ರೈತ ಮಹಿಳೆಗೆ ಪರಿಹಾರ ವಿಳಂಬ: ಆಂಧ್ರದ ಐವರು ಐಎಎಸ್ ಅಧಿಕಾರಿಗಳಿಗೆ ಜೈಲು ಶಿಕ್ಷೆ!
ರೈತ ಮಹಿಳೆಗೆ ಪರಿಹಾರ ನೀಡಲು ವಿಳಂಬ ಮಾಡಿದ್ದಕ್ಕಾಗಿ ಮತ್ತು ನ್ಯಾಯಾಂಗ ನಿಂದನೆ ಆರೋಪದಲ್ಲಿ ಆಂಧ್ರದ ನಾಲ್ವರು ಐಎಎಸ್ ಅಧಿಕಾರಿಗಳು ಮತ್ತು ಒಬ್ಬ ನಿವೃತ್ತ ಅಧಿಕಾರಿಗೆ ಆಂಧ್ರಪ್ರದೇಶ ಹೈಕೋರ್ಟ್ ಜೈಲು ಶಿಕ್ಷೆ ವಿಧಿಸಿದೆ.
ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಂಶೀರ್ ಸಿಂಗ್ ರಾವತ್, ಮುಖ್ಯಮಂತ್ರಿಗಳ ಹೆಚ್ಚುವರಿ ಕಾರ್ಯದರ್ಶಿ ರೇವು ಮುತ್ಯಾಲ ರಾಜು, ನೆಲ್ಲೂರು ಜಿಲ್ಲಾಧಿಕರಿ ಕೆ ವಿ ಎನ್ ಚಂದ್ರಧರಾ ಬಾಬು ಮತ್ತು ನಿವೃತ್ತ ಜಿಲ್ಲಾಧಿಕಾರಿ ಎಂ.ವಿ. ಶೇಷಗಿರಿ ಬಾಬು ಅವರಿಗೆ ಶಿಕ್ಷೆ ವಿಧಿಸಲಾಗಿದೆ.
ಅಲ್ಲದೆ, 2017ರಲ್ಲಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಐಎಎಸ್ ಅಧಿಕಾರಿ ಮನಮೋಹನ್ ಸಿಂಗ್ ಅವರನ್ನೂ ದೋಷಿ ಎಂದು ಹೇಳಲಾಗಿದೆ. ಮತ್ತು ಇದೇ ಪ್ರಕರಣದಲ್ಲಿ ಮುಖ್ಯ ಕಾರ್ಯದರ್ಶಿ ಆದಿತ್ಯನಾಥ್ ಸೇರಿ ಮೂವರು ಅಧಿಕಾರಿಗಳ ವಿರುದ್ಧದ ಆರೋಪ ಕೈಬಿಡಲಾಗಿದೆ.
ರೈತ ಮಹಿಳೆ ತಲ್ಲಪಕ ಸಾವಿತ್ರಮ್ಮ ಎಂಬುವವರು, ತನ್ನ ಮೂರು ಎಕರೆ ಅಳತೆಯ ಕೃಷಿ ಭೂಮಿಯನ್ನು ಕಂದಾಯ ಅಧಿಕಾರಿಗಳು ಯಾವುದೇ ಸೂಚನೆ ಅಥವಾ ಪರಿಹಾರ ಕೊಡದೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಂಸ್ಥೆಗೆ ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಿ 2017ರಲ್ಲಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ದಲಿತ ಯುವಕನಿಗೆ ಮೂತ್ರ ಕುಡಿಸಿ ದೌರ್ಜನ್ಯ ಎಸಗಿದ್ದ ಪಿಎಸ್‌ಐ ಅರ್ಜುನ್ ಬಂಧನ!
ಫೆಬ್ರವರಿ 10, 2017ರಂದು ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ಮೂರು ತಿಂಗಳಲ್ಲಿ ಆಕೆಗೆ ಪರಿಹಾರ ನೀಡುವಂತೆ ಸಂಬಂಧಿಸಿದ ಕಂದಾಯ ಅಧಿಕಾರಿಗಳಿಗೆ ಸೂಚಿಸಿತ್ತು.
ಆದರೆ, ಇದೂವರೆಗೂ ಆ ಮಹಿಳೆಗೆ ಪರಿಹಾರ ಹಣ ನೀಡಿಲ್ಲ. ಹೀಗಾಗಿ, ಅಧಿಕಾರಿಗಳು ನ್ಯಾಯಾಂಗದ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು 2018 ರಲ್ಲಿ ಸಾವಿತ್ರಮ್ಮ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಟ್ಟು ದೇವಾನಂದ್ ಅವರಿದ್ದ ನ್ಯಾಯಪೀಠವು, ಐವರಿಗೂ ಜೈಲು ಶಿಕ್ಷ ವಿಧಿಸಿದ್ದು, ರಾವತ್ ಮತ್ತು ಸಿಂಗ್ ಅವರಿಗೆ ಒಂದು ತಿಂಗಳ ಜೈಲು ಶಿಕ್ಷೆ, ಇತರರಿಗೆ ಎರಡು ವಾರಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಪ್ರತಿಯೊಬ್ಬರಿಗೂ ತಲಾ 1,000 ರೂ ದಂಡ ವಿಧಿಸಲಾಗಿದೆ.
ಇದನ್ನೂ ಓದಿ: ಪಂಜಾಬ್: ಅಕಾಲಿದಳದ ಕಾರ್ಯಕ್ರಮಕ್ಕೆ ತಡೆಯೊಡ್ಡಿದ ರೈತರ ಮೇಲೆ ಲಾಠಿಚಾರ್ಜ್!

