ಸಹಿಷ್ಣುತೆ-ಸಾಮರಸ್ಯ ನಾಶ: ಸರ್ಕಾರ ಮತ್ತು ಮಾಧ್ಯಮಕ್ಕೆ ಬಳಕೆಯಾದ ಕೊರೊನಾ
ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಮುಚ್ಚಿದ್ದ ಮಹಾರಾಷ್ಟ್ರ ರಾಜಭವನದಲ್ಲಿರುವ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಮಾಡಿಕೊಡುವಂತೆ ಮುಂಬೈ ಮೂಲದ ಸೂಫಿ ಮುಸ್ಲಿಂ ಸಂಘಟನೆಯು ನವೆಂಬರ್ 21 ರಂದು ಮಹಾರಾಷ್ಟ್ರದ ರಾಜ್ಯಪಾಲರಿಗೆ ಮನವಿ ಪತ್ರ ಬರೆದಿತ್ತು.
ಪತ್ರದಲ್ಲಿ, “ಇಡೀ ದೇಶವು ತನ್ನ ಧಾರ್ಮಿಕ ಸ್ಥಳಗಳನ್ನು ತೆರೆದಿದ್ದರೂ ಸಹ, ರಾಜ್ ಭವನ ನೌಕರರು ಮುಸ್ಲಿಮರಿಗೆ ಮಸೀದಿಯೊಳಗೆ ಜುಮುವಾ ನಮಾಜ್ ಮಾಡಲು ಅವಕಾಶ ನೀಡಲು ನಿರಾಕರಿಸಿದ್ದಾರೆ” ಎಂದು ರಾಝಾ ಅಕಾಡೆಮಿಯ ಅಧ್ಯಕ್ಷ ಮೌಲಾನಾ ಸಯೀದ್ ನೂರಿ ಅವರು ಬರೆದಿದ್ದಾರೆ.
ಬಹಳ ಹಿಂದೆಯೇ ನಡೆದ ದೆಹಲಿಯ ತಬ್ಲಿಘಿ ಜಮಾಅತ್ ಸಭೆಯು ಮುಸ್ಲಿಮರ ವಿರುದ್ಧದ ದಾಳಿಗೆ ಕಾರಣವಾಗಿತ್ತು. ಸಭೆಯಲ್ಲಿ ಭಾಗಿಯಾದ್ದವರು ಮತ್ತು ಇಡೀ ಮುಸ್ಲೀಂ ಸಮುದಾಯವೇ ವೈರಸ್ ಹರಡುವ “ವಾಹಕಗಳು” ಎಂದು ಹಣೆಪಟ್ಟಿ ಕಟ್ಟಿಲಾಗಿತ್ತು. ಬಿಜೆಪಿಯ ಬಕೆಟ್ ಮಾಧ್ಯಮಗಳು ಅದನ್ನು ಯಶಸ್ವಿಯಾಗಿ ಮಾಡಿದವು. ಕೇವಲ ಒಂದು ಸಭೆಯು ಇಡೀ ಸಮುದಾಯವನ್ನು ರಾಕ್ಷಸೀಕರಣಗೊಳಿಸಲು ಕಾರಣವಾಯಿತು. ಇದಾದ ನಂತರ ಮುಸ್ಲಿಮರನ್ನು ಥಳಿಸಲಾಯಿತು, ನಿಂದಿಸಲಾಯಿತು. ಅಷ್ಟೇ ಅಲ್ಲದೆ, ಅವರನ್ನು ನೆರೆಹೊರೆಯವರು ದೂರ ಇಡಲು ಆರಂಭಿಸಿದ್ದರು.
ಇದನ್ನೂ ಓದಿ: ಕಾಶ್ಮೀರ ಆಡಳಿತದಲ್ಲಿ ಮುಸ್ಲಿಮರನ್ನು ತೆಗೆದು, ಹಿಂದೂಗಳನ್ನು ನೇಮಿಸಲಾಗಿದೆ: ಫಾರೂಕ್ ಅಬ್ದುಲ್ಲಾ
ಮಾರ್ಚ್ ತಿಂಗಳಿನಲ್ಲಿ ಹೇರಲಾದ ಲಾಕ್ಡೌನ್ನಿಂದಾಗಿ ಪಾದ್ರಿಗಳು, ದಲಿತ ಪುರೋಹಿತರು ಮತ್ತು ಅಲ್ಪಸಂಖ್ಯಾತರ ವಿರುದ್ಧ ದಾಳಿ ಮಾಡಲು, ಹೆಚ್ಚಿನ ವಿರೋಧವಿಲ್ಲದೆ ಕೋಮುದ್ವೇಷ ಬಿತ್ತುವ ವರದಿಗಳನ್ನು ಪ್ರಕಟಿಸಲು ಮಾಧ್ಯಮಗಳಿಗೆ ಅನುಕೂಲವಾಯಿತು. ಅಲ್ಲದೆ, ಲಾಕ್ಡೌನ್ನಿಂದ ಜನರು ಮನೆಯಲ್ಲಿಯೇ ಇದ್ದರಿಂದಾಗಿ ದ್ವೇಷವನ್ನು ಜನರ ಮನಸ್ಸಿನಲ್ಲಿ ಇಳಿಸಲು ಮಾಧ್ಯಮಗಳು ಮತ್ತು ಬಿಜೆಪಿ ಯಶಸ್ವಿಯಾದವು.
ಆ ಸನ್ನಿವೇಶದಲ್ಲಿ, ಈದ್ ಸಮಯದಲ್ಲಿ ನಮಾಜ್ ಆಚರಣೆಗಳ ನಿಯಮಗಳನ್ನು ಸಡಿಲಿಸುವಂತೆ ಕೋರಿ ರಾಝಾ ಅಕಾಡೆಮಿಯ ನೂರಿ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಇದೇ ಸಂದರ್ಭದಲ್ಲಿ ಧರ್ಮ, ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯವನ್ನು “ಸರಿಯಾಗಿ ಸಮತೋಲನಗೊಳಿಸುವುದಾಗಿ” ಒಡಿಶಾ ಸರ್ಕಾರ ಹೇಳಿದ ನಂತರ ಸಾವಿರಾರು ಭಕ್ತರು ಪೂರಿ ರಥಯಾತ್ರೆಯಲ್ಲಿ ನೆರೆದಿದ್ದರು.
ಆದರೆ, ನಮಾಜ್ಗೆ ಅವಕಾಶ ಸಿಗಲಿಲ್ಲ. ಅಲ್ಪಸಂಖ್ಯಾತರು ಈ “ಸರಿಯಾದ ಸಮತೋಲನವನ್ನು” ಸಾಧಿಸಲು ಅಸಮರ್ಥರಾಗಿದ್ದಾರೆಯೇ?
ವೈಯಕ್ತಿಕವಾಗಿ ಅಥವಾ ಇತರರೊಂದಿಗೆ ಸಮುದಾಯದಲ್ಲಿ ಪಾಲ್ಗೊಳ್ಳುವ ಸ್ವಾತಂತ್ರ್ಯವನ್ನು ಸೀಮಿತಗೊಳಿಸುವ ಸಾಂಕ್ರಾಮಿಕ ರೋಗಕ್ಕೆ ಪ್ರತಿಕ್ರಿಯೆಯಾಗಿ ದೇಶವು ಹಲವು ಕ್ರಮಗಳನ್ನು ತೆಗೆದುಕೊಂಡಿದ್ದರೂ, ಅವರು ಈ ನಿರ್ಬಂಧಗಳನ್ನು ಸಾರ್ವಜನಿಕ ಆರೋಗ್ಯಕ್ಕೆ ಅಗತ್ಯವಾದ ಮಟ್ಟಿಗೆ ಮಾತ್ರ ಮಾಡಬೇಕು. ಆದರೆ, ಇದು ಅಗತ್ಯಕ್ಕಿಂತ ಮೀರಿ ಹೋಗಿತ್ತು. ಇದರಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ತಾರತಮ್ಯವೂ ನಡೆದಿತ್ತು.
ಇದನ್ನೂ ಓದಿ: ಮತ್ತೊಮ್ಮೆ ಮುಸ್ಲಿಂ ಸಮುದಾಯದ ಮೇಲೆ ಚೀನಾ ದೌರ್ಜನ್ಯ : 18,000 ಮಸೀದಿಗಳು ಧ್ವಂಸ!
ಅಲ್ಪಸಂಖ್ಯಾತ ಸಮುದಾಯಗಳ ನಾಯಕರು ಹಾಗೂ ನಂಬಿಕೆಗಳ ಮೇಲಿನ ದಬ್ಬಾಳಿಕೆ ಮತ್ತು ಪೂಜಾ ಸ್ಥಳಗಳನ್ನು ಪುನಃ ತೆರೆಯುವ ಬಗ್ಗೆ ಅಸಮಂಜಸವಾದ ನಿಯಮಗಳು ಜಾರಿಯಲ್ಲಿದ್ದವು. ಆದರೆ, ಈ ನಿರ್ಬಂಧಗಳು ಧಾರ್ಮಿಕವಾಗಿ ಇತರರನ್ನು ರಾಕ್ಷಸೀಕರಿಸುವ ವಾಗ್ದಾಳಿಗಳನ್ನು ನಿಯಂತ್ರಿಸದಿದ್ದದ್ದು ಯಾಕೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ಎಲ್ಲರನ್ನೂ ಮನೆಯಲ್ಲಿ ಕೂಡಿಟ್ಟಿದ್ದ ಸಂದರ್ಭಗಳಲ್ಲಿ ನಾವು ಏನನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬ ಅರಿವು ಅಗತ್ಯ.
ಸಾಂಕ್ರಾಮಿಕ ಸಂದರ್ಭವು, ನಂಬಿಕೆಯೊಂದಿಗೆ ಗುಂಪುಗಳಲ್ಲಿ ಕೆಲಸ ಮಾಡುವುದರಿಂದ ಸಹಿಷ್ಣುತೆ ಮತ್ತು ಅನುಭೂತಿಯನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟಿದೆ. ಸೇವೆ ಸಲ್ಲಿಸುತ್ತಿರುವ ಸಮುದಾಯಗಳು ನೇರ ಆರೋಗ್ಯ ಮತ್ತು ಸಾಮಾಜಿಕ ಸೇವೆಯನ್ನು ಒದಗಿಸುವುದರಿಂದ ಮತ್ತು ದುರ್ಬಲ ಗುಂಪುಗಳ ಅಗತ್ಯಗಳಿಗೆ ಸ್ಪಂದಿಸುವುದರಿಂದ ಅವು ನಂಬಿಕೆಯ ಪ್ರಾಥಮಿಕ ಮೂಲಗಳಾಗಿ ಹೊರಹೊಮ್ಮಿವೆ.
ಉದಾಹರಣೆಗೆ, ಮುಂಬೈನ ಧಾರವಿ ಕೊಳೆಗೇರಿಗಳಲ್ಲಿ, ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಅಲ್ಲಿಯ ಸಮುದಾಯದ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಧಾರವಿಯಲ್ಲಿ ಜನರು ಮಾಸ್ಕ್ ಧರಿಸುವ ಮತ್ತು ಸಾರ್ವಜನಿಕ ನೈರ್ಮಲ್ಯವನ್ನು ಕಾಪಾಡುವಂತೆ ಸಂದೇಶವನ್ನು ಪಸರಿಸುವಲ್ಲಿ ಅಲ್ಲಿಯ 150 ಕ್ಕೂ ಹೆಚ್ಚು ಮೌಲ್ವಿಗಳು ಸ್ಥಳೀಯ ವೈದ್ಯರು ಮತ್ತು ಸಮುದಾಯದ ಮುಖಂಡರೊಂದಿಗೆ ಕೆಲಸ ಮಾಡಿದ್ದಾರೆ. ಅವರ ಶ್ರಮದಿಂದಾಗಿ, ಅಲ್ಲಿಯ COVID-19 ಸಾವುಗಳು 350 ಕ್ಕಿಂತ ಕಡಿಮೆಯಾಗಿವೆ.
ಈ ವಿರಳ ಪ್ರಯತ್ನಗಳು ದೇಶಾದ್ಯಂತ ಅಣಬೆಯಂತೆ ಹಬ್ಬಿದ್ದರೆ, ಮಾನವ ಹಕ್ಕುಗಳು ಮತ್ತು ನಂಬಿಕೆಯ ಸ್ವಾತಂತ್ರ್ಯವನ್ನು ಗೌರವಿಸಲು ಅವರು ಮಾಡಿದ ಕಟ್ಟುಪಾಡುಗಳು ಮತ್ತು ಬದ್ಧತೆಗಳಿಗೆ ಸರ್ಕಾರಗಳು ಜವಾಬ್ದಾರರಾಗಿದ್ದರೆ ಅದು ಹೇಗಿರುತ್ತಿತ್ತು ಊಹಿಸಿಕೊಳ್ಳಿ? ಆದರೆ, ಬದಲಿಗೆ ಸಭೆಗಳು ಮತ್ತು ಅಲ್ಪಸಂಖ್ಯಾತ ಪೂಜನಾ ಪದ್ಧತಿಗಳ ಮೇಲಿನ ದೌರ್ಜನ್ಯಗಳು ಅವರು ಆ ಬದ್ಧತೆಗಳನ್ನು ಹೇಗೆ ಸಮರ್ಥಿಸಿಕೊಂಡಿದ್ದಾರೆ ಎಂಬುದನ್ನು ತೋರಿಸುತ್ತದೆ.
ಮುಂದಿನ ವರ್ಷದ ಆರಂಭದಲ್ಲಿ ಹಾರ್ದಿವಾರ್ ಕುಂಭಮೇಳಕ್ಕೆ ಸಜ್ಜಾಗುತ್ತಿದೆ. COVID-19 ಪರೀಕ್ಷೆಗೆ ಒಳಪಡುವ ಭಕ್ತರಿಗೆ ಗಂಗೆಯಲ್ಲಿ ಸ್ನಾನ ಮಾಡಲು ಅವಕಾಶ ನೀಡಲಾಗುವುದು ಎಂದು ಉತ್ತರಾಖಂಡ ಮುಖ್ಯಮಂತ್ರಿ ಹೇಳಿದ್ದಾರೆ. ಕೊರೊನಾ ಸಾಂಕ್ರಮಿಕದ ನಡುವೆಯೂ ಕೇಸರಿ ವಸ್ತ್ರಧಾರಿಗಳಿಂದ ಆಶೀರ್ವಾದ ಪಡೆಯುವ, ಗಂಗೆಯಲ್ಲಿ ಮೀಯುವ ಜಾತ್ರೆಯು ಸಾಂಗವಾಗಿ ನಡೆಯಲಿದೆ. ಇದಕ್ಕೆ ಸರ್ಕಾರಗಳ ಯಾವುದೇ ಅಡೆತಡೆಗಳಿಲ್ಲ.
ಅಲ್ಪಸಂಖ್ಯಾತ ಧಾರ್ಮಿಕ ನಂಬಿಕೆಹೊಂದಿರುವ ಗುಂಪುಗಳನ್ನು ಕೀಳಾಗಿ ತೋರಿಸುವುದರಿಂದ ಅಸಹಿಷ್ಣುತೆ ಹೆಚ್ಚಾಗಿ ಬೆಳೆಯುತ್ತಿದೆ. ಸಹಿಷ್ಣುತೆ ಮತ್ತು ಸಾಮರಸ್ಯ ಮರೆಯಾಗುತ್ತಿದೆ. ಸರ್ಕಾರಗಳು ಕೊರೊನಾ ಸಾಂಕ್ರಮಿಕ ಹೆಸರಿನಲ್ಲಿ ಅಲ್ಪಸಖ್ಯಾಂತ ಧಾರ್ಮಿಕ ಸಮುದಾಯಗಳನ್ನು ನಿಯಂತ್ರಿಸುತ್ತಿವೆ. ಅವರ ಮೇಲೆ ನಿರ್ಬಂಧಗಳನ್ನು ಹೇರುವಲ್ಲಿ ಯಶಸ್ವಿಯಾಗಿವೆ. ಅಲ್ಲದೆ, ಮುಖ್ಯವಾಗಿ ಮುಸ್ಲಿಮರ ವಿರುದ್ಧ ದ್ವೇಷವನ್ನು ಭಿತ್ತುವಲ್ಲಿ ಸರ್ಕಾರ ಮತ್ತು ಮಾಧ್ಯಮಗಳು ಲಾಕ್ಡೌನ್ ಸಮಯವನ್ನು ಯಶಸ್ವಿಯಾಗಿ ಬಳಸಿಕೊಂಡಿವೆ.
ಇದನ್ನೂ ಓದಿ: ಕಳೆದ 14 ವರ್ಷಗಳಿಂದ ಈ ಕಾರಣದಿಂದ ದೀಪಾವಳಿ ಆಚರಿಸುತ್ತಿರುವ ಮುಸ್ಲಿಂ ಕುಟುಂಬ…

