ನಾರ್ವೆಯಲ್ಲಿ ಹಂತಕನ ದಾಳಿ: ಬಿಲ್ಲು-ಬಾಣಗಳಿಂದ ದಾಳಿ ನಡೆಸಿ ಐವರ ಹತ್ಯೆ
ಹಂತಕನೊಬ್ಬ ಬಿಲ್ಲು ಮತ್ತು ಬಾಣಗಳಿಂದ ದಾಳಿ ನಡೆಸಿ ಐವರನ್ನು ಹತ್ಯೆಗೈದು, ಇಬ್ಬರನ್ನು ಗಾಯಗೊಳಿಸಿರುವ ಘಟನೆ ಆಗ್ನೇಯ ನಾರ್ವೆಯ ಕೊಂಗ್ಸ್‌ಬರ್ಗ್ ಪಟ್ಟಣದಲ್ಲಿ ಬುಧವಾರ ನಡೆದಿದೆ.
ಕೊನ್ಸ್‌ಬರ್ಗ್ ಪಟ್ಟಣದ ಅನೇಕ ಸ್ಥಳಗಳಲ್ಲಿ ಆತ ದಾಳಿ ನಡೆಸಿದ್ದು, ಈ ಸರಣಿ ಹತ್ಯೆಗೆ ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ.ಘಟನೆಯ ಸ್ವರೂಪವನ್ನು ಗಮನಿಸಿದರೆ ಇದು ಭಯೋತ್ಪಾದನಾ ಕೃತ್ಯದಂತೆ ಕಂಡುಬಂದಿದೆ. ಶಂಕಿತ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ಒಯ್ವಿಂಡ್ ಆಸ್ ತಿಳಿಸಿದ್ದಾರೆ.
ಹಂತಕನ ದಾಳಿಯಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಕೂಡ ಗಾಯಗೊಂಡಿದ್ದಾರೆ. ಮಾಹಿತಿ ಪ್ರಕಾರ ಆತನೊಬ್ಬನೇ ಈ ದಾಳಿ ನಡೆಸಿದ್ದಾನೆ. ಬಂಧಿಸಲಾಗಿರುವ ಶಂಕಿತ ಆರೋಪಿ ಡೆನ್ಮಾರ್ಕ್ ಪ್ರಜೆ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ದಾಳಿಯ ಸಂಚುಕೋರನ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ವದಂತಿಗಳು ಹರಿದಾಡುತ್ತಿವೆ. ಈ ಸರಣಿ ದಾಳಿ ಕೃತ್ಯಕ್ಕೆ ಸಂಬಂಧವಿಲ್ಲದ ವ್ಯಕ್ತಿಗಳ ಹೆಸರನ್ನೂ ಉಲ್ಲೇಖಿಸಲಾಗುತ್ತಿದೆ ಎಂದು ಪೊಲೀಸ್ ಹೇಳಿಕೆ ತಿಳಿಸಿದೆ.
ರಾಜಧಾನಿ ಓಸ್ಲೊದ ಪಶ್ಚಿಮ ಭಾಗದಲ್ಲಿರುವ ಕೊನ್ಸ್‌ಬರ್ಗ್ ಪಟ್ಟಣದಲ್ಲಿ ಸಂಜೆ 6.13ರ ವೇಳೆಗೆ ಬಿಲ್ಲು ಮತ್ತು ಬಾಣಗಳನ್ನು ಹಿಡಿದ ವ್ಯಕ್ತಿ, ಒಂದು ಕಡೆಯಿಂದ ಇನ್ನೊಂದು ಕಡೆಗೆ ಓಡಾಡುತ್ತಾ ನಿರಂತರವಾಗಿ ಬಾಣಗಳನ್ನು ಬಿಡುತ್ತಿದ್ದ. ಆತನನ್ನು ಕಂಡ ಜನರು ಭಯದಿಂದ ದಿಕ್ಕಾಪಾಲಾಗಿ ಓಡುತ್ತಿದ್ದರು. ಆತ ಗೋಡೆಯೊಂದಕ್ಕೆ ಬಾಣ ಅಂಟಿಸಿಕೊಂಡು ಅಲ್ಲಿಂದ ಜನ ಸಮೂಹದತ್ತ ದಾಳಿ ನಡೆಸುವ ಚಿತ್ರಗಳು ಹರಿದಾಡುತ್ತಿವೆ ಎಂದು ಅವರು ಹೇಳಿದ್ದಾರೆ.
ಸ್ಕಾಂಡಿನೇವಿಯನ್ ಕೌಂಟಿಯ ಪೊಲೀಸರಿಗೆ ಸಾಮಾನ್ಯವಾಗಿ ಶಸ್ತ್ರಾಸ್ತ್ರಗಳನ್ನು ನೀಡುವುದಿಲ್ಲ. ಆದರೆ ಈ ಘಟನೆ ಬಳಿಕ ರಾಷ್ಟ್ರವ್ಯಾಪಿ ಪೊಲೀಸ್ ಸಿಬ್ಬಂದಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸುವಂತೆ ರಾಷ್ಟ್ರೀಯ ಪೊಲೀಸ್ ನಿರ್ದೇಶನಾಲಯ ಆದೇಶಿಸಿದೆ.
ಇದನ್ನೂ ಓದಿ: ತಮಿಳುನಾಡು ಚುನಾವಣೆ: ಕೇವಲ ಒಂದು ಮತ ಪಡೆದ ಅಭ್ಯರ್ಥಿ; ‘ಬಿಜೆಪಿ ಸಿಂಗಲ್ ಓಟ್ ಪಾರ್ಟಿ’ ಎಂದು ಟ್ರೋಲ್!

