆ ಸೈಕಲ್ಲೆ ಬರಲ್ಲ ಅಂತಾದ್ರಲ್ಲಿ ಇವಿ ಸ್ಕೂಟರ್ ಬರುತ್ತಾ ಎಂದು ಪ್ರಶ್ನಿಸುತ್ತಿದ್ದಾರೆ ಕೆಲವು ನೆಟ್ಟಿಗರು.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಕರಾಚಿಯ ಮೇಲೆ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ದಾಳಿ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ

