FACT CHECK | ಕರ್ನಾಟಕದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಜೀವಂತ ಸಮಾಧಿ ಮಾಡಲು ಯತ್ನಿಸಿದ್ದಾನೆಯೇ?
ವೃದ್ಧನೊಬ್ಬ ಮಹಿಳೆಯೊಬ್ಬಳನ್ನು ಹೂಳಲು ಪ್ರಯತ್ನಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಈ ಘಟನೆ ಕರ್ನಾಟಕದಲ್ಲಿ ನಡೆದಿದೆ ಎಂದು ಹೇಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ದುರ್ಬಲ ವೃದ್ಧ ಮಹಿಳೆಯನ್ನು ಮನೆಯಿಂದ ಹೊರಗೆ ಎಳೆದುಕೊಂಡು ಹೋಗುವುದನ್ನು ತೋರಿಸಲಾಗಿದೆ. ನಂತರ ಅವನು ಗುದ್ದಲಿಯಿಂದ ಮಣ್ಣನ್ನು ಅಗೆದು ಅದರಿಂದ ಅವಳನ್ನು ಮುಚ್ಚಲು ಪ್ರಯತ್ನಿಸುತ್ತಾನೆ. ನೊಂದ ಮಹಿಳೆ ಕೂಗುತ್ತಿದ್ದಂತೆ, ಅವನು ಅವಳನ್ನು ಹೊಡೆಯುತ್ತಾನೆ.

ಈ ವೀಡಿಯೊವನ್ನು ಫೇಸ್ಬುಕ್ನಲ್ಲಿ “ಕಾಂಗ್ರೆಸ್ ಆಡಳಿತದ ಕರ್ನಾಟಕದಲ್ಲಿ ನಡೆದ ಘಟನೆ, 65 ವರ್ಷದ ಮುಲ್ಲಾ ತನ್ನ ಕಾಮತೃಷೆಯನ್ನು ಪೂರೈಸಿಕೊಳ್ಳಲು ತನ್ನ 42 ವರ್ಷದ ಮಧ್ಯವಯಸ್ಕ ಸಹೋದರಿಯನ್ನು ಮದುವೆಯಾದನು, ನಂತರ ತನ್ನ 62 ವರ್ಷದ ಮೊದಲ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆಯನ್ನು ಹೊಡೆದು ಜೀವಂತವಾಗಿ ಹೂಳಲು ಪ್ರಯತ್ನಿಸಿದನು, ಆ ಮಹಿಳೆ ಅಳುತ್ತಾ ಕಿರುಚುತ್ತಿದ್ದಳು, ಎಲ್ಲರೂ ವೀಡಿಯೊಗಳನ್ನು ಮಾಡುವಲ್ಲಿ ನಿರತರಾಗಿದ್ದರು, ಯಾರೂ ಅವಳನ್ನು ಉಳಿಸಲು ಹೋಗಲಿಲ್ಲ, ಘಟನೆಯ ಲೈವ್ ವೀಡಿಯೊವನ್ನು ವೀಕ್ಷಿಸಿ..” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. (ಹಿಂದಿಯಿಂದ ಅನುವಾದಿಸಲಾಗಿದೆ)
ಕರ್ನಾಟಕದಲ್ಲಿ ಪತ್ನಿಯನ್ನು ಜೀವಂತ ಸಮಾಧಿ ಮಾಡುತ್ತಿರುವ ಮುಸ್ಲಿಂ ವ್ಯಕ್ತಿ ಎಂಬ ಹೇಳಿಕೆಯೊಂದಿಗೆ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.
![]()
ಇನ್‌ಸ್ಟಾಗ್ರಾಂನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಈ ಘಟನೆ ಕರ್ನಾಟಕದ್ದು, ಅಲ್ಲಿ 62 ವರ್ಷದ ಮುಲ್ಲಾ ತನ್ನ 42 ವರ್ಷದ ಸಹೋದರಿಯನ್ನು ಮದುವೆಯಾಗಲು ತನ್ನ ಮೊದಲ ಹೆಂಡತಿಯನ್ನು ಜೀವಂತವಾಗಿ ಸಮಾಧಿ ಮಾಡುತ್ತಿದ್ದಾನೆ. ಜನರು ಅದರ ವೀಡಿಯೋ ಮಾಡುತ್ತಿದ್ದಾರೆ…” ಎಂದಿದೆ.
ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಫೋಸ್ಟ್‌ಅನ್ನು ಹಂಚಿಕೊಂಡಿದ್ದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಆಗಸ್ಟ್ 8 ರಂದು ಇನ್‌ಸ್ಟಾಗ್ರಾಮ್‌ನಲ್ಲಿ “ಶೇರ್‌ಪುರದಲ್ಲಿ ಪಾರ್ಶ್ವವಾಯು ಪೀಡಿತ ಪತ್ನಿಯನ್ನು ಜೀವಂತವಾಗಿ ಹೂಳಲು ಗಂಡ ಪ್ರಯತ್ನಿಸುತ್ತಿದ್ದಾನೆ, ಘಟನೆ ವೈರಲ್ ಆಗಿದೆ” ಎಂಬ ಶೀರ್ಷಿಕೆಯೊಂದಿಗೆ ಅದನ್ನು ಹಂಚಿಕೊಂಡಿರುವುದು ಲಭ್ಯವಾಗಿದೆ.
ಇದೇ ವಿಡಿಯೋವನ್ನು ಆಗಸ್ಟ್ 9 ರಂದು ಇಂಡಿಪೆಂಡೆಂಟ್ ಟೆಲಿವಿಷನ್ ಯೂಟ್ಯೂಬ್ ಚಾನೆಲ್ “ವೈರಲ್ ವೀಡಿಯೊ ಬಗ್ಗೆ ಟೀಕೆಯ ಬಿರುಗಾಳಿ, ಮೊಮ್ಮಗ ಖೋಕಾನ್ ಪಲಾಯನ | ಶೆರ್ಪುರ್ | ವೈರಲ್ ವೀಡಿಯೊ | ಇಂಡಿಪೆಂಡೆಂಟ್ ಟಿವಿ” ಎಂಬ ಶೀರ್ಷಿಕೆಯೊಂದಿಗೆ ಅಪ್‌ಲೋಡ್ ಮಾಡಿದೆ.
![]()
ಮತ್ತಷ್ಟು ಮಾಹಿತಿಗಾಗಿ ಸರ್ಚ್ ಮಾಡಿದಾಗ, ಆಗಸ್ಟ್ 10 ರಂದು ಯೂಟ್ಯೂಬ್ ಚಾನೆಲ್ ಡೈಲಿ ಜುಗಾಂಟರ್‌ಗೆ ಅಪ್‌ಲೋಡ್ ಮಾಡಲಾದ ವೈರಲ್ ವೀಡಿಯೊ ಕಂಡುಬಂದಿದೆ. ವೀಡಿಯೊಗೆ ‘ಅನಾರೋಗ್ಯ ಪೀಡಿತ ಹೆಂಡತಿಯನ್ನು ತುಳಿದು ಕೊಲ್ಲಲಾಗುತ್ತಿದೆ | ಶೆರ್ಪುರ್ ವೈರಲ್ ವಿಡಿಯೋ | ಡೈಲಿ ಜುಗಾಂಟರ್’ ಎಂಬ ಶೀರ್ಷಿಕೆ ಇತ್ತು.
ವೀಡಿಯೊದ ವಿವರಣೆಯ ಪ್ರಕಾರ, ಆ ವ್ಯಕ್ತಿಯನ್ನು ಖಲೀಲುರ್ ರೆಹಮಾನ್ ಎಂದು ಗುರುತಿಸಲಾಗಿದೆ ಮತ್ತು ಮಹಿಳೆಯನ್ನು ಅವನ ಪತ್ನಿ ಖೋಶೆದಾ ಬೇಗಂ ಎಂದು ಗುರುತಿಸಲಾಗಿದೆ. ಈ ಘಟನೆ ಬಾಂಗ್ಲಾದೇಶದ ಶೇರ್ಪುರ್ ಜಿಲ್ಲೆಯ ಖೋಸಲ್ಪುರ್ ಮಧ್ಯಪಾರ ಗ್ರಾಮದಲ್ಲಿ ನಡೆದಿದೆ. ಡೈಲಿ ಜಗ್ನೇಟರ್ ಮತ್ತು ಇಂಡಿಪೆಂಡೆಂಟ್ ಟೆಲಿವಿಷನ್ ಎರಡೂ ಬಾಂಗ್ಲಾದೇಶ ಮೂಲದ ಸುದ್ದಿ ಸಂಸ್ಥೆಗಳು ಎಂಬುದು ಗಮನಿಸಬೇಕಾದ ಸಂಗತಿ.
ಆಗಸ್ಟ್ 9 ರಂದು “ಶೇರ್ಪುರದ ವ್ಯಕ್ತಿ ‘ಪಾರ್ಶ್ವವಾಯು ಪೀಡಿತ ಹೆಂಡತಿಯನ್ನು ಜೀವಂತವಾಗಿ ಹೂಳಲು ಪ್ರಯತ್ನಿಸುತ್ತಿರುವ ವೀಡಿಯೊದಲ್ಲಿ ಸೆರೆಯಾಗಿದೆ'” ಎಂಬ ಶೀರ್ಷಿಕೆಯೊಂದಿಗೆ bdnews24 ಪ್ರಕಟಿಸಿದ ವರದಿಯನ್ನು ನಾವು ಕಂಡುಕೊಂಡೆವು. ಈ ಘಟನೆ ಆಗಸ್ಟ್ 8 ರಂದು ನಡೆದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 70 ವರ್ಷದ ಖೋಷೆದಾ ಬೇಗಂ ಪಾರ್ಶ್ವವಾಯುವಿಗೆ ತುತ್ತಾಗಿ ಆರು ವರ್ಷಗಳಿಂದ ಹಾಸಿಗೆ ಹಿಡಿದಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
bdnews24 ಪ್ರಕಾರ, ಖೋಶೆದಾ ವರ್ಷಗಳ ಕಾಲ ಚಿಕಿತ್ಸೆ ಪಡೆಯುತ್ತಿದ್ದರೂ ಯಾವುದೇ ಸುಧಾರಣೆ ಕಂಡುಬಂದಿಲ್ಲ ಎಂದು ನೆರೆಹೊರೆಯವರು ಹೇಳಿದ್ದಾರೆ. ಇತ್ತೀಚೆಗೆ, ಅವರಿಗೆ ಸರಿಯಾದ ಆರೈಕೆ ಸಿಗುತ್ತಿರಲಿಲ್ಲ ಮತ್ತು ಖಲೀಲ್ ಹೆಚ್ಚು ನಿರಾಶೆಗೊಂಡಿದ್ದ. ದೀರ್ಘಕಾಲದ ಒತ್ತಡ ಮತ್ತು ಕೋಪವು ಅವನ ಕೃತ್ಯಗಳಿಗೆ ಕಾರಣವಾಗಿರಬಹುದು ಎಂದು ಅವರು ನಂಬುತ್ತಾರೆ.
![]()
ಜಗನ್ಯೂಸ್24, ಇತ್ತೆಫಾಕ್ ಮತ್ತು ಜುಗಾಂಟರ್ ಸೇರಿದಂತೆ ಹಲವಾರು ಬಾಂಗ್ಲಾದೇಶಿ ಮಾಧ್ಯಮಗಳು ಈ ಘಟನೆಯನ್ನು ವರದಿ ಮಾಡಿವೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ಬರುವ ಹೊತ್ತಿಗೆ ಪ್ರದೇಶದ ನಿವಾಸಿಗಳ ಸಹಾಯದಿಂದ ಘಟನೆಯನ್ನು ಬಗೆಹರಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ.

ಒಟ್ಟಾರೆಯಾಗಿ ಹೇಳುವುದಾದರೆ, ಕಾಂಗ್ರೆಸ್ ಆಡಳಿತದ ಕರ್ನಾಟಕದಲ್ಲಿ 65 ವರ್ಷದ ಮುಲ್ಲಾ ತನ್ನ ಕಾಮತೃಷೆಯನ್ನು ಪೂರೈಸಿಕೊಳ್ಳಲು ತನ್ನ 42 ವರ್ಷದ ಮಧ್ಯವಯಸ್ಕ ಸಹೋದರಿಯನ್ನು ಮದುವೆಯಾಗಲು ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಜೀವಂತ ಸಮಾಧಿ ಮಾಡಲು ಯತ್ನಿಸಿದ್ದಾನೆ ಎಂದು ಬಾಂಗ್ಲಾದೇಶದ ಸಂಬಂಧವಿಲ್ಲದ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಉತ್ತರಕಾಶಿಯಲ್ಲಿ ಮೇಘಸ್ಫೋಟದ ದೃಶ್ಯ ಎಂದು AI ವಿಡಿಯೋ ಹಂಚಿಕೆ

