FACT CHECK | ಗುಜರಿ ವಸ್ತುಗಳನ್ನು ಬಳಸಿ ವಿಮಾನ ನಿರ್ಮಾಣ ಮಾಡಿದ್ದಾನೆ ಎಂದು ಬಾಂಗ್ಲಾದೇಶದ ವಿಡಿಯೋ ಹಂಚಿಕೆ
ಬಿಹಾರದ ಮುಜಫರ್ಪುರದ ಅವನೀಶ್ ಕುಮಾರ್ ಎಂಬ ಹುಡುಗ ಸ್ಕ್ರ್ಯಾಪ್ ವಸ್ತುಗಳನ್ನು ಮತ್ತು ಕೇವಲ 7,000 ರೂ. ಖರ್ಚು ಮಾಡಿ ವಿಮಾನವನ್ನು ನಿರ್ಮಿಸಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ.

ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಬಿಹಾರದ ಮುಜಾಫರ್ ನಗರ ನಿವಾಸಿ ಅವನೀಶ್ ಕುಮಾರ್ ಎಂಬ ಹುಡುಗನೊಬ್ಬ, ಗುಜರಿ ವಸ್ತುಗಳನ್ನು ಬಳಸಿ ಕೇವಲ 7000/ ರೂ. ಖರ್ಚಿನಲ್ಲಿ ವಿಮಾನವೊಂದನ್ನು ತಯಾರಿಸಿದ್ದಾನೆ. ಮತ್ತು 300 ಅಡಿಗಳವರೆಗೆ ಪರೀಕ್ಷಾರ್ಥ ಹಾರಾಟ ನಡೆಸಿ ಯಶಸ್ವಿಯಾಗಿ ಲ್ಯಾಂಡ್ ಮಾಡಿದ್ದಾನೆ. ತಾಂತ್ರಿಕ ಅನುಭವ ಇಲ್ಲದ ಬಾಲಕನೊಬ್ಬ ವಿಮಾನ ತಯಾರಿಸಿರುವುದು ಈಗ ವಿಜ್ಞಾನಿಗಳ ಗಮನ ಸೆಳೆದಿದೆ’’ ಎಂದು ಬರೆದುಕೊಂಡಿದ್ದಾರೆ. ಈ ಕ್ಲಿಪ್ನಲ್ಲಿ ಸಣ್ಣ ವಿಮಾನವೊಂದು ನೆಲದಿಂದ ಮೇಲಕ್ಕೆ ಹಾರುವುದನ್ನು ಕಾಣಬಹುದು.
ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ವಿಡಿಯೋದ ಪ್ರಮುಖ ಕೀ ಫ್ರೇಮ್ಗಳನ್ನು ತೆಗೆದು ಗೂಗಲ್ ಲೆನ್ಸ್ ಸಹಾಯದಿಂದ ಸರ್ಚ್ ಮಾಡಿದಾಗ, ಮಾರ್ಚ್ 9, 2025 ರಂದು @krisantv2020 ಎಂಬ ಫೇಸ್ಬುಕ್ ಪೋಸ್ಟ್ ಲಭ್ಯವಾಗಿದೆ. ಉತ್ತಮ ಕ್ವಾಲಿಟಿಯ ಅದೇ ವೈರಲ್ ವಿಡಿಯೋವನ್ನು ಹೊಂದಿರುವ ಈ ಪೋಸ್ಟ್, “ರೈತನ ಮಗ ಜುಲ್ಹಾಸ್ನ ವಿಮಾನವು ಸಾವಿರಾರು ಜನರ ಮುಂದೆ ಆಕಾಶಕ್ಕೆ ಹಾರಿತು (Google ಮೂಲಕ ಬಂಗಾಳಿ ಭಾಷೆಯಿಂದ ಅನುವಾದಿಸಲಾಗಿದೆ)” ಎಂದು ಬರೆಯಲಾಗಿದೆ.
ಇದರಿಂದ ಸುಳಿವು ಪಡೆದು, ಗೂಗಲ್ನಲ್ಲಿ ಸಂಬಂಧಿತ ಕೀವರ್ಡ್ಗಳ ಮೂಲಕ ಸರ್ಚ್ ಮಾಡಿದಾಗ, ಮಾರ್ಚ್ನಲ್ಲಿ ಬಾಂಗ್ಲಾದೇಶದ ಮಾಧ್ಯಮಗಳು ಪ್ರಕಟಿಸಿದ ಹಲವು ವರದಿಗಳು ಲಭ್ಯವಾಗಿದೆ. ಮಾರ್ಚ್ 6, 2025 ರಂದು ದಿ ಡೈಲಿ ಸ್ಟಾರ್ ವರದಿಯ ಪ್ರಕಾರ, ‘‘ಈ ವಿಮಾನವನ್ನು ಮಾರ್ಚ್ 4, 2025 ರಂದು ಮಾಣಿಕ್ಗಂಜ್ನ ಶಿಬಲಾಯ ಉಪಜಿಲ್ಲೆಯ ಜಾಫರ್ಗಂಜ್ ಗ್ರಾಮದಲ್ಲಿ ನಿರ್ಮಿಸಲಾಯಿತು ಮತ್ತು ಹಾರಿಸಲಾಯಿತು. ಇದರ ಸೃಷ್ಟಿಕರ್ತ ಜುಲ್ಹಾಸ್ ಮೊಲ್ಲಾ, 28 ವರ್ಷದ ಮೆಕ್ಯಾನಿಕ್ ಕಾಲೇಜು ಬಿಟ್ಟವರಾಗಿದ್ದು, ಅವರು ನಾಲ್ಕು ವರ್ಷಗಳಲ್ಲಿ ಸುಮಾರು 8 ಲಕ್ಷ ಟಾಕಾಗಳನ್ನು ಖರ್ಚು ಮಾಡಿ ವಿಮಾನವನ್ನು ನಿರ್ಮಿಸಿದರು. ಇದು 100 ಕೆಜಿಗಿಂತ ಹೆಚ್ಚು ತೂಕವಿದೆ, ಅಲ್ಯೂಮಿನಿಯಂ, ಸ್ಟೇನ್ಲೆಸ್ ಸ್ಟೀಲ್ ಮತ್ತು ಕಬ್ಬಿಣವನ್ನು ಬಳಸಿ ತಯಾರಿಸಲ್ಪಟ್ಟಿದ್ದು ಸುರಕ್ಷಿತವಾಗಿ ಇಳಿಯುವ ಮೊದಲು ಸುಮಾರು 50 ಅಡಿ ಎತ್ತರಕ್ಕೆ ಯಶಸ್ವಿಯಾಗಿ ಏರಿತು. ಇದು ಡಿಜಿಟಲ್ ಸ್ಪೀಡೋಮೀಟರ್ನೊಂದಿಗೆ ಅಳವಡಿಸಲ್ಪಟ್ಟಿದ್ದು, 7-ಅಶ್ವಶಕ್ತಿಯ ವಾಟರ್ ಪಂಪ್ ಎಂಜಿನ್ನಿಂದ ಚಾಲಿತವಾಗಿದೆ’’ ಎಂಬ ಮಾಹಿತಿ ಇದರಲ್ಲಿದೆ.
Prothom Alo ಮಾರ್ಚ್ 5 ರಂದು ವಿಡಿಯೋ ವರದಿಯನ್ನು ಬಿತ್ತರಿಸಿದ್ದು, ಯೂಟ್ಯೂಬ್ ಟ್ಯುಟೋರಿಯಲ್ಗಳಿಂದ ಪ್ರೇರಿತರಾಗಿ ಜುಲ್ಹಾಸ್ ವಾಯುಯಾನ ಯೋಜನೆಗಳೊಂದಿಗೆ ಪ್ರಯೋಗ ಮಾಡಲು ಪ್ರಾರಂಭಿಸಿದರು. 2024 ರಲ್ಲಿ ಮಾನವಸಹಿತ ಹಾರಾಟದ ಅವರ ಮೊದಲ ಪ್ರಯತ್ನ ಕೇವಲ 10-12 ಅಡಿಗಳನ್ನು ತಲುಪಿತು. ಅವರ ವಿನ್ಯಾಸವನ್ನು ಪರಿಷ್ಕರಿಸಿದ ನಂತರ, ಅವರು 2025 ರಲ್ಲಿ ಯಶಸ್ವಿ ಹಾರಾಟವನ್ನು ಸಾಧಿಸಿದರು ಎಂದು ಹೇಳಲಾಗಿದೆ.
ಜುಲ್ಹಾಸ್ ಮೂರು ವರ್ಷಗಳ ಸಂಶೋಧನೆಯಲ್ಲಿ ಮತ್ತು ಇನ್ನೊಂದು ವರ್ಷ ವಿಮಾನವನ್ನು ನಿರ್ಮಿಸಲು ಕಳೆದರು ಮತ್ತು ಅದಕ್ಕಾಗಿ ಸುಮಾರು 8 ಲಕ್ಷ ಟಾಂಕಾ ಖರ್ಚು ಮಾಡಿದರು. ಬಾಂಗ್ಲಾದೇಶ ರಾಷ್ಟ್ರೀಯ ಪಕ್ಷದ (ಬಿಎನ್ಪಿ) ಸ್ಥಳೀಯ ನಾಯಕರು ಅವರ ಯೋಜನೆಯನ್ನು ಶ್ಲಾಘಿಸಿದರು ಮತ್ತು ಆರ್ಥಿಕ ನೆರವು ನೀಡಿದರು ಎಂದು ದಿ ಫೈನಾನ್ಷಿಯಲ್ ಪೋಸ್ಟ್ ವರದಿ ಮಾಡಿದೆ.
ಢಾಕಾ ಟ್ರಿಬ್ಯೂನ್, ಚಾನೆಲ್ 24 ಮತ್ತು ಎಟಿಎನ್ ಬಾಂಗ್ಲಾ ನ್ಯೂಸ್ನಂತಹ ಹಲವಾರು ಇತರ ಮಾಧ್ಯಮಗಳು ಜುಲ್ಹಾಸ್ ವಿಮಾನವನ್ನು ಹಾರಿಸುವುದನ್ನು ತೋರಿಸುವ ವೀಡಿಯೊಗಳನ್ನು ಹಂಚಿಕೊಂಡಿವೆ. ಜುಲ್ಹಾಸ್ ಯೂಟ್ಯೂಬ್ ಚಾನೆಲ್ ಅನ್ನು ಸಹ ನಡೆಸುತ್ತಾರೆ, ಅಲ್ಲಿ ಅವರು ಅಲ್ಟ್ರಾ ಲೈಟ್ ವಿಮಾನಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಬಿಹಾರದ ಯುವಕನೊಬ್ಬ ಅನುಪಯುಕ್ತ ವಸ್ತುಗಳಿಂದ ವಿಮಾನವನ್ನು ಒಂದು ವಾರದಲ್ಲಿ ನಿರ್ಮಿಸಿದ್ದಾನೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಬಾಂಗ್ಲಾದೇಶದ ವಿಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | 2023ರಲ್ಲಿ ಘಟನೆಯನ್ನು ಇತ್ತೀಚೆಗೆ ರಷ್ಯಾದಲ್ಲಿ ಸಂಭವಿಸಿದ ಸುನಾಮಿಯ ದೃಶ್ಯ ಎಂದು ತಪ್ಪಾಗಿ ಹಂಚಿಕೆ

