ಬಿಹಾರ ಚುಣಾವಣೆ: ಬಿಜೆಪಿ ವಿರುದ್ಧ #BiharRejectsModi ಹ್ಯಾಶ್‌ಟ್ಯಾಗ್‌ ಟ್ರೆಂಡಿಂಗ್‌!

ಅಕ್ಟೋಬರ್‌ 28ರಿಂದ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಆರಂಭವಾಗಿದ್ದು, ಮೊದಲ ಹಂತದ ಚುನಾವಣೆ ಮುಗಿದಿದೆ. ನಾಳೆ (ನ.03) ಎರಡನೇ ಹಂತದ ಚುನಾವಣೆ ನಡೆಯಲಿದೆ. ಈ ಮಧ್ಯೆ ಬಿಜೆಪಿ ವಿರುದ್ಧ ಇಂದು ಟ್ವಿಟರ್‌ನಲ್ಲಿ ಬಿಹಾರ ರಿಜೆಕ್ಟ್‌ ಮೋದಿ ಹ್ಯಾಶ್‌ಟ್ಯಾಗ್‌ ಟ್ರೆಂಡ್‌ ಆಗುತ್ತಿದೆ.

#BiharRejectsModi  ಹ್ಯಾಶ್‌ಟ್ಯಾಗ್‌ ಬಳಸಿ ಸಾವಿರಾರು ಜನ ಟ್ವೀಟ್ ಮಾಡಿದ್ದು, ಬಿಜೆಪಿ ಸರ್ಕಾರ ಮತ್ತು ನರೇಂದ್ರ ಮೋದಿಯ ವಿರುದ್ಧದ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ಆಡಳಿತ ಮತ್ತು ಬಿಹಾರದ ನಿತಿಶ್‌ ಕುಮಾರ್ ಅವರ ಆಡಳಿತದ ವಿರುದ್ಧ ಅಲ್ಲಿನ ಜನ ತಿರುಗಿಬಿದ್ದಿದ್ದಾರೆ.

ಗೀತ್‌ ವಿ ಎಂಬುವವರು ಟ್ವೀಟ್ ಮಾಡಿ, “ಬಿಹಾರವು ಮೋದಿಯನ್ನು ತಿರಸ್ಕರಿಸುತ್ತದೆ. ಲಾಕ್‌ಡೌನ್‌ ಸಮಯದಲ್ಲಿ ಮೋದಿಯವರು ಬಿಹಾರಿಗಳನ್ನು ಅಮಾನವೀಯವಾಗಿ ನಡೆಸಿಕೊಂಡ ರೀತಿಯನ್ನು ಮರೆಯಲು ಸಾಧ್ಯವಿಲ್ಲ. #BiharRejectsModi” ಎಂದು ಬರೆದುಕೊಂಡು, ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರ ಸಂಕಷ್ಟಗಳನ್ನು ಪ್ರತಿನಿಧಿಸುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ವಸ್ಲಾಲಾ ಕುಮಾರಿ ಎಂಬುವವರು ಟ್ವೀಟ್ ಮಾಡಿ, “ರೈತರ ಆತ್ಮಹತ್ಯೆ, ನಿರುದ್ಯೋಗ, ಜಂಗಲ್ ರಾಜ್, ಸಾರ್ವಜನಿಕರ ಲೂಟಿ, ಕೋಮುದ್ವೇಷ, ಜುಮ್ಲಾ, ಭಾಷಾ ರಾಜಕೀಯ, ಹುಸಿ ರಾಷ್ಟ್ರೀಯತೆ, ಲಸಿಕೆ ರಾಜಕೀಯಗಳಿಗೆ ಸ್ಥಳವಿಲ್ಲ. ಬಿಹಾರ ಸಮೃದ್ಧಿಯಾಗಲಿದೆ. ಕಾಂಗ್ರೆಸ್ ಮತ್ತು ಆರ್‌ಜೆಡಿ ಮೈತ್ರಿಗೆ ಮತದಾನ ನೀಡಿ” ಎಂದು ಬರೆದಿದ್ದು, ವ್ಯಂಗ್ಯಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ನರೇಂದ್ರ ಮೋದಿ ಮತ್ತು ಬಿಜೆಪಿಯ ರಾಜಕೀಯ ತಂತ್ರಗಳನ್ನು ಚಿತ್ರಿಸಲಾಗಿದೆ.

ಎಂ.ಡಿ.ಒಬೇದುಲ್ಲಾ ಎಂಬುವವರು ವೀಡಿಯೋವೊಂದನ್ನು ಟ್ವೀಟ್ ಮಾಡಿ, “ಕೊರೊನಾ ರೋಗಿಗಳ ನಿರ್ವಹಣೆಯಲ್ಲಿ ಸರ್ಕಾರ ವ್ಯವಹರಿಸುವಿಕೆಯ ರೀತಿ ಇದಾಗಿದೆ. ಕೇಂದ್ರ ಸರ್ಕಾರ ಮತ್ತು ಬಿಹಾರ ರಾಜ್ಯ ಸರ್ಕಾರದ ವಿಫಲತೆಯಿಂದ ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ. #BiharRejectsModi” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕೋಮುವಾದಿ ಬಿಜೆಪಿ ಜೊತೆಗೆ ಮೈತ್ರಿ ಮಾಡುವುದಕ್ಕಿಂತ ಸನ್ಯಾಸ ಸ್ವೇಕಾರವೇ ಮೇಲು: ಮಾಯಾವತಿ

 ಕಳೆದ 15 ವರ್ಷಗಳಿಂದಲೂ ಬಿಹಾರ ರಾಜ್ಯವು ನಿತೀಶ್ ಕುಮಾರ್ ಆಡಳಿತದಲ್ಲಿಯೇ ಇದೆ. ಆದರೂ ಯಾವುದೇ ಅಭಿವೃದ್ಧಿ ಕಂಡಿಲ್ಲ ಎಂಬುದಾಗಿ ವಿರೋಧ ಪಕ್ಷಗಳೂ ಸೇರಿದಂತೆ ಹಲವರು ಆರೋಪಿಸಿದ್ದಾರೆ. ಅದೂ ಅಲ್ಲದೇ ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ಇದರ ವಿರುದ್ಧವೂ ಈಗ ಜನ ತಿರುಗಿ ಬಿದ್ದಿದ್ದಾರೆ.

ಬಿಹಾರ ರಾಜಕೀಯ ವಲಯದಲ್ಲಿ ತೇಜಸ್ವಿ ಯಾದವ್, ಚಿರಾಗ್ ಪಾಸ್ವಾನ್ ಮತ್ತು ನಿತೀಶ್ ಕುಮಾರ್‌ ನಡುವೆ ಮಹಾ ಪೈಪೋಟಿ ನಡೆಯುತ್ತಿದೆ. ಎನ್‌ಡಿಎ ಮೈತ್ರಿಯಲ್ಲಿ ಬಿಜೆಪಿ, ‌ಜೆಡಿಯು ಮತ್ತು ಎಲ್‌ಜೆಪಿ ಪಕ್ಷಗಳಿದ್ದವು. ಆದರೆ ನಿತೀಶ್ ಕುಮಾರ್‌ ಅವರೊಂದಿಗಿನ ಭಿನ್ನಾಭಿಪ್ರಾಯದಿಂದ ಚಿರಾಗ್‌ ಪಾಸ್ವಾನ್ ಅವರ ಎಲ್‌ಜೆಪಿ ಪಕ್ಷವು ಎನ್‌ಡಿಎ ಮೈತ್ರಿಕೂಟದಿಂದ ಹೊರಗುಳಿದಿದೆ. ಇದು ಬಿಜೆಪಿ ಮತ್ತು ನಿತೀಶ್ ಕುಮಾರ್‌ಗೆ ಹಿನ್ನಡೆಯನ್ನುಂಟುಮಾಡಿದೆ. ಇನ್ನು ತೇಜಸ್ವಿಯವರ ಆರ್‌ಜೆಡಿ ಮತ್ತು ಎಲ್ಲಾ ಎಡ ಪಕ್ಷಗಳೂ ಸೇರಿ ಮಹಾಘಟಬಂಂಧನ್ ರಚಿಸಿಕೊಂಡಿವೆ. ರಾಜ್ಯದಲ್ಲಿ ಇದಕ್ಕೆ ಉತ್ತಮ ಬೆಂಬಲವಿದೆ ಎನ್ನಲಾಗಿದೆ.

ಇದರ ನಡುವೆ ಎನ್‌ಡಿಎ ಮೈತ್ರಿಕೂಟದ ಪ್ರನಾಳಿಕೆಯಲ್ಲಿ ಉಚಿತ ಕೊರೊನಾ ಲಸಿಕೆಯ ವಿಷಯವನ್ನು ಪ್ರಸ್ತಾಪಿಸಿ ನಗೆಪಾಟಲಿಗೀಡಾಗಿದ್ದರು. ಜೊತೆಗೆ ಕೇಂದ್ರದಲ್ಲಿ ಬಿಜೆಪಿಯ ವೈಫಲ್ಯತೆ, ಆರ್ಥಿಕ ಕುಸಿತ, ಕೊರೊನಾ ನಿರ್ವಹಣೆ, ಸಿಎಎ, ಎನ್‌ಆರ್‌ಸಿ ಮುಂತಾದ ಎಲ್ಲಾ ಅಂಶಗಳೂ ಬಿಜೆಪಿಯ ವಿರುದ್ಧವಾಗಿದೆ. ಜೊತೆಗೆ ತೇಜಸ್ವಿ ಯಾದವ್ ತಮ್ಮ ರ್ಯಾಲಿಗಳಲ್ಲಿ ನಿತೀಶ್ ಮತ್ತು ಮೋದಿಯ ವಿರುದ್ಧ ತೀವ್ರವಾದ ವಾಗ್ದಾಳಿ ನಡೆಸುತ್ತಿದ್ದು ಉತ್ತಮ ಬೆಂಬಲ ಪಡೆಯುತ್ತಿದ್ದಾರೆ.

ಒಟ್ಟಾರೆಯಾಗಿ ಬಿಹಾರದ ಜನತೆ ಯಾರ ಕೈ ಹಿಡಿಯಲಿದ್ದಾರೆ ಎಂಬುದನ್ನು ನವೆಂಬರ್ 10 ರವರೆಗೆ ಕಾದುನೋಡಬೇಕಿದೆ.


ಇದನ್ನೂ ಓದಿ: ಪ್ರವಾಹ ಪರಿಸ್ಥಿತಿ ನಿಭಾಯಿಸಲು ಸಲಹೆ ನೀಡಿ, ಮೊಬೈಲ್‌ ಗೆಲ್ಲಿ: ಯೂತ್‌ ಕಾಂಗ್ರೆಸ್‌ ಹೊಸ ಅಭಿಯಾನ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights