FACT CHECK | ಪ್ರಧಾನಿ ಮೋದಿ ಹೆಸರು ಟೋಕಿಯೋದಲ್ಲಿಯೂ ಮಿಂಚುತ್ತಿದಿಯೇ?
ಜಪಾನಿನ ಟೋಕಿಯೋ ನಗರದ ಅತ್ಯಂತ ಜನನಿಬಿಡ ರಸ್ತೆಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ವಿಡಿಯೋದಲ್ಲಿ ಮೋದಿ ಎಂದು ಬರೆದಿರುವ ದೊಡ್ಡ ಕಟ್ಟಡವೊಂದನ್ನು ಕಾಣಬಹುದು. ಅನೇಕ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡು ‘‘ನಮ್ಮ ಮೋದಿಜಿಯವರ ಹೆಸರು ಈಗ ಟೋಕಿಯೋದಲ್ಲಿಯೂ ಮಿಂಚುತ್ತಿದೆ’’ ಎಂಬ ಟೈಟಲ್ ನೀಡಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಶ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಈ ಸಂದರ್ಭದಲ್ಲಿ ಪ್ರಸಿದ್ಧ ಇಮೇಜ್ ಮತ್ತು ವೀಡಿಯೊ ಹೋಸ್ಟಿಂಗ್ ವೆಬ್‌ಸೈಟ್ ‘ಫ್ಲಿಕರ್’ ಲಿಂಕ್ ಲಭ್ಯವಾಗಿದೆ. ಇದರಲ್ಲಿ ‘ಶಂಕರ್ ಎಸ್’ ಎಂಬ ಬಳಕೆದಾರರು ಆಗಸ್ಟ್ 26, 2019 ರಂದು ಈ ಕಟ್ಟಡದ ಹೈ-ಕ್ವಾಲಿಟಿ ಫೋಟೋವನ್ನು ಹಂಚಿಕೊಂಡಿದ್ದಾರೆ ಮತ್ತು “ಈ ಕಟ್ಟಡದ ಹೆಸರು ಶಿಬುಯಾ ಮೋದಿ. ಇದು ಟೋಕಿಯೊದ ಶಿಬುಯಾ ಪ್ರದೇಶದಲ್ಲಿ ಇರುವ ಒಂದು ಐಷಾರಾಮಿ ಶಾಪಿಂಗ್ ಮಾಲ್” ಎಂದು ಬರೆದುಕೊಂಡಿದ್ದಾರೆ.

ಇದೇ ವೇಳೆ ಟೋಕಿಯೊದ ಶಿಬುಯಾ ಪ್ರದೇಶದಲ್ಲಿ ಶಿಬುಯಾ ಮೋದಿ ಎಂಬ ಐಷಾರಾಮಿ ಶಾಪಿಂಗ್ ಮಾಲ್ ಇದೆ ಎಂದು ವೈರಲ್ ವೀಡಿಯೊದ ಕ್ಲಿಪ್ಗೆ ಹೊಂದಿಕೆ ಆಗುವ ಅನೇಕ ಪೋಸ್ಟ್ ಅನ್ನು ನಾವು ಕಂಡುಕೊಂಡಿದ್ದು, ಅದನ್ನು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
ಇನ್ನು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಟೈಮ್ ಔಟ್ ಎಂಬ ವೆಬ್‌ಸೈಟ್‌ಗೆ ಲಿಂಕ್ ಲಭ್ಯವಾಗಿದ್ದು ಇದನ್ನು ಪರಿಶೀಲಿಸಿದಾಗ ನವೆಂಬರ್ 30, 2015 ರಂದು ಪ್ರಕಟವಾದ ಲೇಖನವು “ಮೋರಿ ಸಿಟಿ ಶಾಪಿಂಗ್ ಮಾಲ್ ಅನ್ನು ಶಿಬುಯಾ ಮೋದಿ ಎಂದು ಮರುನಾಮಕರಣ ಮಾಡಲಾಗಿದೆ” ಎಂದು ಹೇಳಿದೆ.

ಈ ಮಾಹಿತಿಯೊಂದಿಗೆ, ನಾವು ಗೂಗಲ್ನಲ್ಲಿ ಹುಡುಕಿದೆವು ಮತ್ತು ದಿ ಬೆಸ್ಟ್ಜಪಾನ್ ಎಂಬ ವೆಬ್‌ಸೈಟ್‌ನಲ್ಲಿ ಈ ಶಾಪಿಂಗ್ ಮಾಲ್ ಬಗ್ಗೆ ಮಾಹಿತಿಯನ್ನು ಕಂಡುಕೊಂಡೆವು. 10 ರಿಂದ 20 ವರ್ಷ ವಯಸ್ಸಿನ ಯುವಕರಿಗೆ ಫ್ಯಾಷನ್ ವಸ್ತುಗಳು ಮತ್ತು ಬಟ್ಟೆಗಳನ್ನು ಖರೀದಿಸಲು ಶಿಬುಯಾ ಅವರ “ಮೋದಿ” ಡಿಪಾರ್ಟ್‌ಮೆಂಟ್ ಸ್ಟೋರ್ ಅತ್ಯುತ್ತಮ ಸ್ಥಳವಾಗಿದೆ ಎಂದು ಅದು ಹೇಳಿದೆ.
ಹಾಗೆಯೆ ದಿ ನೇಷನ್ ಥೈಲ್ಯಾಂಡ್ ಎಂಬ ವೆಬ್‌ಸೈಟ್, ‘‘ಮರುಯಿ ಸಿಟಿ ಶಿಬುಯಾ, ಮುಖ್ಯ ರಸ್ತೆಯ ಮುಂದೆ ಇರುವ ಫ್ಯಾಷನ್ ಕಟ್ಟಡವನ್ನು ನವೆಂಬರ್ 19 ರಂದು ಶಿಬುಯಾ ಮೋದಿ ಹೆಸರಿನಲ್ಲಿ ಮತ್ತೆ ತೆರೆಯಲಾಯಿತು’’ ಎಂದು ಬರೆದಿರುವುದನ್ನು ನಾವು ಕಂಡಿದ್ದೇವೆ.
ಈ ಶಾಪಿಂಗ್ ಮಾಲ್‌ನ ಹೊರಭಾಗ ಮತ್ತು ರಸ್ತೆಯ 360 ಡಿಗ್ರಿ ನೋಟವನ್ನು ನೀವು Google Maps ನಲ್ಲಿ ಇಲ್ಲಿ ನೋಡಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ವೀಡಿಯೊದಲ್ಲಿ ಕಾಣುವ ಮೋದಿ ಹೆಸರು ಮರುಯಿ ಗ್ರೂಪ್ ಒಡೆತನದ ಬ್ರ್ಯಾಂಡ್‌ನ ಹೆಸರಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ನ್ಯೂಸ್ ಮೀಟರ್ ತನ್ನ ವರದಿಯಲ್ಲಿ ಸ್ಪಷ್ಟಪಡಿಸಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಸೌದಿ ಅರೇಬಿಯಾದಲ್ಲಿ ಮದ್ಯ ಮಾರಾಟಕ್ಕಿರುವ ನಿಷೇಧವನ್ನು ರದ್ದುಮಾಡಲಾಗಿದೆಯೇ?

