‘ಸಂಪುಟ ರಚನೆಯಲ್ಲಿ ಹಸ್ತಕ್ಷೇಪ ಮಾಡಲ್ಲ’ – ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ
ರಾಜ್ಯದಲ್ಲಿ ಒನ್ ಮ್ಯಾನ್ ಸರ್ಕಾರ ಇದ್ದು ಇನ್ನೂ ಸಚಿವ ಸಂಪುಟ ರಚನೆಯಾಗಿಲ್ಲ. ಬಿಎಸ್ ಯಡಿಯೂರಪ್ಪ ಅವರನ್ನೇ ನಂಬಿ ಬಂದ 17 ಶಾಸಕರಿಗೆ ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಸಿಗುತ್ತಾ ಇಲ್ವಾ? ಅನ್ನೋ ಆತಂಕ ಶುರುವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಸಚಿವ ಸ್ಥಾನದ ಬಗ್ಗೆ ನಾನು ಮಾತನಾಡುವುದಿಲ್ಲ ಎಂದಿದ್ದಾರೆ.
ಹೌದು… ಇಂದು ಗುಂಡ್ಲುಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ ಯಡಿಯೂರಪ್ಪ, “ಸಚಿವ ಸ್ಥಾನದ ಬಗ್ಗೆ ನಾನು ಮಾತನಾಡುವುದಿಲ್ಲ. ಇದರ ಬಗ್ಗೆ ಹೈಕಮಾಂಡ್ ಹಾಗೂ ಸಿಎಂ ತೀರ್ಮಾನ ಮಾಡುತ್ತಾರೆ. ನಾನು ಸಂಪುಟ ರಚನೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ” ಎಂದಿದ್ದಾರೆ.
ಹೀಗಾಗಿ ಯಡಿಯೂರಪ್ಪಅವರನ್ನೇ ನಂಬಿ ಬಂದ ಬಾಂಬೆ ಫ್ರೆಂಡ್ಸ್ ಗೆ ಆತಂಕ ಶುರುವಾಗಿದೆ. ಈಗಾಗಲೇ ಸಚಿವ ಸ್ಥಾನ ನೀಡುವ ಭರವಸೆ ನೀಡಿ ಕೆಲವೇ ಶಾಸಕರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿತ್ತು. ಈಗ ಬೊಮ್ಮಾಯಿ ಸಂಪುಟದಲ್ಲಿ ಈ ವಲಸೆ ಬಿಜೆಪಿಗರಿಗೆ ಸಚಿವ ಸ್ಥಾನ ಕೈಗೆಟುವ ಸಾಧ್ಯತೆ ಕಡಿಮೆ ಇದೆ. ಹೀಗಾಗಿ ವಲಸೆ ಬಿಜೆಪಿಗರು ಸಚಿವ ಸ್ಥಾನ ಪಡೆಯಲು ಪಣತೊಟ್ಟಿದ್ದಾರೆ. ಒಂದು ವೇಳೆ ವಲಸೆ ಬಿಜೆಪಿಗರೆಲ್ಲರಿಗೂ ಮತ್ತೆ ಸಚಿವ ಸ್ಥಾನ ನೀಡಿದರೆ ಮೂಲ ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗುವ ಭಯದಲ್ಲೇ ಬೊಮ್ಮಾಯಿ ಇದ್ದಾರೆ.
ಇತ್ತ ನಂಬಿ ಬಂದ ಬಿಎಸ್ ಯಡಿಯೂರಪ್ಪ ಅಧಿಕಾರದಲ್ಲಿ ಇಲ್ಲ, ಅಧಿಕಾರದ ಗ್ಯಾರೆಂಟಿ ಇಲ್ಲ. ಹೀಗಾಗಿ ವಲಸೆ ಬಿಜೆಪಿಗರು ಅತಂತ್ರರಾಗಿದ್ದಾರೆ.
ಕಳೆದ ಬಾರಿ ಸಚಿವ ಸಂಪುಟ ರಚನೆ ತಡವಾಗಿ ಆದಂತೆ ಈ ಬಾರಿ ಕೂಡ ಹೈಕಮಾಂಡ ತಡವಾಗಿ ಸಂಪುಟ ರಚನೆಗೆ ಗ್ರೀನ್ ಸಿಗ್ನಲ್ ನೀಡಿದರೆ ಬೊಮ್ಮಾಯಿಗೆ ಪ್ರವಾಹ, ಕೊರೊನಾ ಸಮಸ್ಯೆಗಳು ಭಾರೀ ಹೊಡೆತ ನೀಡಲಿವೆ. ಇನ್ನೂ ಡಿಸಿಎಂ, ಸಚಿವ ಸ್ಥಾನಕ್ಕಾಗಿನ ಪೈಪೋಟಿ ಜೋರಾಗಿದ್ದು ಯಾರನ್ನ ಕಡೆಗಣಿಸಿದರೂ ಭಿನ್ನಾಭಿಪ್ರಾಯ ಸೃಷ್ಟಿಯಾಗುತ್ತದೆ. ಒಟ್ಟಿನಲ್ಲಿ ಸಿಎಂ ಬೊಮ್ಮಾಯಿಗೆ ಇದೆಲ್ಲವೂ ಕತ್ತಿ ಮೇಲಿನ ನಡಿಗೆಯಾಗಿದ್ದು, ಯಾರಿಗೆ ಮಣೆ ಹಾಕ್ತಾರೆ ಅನ್ನೋನದನ್ನ ಕಾದು ನೋಡಬೇಕಿದೆ.

